ಬೇಸಿಗೆಯೆಂದರೆ ಬಿಸಿಲ ಸ್ನಾನ, ಬೆವರಿನಿಂದಲೇ ಮೈ ತೊಯ್ದು ತೊಪ್ಪೆಯಾಗುವ ಕಾಲ. ಸಿಹಿ ಸಿಹಿ ಹಣ್ಣುಗಳ ಕಾಲ. ಗುಡ್ಡದಅಂಚಿನಲ್ಲಿರುವ ಮಾವಿನ ಮರ ಹಿರಿಕರಿಯರ ಆಶ್ರಯ ತಾಣ. ಮಾವಿನ ಹಣ್ಣುಗಳ ರಸರುಚಿ ಸವಿಯುತ್ತ ಹಾಯಾಗಿರುವ ಸಮಯ.
ಈ ಸಂತಸ ನಮ್ಮ ಬಾಲ್ಯದ್ದು, ಕಾಲ ಉರುಳಿದಂತೆ ಅಂದಿನ ಮಾಮರಗಳಿಲ್ಲವಾಗಿವೆ. ರಸ್ತೆ ಪಕ್ಕದಲ್ಲಿ ನೆರಳು ನೀಡುತ್ತಿದ್ದ ಮರಗಳು ಕಾಂಕ್ರೀಟ್ ಕಾಡುಗಳೆಡೆಯಲ್ಲಿ ಮರಳಿ ಬಾರದ ಲೋಕಕ್ಕೆ ತೆರಳಿವೆ. ಆಧುನಿಕತೆಯೆಂಬ ರಕ್ಕಸ ನಮಗೆ ಹವಾನಿಯಂತ್ರಿತ ಕೊಠಡಿಗಳನ್ನು ನೀಡಿರುವಾಗ ಗಿಡಮರಗಳು ಅನಗತ್ಯ ಅನ್ನೋಣ. ಇಂದಿನ ಮಕ್ಕಳು ಪ್ರಕೃತಿಯ ಒಡನಾಟದಿಂದ ವಂಚಿತರುಎಂದೆನ್ನಲೇ ಬೇಕಾಗಿದೆ.
ಬಿಸಿಲಿನ ಝಳದಿಂದ ಬೆವರಿದ ಮೈಗೆ ವರ್ಷಧಾರೆ ತಂಪನ್ನು ನೀಡಿದೆ. ಮನೆಯೊಳಗೆ ಗುಬ್ಬಚ್ಚಿಗಳಂತೆ ಇರುವ ಕಾಲ. ಏನೇನೋ ತರೋಣ, ಬೇಕೆನಿಸಿದ್ದನ್ನು ತಿನ್ನೋಣ ಅನ್ನುವ ಹಾಗೇ ಇಲ್ಲ. ಅಡುಗೆಮನೆಯಲ್ಲಿ ದಾಸ್ತಾನು ಇದೆಯಾ? ಉಪ್ಪುಸೊಳೆ, ಉಪ್ಪಿನಲ್ಲಿಅದ್ದಿಟ್ಟ ಮಾವಿನಕಾಯಿ…. ಯಾವುದೂ ನಮ್ಮ ಇಂದಿನ ಜೀವನಶೈಲಿಗೆ ಒಗ್ಗದು.
“ ಅಮ್ಮ, ಅದೆಲ್ಲ ಬೇಡ. “ ಭರಣಿಯಿಂದ ಹೊರ ತೆಗೆಯುವುದಕ್ಕಿಲ್ಲ. “ಮತ್ಯಾಕೆ, ಇದನ್ನೆಲ್ಲ ಉಪ್ಪು ಹಾಕಿ ಇಟ್ಟಿದ್ದು ದಂಡ ಆಯ್ತಲ್ಲ.”
“ ಅದರ ವಾಸ್ನೆ ನಂಗಾಗಲ್ಲ. “
ಬೇಕಿದ್ದವರಿಗೆ ಇಂತಹ ಪರಿಕರಗಳೆಲ್ಲ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಮೆಝಾನ್ ಕೂಡಾ ಕಳಿಸಿ ಕೊಟ್ಟೀತು ಅನ್ನಿ.
