ನಾಲ್ಕು ದಿನ ಬಿಡುವು ಮಾಡಿಕೊಂಡು ಮಧು ಮನೆಗೆ ಬಂದಿದ್ದ. ಅವನಿದ್ದಾಗ ಮಂಗಳೂರಿಗೆ ಹೋಗಿ ಸಿನೆಮಾ ನೋಡಿದ್ದಾಯ್ತು. ನಿಜ ಹೇಳಬೇಕೂಂದ್ರೆ ನಾನು ಫಿಲ್ಮ್ ಥಿಯೇಟರ್ ಒಳಗೆ ಕಾಲಿಡದೆ ಸುಮಾರು ನಲ್ವತ್ತು ವರ್ಷಗಳಾಯ್ತು. ಹ್ಞಾ, ಬೆಂಗಳೂರಿನಲ್ಲಿ ಮಗಳೊಂದಿಗೆ ಒಂದು ಸಿನೆಮಾ ನೋಡಿದ್ದಿದೆ, ಅದೇನೋ ಕಾಸರಗೋಡು ಶಾಲೆ ಅಂತ ಮೈಲುದ್ದ ಹೆಸರಿಟ್ಕೊಂಡಿತ್ತು ಆ ಸಿನೆಮಾ, ಅನಂತನಾಗ್ ಇದ್ದುದರಿಂದ ಸಿನೆಮಾ ತಕ್ಕಮಟ್ಟಿಗೆ ಚೆನ್ನಾಗಿಯೇ ಇತ್ತು.
ನಮ್ಮ ಬೇಕು ಬೇಡಗಳನ್ನು ಪೂರೈಸಿ, ಮಧುಕರ ಬೆಂಗಳೂರಿಗೆ ಹೊರಡುವ ಸಿದ್ಧತೆಯಲ್ಲಿದ್ದ. “ ಮಧೂ, ಬಪ್ಪಂಗಾಯಿ ತಿನ್ನದೇ ತುಂಬ ಸಮಯ ಆಯ್ತಲ್ಲ.. ಸಮಯ ಇದ್ದರೆ ಕೊಯ್ದು ತಾ.. “
ಅವನೂ ತೋಟದಿಂದ ತಂದ, ಬರೇ ಪುಟ್ಟದು, ಆಗಲೇ ಹಣ್ಣೂ ಆಗಿತ್ತು. “ ಅಮ್ಮ, ತೋಟದ ಬಪ್ಪಂಗಾಯಿ ಮರ ಅಡಿಕೆಮರದಷ್ಟೇ ಎತ್ತರ ಆಗಿದೆ, ಇದೊಂದೇ ಕೊಯ್ಯಲಿಕ್ಕಾಯಿತು. “
ನಾಲ್ಕು ದಿನಗಳಿಂದ ಅಡಿಕೆ ಸುಲಿಯುತ್ತಿದೆ, ಈಗ ಕೆಲಸಕ್ಕೆ ಬರುವ ಯುವಕರಲ್ಲಿ ಊಟ ಚಹಾ ಇತ್ಯಾದಿ ಬೇಡಿಕೆಗಳಿಲ್ಲ. ಹಾಗಾಗಿ ನನ್ನ ಗಮನ ಅವರ ಕಡೆ ಹೋಗುವುದೇ ಇಲ್ಲ, ಇವತ್ತು ಬೇಕಾಯಿತು, “ ನೋಡಪ್ಪಾ ಚೆನ್ನಪ್ಪ, ಅಲ್ಲೊಂದು ಪೇರಳೆ ಮರ ಉಂಟಲ್ಲ, ಅದರ ಪಕ್ಕದಲ್ಲಿ ಬಪ್ಪಂಗಾಯಿ ಮರ, ಅದರಲ್ಲಿ ಬಪ್ಪಂಗಾಯಿ ಉಂಟೋ ನೋಡು… “
ಅಡಿಕೆ ಸುಲಿಯುತ್ತಿದ್ದವನು ಧಿಗ್ಗನೆ ಎದ್ದು ಅತ್ತ ಕಡೆ ಹೋದ, “ ತುಂಬ ಉಂಟಲ್ಲ, ಹಣ್ಣಾಗಿದ್ದೂ ಇದೆ… “
“ ಒಂದ್ ನಾಲಕ್ಕು ಕೊಯ್ದು ಇಡ್ತೀಯಾ.. “ ಅಂತ ಹೇಳಿ ಒಳ ಹೋದೆ.
