ಎರಡು ದೊಡ್ಡ ಗಾತ್ರದ ಬೀಟ್ ರೂಟ್ ಗೆಡ್ಡೆಗಳಿವೆ, ನಾಳೆ ಬೆಂಗಳೂರಿಗೆ ಹೊರಡುವುದಿದೆ, ಬರುವಾಗ ವಾರ ಆಗುತ್ತೊ ತಿಳಿಯದು, ಅಂತೂ ಈ ಬಾರಿ ದೀಪಾವಳಿ ಮಕ್ಕಳ ಮನೆಯಲ್ಲಿ.
ತುಪ್ಪ ಸಕ್ಕರೆ ಇರುವಾಗ, ಬೀಟ್ರೂಟ್ ಸಿಹಿ ತಿನಿಸು ಮಾಡಿಯೇ ಬಿಡೋಣ.
ಬೀಟ್ರೂಟು ಸಿಪ್ಪೆ ಹೆರೆದು, ತುರಿಯಿರಿ.
ಮೂರು ದೊಡ್ಡ ಲೋಟ ತುಂಬ ಬೀಟ್ರೂಟು ತುರಿ ಸಿಕ್ಕಿತು.
ಸಕ್ಕರೆ ಅರ್ಧದಷ್ಟು ಸಾಕು, ಬೀಟ್ರೂಟು ಸ್ವಲ್ಪ ಸಿಹಿಯೇ ಇರುತ್ತದೆ.
ಬೇಯಿಸಲಿಕ್ಕೆ ಒಂದು ಲೋಟ ಹಾಲು ಇರಬೇಕು.
ದಪ್ಪ ಬಾಣಲೆ ಒಲೆಗೇರಿಸಿ, ನಾನು ಇಂಡಕ್ಷನ್ ಸ್ಟವ್ ಉಪಯೋಗಿಸಿದ್ದು, ಬೇಗ ಆಗುತ್ತೆ ಅಷ್ಟೇ. ಸಮಯದ ಲೆಕ್ಕಾಚಾರವೂ ಇಲ್ಲಿ ಸಿಗುತ್ತದೆ. ಹಾಗಾಗಿ ನನ್ನ ಸಿಹಿ ತಿನಿಸು ಕೇವಲ ಹದಿನೈದು ನಿಮಿಷಗಳಲ್ಲಿ ಆಗಿಯೇ ಹೋಯ್ತು, ನಾಳೆ ಹೊರಡುವುದಿದೆಯಲ್ಲ..
ಬಾಣಲೆಗೆ ತುಪ್ಪ , ಅಂದಾಜು ಅರ್ಧ ಸೌಟು ಎರೆದು, ಬೀಟ್ರೂಟು ತುರಿ ಸುರಿದು, ಸೌಟಾಡಿಸಿ. ಸ್ವಲ್ಪ ಸ್ವಲ್ವವೇ ಹಾಲು ಎರೆಯುತ್ತ ಬೇಯಿಸಿಕೊಳ್ಳಿ.
ಇಟ್ಟಂತಹ ಹಾಲು ಮುಗಿಯಿತು. ಬೀಟ್ರೂಟು ಬೆಂದಿದೆ.
ಹಾಲು ಎರೆದದ್ದು ಹೆಚ್ಚಾಯ್ತೇನೋ ಎಂದು ಚಿಂತಿಸದಿರಿ. ಹಾಲು ರುಚಿವರ್ಧಕ ಎಂದು ತಿಳಿಯಿರಿ.
ಇದೀಗ ಸಕ್ಕರೆ ಹಾಕುವ ಸಮಯ, ಒಂದೂವರೆ ಲೋಟ ಸಕ್ಕರೆ ಅಳೆದು ಸುರಿಯಿರಿ.
ಸಕ್ಕರೆ ಕರಗುತ್ತಿರಲಿ.
ಏಲಕ್ಕಿ, ಒಣದ್ರಾಕ್ಷಿ, ಗೇರುಬೀಜಗಳು ಹೊರ ಬರಲಿ.
ಏಲಕ್ಕಿ ಗುದ್ದಿರಿ, ಅಂದ ಹಾಗೆ ಅಳಿಯ ತಂದ್ಕೊಟ್ಟ ಕೇಸರಿ ಇದೆಯಲ್ಲ. ಅದನ್ನೂ ಪ್ಯಾಕ್ ಬಿಡಿಸಿದ್ದಾಯ್ತು.
ಸೌಟಾಡಿಸುತ್ತ ಗಟ್ಟಿಯಾಗುತ್ತ ಬಂದಿದೆ. ತುಪ್ಪ ಇನ್ನಷ್ಟು ಹಾಕಲಡ್ಡಿಯಿಲ್ಲ.
ಕೊನೆಯ ಹಂತದಲ್ಲಿ ಎರಡು ಚಮಚ ಜೋಳದ ಹಿಟ್ಟು ಹಾಕಿ ಚೆನ್ನಾಗಿ ತಿರುವಿ, ಹಲ್ವ ಬೇಗನೆ ಗಟ್ಟಿಯಾಗಲು ಇದು ಒಂದು ಉಪಾಯ.
ಸುವಾಸಿತ ದ್ರವ್ಯಗಳನ್ನು ಹಾಕುವ ಸಮಯ,
ತಳ ಬಿಟ್ಟು ತುಪ್ಪವೂ ಬೇರ್ಪಡುವಂತಾದಾಗ ಸ್ಟವ್ ಆರಿಸಿ, ಬಾಣಲೆ ಕೆಳಗಿಳಿಸಿ.
ಇನ್ನೊಂದು ತಟ್ಟೆಗೆ ತುಪ್ಪ ಸವರಿ ಬೀಟ್ರೂಟ್ ಹಲ್ವ ಸುರಿದು. ಸಪಾಟಾಗಿ ಸೌಟಿನಲ್ಲಿ ತಟ್ಟಿರಿ.
ಅಂತೂ ಕಾಲು ಗಂಟೆಯಲ್ಲಿ ಆಗಿ ಹೋದ ಹಲ್ವ, ಊಟದ ಸಿಹಿಯೂ ಆಯ್ತು, ನಮ್ಮ ಮನೆ ಯಜಮಾನರೂ ಆಗ ತಾನೇ ಆದಹಲ್ವವನ್ನು ಇಷ್ಟ ಪಟ್ಟು ತಿಂದರು.
ಹೇಗೂ ನಾವಿಬ್ಬರೇ ತಿಂದು ಮುಗಿಯುವಂತದ್ದಲ್ಲ, ಬೆಂಗಳೂರಿಗೆ ತೆರಳಲು ಪ್ಯಾಕ್ ಮಾಡಿ ಇಟ್ಟೂ ಆಯ್ತು, ಎಲ್ಲರೂ ಸಿಹಿ ಹಂಚಿ ತಿನ್ನೋಣ.
0 comments:
Post a Comment