ಹಿರಣ್ಯ ದೇಗುಲದಲ್ಲಿ ಸಂಕ್ರಾಂತಿ ಬಂತೆಂದರೆ ಸಾಕು, ದುರ್ಗಾಮಾತೆಯ ನೈವೇದ್ಯ ಪ್ರಸಾದ ಸ್ವೀಕರಿಸಿ, ಸವಿಯುವ ಯೋಗ. ನಮ್ಮಕಾಸರಗೋಡು ಪ್ರದೇಶದಲ್ಲಿ ಇದನ್ನು ಪಿಂಡಿ ಪರಮಾನ್ನ(ಪಾಯಸ) ಎನ್ನುವ ವಾಡಿಕೆ. ಪೊಂಗಲ್ ಅಂದರೆ ಎಲ್ಲರಿಗೂಅರ್ಥವಾದೀತು. ಹಾಗೇ ಸುಮ್ಮನೆ ಈ ಸಿಹಿ ಭಕ್ಷ್ಯವನ್ನು ಮಾಡಿ ತಿನ್ನುವಂತಿಲ್ಲ, ಇದು ದೇವಿಯ ನೈವೇದ್ಯ. ಅಕ್ಕಿ ಬೆಲ್ಲ ತೆಂಗಿನಕಾಯಿಹಾಗೂ ತಾಜಾ ತುಪ್ಪ ಇದಕ್ಕೆ ಬೇಕಾದಂತಹ ಸಿದ್ಧ ವಸ್ತುಗಳು. ಬೆಲ್ಲದ ಅನ್ನ ಅಂದರೂ ಸರಿ, ಗುಡಾನ್ನ ಸಂಸ್ಕೃತದಲ್ಲಿ, ಉಳಿದಂತೆ ದ್ರಾಕ್ಷಿ, ಏಲಕ್ಕಿ, ಗೇರುಬೀಜ…. ಹಾಕದಿದ್ದರೂ ನಡೆಯುತ್ತದೆ. ಆಂಗ್ಲ ಭಾಷೆಯಲ್ಲಿ ಘೀ ರೈಸ್ ಅಂದರೆ ಸೂಕ್ತ ಪದವಾದೀತು. ಹಾಗಂತ ನೀರುಳ್ಳಿ ಬೆಳ್ಳುಳ್ಳಿಗಳಿಗೆ ಅವಕಾಶವಿಲ್ಲ.
ಪೊಂಗಲ್ ತಯಾರಿಗೆ ಅಕ್ಕಿಯೊಂದಿಗೆ ಹುರಿದ ಹೆಸ್ರುಬೇಳೆ ಕಡ್ಡಾಯವಾಗಿರುತ್ತದೆ. ಇಲ್ಲಿ ತೆಂಗಿನ ತುರಿ ಕಡ್ಡಾಯ, ಬೇಳೆಕಾಳುಗಳಿಗೆಸ್ಥಾನವಿಲ್ಲ.
ಗುಡಾನ್ನ ಮಾಡುವ ವಿಧಾನ ತಿಳಿಯೋಣ.
ಹಿರಣ್ಯ ದೇಗುಲದಲ್ಲಿ ದುರ್ಗಾಮಾತೆಯ ಸಂಕ್ರಾಂತಿ ಪೂಜಾ ಕಾಲದಲ್ಲಿ ಗುಡಾನ್ನ ಮುಖ್ಯ ನೈವೇದ್ಯ. ಮಾಡುವ ವಿಧಾನವನ್ನುಅರ್ಚಕರ ಸಹಾಯಕರ ಬಳಿ ಕೇಳಿ ತಿಳಿದಿದ್ದೇನೆ ಹೊರತು ಮಾಡಿಲ್ಲ.
ಪರಿಕರ್ಮಿ ಹೇಳಿದ್ದಿಷ್ಟು, “ ಅಕ್ಕ, ಅನ್ನ ಚೆನ್ನಾಗಿ ಬೇಯಬೇಕು. “ ಅವರು ಒಲೆಯಲ್ಲಿ ಕಂಚಿನ ಉರುಳಿಯನ್ನಿಟ್ಟು, ಅಕ್ಕಿ ಬೇಯಿಸುತ್ತ ಇದ್ದರು. ಅದಕ್ಕೂ ಒಂದು ಕಂಚಿನ ಸಟ್ಟುಗ.
