Pages

Ads 468x60px

Sunday 21 February 2021

ಗೆಣಸಿನ ಪೋಡಿ

 


ತರಕಾರಿ ತರುವಾಗ ಮರಗೆಣಸು ಇದ್ದರೆ ತನ್ನಿ.."  ಅಂದಿದ್ದಕ್ಕೆ ಸಿಹಿಗೆಣಸು ಬಂತು.

ಅಂಗಡಿಯಲ್ಲಿ ಇದ್ದ ಗೆಣಸು ಬಂದಿದೆ. "

ತೊಂದರೆಯಿಲ್ಲ ಸಿಕ್ಕಿದ ಗೆಣಸಿನಲ್ಲಿ ಏನೇನು ಎಂಬ ಲಿಸ್ಟು ತಲೆಯಲ್ಲಿ ಓಡಿಯಾಡಿತು.

ಗೆಣಸಿನ ಪಾಯಸ ಪಲ್ಯ ಸಾಂಬಾರುಚಿಪ್ಸ್ ಪೋಡಿ..

ಕೆಂಡದಲ್ಲಿ ಸುಟ್ಟು ತಿನ್ನಲು ರುಚಿಕರ..  ಕೆಂಡದ ಒಲೆ ಎಲ್ಲಿಗೆ ಹೋಯಿತೆಂದು ಹುಡುಕಬೇಕಾಗಿದೆ...

ಪಾಯಸ ಮಾಡಲಿಕ್ಕೆ ಹಬ್ಬ ಹರಿದಿನವೇ ಆಗಬೇಕಿಲ್ಲತಿನ್ನಬೇಕಿದ್ದರೆ ಮಾಡುವುದು ಅದಕ್ಕೂ ಹಸಿ ತೆಂಗಿನಕಾಯಿ ಇರಬೇಕು ಪಾಯಸ ಮೂಲೆಗೆ ಒತ್ತರಿಸಲ್ಪಟ್ಟಿತು.


ಹಲವು ಬಗೆಯ ತರಕಾರಿಗಳೊಂದಿಗೆ ಬೆರಕೆಯಾಗಿಸಿ ಒಂದು ಸಾಂಬಾರು ಆಯ್ತು ಸಾಂಬಾರಿಗೆ ಹೆಚ್ಚುವಾಗ ಸಂಜೆ ಪೋಡಿ ಮಾಡಿದ್ರಾದೀತು ಎಂಬ ಚಿಂತನೆ ಮೂಡಿದ್ದೇ ತಡ ಉಳಿದ ಸಿಹಿಗೆಣಸು ಪೋಡಿಗಾಗಿ ಕತ್ತರಿಸಲ್ಪಟ್ಟಿತು.


ಅಂಗಡಿಯಿಂದ ತಂದ ಗೆಣಸನ್ನು ಮಣ್ಣು ಹೋಗುವಂತೆ ಚೆನ್ನಾಗಿ ತೊಳೆಯುವ ಅಗತ್ಯವಿದೆ ಬ್ರಷ್ ನಲ್ಲಿ ತಿಕ್ಕಿ ತೊಳೆಯಿರಿ ನಂತರ ವೃತ್ತಾಕಾರದಲ್ಲಿ ತೆಳ್ಳಗೆ ಕತ್ತರಿಸಿ ಇಡುವುದು.


ಇನ್ನು ಏನೇನು ಬೇಕು?

ಕರಿಯಲು ಎಣ್ಣೆ

ಕಡ್ಲೆ ಹಿಟ್ಟು ಹಾಗೂ ಅಕ್ಕಿ ಹಿಟ್ಟು ಇದಕ್ಕೆ ಅಳತೆಯೇನೂ ಬೇಕಿಲ್ಲ ಹೆಚ್ಚುಕಮ್ಮಿ ಆದರೂ ತೊಂದರೆಯಿಲ್ಲ.   ಕೇವಲ ಕಡ್ಲೆ ಹಿಟ್ಟು ಕೂಡಾ ಆದೀತು ಉಳಿದರೆ ತಂಪುಪೆಟ್ಟಿಗೆಯಲ್ಲಿಟ್ಟು ನಾಳೆಗೆ ಬಳಸಬಹುದು ದೋಸೆ ಹಿಟ್ಟಿಗೆ ಸೇರಿಸಬಹುದು ದಿಢೀರ್ ರಸಂ ಕೂಡಾ ಮಾಡಬಹುದು.

