ಪಚ್ಚೆಸ್ರು ಕಾಳು ಓಣಂ ಸಂದರ್ಭದಲ್ಲಿ ಕೇರಳ ರಾಜ್ಯದ ಉಚಿತ ರೇಶನ್ ಕಿಟ್ ಸಾಮಗ್ರಿಗಳಲ್ಲಿ ಒಂದು. ಭರ್ತಿ ಒಂದು ಕಿಲೋ ಬಂದಿತ್ತು. ಅಲ್ಲಾಂದ್ರೂ ಅಡುಗೆಮನೆಯಲ್ಲಿ ಪಚ್ಚೆಸ್ರು ಇತ್ತು, ಮಗಳು ಇದ್ದಾಗ ತರಿಸಿದ್ದು, ಅವಳಿಗೆ ಪಚ್ಚೆಸ್ರು ಹಿಡಿಸಲಿಲ್ಲ, ಡಬ್ಬ ತುಂಬ ಇದೆ, ಈಗ ಓಣಂ ಪಚ್ಚೆಸ್ರು ಬಂದಿದೆ. ಉಪಯೋಗಿಸದೆ ಇಟ್ಟರೆ ಹುಳ ಹಿಡಿದು ಹಾಳಾದೀತು. ಏನೋ ಒಂದು ಮಾಡೋಣ.
ನೆನೆಸಿಟ್ಟ ಪಚ್ಚೆಸ್ರು ಹಾಗೂ ಅಕ್ಕಿ ಅರೆದು ತೆಳ್ಳಗೆ ನೀರುದೋಸೆಯಂತೆ ಎರೆದು ಮಕ್ಕಳಿಗೆ ತಿನ್ನಿಸಬಹುದು. ಪ್ರೊಟೀನ್ ಅತ್ಯಧಿಕ ಇರುವ ಕಾರಣದಿಂದ ಬೆಳವಣಿಗೆಗೆ ಪೂರಕ. ಶರ್ಕರಪಿಷ್ಠ, ಕೊಬ್ಬು, ಖನಿಜಾಂಶಗಳಿಂದ ಕೂಡಿದ ಪಚ್ಚೆಸ್ರು ಹಿರಿಕಿರಿಯರಿಗೆಲ್ಲರಿಗೂ ಒಳ್ಳೆಯ ಆಹಾರ. ಒಳ್ಳೆಯದೆಂದು ಅತಿಯಾಗಿ ತಿನ್ನಲೂ ಬಾರದು. ಅಜೀರ್ಣಕ್ಕೆ ದಾರಿಯಾದೀತು.
ಪಚ್ಚೆಸ್ರು ಒಂದು ಲೋಟ ನೆನೆಯಲು ಇಡುವುದು.
ಒಂದು ಲೋಟ ಚಿರೋಟೆ ರವೆ ಯಾ ಬಾಂಬೇ ಸಜ್ಜಿಗೆ ಮುಳುಗುವಷ್ಟು ನೀರು ಎರೆದಿರಿಸಿ.
ನೆನೆದ ಪಚ್ಚೆಸ್ರು ಕಾಳುಗಳನ್ನು ಅರೆಯಿರಿ.
ದೊಡ್ಡ ನೀರುಳ್ಳಿ, ಎರಡು ಹಸಿಮೆಣಸು, ಶುಂಠಿ ಕೂಡಿ ಅರೆಯಿರಿ. ಇದ್ದರೆ ಕೊತ್ತಂಬರಿ ಸೊಪ್ಪು ಕೂಡಾ ಹಾಕಿ.
ಸಜ್ಜಿಗೆಯ ನೀರು ಬಸಿದು,
ಎಲ್ಲವನ್ನೂ ಕೂಡಿಸಿ, ರುಚಿಗೆ ಉಪ್ಪು ಬೆರೆಸಿ.
ದೋಸೆ ಹಿಟ್ಟಿನ ಹದಕ್ಕೆ ತನ್ನಿ.
ಮುಂಜಾನೆ ದೋಸೆ ಎರೆಯಿರಿ. ತೆಳ್ಳಗೆ ಪೇಪರ್ ದೋಸೆಯಂತೆ ಎದ್ದು ಬರುತ್ತದೆ.
ಚಿರೋಟಿ ರವೆಯ ಬದಲು ಅಕ್ಕಿ ಹಿಟ್ಟೂ ಆದೀತು.
ಮೆಣಸು ಶುಂಠಿ ಇತ್ಯಾದಿಗಳಿಂದ ದೋಸೆಯ ರುಚಿ ಜಾಸ್ತಿ. ಚಟ್ಣಿ ಇಲ್ಲದಿದ್ದರೂ ಆದೀತು. ಬೆಣ್ಣೆ, ಸಕ್ಕರೆ ಕೂಡಿ ತಿನ್ನಿ.
ಈ ಮಾದರಿಯ ದೋಸೆಗೆ ನಮ್ಮ ಕೊಂಕಣಿಗರು ಪೆಸ್ರಟ್ ದೋಸೆ ಎಂದು ಹೆಸರಿಸಿದ್ದಾರೆ. ಜಯಾ ಶೆಣೈಯವರ ಅಡುಗೆ ಪುಸ್ತಕದಲ್ಲಿ ಈ ಹೆಸರು ದೊರೆಯಿತು. ಇನ್ನುಳಿದಂತೆ ಗೂಗಲ್ ಸಾಮ್ರಾಜ್ಯದಲ್ಲಿ ಇದು ಪೆಸರಟ್ಟು.
ಹೆಸ್ರು ಬೇಳೆಯಿಂದಲೂ ಇದೇ ಕ್ರಮದಲ್ಲಿ ದೋಸೆ ಮಾಡಬಹುದಾಗಿದೆ. ಅರೆಯುವಾಗ ಮಸಾಲೆಗಳನ್ನು ಹಾಕದಿದ್ದರೂ ಪರವಾಗಿಲ್ಲ, ತೆಂಗಿನಕಾಯಿ ಚಟ್ಣಿ ಮಸಾಲೆಗಳಿಂದ ಸಮೃದ್ಧವಾಗಿರಲಿ.
0 comments:
Post a Comment