ಚೌತಿಯ ಹಬ್ಬದ ಆಚರಣೆ ಎಂದು ಹಾರಾಡುವುದಕ್ಕಿಲ್ಲ, ಮನೆಯೊಳಗೆ ನಾವಿಬ್ಬರೇ, ಕ್ಲಬ್ ಹೌಸು, ವಾಟ್ಸಪ್ಪು, ಫೇಸ್ಬುಕ್ಕು, ಸಾಲದಕ್ಕೆ ಟ್ವಿಟ್ಟರು ನಮ್ಮ ಅಂಗೈಯೊಳಗೆ ಇರುವಾಗ...
"ಅಮ್ಮ, ಚೌತಿಗೆ ನಾನು ಬರುತ್ತಾ ಇದ್ದೇನೆ.. " ಮಗಳ ಕಾಲ್.
" ಹೌದ, ಚೌತಿ ಯಾವಾಗ? "
" ಮುಂದಿನ ಬುಧವಾರ.. "
"ಸರಿ, ನಿನ್ನ ಇಷ್ಟದ ತಿಂಡಿ ಎಲ್ಲ ಪಟ್ಟಿ ಮಾಡಿ ಹೇಳು... "
ಪಾಯಸವೆಂದರೆ ಅವಳಿಗಾಗದು, ಎಣ್ಣೆಯಲ್ಲಿ ಕರಿದ ತಿಂಡಿಗಳೇ ಅವಳ ಆಯ್ಕೆ.
ಚಕ್ಕುಲಿಯನ್ನೇ ಮಾಡೋಣ, ಉಳಿದಂತೆ ಅಪ್ಪ, ಪಂಚಕಜ್ಜಾಯ, ಸಿಹಿ ಅವಲಕ್ಕಿ.
ಪಾಯಸ ಮಾಡದಿದ್ದರಾದೀತೇ, ಓಣಂ ರೇಷನ್ ಕಿಟ್ ಅಂತ ಬಂದಿದ್ರಲ್ಲಿ ಪಾಯಸದ ಸಾಮಗ್ರಿ ಇನ್ನೂ ಮುಗಿದಿಲ್ಲ. ಭರ್ಜರಿಯಾಗಿಗೇರುಬೀಜ, ದ್ರಾಕ್ಷಿ, ಏಲಕ್ಕಿ ಸುರುವಿ ಇನ್ನೊಂದಾವರ್ತಿ ಪಾಯಸ ಮಾಡುವ ಲೆಕ್ಕಾಚಾರ ಹಾಕಿದ್ದಾಯ್ತು.
ಅಡುಗೆಮನೆಯಲ್ಲಿ ಅಕ್ಕಿ ತೆಂಗಿನಕಾಯಿ ಬೆಲ್ಲಗಳನ್ನು ಹೇಗೆಲ್ಲ ಹೊಂದಾಣಿಕೆ ಮಾಡಿದ್ರೆ ಯಾವೆಲ್ಲ ತಿಂಡಿಗಳು ಎದ್ದು ಓಡಿ ಬರುತ್ತವೆಎಂಬ ಲೆಕ್ಕಾಚಾರದಲ್ಲಿದ್ದಾಗ, " ಅಮ್ಮ, ಚಕ್ಕುಲಿ ಮಾಡುವುದಕ್ಕಿಲ್ಲವೇ.. " ಪ್ರಶ್ನೆ ಬಂದಿತು.
" ಮಾಡುವ, ಅದಕ್ಕೇನಂತೆ... ನಿನ್ನೆ ಫೇಸ್ ಬುಕ್ಕಿನಲ್ಲಿ ಒಂದು ಚಕ್ಕುಲಿ ಕ್ರಮ ಬಂದಿತ್ತು, ಸುಲಭದಲ್ಲಿ ಮಾಡಬಹುದು.. "
" ಒಂದು ಕುಡ್ತೆ, ಅಂದ್ರೆ ಒಂದು ಅಳತೆಯ ಲೋಟದಲ್ಲಿ ಉದ್ದಿನಬೇಳೆ ಹುರಿಯಬೇಕು. " ಹೇಳುತ್ತಲೇ ಇಂಡಕ್ಷನ್ ಸ್ಟವ್ ಉದ್ದಿನಬೇಳೆಯನ್ನು ಕೆಂಪಗೆ ಹುರಿದಿಟ್ಟಿತು. ಆರಲಿ.