ಸಂಜೆ ಎದ್ದು ನೋಡಿದಾಗ ನಾಲ್ಕು ಘನಗಾತ್ರದ ಬಪ್ಪಂಗಾಯಿಗಳು ಜಗಲಿಯಲ್ಲಿ ಕೂತಿವೆ.
ಪಲ್ಯ ಮಾಡಬಹುದು, ಸಾಂಬಾರೂ ಆದೀತು. ಹಣ್ಣಾದ ಮೇಲೆ ತಿನ್ನುವುದು, ಜ್ಯೂಸು, ಮಿಲ್ಕ್ ಶೇಕ್, ಸಕ್ಕರೆ ತುಪ್ಪದ ಪಾಕದಲ್ಲಿ ಹಲ್ವ, ಜಾಮ್… ಮುಗಿಯದ ತಿನಿಸುಗಳು.
ಬಪ್ಪಂಗಾಯಿ ತಿನ್ನುತ್ತಿದ್ದರೆ ಪಚನಾಂಗಗಳು ಶುದ್ಧೀಕರಿಸಲ್ಪಡುತ್ತವೆ, ಜಂತುಹುಳಗಳ ಬಾಧೆಯೂ ಇರದು. ಬೆಳೆಯುತ್ತಿರುವ ಮಕ್ಕಳಿಗೆ ಅತ್ಯುತ್ತಮ ಹಣ್ಣು ಇದು. ಬಪ್ಪಂಗಾಯಿಯ ಗುಣಕಾರಿ ಅಂಶಗಳು ಸಾಕಷ್ಟಿವೆ. ಚೂರಿ ಇಲ್ಲವೇ ಮೆಟ್ಚುಕತ್ತಿಯಲ್ಲಿ ಹೆಚ್ಚುವಾಗ ಜಾಗ್ರತೆ ಎಷ್ಟಿದ್ದರೂ ಸಾಲದು, ಗಾಯವಾಗುವ ಸಂಭವ ಜಾಸ್ತಿ, ಅದರ ರಸ ಅಷ್ಟೂ ತೀಕ್ಷ್ಣ ಎಂದು ತಿಳಿಯಿರಿ.
ಈಗ ನಾವು ಬಪ್ಪಂಗಾಯಿ ಪದಾರ್ಥ ಮಾಡುವವರಿದ್ದೇವೆ. ಹೆಚ್ಚುವಾಗ ಒಂದು ಬಪ್ಪಂಗಾಯಿ ನಮ್ಮ ಅಡುಗೆಗೆ ಹೆಚ್ಚಾದೀತು ಅಂದ್ಬಿಟ್ಟು ಸ್ವಲ್ಪ ಹೋಳು ಉಪ್ಪಿನಕಾಯಿಗೆಂದು ತೆಗೆದಿರಿಸಲಾಯಿತು. ನಮ್ಮ ಸಾಂಪ್ರದಾಯಿಕ ವಿಧಾನದ ಉಪ್ಪಿನಕಾಯಿ ಮಸಾಲೆಮಾಡಿ ಇಟ್ಕೊಂಡಿದ್ದೂ ಇದೆ, ನಿರಾಯಾಸದಿಂದ ಉಪ್ಪಿನಕಾಯಿ ಮಾಡಬಹುದು, ಬಪ್ಪಂಗಾಯಿ ಹೋಳುಗಳಿಗೆ ಉಪ್ಪು ಬೆರೆಸಿ, ಮಸಾಲೆ ಸೇರಿಸಿದರಾಯಿತು. ಅವಶ್ಯವಿದ್ದಲ್ಲಿ ಉಪ್ಪುನೀರು ಎರೆದರಾಯಿತು. ಮಿಡಿ ಉಪ್ಪಿನಕಾಯಿ ಅದ್ದಿದ ಉಪ್ಪುನೀರು ತೆಗೆದಿರಿಸಿದ್ದು ಇದೆ, ಅದನ್ನೇ ಎರೆದರಾಯಿತು, ಉಪ್ಪಿನಕಾಯಿಯೂ ಪರಿಮಳ, ಉಪ್ಪುನೀರಿಗೂ ಒಂದು ಗತಿ ಸಿಕ್ಕಂತಾಯಿತು.
