ಜ್ವರ ಬಂದಾಗ ಬಾಯಿ ರುಚಿ ಕೆಡುವುದೂ, ಕೇವಲ ಗಂಜಿಯೂಟ ಸಾಕೆನ್ನುವುದು ವಾಡಿಕೆಯ ಮಾತು. ಕಳೆದ ಎರಡು ದಿನಗಳಿಂದ ನಮ್ಮಲ್ಲಿ ಗಂಜಿಯೂಟ. ಮಾಡಿದ ಗಂಜಿ ಮುಗಿಯದೇ ಹೋಯಿತು. ಉಳಿದ ಗಂಜಿ ಅನ್ನವನ್ನು ಅಕ್ಕಿಯೊಂದಿಗೆ ತಿರುಗಿಸಿ ದೋಸೆಹಿಟ್ಟು ಎಂದು ಹೆಸರಿಟ್ಟು, ಮಾರನೇ ದಿನ ದೋಸೆ ಎರೆಯಲಾಯಿತು. ಬ್ರೆಡ್ ನಂತಹ ದೋಸೆ ಎದ್ದು ಬಂದಿತು. ತೆಂಗಿನತುರಿ, ಹುರಿಗಡಲೆ, ಹಸಿಮೆಣಸು ಸೇರಿದ ಚಟ್ಣಿ.
ಮಾರನೇ ದಿನ ಗಂಜಿಯೂಟದ ಜೊತೆಗೆ ಕೂಡಿಕೊಳ್ಳಲು ಪುನರ್ಪುಳಿ ಸಾರು ಹಾಗೂ ಬೀಟ್ರೂಟ್ ಪಲ್ಯ ತಯಾರಾದುವು.
ರಾತ್ರಿ ಮಲಗುವ ಮೊದಲು ದೋಸೆಗೆ ಅರೆಯುವುದಿದೆ. ಎರಡು ಲೋಟಾ ದೋಸೆ ಅಕ್ಕಿ ಹಾಗೂ ಎರಡು ಚಮಚಾ ಮೆಂತ್ಯನೆನೆದಿದ್ದುವು. ಉಳಿದ ಪಲ್ಯವೂ, ಉಳಿದ ಗಂಜಿಯೂ ಸೇರಿ ದೋಸೆ ಹಿಟ್ಟನ್ನು ಸಂಪನ್ನಗೊಳಿಸುವಲ್ಲಿ ನೆರವಾದುವು. ತೆಂಗಿನತುರಿ, ಹುರಿಗಡಲೆ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಸೇರಿದಾಗ ಒಂದು ಚಟ್ಣಿ ಆಯಿತು.
ಗಂಜಿ ಅನ್ನ ಹಾಗೂ ಅಕ್ಕಿಯ ಅಳತೆ ಒಂದೇ ಪ್ರಮಾಣದಲ್ಲಿರಲಿ. ಪಲ್ಯವೂ ಸರಳವಾಗಿರಲಿ, ಅತಿಯಾದ ಮಸಾಲೆಸಾಮಗ್ರಿಯೇನೂ ನಾನು ಹಾಕಿಲ್ಲ.
0 comments:
Post a Comment