Pages

Ads 468x60px

Sunday 11 April 2021

ಬಾಳೆಹಣ್ಣಿನ ಬಜ್ಜಿ

 


ಬಾಳೆಗೊನೆ ಹಣ್ಣಾಗಿದೆ.   ನಾಲ್ಕು ಹೊತ್ತೂ ಸುಲಿದು ತಿನ್ನಲು ಬೇರೆ ಕೆಲಸ ಇಲ್ವೇ..  ಎಲ್ಲರೂ ಮನೆಯೇ ಕಾರ್ಯಾಲಯ ಎಂಬಂತೆ ಕಂಪ್ಯೂಟರ್ ಎದುರು ಕುಳಿತು ಏನೋ ಮಾತಾಡಿಕೊಳ್ತಿದಾರೆ,   ಮತ್ತೇನಿಲ್ಲ ಸಂಜೆಯ ಹೊತ್ತು ಪೊಸಡಿಗುಂಪೆಯ ಸೂರ್ಯಾಸ್ತಮಾನ ವೀಕ್ಷಣೆಗೆ ಹೋಗುವುದಿದೆ ಅಷ್ಟೇ ವಿಷಯ.


ಸರಿ ಹೋಗುವಾಗ ಹೊಟ್ಟೆ ಗಟ್ಟಿ ಮಾಡಿಕೊಳ್ಳದಿದ್ದರೆ ಹೇಗೆ  ಬಾಳೆಹಣ್ಣಿನ ಪೋಡಿ ಮಾಡಿದ್ರಾದೀತಾ.."


“ ಪೋಡಿ ನಂಗೆ ತುಂಬ ಇಷ್ಟ.."  ಅಂದ ಮಗಳು.

 ನನ್ನ ಫೇವರಿಟ್ಟು.. " ಎಂದ ಸೊಸೆ.

 ಅಂದ ಹಾಗೆ ನಮ್ಮ ಕನ್ನಡದಲ್ಲಿ ಇದನ್ನು ಬಜ್ಜಿ ಅಂದ್ರಾದೀತು ಅಲ್ವೇ...

ಅಮ್ಮಹೆಸರೇನೇ ಇಟ್ಕೋ ನಮಗೆ ಪೋಡಿ ಮಾಡ್ತೀಯಾ.. "  ಅಂದ ಮಗ.   ಏನೇನು ಸಾಮಾನು ಬೇಕೂಂತ ಹೇಳು ತಂದ್ಕೊಡ್ತೇನೆ. "

ಈಗ ಏನೂ ತರೂದು ಬೇಡಕಡ್ಲೆಹಿಟ್ಟು ಅಕ್ಕಿಹಿಟ್ಟುಎಣ್ಣೆ ರುಚಿಗೆ ತಕ್ಕ ಉಪ್ಪು ಇದ್ದರಾಯಿತು ಮಸಾಲೆ ಗಿಸಾಲೆ ಏನೂ ಬೇಡ ಗೊತ್ತಾಯ್ತಲ್ಲ. "

ಅಮ್ಮಅಡುಗೆ ಪಾಠ ಈಗ ಬೇಡ ನಾವು ಕೆಲಸದಲ್ಲಿದ್ದೇವೆ.. " ಮಗಳ ಧ್ವನಿ ಎದ್ದು ಬಂದಿತು.


“ ಆಯ್ತೂ, "  ಬಾಳೆಗೊನೆ ಅಡುಗೆಮನೆಗೆ ಬಂದಿತು.

ಒಂದು ಬಾಳೆಹಣ್ಣು ನಾಲ್ಕು ಸೀಳುಗಳಾಯಿತು.

ತಪಲೆ ತುಂಬಿತು.

ಕಡ್ಲೆ ಹಿಟ್ಟು ಹಾಗೂ ಅಕ್ಕಿಹಿಟ್ಟು ಸಾಕಷ್ಟು ನೀರಿನೊಂದಿಗೆ ಬೆರೆಸುವುದು.   ಕೇವಲ ಕಡ್ಲೆ ಹಿಟ್ಟು ಬಾಳೆಹಣ್ಣಿಗೆ ಹೊಂದಿ ಬರುವುದಿಲ್ಲ ಒಂದು ಲೋಟ ಕಡ್ಲೆ ಹಿಟ್ಟಿಗೆ ಅರ್ಧ ಲೋಟ ಅಕ್ಕಿ ಹಿಟ್ಟು ಬೆರೆಸುವುದು ಸೂಕ್ತ ಈಗ ಏನೇನೋ ಮಿಲ್ಲೆಟ್ಸ್ ಹುಡಿಗಳೂ ಮಾರುಕಟ್ಟೆಯಲ್ಲಿವೆ ಮಿತ ಪ್ರಮಾಣದಲ್ಲಿ ಅವುಗಳನ್ನೂ ಸೇರಿಸಿಕೊಳ್ಳಬಹುದಾಗಿದೆ.   ಏನೋ ಒಂದು ಹೊಸರುಚಿ ಮಾಡಿದ್ದೇನೆ. "  ಎಂದು ಬೆನ್ನು ತಟ್ಟಿಕೊಳ್ಳಲಡ್ಡಿಯಿಲ್ಲ ಇರಲಿ.


ರುಚಿಗೆ ತಕ್ಕಷ್ಟು ಉಪ್ಪು ಹಾಕಿಟ್ಟು ಇಡ್ಲಿ ಹಿಟ್ಟಿನ ಸಾಂದ್ರತೆಯಲ್ಲಿರುವ ಹಡ್ಲೆ ಹಿಟ್ಟನ್ನು ಬಾಳೆ ಹಣ್ಣಿನ ಹೋಳುಗಳಿಗೆ ಬೆರೆಸಿ.


ಬಾಣಲೆಯಲ್ಲಿ ಎಣ್ಣೆ ಬಿಸಿಯಾದೊಡನೆ ಕಡ್ಲೆ ಹಿಟ್ಟು ಸವರಿದ ಬಾಳೆಹಣ್ಣುಗಳ ಹೋಳುಗಳನ್ನು ಬಿಡಿ ಬಿಡಿಯಾಗಿ ಎಣ್ಣೆಗಿಳಿಸಿ ಎರಡೂ ಬದಿ ಹೊಂಬಣ್ಣ ಬರುವ ತನಕ ಕರಿದು ತೆಗೆಯಿರಿ.

ಬಿಸಿ ಬಿಸಿಯಾಗಿ ಇರುವಾಗಲೇ ಸವಿಯಿರಿ ಚಹಾ ಜೊತೆಗಿರಲಿ.

ನನ್ನ ಬಾಳೆಗೊನೆಯೇ ಖಾಲಿ ಆಗ್ಹೋಯ್ತು.






0 comments:

Post a Comment