ಬಪ್ಪಂಗಾಯಿ ಪದಾರ್ಥ ಮಾಡಿದ್ದು ಹೇಗೆ?
ಹೋಳು ಮಾಡಿದ್ದಾಯ್ತಲ್ವೇ, ಈ ವೇಳೆಗೆ ತೊಗರಿಬೇಳೆ ಬೆಂದಿರಬೇಕು, ಹ್ಞಾ, ನಾನು ಈ ಅಡುಗೆಯಲ್ಲಿ ಬೇಳೆಯೂ ಹಾಕಿಲ್ಲ, ತೆಂಗಿನಕಾಯಿಯನ್ನೂ ತುರಿದಿಲ್ಲ.
ಮತ್ತೆ ಹೇಗೆ ಮಾಡಿದ್ದೂಽಽಽ
ಬಪ್ಪಂಗಾಯಿ ಬೇಯಲಿಟ್ಟು, 2 ಟೊಮ್ಯಾಟೋ, ನೀರುಳ್ಳಿ, ಹಸಿಮೆಣಸು, ಬೆಳ್ಳುಳ್ಳಿ, ಇತ್ಯಾದಿ ಹೆಚ್ಚಿ, ಬಾಣಲೆಯಲ್ಲಿ ಬಾಡಿಸಿ, ಮಿಕ್ಸಿಯಲ್ಲಿ ತಿರುಗಿಸಿ. ನುಣ್ಣಗೆ ಮಣ್ಣಿಯಂತಾಗಬಾರದು.
ಈ ಮಿಶ್ರಣವನ್ನು ಬೆಂದ ಬಪ್ಪಂಗಾಯಿ ಹೋಳುಗಳಿಗೆ ಕೂಡಿ, ರುಚಿಗೆ ಬೇಕಾದ ಪ್ರಮಾಣದಲ್ಲಿ ಉಪ್ಪು ಹುಳಿ ಬೆಲ್ಲ ಹೊಂದಿಸಿಕೊಳ್ಳಿ. ನೀರು ಎರೆಯದಿದ್ದಲ್ಲಿ ಪಪ್ಪಾಯಿ ಮುದ್ದೆ ಹುಳಿ ಎನ್ನಬಹುದು. ನೀರು ಸೂಕ್ತ ಪ್ರಮಾಣದಲ್ಲಿ ಎರೆದು ಕುದಿಸಿ ಕೊತ್ತಂಬರಿಸೊಪ್ಪು ಉದುರಿಸಿ, ಕರಿಬೇವು ಕೂಡಿದ ಒಗ್ಗರಣೆ ಕೊಡುವಲ್ಲಿಗೆ ಬಪ್ಪಂಗಾಯಿ ರಸಂ ಯಾ ಸಾರು ಎದ್ದು ಬಂದಿದೆ. ಬೇಕಿದ್ದರೆಸಾರಿನಪುಡಿ ಹಾಕಬಹುದಿತ್ತು, ಇದ್ದರೂ ಹಾಕಿಲ್ಲ. ಊಟಕ್ಕೂ, ಚಪಾತಿಗೂ ಸೈ ಅನ್ನಿ.
0 comments:
Post a Comment