" ಅಮ್ಮ, ಕಾಸರಗೋಡಿನಲ್ಲಿ ಈ ಸೊಪ್ಪು ಸಿಕ್ಕಿತು, ಇದು ಪಾಲಕ್, ಇದು ಮತ್ತೊಂದು ಮೆಂತೆ ಸೊಪ್ಪು.. "
" ಮೆಂತೆ ಸೊಪ್ಪು ಅಂದ್ರೆ ಇದಲ್ವ.. ಪಾಲಕ್ ಆದ್ರೂ ಯಾವಾಗಲೋ ತಂದಿತ್ತು, ಬೇಗ ಹಾಳಾಗುತ್ತೆ,"
" ಫ್ರಿಜ್ ಒಳಗೂ ಇಡಬೇಡ.. "
" ಸರಿ, ಇವತ್ತೇ ಅಡುಗೆ ಮಾಡೂದು. "
ಎರಡೂ ಬಗೆಯ ಸೊಪ್ಪು ಸೇರಿದ ಸಾರು ಆಯ್ತು. ಆಂಧ್ರ ಶೈಲಿಯ ದಾಲ್ ಪಪ್ಪು ಮಾಡಿ ಸವಿದೆವು.
ಮಾಡಿದ್ದು ಹೇಗೆ?
ವಿಧಾನಕ್ಕಾಗಿ ಗೂಗಲ್ ಅಜ್ಜಿಯನ್ನು ಕೇಳಲಾಯಿತು. ಈ ಮೊದಲೇ ಬಸ್ಸಾರು ಬರೆದಿದ್ದೇನೆ. ಇದು ತುಸು ಭಿನ್ನ. ಅಲ್ಪ ಸ್ವಲ್ಪ ವ್ಯತ್ಯಾಸದಿಂದ ಅಡುಗೆಯ ಪ್ರಕಾರವೇ ಬದಲಾಗುವ ವಿಸ್ಮಯ ಇಲ್ಲಿ ಸಿಕ್ಕಿತು.
ಪಾಲಕ್ ಹಾಗೂ ಮೆಂತೆ ಸೊಪ್ಪು ತೊಳೆದು ಕತ್ತರಿಸುವುದು. ಅವಶ್ಯಕತೆಗೆ ತಕ್ಕಷ್ಟು ಹೆಚ್ಚಿದರೆ ಸಾಕು.
ಎರಡು ನೀರುಳ್ಳಿ, ಎರಡು ಟೊಮ್ಯಾಟೋ ಕತ್ತರಿಸಿ ಇಡುವುದು.
ನಾಲ್ಕು ಬೆಳ್ಳುಳ್ಳಿ ಎಸಳು, ಶುಂಠಿ ಹಾಗೂ ಹಸಿಮೆಣಸು.
ಕೊತ್ತಂಬರಿ ಸೊಪ್ಪು ಇದ್ದರೆ ಉತ್ತಮ.
ತೊಗರಿಬೇಳೆ ಬೇಯಿಸಿಕೊಳ್ಳಿ, ನನ್ನ ಬಳಿ ಪಂಚರಂಗಿ ದಾಲ್ ಕೂಡಾ ಇದ್ದಿತು. ಅದನ್ನೂ ಹಾಕಲಾಯಿತು.
ಬಾಣಲೆಯಲ್ಲಿ ಒಗ್ಗರಣೆಗಿಟ್ಟು, ಟೊಮ್ಯಾಟೋ ಇತ್ಯಾದಿಗಳನ್ನು ಒಗ್ಗರಣೆಯಲ್ಲೇ ಬೇಯಿಸಿ.
ನಂತರ ಸೊಪ್ಪುಗಳನ್ನು ಹಾಕಿ ಮುಚ್ಚಿ ಬೇಯಿಸಿ.
ಜಾಸ್ತಿ ನೀರು ಹಾಕಬೇಕಿಲ್ಲ.
ರುಚಿಗೆ ಉಪ್ಪು , ಚಿಟಿಕೆ ಅರಸಿಣ ಹಾಕತಕ್ಕದ್ದು.
ಬೆಂದ ನಂತರ ಬೇಯಿಸಿಟ್ಟ ತೊಗರಿಬೇಳೆ ಎರೆಯಿರಿ.
ಮೇಲಿನಿಂದ ಘಮಘಮಿಸುವ ತುಪ್ಪ ಒಂದೆರಡು ಚಮಚ ಎರೆದು,
ಕೊತ್ತಂಬರಿ ಸೊಪ್ಪು ಉದುರಿಸಿ, ಮುಚ್ಚಿ ಇಡುವುದು.
ಇದು ಅನ್ನಕ್ಕೆ ಮಾತ್ರವಲ್ಲದೆ ರಾಗಿಮುದ್ದೆ, ಚಪಾತಿ, ಪರಾಠಾ, ನಾನ್, ಇಡ್ಲಿ ದೋಸೆಗಳಿಗೂ ಹಿತವಾದ ವ್ಯಂಜನ.