ಹಿಂದೆ ಮನೆ ತುಂಬ ಜನ, ಕೆಲಸದಾಳುಗಳೂ, ಬಂದು ಠಿಕಾಣಿ ಹೂಡುತ್ತಿದ್ದ ನೆಂಟರಿಷ್ಟರೂ ಸೇರಿ ಹದಿನೈದು ಇಪ್ಪತ್ತು ಜನಕ್ಕೆದಿನವೂ ಅಂಗಡಿ ಸಾಮಾನು ತರುವುದಕ್ಕಿಲ್ಲ, ಪರಿಸರದಲ್ಲಿ ದೊರೆಯುವ ತಜಂಕ್, ಕೆಸು, ಬಸಳೆ, ಹರಿವೆ ಸೊಪ್ಪುಗಳು, ಹಲಸಿನಬೇಳೆ ಇತ್ಯಾದಿ ಮುಖ್ಯ ಆಹಾರ ಪದಾರ್ಥವಾಗಿರುತ್ತಿದ್ದುವು. ಹಲಸು ತಿಂದ ಹಾಗೇ ಬೇಳೆಯನ್ನು ಬೇರ್ಪಡಿಸಿ, ತೊಳೆದು ಸಂಗ್ರಹಿಸಿ, ಮಳೆಗಾಲ ಆರಂಭಕ್ಕೆ ಮೊದಲು ಕೆಂಪು ಮಣ್ಣಿನ ಲೇಪನ ನೀಡಲಾಗುತ್ತಿತ್ತು, ಸಪ್ಪಗಿನ ಹಲಸಿನ ಬೇಳೆಗೆ ಸಿಹಿ ರುಚಿ ಬಂದ ನಂತರವೇ ತಿನ್ನುವುದು. ಹೇಗೇ? ನಿಗಿನಿಗಿ ಕೆಂಡದಲ್ಲಿ ಸುಟ್ಟ ಬೇಳೆಯ ಪರಿಮಳವೂ, ರುಚಿಯೂ, ಇಂದಿನ ಮಕ್ಕಳಿಗೆ ಆ ಭಾಗ್ಯ ಹೋಯ್ತು.
ಸೊಪ್ಪು, ಹಣ್ಣು ಸೌತೇಕಾಯಿಗಳೊಂದಿಗೆ ಬೆರಕೆ ಈ ಹಲಸಿನ ಬೇಳೆ, ಪದಾರ್ಥವೂ ಮಸ್ತ್ ರುಚಿ. ಇವೆಲ್ಲ ಈಗ ನೆನಪುಗಳಾಗಿ ಉಳಿದಿವೆ.
ಮಳೆಯ ವಾತಾವರಣದಲ್ಲಿ ಸೊಂಪಾಗಿ ಬೆಳೆದಂತಹ ಹಸಿರು, ಯಾವುದೇ ಸಸ್ಯವಾಗಿರಲಿ ಕುಡಿ ಎಲೆಗಳನ್ನು ಸಂಗ್ರಹಿಸಿ, ಹಲವು ಕುಡಿಗಳಿಂದ ತಂಬುಳಿ ತಯಾರಿಸಿ ಉಣ್ಣದಿದ್ದರೆ ಹೇಗಾದೀತು. ಮಳೆಗಾಲದ ರೋಗರುಜಿನಗಳಿಂದ ತಪ್ಪಿಸಿಕೊಳ್ಳಲು ಇದೂ ಒಂದು ದಾರಿಯಾಗಿದ್ದಿತು. ಈಗ ಹಾದಿಬೀದಿಗೊಂದರಂತೆ ಆಸ್ಪತ್ರೆಗಳಿವೆ. ಸೊಪ್ಪುಸದೆಗಳ ಉಸಾಬರಿ ನಮಗೆ ಬೇಡವಾಗಿದೆ. ಬೇಕೆನಿಸಿದರೂ ಹೈಟೆಕ್ ಮನೆಗಳಲ್ಲಿ ವಾಸಿಸುವ ನಮಗೆ ದುರ್ಲಭ. ಮನೆಯಿಂದ ಅಂಗಳಕ್ಕೆ ಇಳಿಯಬೇಕಾದರೆ ಇಂಟರ್ ಲಾಕ್, ಗೃಹಾಲಂಕಾರಕ್ಕೆ ಕುಂಡಗಳಲ್ಲಿ ನೆಟ್ಟಂತಹ ರಂಗುರಂಗಿನ ಎಲೆಗಳ ಗಿಡಗಳು, ಪರಿಮಳ ರಹಿತ ಹೂವುಗಳು. ಪ್ರಕೃತಿಯ ಅಂಗಣದಲ್ಲಿ ಸ್ವಚ್ಛಂದವಾಗಿ ಬೆಳೆಯುವ ಗಿಡಬಳ್ಳಿಗಳ ಕಾಲ ಮರೆಗೆ ಸರಿದಿದೆ.
