Pages

Ads 468x60px

Sunday, 26 May 2024

ಮಾವಿನಕಾಯಿ ಮೇಲಾರ

 

ಚಪ್ಪರದಿಂದ ತೊಂಡೆಕಾಯಿ ಬಂದಿದೆ.  ಮಜ್ಜಿಗೆ ಹುಳಿಗೆ ಹೇಳಿದಂತಹ ತರಕಾರಿ.  ಆದರೆ ಮಜ್ಜಿಗೆ ಇಲ್ಲವಾಗಿದೆ.  ಡಿಪೋದಿಂದ ತಂದ ಹಾಲು, ಚಹಾ ಕಾಫಿಗೆ ತೆಗೆದಿರಿಸಿ, ಕೆನೆಯನ್ನು ತಂಪು ಪೆಟ್ಟಿಗೆಯಲ್ಲಿ ಶೇಖರಿಸಿ, ಮೂರು ದಿನಕ್ಕೊಮ್ಮೆ ಕಡೆದು,  ಬೆಣ್ಣೆ ತೆಗೆದು ಉಳಿದಂತಹ ದ್ರವ ಮಜ್ಜಿಗೆ.  ಇದನ್ನೂ ಹಿತಮಿತವಾಗಿ ಊಟದ ಕೊನೆಗೆ ಬಳಸುವ ವಾಡಿಕೆ.  ಸೆಖೆಯಲ್ವೇ,  ಕುಡಿಯಲಿಕ್ಕೂ ಮಜ್ಜಿಗೆ ನೀರು ಇರಲೇ ಬೇಕು. 


ನಮ್ಮವರು ಒಳ ಬಂದರು, ಕೈಯಲ್ಲಿ  ಮಾವಿನಕಾಯಿ ಗೊಂಚಲು!  ಎಲ್ಲಿಂದ ಏನು ತಾನು ಕೇಳುವುದಕ್ಕಿಲ್ಲ, ತೋಟದಲ್ಲಿ ಮಾವಿನ ಮರಗಳಿವೆ. ಐಡಿಯಾ ಸಿಕ್ಕಿಯೇ ಬಿಟ್ಟಿತು.   ಪುಟ್ಟದೊಂದು ಮಾವಿನಕಾಯಿ ಸಿಪ್ಪೆ ಹೆರೆದು , ಹೋಳುಗಳಾಯಿತು.  ತೊಂಡೆಕಾಯಿಗಳೊಂದಿಗೆ ಬೆರೆಯಿತು,  ಎರಡು ಹಸಿಮೆಣಸೂ ಸೇರಿತು,  ಬೆಂದ ನಂತರ ಅರ್ಧ ತೆಂಗಿನಕಾಯಿ ತುರಿ ಅರೆದು ಸೇರಿಸಲಾಯಿತು.

ಮಜ್ಜಿಗೆ ಹುಳಿಯ ಸಾಂದ್ರತೆ ಬಂದಿತು. 

ಕುದಿಸಿ, ರುಚಿಗೆ ಉಪ್ಪು ಹಾಗೂ ಕರಿಬೇವಿನ ಒಗ್ಗರಣೆ ಇದ್ದರಾಯಿತು,  ನಮ್ಮ ಮಾವಿನಕಾಯಿ ಮೇಲಾರ ಆಯ್ತು.


ನೆಕ್ಕರೆ ಮಾವಿನಕಾಯಿಗಳಿದ್ದರೆ ಕೇವಲ ಮಾವಿನ ಹೋಳುಗಳಿಂದಲೇ ಮೇಲಾರ ಮಾಡಲಿಕ್ಕಾಗುತ್ತದೆ, ಸ್ವಲ್ಪ ಸಿಹಿ ಮಜ್ಜಿಗೆ ಎರೆಯಲೂ ಅಡ್ಡಿಯಿಲ್ಲ.  ಬೇಕಿದ್ದರೆ ರುಚಿಗೆ ತಕ್ಕಷ್ಟು ಬೆಲ್ಲ ಹಾಕಬಹುದು.   ತೋತಾಪುರಿ ಮಾವಿನಕಾಯಿಯೂ ಆದೀತು.  ಹಸಿ ಸೌತೆಕಾಯಿ ಸೇರಿಸಿ ಇನ್ನೂ ಚೆನ್ನಾಗಿರುತ್ತದೆ.