“ ಅಕ್ಕಿ ಚೆನ್ನಾಗಿ ಬೆಂದ ನಂತರವೇ ಬೆಲ್ಲ ಹಾಕುವುದು. “
“ ಹೌದ, ಈಗ ಅಕ್ಕಿ ಎಷ್ಟಾಯ್ತು? “
“ ಅಕ್ಕಿ ಮೂರು ಪಾವು ಆದ್ರೂ ಬೇಕು, ಬಂದ ಇಷ್ಟೂ ಜನಕ್ಕೆ ಒಂದೊಂದು ಚಮಚದಷ್ಟಾದರೂ ಬಟವಾಡೆ ಆಗ್ಬೇಡವೇ…”
“ ಬೆಲ್ಲದ ಅಳತೆ ಎಷ್ಟೂ ? “
“ ಇದು ಸಿಹಿ ಆದಷ್ಟೂ ರುಚಿ ಜಾಸ್ತಿ. ಅಕ್ಕಿಯ ಎರಡು ಪಾಲು ಬೆಲ್ಲ ಇರಲೇಬೇಕು. “
“ ಕೇಸರೀಬಾತ್ ಥರ ಅನ್ನಿ.. “
“ ಒಂದು ಹಸೀ ತೆಂಗಿನಕಾಯಿ ಬೀಳ್ಬೇಕು. “
“ ತೆಂಗಿನಕಾಯಿ ಹಾಕಿದ್ರೆ ಗುಡಾನ್ನ ಎಷ್ಟು ದಿನ ಉಳಿದೀತು? “
“ ಹಾಗೇನೂ ಆಗುವುದಿಲ್ಲ, ತೆಂಗಿನಕಾಯಿ ಕೂಡಾ ಪಾಕದೊಂದಿಗೆ ಬೆರೆಯಬೇಕು, ಹಾಗೇ ಸುಮ್ಮನೆ ಉಪ್ಪಿಟ್ಟಿಗೆ ಹಾಕಿದಂತಲ್ಲ…”
“ ಓ, ಸರಿ.. ತಿಳಿಯಿತು.. ತುಪ್ಪ ಎಷ್ಟು ಹಾಕ್ತೀರಾ? “
“ ಇಷ್ಟು ಪರಮಾನ್ನ ಆಗ ಬೇಕಾದರೆ ಒಂದು ಕುಡ್ತೆ ಆದರೂ ತುಪ್ಪ ಇರಲೇ ಬೇಕು, ಜಾಸ್ತಿ ಇದ್ದರೆ ಒಳ್ಳೇದು..”
ತದನಂತರ ಒಂದೆರಡು ಫೊಟೋ ತೆಗೆದಿದ್ದರೂ ಅದೆಲ್ಲಿದೆ ಎಂದು ಹುಡುಕಬೇಕಷ್ಟೇ, ಇದ್ದೀತು.
ಮಾಡಬೇಕು, ತಿನ್ನಬೇಕು ಎಂಬ ಆಸಕ್ತಿಯಿದ್ದರೆ ನವರಾತ್ರಿಯ ದಿನಗಳಲ್ಲಿ ಒಂದು ದಿನ ಗುಡಾನ್ನದ ನೈವೇದ್ಯ ದೇವಿಗೆ ಅರ್ಪಿಸಿತಿನ್ನಬಹುದು.
ಮಾಮೂಲಿಯಾಗಿ ಕುಕ್ಕರ್ ಅನ್ನ ಮಾಡಿದರಾಗದು. ಒಂದು ಲೋಟ ಅಕ್ಕಿ ಬೇಯಲು ಮೂರು ಲೋಟ ನೀರು ಬೇಕಾಗುವಲ್ಲಿ ಆರುಲೋಟ ನೀರು ಎರೆದು ಅನ್ನ ಮಾಡಿಕೊಳ್ಳಿ.
ಒತ್ತಡ ಇಳಿದ ನಂತರ ಅಕ್ಕಿಯ ಎರಡರಷ್ಟು ಪುಡಿ ಮಾಡಿದ ಬೆಲ್ಲ ಹಾಕುವುದು, ಅರ್ಧ ಕಡಿ ಕಾಯಿ ತುರಿ ಈಗಲೇ ಹಾಕುವುದು. ಅನ್ನದಲ್ಲಿರುವ ಹೆಚ್ಚುವರಿ ನೀರಿನಲ್ಲೇ ಬೆಲ್ಲ ಕರಗಲಿ.
ಅಗತ್ಯವಿದ್ದ ಹಾಗೆ ತುಪ್ಪ ಚಮಚದಲ್ಲಿ ಬೀಳಲಿ.
ಸೌಟಾಡಿಸುತ್ತ ಸುವಾಸನೆಯ ತುಪ್ಪ ಎರೆಯಿರಿ, ದ್ರಾಕ್ಷಿ , ಗೇರುಬೀಜ, ಏಲಕ್ಕಿ ಪುಡಿ ಹಾಕುವಲ್ಲಿಗೆ ಗುಡಾನ್ನ ಆದಂತೆ, ಹಲ್ವದ ಹದಬರಬೇಕು. ಕೆಳಗಿಳಿಸಿ ತಪಲೆಗೆ ತುಂಬಿಸಿ. ಹಲ್ವ ಕೇಸರಿಬಾತ್ ಗಳಂತೆ ಅಲಂಕಾರಿಕವಾಗಿ ಕತ್ತರಿಸುವ ರಗಳೆ ಇಲ್ಲಿಲ್ಲ, ಚಮಚದಲ್ಲಿ ತೆಗೆದು ಬಡಿಸಿದರಾಯಿತು.
0 comments:
Post a Comment