ಅಡುಗೆಮನೆಯಲ್ಲಿ ತರಕಾರಿಗಳೇನೋ ಇವೆ, ಎಲ್ಲವೂ ಅಂಗಡಿಯಿಂದ ತಂದಿದ್ದು. ಮನೆ ಹಿತ್ತಲಲ್ಲಿ ತರಕಾರಿ ಬೆಳೆ ಇಲ್ಲ. ಆದರೂ ಅಂಗಳಕ್ಕಿಳಿಯದೆ ಆಗದು. ಬೇವಿನ ಸೊಪ್ಪು, ಗಾಂಧಾರಿ ಮೆಣಸು ಇತ್ಯಾದಿ ಉಚಿತವಾಗಿ ಭೂಮಿ ತಾಯಿ ನೀಡುತ್ತಿದ್ದಾಳೆ. ಅಂಗಳದಲ್ಲಿ ಹೇರಳವಾಗಿ ಬೆಳೆದಿದ್ದ ಕಳೆ ಸಸ್ಯಗಳನ್ನು ಕಿತ್ತೆಸೆಯುತ್ತಿದ್ದಾಗ, ಪೊನ್ನಂಗಣೆಯೆಂಬ ಸಸ್ಯ ದೊರೆಯಿತು. ಅದರ ಕುಡಿಚಿಗುರುಗಳನ್ನು ಅಂಗೈಯಲ್ಲಿ ಹಿಡಿಸುವಷ್ಟು ಚಿವುಟಿ ಒಳಗೆ ತಂದಿದ್ದೂ ಆಯ್ತು. ಮಧ್ಯಾಹ್ನದ ಅಡುಗೆಗೆ ಹೊಸರುಚಿ ಸಿದ್ಧವಾಗಲಿದೆಅನ್ನಿ.
ಸೊಪ್ಪು ಬುಟ್ಟಿ ತುಂಬ ಇದ್ದರೂ ಅದನ್ನು ಆಯ್ದು, ಒಳ್ಳೆಯ ಕುಡಿ, ಚಿಗುರೆಲೆಗಳು, ಎಳೆಯ ದಂಟು ಇತ್ಯಾದಿಗಳನ್ನು ಚಿಕ್ಕದಾಗಿ ಹೆಚ್ಚಿಟ್ಟು, ಸ್ವಲ್ಪ ನೀರು ಎರೆದು ಬೇಯಿಸುವಲ್ಲಿಗೆ ಒಂದು ಹಿಡಿಯಷ್ಟು ಆಯ್ತು, ಇದೆಲ್ಲಿಗೂ ಸಾಲದು, ಮನೆಯಲ್ಲಿ ಮಗಳೂ ಇದ್ದಾಳೆ, ಅವಳು ಅಚ್ಚುಕಟ್ಟಾಗಿ ಉಣಬೇಡವೇ...
ಒಂದು ದೊಡ್ಡ ಗಾತ್ರದ ನೀರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ, ತುಸು ತುಪ್ಪದಲ್ಲಿ ಬಾಡಿಸಿ, ಬೇಯಿಸಿದ ಸೊಪ್ಪಿಗೆ ಹಾಕಲಾಯಿತು. ಒಂದು ಹಿಡಿ ತೆಂಗಿನತುರಿಯೊಂದಿಗೆ ಅರ್ಧ ಚಮಚ ಸಾಸಿವೆ ಕೂಡಿ ಅರೆದು ಸೇರಿಸಿ, ರುಚಿಗೆ ಉಪ್ಪು, ಸಿಹಿಗೆ ಬೆಲ್ಲ, ಹುಳಿಗೆ ಸಿಹಿಮೊಸರನ್ನು ಕೂಡಿ ಸೌಟಿನಲ್ಲಿ ಕಲಕಿದಾಗ ನಮ್ಮ ಅಗತ್ಯಕ್ಕೆ ಬೇಕಾದ ಸಾಸಿವೆ ಸಿದ್ಧವಾಯಿತು.
ಯಾವ ಸೊಪ್ಪೂ ಇಲ್ಲದಿದ್ದರೆ ಕೇವಲ ನೀರುಳ್ಳಿಯಿಂದಲೇ ಸಾಸಮೆ ಮಾಡಬಹುದು.
ಪೊನ್ನಂಗಣೆ ಸೊಪ್ಪು ಯಾವುದಪ್ಪಾ ಎಂದು ತಲೆ ಕೆಡಿಸಿಕೊಳ್ಳದಿರಿ. ನಮ್ಮೂರಿನ ಪೊನ್ನಂಗಣೆ, ನಿಮ್ಮೂರಿನ ಹೊನಗೊನೆ ಸೊಪ್ಪು ತಿಳಿಯಿರಿ.
ಸಸ್ಯಶಾಸ್ತ್ರೀಯವಾಗಿ ಇದು Alternanthera sessilis. ಜಾಗತಿಕ ಮಟ್ಟದಲ್ಲಿ ಅಡುಗೆಯ ಸೊಪ್ಪು ತರಕಾರಿಯಾಗಿ ಬಳಕೆಯಲ್ಲಿದೆ. ಹರಿವೆ ಸೊಪ್ಪಿನ ಪ್ರವರ್ಗಕ್ಕೆ ಸೇರಿದ ಸಸ್ಯ.
ಈ ಅಡುಗೆಯ ತಯಾರಿ ತಿಂಗಳ ಹಿಂದೆ ಮಾಡಿದ್ದು, ಈಗ ಹೊನಗೊನೆಯ ಫೋಟೊ ತೆಗೆಯೋಣಾಂದ್ರೆ ಒಂದೇ ಒಂದು ಕಳೆಗಿಡ ಅಂಗಳದಲ್ಲೂ ಇಲ್ಲ, ತೋಟದಲ್ಲೂ ಇಲ್ಲ. ಹುಲ್ಲು ತೆಗೆಯುವ ಮೆಶಿನ್ ಬಂದು ನಿರ್ಮಲೀಕರಣ ಆಗ್ಬಿಟ್ಟಿದೆ ಕಣ್ರೀ…
0 comments:
Post a Comment