ರುಚಿಗೆ ಉಪ್ಪು

ಖಾರಕ್ಕೆ ತಕ್ಕಷ್ಟು ಮೆಣಸಿನ ಹುಡಿ

ತುಸು ನೀರಿನಲ್ಲಿ ಕರಗಿಸಿಟ್ಟ ಇಂಗು


ಅಕ್ಕಿ ಹಾಗೂ ಕಡ್ಲೆ ಹಿಟ್ಟುಗಳನ್ನು ತಪಲೆಗೆ ಹಾಕಿಟ್ಟು ಸೂಕ್ತ ಪ್ರಮಾಣದಲ್ಲಿ ನೀರೆರೆದು ಕಾಳುಕಟ್ಟದಂತೆ ಕಲಸುವುದು ಮೆಣಸಿನ ಹುಡಿ ಉಪ್ಪುಗಳನ್ನು ಕೂಡಿ ಇಂಗಿನ ನೀರನ್ನೂ ಎರೆಯುವುದು.   ಕಲಸಿದ ಹಿಟ್ಟು ಇಡ್ಲಿ ಹಿಟ್ಟಿನ ಸಾಂದ್ರತೆ ಹೊಂದಿರಬೇಕು.


ಇನ್ನೇಕೆ ತಡ,

ಬಾಣಲೆಯಲ್ಲಿ ಎಣ್ಣೆ ಬಿಸಿಯೇರಲಿ,

ಮಸಾಲಾ ಕಡ್ಲೆ ಹಿಟ್ಟಿಗೆ ಸಿಹಿಗೆಣಸಿನ ಹೋಳುಗಳನ್ನು ಮುಳುಗಿಸಿ ಹಿಟ್ಟು ಹೋಳುಗಳಿಗೆ ಆವರಿಸಲ್ಪಡಬೇಕು.

ಒಂದೊಂದಾಗಿ ಎಣ್ಣೆಗಿಳಿಸಿ,

ಎರಡೂ ಬದಿ ಬೇಯಲಿ,

ಹೊಂಬಣ್ಣ ಬಂದಾಗ ತೆಗೆಯಿರಿ,

ಎಣ್ಣೆ ಬಸಿಯಲು ಜಾಲರಿ ತಟ್ಟೆಯಲ್ಲಿ ಹಾಕಿರಿ,

ನಂತರ..

ಚಹಾ ಮಾಡಿ ಇಟ್ಕೊಳ್ಳಿ..

ಬಿಸಿ ಇರುವಾಗಲೇ ತಿನ್ನಿರಿ.

 ಸಂಜೆಯ ಚಳಿಗೆ ಹಾಗೂ ಮಳೆಯ ಹವೆಗೆ  "ಅಹಹ..." ಅನ್ನಿರಿ.





ಗೆಣಸು ಸಿಹಿಯಾದ ಗೆಡ್ಡೆ ತರಕಾರಿ ಆಂಗ್ಲ ಭಾಷೆಯಲ್ಲಿ ಇದು ಸ್ವೀಟ್ ಪೊಟಾಟೋ ಎಂದೆನಿಸಿದೆ ಸಸ್ಯವಿಜ್ಞಾನಿಗಳ ಹೇಳಿಕೆಯಂತೆ convolvulaceae ಎಂಬ ಸಸ್ಯ ಪ್ರಭೇದ.   morning glory ಎಂಬ ಸಸ್ಯವರ್ಗಕ್ಕೆ ಸೇರಿದ ಸಿಹಿಗೆಣಸಿನ ಹೂವು ಕೂಡಾ ಅತ್ಯಾಕರ್ಷಕ ಬಹುತೇಕ ಆಂಗ್ಲಭಾಷೆಯಲ್ಲಿ ಇರುವಂತಹ ಲೇಖನಗಳು ಗೆಣಸು ಅಮೆರಿಕಾ ಮೂಲದ ಸಸ್ಯ ಎಂದಿವೆ.   ಶತ ಶತಮಾನಗಳಿಂದ ಗೆಡ್ಡೆಗೆಣಸುಗಳನ್ನು ಆಹಾರವಾಗಿ ಸೇವಿಸುತ್ತ ಬಂದಿರುವ ನಾವು  ವಾದವನ್ನು ಒಪ್ಪಲಾರೆವು ರಾಮಾಯಣ ಕಾಲದ ವನವಾಸಿಗಳು ಸೇವಿಸುತ್ತಿದ್ದ ಗೆಡ್ಡೆಗೆಣಸು ಯಾವುದು ಎಂಬ ಪ್ರಶ್ನೆ ನಮ್ಮಲ್ಲಿ ಏಳದಿರದು.