ಇದೀಗ ಹಬ್ಬಗಳ ಮಾಸ ಎನಿಸಿದಂತಹ ಶ್ರಾವಣ ಬಂದಿದೆ. ಮೊದಲ ಹಬ್ಬವೇ ನಾಗಪಂಚಮಿ. ನಾಗನೆಂದರೆ ಪ್ರಕೃತಿಯ ಮಡಿಲು, ಗುಡಿಗೋಪುರಗಳು ಬೇಕಿಲ್ಲ, ಸುತ್ತಲೂ ಜಲಾವೃತ ಭೂಮಿ, ಕೇದಗೆಯ ವನ, ಸಂಪಿಗೆಯ ಮರದ ಸುಗಂಧ, ಔಷಧೀಯ ವೃಕ್ಷಗಳಿಂದ ಕೂಡಿದ ಸಸ್ಯಸಂಪತ್ತು. ಇಂತಹ ಪರಿಸರ ಈಗ ಕಾಣೆವು, ಕಾಂಕ್ರೀಟ್ ಕಟ್ಟಡದೊಳಗೆ ದೇವರನ್ನು ಇಟ್ಟು ಪೂಜೆಮಾಡಿದರಾಯಿತು. ನಾಗಪಂಚಮಿಯ ಸಿಹಿ ಹೇಗೆ? ಬೆಲ್ಲ, ತೆಂಗಿನಕಾಯಿ, ಅಕ್ಕಿ ಹಿಟ್ಟು ಸೇರಿದ ಮಿಶ್ರಣವನ್ನು ಅರಸಿಣ ಎಲೆಯಲ್ಲಿಸುತ್ತಿ ಇಟ್ಟು ಮಾಡುವ ಕಡುಬು ನಾಗಪಂಚಮಿಯ ವಿಶೇಷ. ಅರಸಿಣ ಎಲೆ ಕೂಡಾ ಈಗ ಮಾರ್ಕೆಟ್ಟಲ್ಲಿ ಸಿಗುತ್ತದೆ.
ಶ್ರಾವಣ ಬಂತೆಂದರೆ ಕರಾವಳಿಯ ಗೌಡ ಸಾರಸ್ವತ ಸಮಾಜದಲ್ಲಿ ಸಂಭ್ರಮದ ಕಾಲ, ನನ್ನ ಬಾಲ್ಯದ ದಿನಗಳಲ್ಲಿ ನೆರೆಮನೆಯ ಮಹಿಳೆಯರ ಚೂಡಿ ಪೂಜೆಯ ಆಚರಣೆಯ ನಂತರ ಪ್ರಸಾದವೆಂದು ಸಿಹಿ ತಿನಿಸು ಸಿಗುತ್ತಿತ್ತು. ಬೆಲ್ಲ ತೆಂಗಿನಕಾಯಿ ಬಾಳೆಹಣ್ಣುಗಳ ಮಿಶ್ರಣದ ಪ್ರಸಾದ ರುಚಿಕರವಾಗಿರುತ್ತಿತ್ತು. ಅದನ್ನೂ ಮನೆಯ ಮಹಿಳೆಯರೇ ತಯಾರಿಸುತ್ತಿದ್ದರು. ಜೊತೆಗೆ ಚೂಡಿಯೂ. ನೆಲದಲ್ಲಿ ಬೆಳೆಯುವ ಹಲ ಬಗೆಯ ಹುಲ್ಲುಗಳನ್ನು ಆಕರ್ಷಕವಾಗಿ ರತ್ನಗಂಧಿ, ಕರವೀರ ಹೂಗಳ ಜೋಡಣೆಯೊಂದಿಗೆ ಬಾಳೆಯನಾರಿನಲ್ಲಿ ಕಟ್ಟಿದ ಅತ್ಯಾಕರ್ಷಕ ಪುಷ್ಪಗುಚ್ಛ ಅದು. ಈಗ ಬಾಳೆಯ ನಾರೂ ಕಾಣೆವು, ಗರಿಕೆ ಹುಲ್ಲೂ ಸಿಗದು.
ಇದರೊಂದಿಗೆ ಕೇರಳದ ಓಣಂ, ಇಲ್ಲಿಯೂ ನೈಸರ್ಗಿಕವಾಗಿ ಬೆಳೆಯುವ ಹೂಗಳಿಂದಲೇ ಪೂಕಳಂ ರಚಿಸುವ ಸಂಭ್ರಮ ಹಿಂದೆ ಇತ್ತು. ಕಳೆ ಸಸ್ಯವಾಗಿರುವ ರಥ ಹೂವನ್ನೇ ಕೊಯ್ದು ತಂದರೆ ಸಾಕಾಗುತಿತ್ತು. ಈಗ ಹೂವಿನ ಮಾರ್ಕೆಟ್ ಕಡೆ ಚೀಲ ಕೊಂಡೊಯ್ಯುವ ಕಾಲ ಬಂದಿದೆ. ಕಾಲಾಯ ತಸ್ಮೈ ನಮಃ ಅನ್ನಬೇಕಷ್ಟೆ.
ಟಿಪ್ಪಣಿ: ಸದಭಿರುಚಿಯ ಮಾಸಪತ್ರಿಕೆ ಉತ್ಥಾನದಲ್ಲಿ, ಪ್ರಕಟಿತ ಕಿರು ಬರಹ.