ಆದರೂ ಪಾಲಕ್ ಸೊಪ್ಪು ಉಳಿಯಿತು, ಸೊಪ್ಪನ್ನು ಬೇಯಿಸಿ ಇಟ್ಟಾಯ್ತು.
2 ಲೋಟ ಅಕ್ಕಿ ನೆನೆಸಿಟ್ಟು ದೋಸೆಗೆ ಅರೆಯುವಾಗ, ಬೇಯಿಸಿಟ್ಟ ಸೊಪ್ಪನ್ನು ನೀರು ಸಹಿತವಾಗಿ ಹಾಕಿದುದರಲ್ಲಿ ಹಸಿರು ಬಣ್ಣದಹಿಟ್ಟು ದೊರೆಯಿತು.
ಸರಳವಾದ ನೀರು ದೋಸೆ ಈ ರೂಪದಲ್ಲಿ ತಿನ್ನುವಂತಾಯಿತು. " ರುಚಿಕರವಾಗಲಿ ಅಂತ ಶುಂಠಿ ಹಾಗೂ ಹಸಿಮೆಣಸು ಅರೆಯುವಾಗ ಹಾಕಿದ್ದೇನೆ. " ಎಂದು ದೋಸೆ ತಿನ್ನುತ್ತಿದ್ದಾಗ ಹೇಳದಿದ್ದರಾದೀತೇ..
" ಹಾಗೆ ಅನ್ನು.. " ಎಂದ ಮಧು.
" ಹೀಗೇ ಉದ್ದಿನ ದೋಸೆಯನ್ನೂ ಮಾಡಲಿಕ್ಕಾಗುತ್ತದೆ. ಮಾಡಿ ಫೋಟೊ ತೆಗೆದಿರಿಸಿದ್ದು ಗ್ಯಾಲರಿಯಲ್ಲಿದೆ, ಹುಡುಕಬೇಕಷ್ಟೇ.."
ಉದ್ದಿನ ದೋಸೆಗಾಗಿ ಎಂದಿನಂತೆ 3 ಅಳತೆ ಅಕ್ಕಿ ಹಾಗೂ ಒಂದು ಅಳತೆ ಉದ್ದು ನೆನೆಸಿಟ್ಟು ಅರೆಯಿರಿ. ಅರೆಯುವಾಗ ಬೇಯಿಸಿಟ್ಟ ಪಾಲಕ್ ಸೊಪ್ಪನ್ನೂ ಹಾಕಿದರಾಯಿತು..
ದೋಸೆ ಸೊಗಸಾಗಿ ಎದ್ದು ಬರುತ್ತದೆ.
ತೆಂಗಿನಕಾಯಿ ಚಟ್ಣಿಯೊಂದಿಗೆ ಕೂಡಿ ತಿನ್ನಲು ಹಿತ.
ಇದೇ ಮಾದರಿಯಲ್ಲಿ ಹಸಿರು ಬಣ್ಣದ ಇಡ್ಲಿ ಮಾಡಬಹುದಿತ್ತು, ಸೊಪ್ಪು ಮುಗಿದಿದೆ...
ಇಂದಿನ ರೋಗಪೀಡಿತ ಸಮಾಜದಲ್ಲಿ ಪಾಲಕ್ ಸೊಪ್ಪು ಸೇವನೆ ಪರಿಣಾಮಕಾರಿ. ಕ್ಯಾಲ್ಸಿಯಂ ಒಂದೇ ಸಾಕು. ಹಲ್ಲುಗಳ ರಕ್ಷಣೆ.
ನಾರಿನಂಶ ಅಧಿಕ, ಕರುಳುಗಳ ಶುದ್ಧಿ. ಕಾಂತಿಯಿಂದ ಹೊಳೆಯುವ ದೇಹ ಸೌಂದರ್ಯ ಪಡೆಯಿರಿ.
ಕಬ್ಬಿಣಾಂಶ ಹಾಗೂ ವಿಟಮಿನ್ ಎ ಕಣ್ಣುಗಳ ರಕ್ಷಕ.
ಪುರುಷರಲ್ಲಿ ವೀರ್ಯವರ್ಧಕ.
ಹೃದಯರೋಗಿಗಳಿಗೂ, ಮಧುಮೇಹಿಗಳಿಗೂ, ಅತಿ ತೂಕದ ದೇಹದವರಿಗೂ ಪ್ರಕೃತಿ ನೀಡಿದ ಔಷಧಿ ಈ ಪಾಲಕ್ ಸೊಪ್ಪು.
ಬಹುತೇಕ ಬಸಳೆಯನ್ನೇ ಹೋಲುವ ಪಾಲಕ್, amaranthaceae, ಕುಟುಂಬಕ್ಕೆ ಸೇರಿದೆ. ಬೇಯಿಸಿದರೂ ತನ್ನ ತಾಜಾ ಹಸಿರುಬಣ್ಣವನ್ನು ಬಿಟ್ಟುಕೊಡದ ಸಸ್ಯ.
ಸಸ್ಯವಿಜ್ಞಾನಿಗಳು Spinacia oleracea ಎಂಬ ಹೆಸರನ್ನು ದಯಪಾಲಿಸಿದ್ದಾರೆ.
0 comments:
Post a Comment