ಗೆಣಸು ಬಳ್ಳಿಯಂತೆ ಹಬ್ಬುವ ಸಸ್ಯವರ್ಗ ಎಳೆಯ ಎಲೆಗಳನ್ನು ದಂಟು ಸಹಿತವಾಗಿ ಕೊಯ್ದು ಪಲ್ಯ ಸಾಂಬಾರು ವಗೈರೆಮಾಡಿಕೊಳ್ಳಬಹುದು.  ಉತ್ತಮ ಸೊಪ್ಪು ತರಕಾರಿ.   ಗೆಣಸಿನ ಬಳ್ಳಿ ಮಾರುಕಟ್ಟೆಯಲ್ಲಿ ಸಿಗುವ ಸಾಧ್ಯತೆ ಕಡಿಮೆ ಮನೆಯ ಹಿಂದೆ ಯಾ ಬಾಲ್ಕನಿ ಕೈದೋಟದಲ್ಲಿ ಸಸ್ಯವನ್ನು ಬೆಳೆಸಬಹುದು.   ಗೆಣಸನ್ನು ತೇವಾಂಶ ಇರುವಲ್ಲಿ ಮಣ್ಣಿನಲ್ಲಿ ಹಾಕಿಟ್ಟರೆ ಸಾಕು ಕುಡಿಯೊಡೆಯುತ್ತದೆ ಹೀಗೇ ಸುಮ್ಮನೆ ಮನೆ ಹಿತ್ತಲಿನಲ್ಲಿ ತೆವಳುತ್ತಿದ್ದ ಗೆಣಸಿನ ಕುಡಿಗಳಿಂದ ನಿನ್ನೆ ತಾನೇ ಒಂದು ತಂಬುಳಿ ಮಾಡಿದ್ದಾಗಿದೆ.


ತಂಬುಳಿ ಅತಿ ಸುಲಭದ ಅಡುಗೆ ಒಂದು ಹಿಡಿ ಕುಡಿಗಳನ್ನು ಚಿಕ್ಕದಾಗಿ ಕತ್ತರಿಸಿ ತುಸು ನೀರಿನಲ್ಲಿ ಬೇಯಿಸಿತುಪ್ಪದಲ್ಲಿ ಬಾಡಿಸಿದರೂ ಆದೀತು.

ಕಾಯಿತುರಿ ಕಾಳುಮೆಣಸುಜೀರಿಗೆಯೊಂದಿಗೆ ನುಣ್ಣಗೆ ಅರೆದು ಸಿಹಿ ಮಜ್ಜಿಗೆ ಎರೆದುನೀರನ್ನೂ ಎರೆದು ತೆಳ್ಳಗೆ ಮಾಡಿ ಪುಟ್ಟದೊಂದು ಒಗ್ಗರಣೆ ಉದುರಿಸಿ ಕುದಿಸುವುದೇನೂ ಬೇಡ ಊಟದ ನಂತರ ಉಳಿದ ತಂಬುಳಿಯನ್ನು ಕುಡಿಯಿರಿ ಸೋಸಿ ಕುಡಿಯುವುದು ಉತ್ತಮ.


ಆಹಾರವಾಗಿ ಸೇವಿಸಲು ಉತ್ತಮ ಗೆಡ್ಡೆ ತರಕಾರಿ ವಿಟಮಿನ್  ಧಾರಾಳ ಲಭ್ಯ ಕಣ್ಣುಗಳಿಗೆ ಒಳ್ಳೆಯದುಕೊಬ್ಬಿನಂಶ ಅತಿ ಕಡಿಮೆ ದೇಹತೂಕ ಇಳಿಸುವಲ್ಲಿ ಸಹಕಾರಿ ಹಾಗೂ ನಾರುಯುಕ್ತ ಜೀರ್ಣಾಂಗಗಳ ಸಮರ್ಪಕ ಕಾರ್ಯನಿರ್ವಹಣೆ.   ಇನ್ನುಳಿದಂತೆ ಮಿತ ಪ್ರಮಾಣದಲ್ಲಿ ಖನಿಜಾಂಶ ಇರುವುದು ಗೆಣಸು ತಿನ್ನಿ ಆರೋಗ್ಯವೆನ್ನಿ.








0 comments:

Post a Comment