ಮೂರು ಅಳತೆ ನೀರು ತೆಗೆದಿರಿಸುವುದು.
ಆರಿದ ನಂತರ ಅಳೆದಿರಿಸಿದ ನೀರಿನಲ್ಲಿ ನುಣ್ಣಗೆ ಅರೆಯುವುದು.
ನುಣ್ಣಗಾದ ಹಿಟ್ಟಿಗೆ ಮೂರು ಅಳತೆ ನುಣುಪಾದ ಅಕ್ಕಿಹುಡಿ ಸೇರಿಸುವುದು, ಅಕ್ಕಿ ತರಿ ಆಗದು. ಅಕ್ಕಿ ಹುಡಿಯನ್ನು ಸ್ವಲ್ಪ ಹುರಿದರೂ ಆದೀತು. ಹುರಿಯದಿದ್ದರೂ ನಡೀತದೆ.
ರುಚಿಗೆ ಉಪ್ಪು, ಇಂಗಿನ ನೀರು, ಮೆಣಸಿನ ಹುಡಿ ಹಾಕಿ ಹಿಟ್ಟನ್ನು ತೆಗೆದಿರಿಸಿದ ನೀರಿನಲ್ಲೇ ಕಲಸಿ. ನಾನು ಎಣ್ಣೆ ಬೆಣ್ಣೆ ಏನೂ ಹಾಕಿಲ್ಲ. ಕಾರ ಬೇಡವಾದರೆ ಮೆಣಸಿನ ಹುಡಿ ಬೇಡ. ಬದಲಾಗಿ ಎಳ್ಳು ಜೀರಿಗೆ ಹಾಕಬಹುದಾಗಿದೆ. ಅದೆಲ್ಲ ನಮ್ಮ ಆಯ್ಕೆ.
" ಬಾರೇ ಹಿಟ್ಟು ಕಲಸಿದ್ದಾಯ್ತು, ಚಕ್ಕುಲಿ ಮಟ್ಟು ದೇವರ ಕೋಣೆಯ ಗೂಡಲ್ಲಿದೆ..."
ಚಕ್ಕುಲಿ ಮಟ್ಟು ಬಂತು. " ಥೂ, ಏನು ಧೂಳು..." ಒರೆಸೀ ಒರೆಸೀ ತೊಳೆದಳು.
ಮಗಳು ಚಕ್ಕುಲಿ ಒತ್ತಿ ಕೊಟ್ಟಂತೆ, ಎಣ್ಣೆಯಲ್ಲಿ ತೇಲಿ ತೇಲಿ ಎದ್ದು ಬಂದ ಚಕ್ಕುಲಿಗಳು...
ನಮ್ಮ ಚೌತಿ, ಚಕ್ಕುಲಿಯ ಕಟುಂ ಕುಟುಂ ಸದ್ದಿನಲ್ಲಿ ಸಂಪನ್ನವಾಯ್ತು.
ಈಗ ನವರಾತ್ರಿ ಬಂದಿದೆ, ದೀಪಾವಳಿ ಬರಲಿದೆ.
ಸುಲಭವಾಗಿ ಮಾಡಬಹುದಾದ ಈ ಉದ್ದಿನ ಚಕ್ಕುಲಿಯನ್ನು ತಿನ್ನಲು ಹಬ್ಬ ಬರಬೇಕಿಲ್ಲ, ಒಂದು ರಜಾದಿನದ ಸಂಜೆಯ ಹೊತ್ತು, ಗರಿಗರಿ ಚಕ್ಕುಲಿ ಕರಿದು ತಿನ್ನಿರಿ, ಚಹಾ ಕುಡಿಯಿರಿ.
ಅಳತೆಯ ಪ್ರಮಾಣದಲ್ಲಿ ತಿಳಿಸಿದಷ್ಟೇ ನೀರು ಬಳಸಿರಿ, ಹೆಚ್ಚು ಕಮ್ಮಿ ಮಾಡದಿರಿ.
0 comments:
Post a Comment