Friday, 17 May 2024

ಕಲ್ಯಾಣಿಯಕ್ಕನ ಕರಿಮಣಿ

 



“ ಅಕ್ಕ,  ನನ್ನ ಮಾಂಗಲ್ಯ ಸರ ಕಾಣಿಸುತ್ತಿಲ್ಲ.. “ ಸಪ್ಪೆ ಮುಖದೊಂದಿಗೆ ಕಲ್ಯಾಣಿ ಎದುರಾದಳು.  ಗೀತಕ್ಕ ಜೆಂಬ್ರದ ಊಟ ಮುಗಿಸಿ ಮನೆ ತಲಪುವಾಗ ನಾಲ್ಕು ಗಂಟೆಯ ಹೊತ್ತು,  ಕಲ್ಯಾಣಿ,  ಇಂದಿನ ಮನೆಕೆಲ್ಸ ಆಯ್ತು ಎಂದು ಹೊರಡುವ ಹೊತ್ತು.  “ ಮನೆ ಒಳಗೇ ಇದ್ದೀತು ಕರಿಮಣಿ ಎಲ್ಹೋಗುತ್ತೆ..  ನಾಳೆ ಸಿಕ್ಕೀತು ಬಿಡು. “


“ ಇಲ್ಲ ಅಕ್ಕ, ಕತ್ತಿ ಹಿಡಿದು ಹಿತ್ತಲ ಹುಲ್ಲು ಹೆರೆದಿದ್ದೇನೆ,  ನಿಮ್ಮ ಸೊಸೆ ಹುಲ್ಲು ಅಡಿಮೇಲು ಮಾಡಿ ನೋಡಿದ್ರು,  ಸಿಗ್ಲಿಲ್ಲ.  ಅಷ್ಟೊತ್ತಿಗೆ ನರಸಯ್ಯ ಕಾರನ್ನು ಶೆಡ್ ಒಳಗಿರಿಸಿ ಬಂದರು.  

“ ಯಜಮಾನ್ರೆ, ಇಷ್ಟು ವರ್ಷ ಈ ಮನೇಲಿ ಕೆಲ್ಸ ಮಾಡಿದ್ದಕ್ಕೆ ಹೀಗಾಯ್ತಲ್ಲ,  ಮನೆಗೆ ಹೇಗೆ ಹೋಗಲಿ.”ಕಣ್ಣು ತುಂಬಿ ನೀರು ಹರಿಯಿತು.


ಕಲ್ಯಾಣಿ ಮುದುವೆಯಾಗಿ ಗಂಡನ ಮನೆ ಎಂದು ಬಂದದ್ದು ಕುಂಜತ್ತೂರಿಗೆ.  ಅದು ತನಕ ಶಾಲಾವ್ಯಾಸಂಗ ಮಾಡುತ್ತಿದ್ದಳು,  ಕಲಿಯಲಿಕ್ಕೂ ಉಶಾರು,  ಹೆಣ್ಣುಮಗಳಿಗೆಪ ಮದುವೆ ಮಾಡದೇ ಇಟ್ಟುಕೊಳ್ಳುವುದಕ್ಕಾದೀತೇ,  ಊರ ಜನ ಏನೆಂದಾರು?  ಕುಂಬಳೆಯ ನಾಯ್ಕಾಪು ಹಾಗೂ ಮಂಜೇಶ್ವರದ ಕುಂಜತ್ತೂರು ದೂರವೇನಲ್ಲ.   ಹೋಗಿ ಬಂದು ಮಾಡಬಹುದಿತ್ತು.   ಆದರೂ ಮದುವೆಯ ನಂತರ ತಾಯಿಮನೆ ದೂರವೇ ಉಳಿಯಿತು.   ಬಂದ ಮನೆಯಲ್ಲಿ ಗದ್ದೆ ಬೇಸಾಯ,  ಅಡಿಕೆ ಕೃಷಿ,  ಹಟ್ಟಿ ತುಂಬ ಹಸುಕರುಗಳು.   ಮನೆಯೊಳಗೂ ಅತ್ತೆಮಾವ, ಅಣ್ಣತಮ್ಮಂದಿರು,  ಅತ್ತಿಗೆ ನಾದಿನಿಯರು ಕೂಡಿದ ದೊಡ್ಡ ಕುಟುಂಬದ ನಿಭಾವಣೆ ಸಣ್ಣ ಮಾತೇ?   ಗಂಡನೆಂಬ ರಂಗಣ್ಣನಿಗೆ ಮಾತು ಸರಿಯಾಗಿ ಬಾರದು,  ತೊದಲಿದಂತೆ ಮಾತು ಹೊರಳುತ್ತಿತ್ತು.   ಆದರೂ ಪೇಟೆ ಪರಿಸರದಲ್ಲಿ ಒಂದು ಗೂಡಂಗಡಿ ಇಟ್ಟಿದ್ದ. 


ಕಲ್ಯಾಣಿಯೂ ಎರಡು ಮಕ್ಕಳ ತಾಯಿ ಆದಳು.  ಸಮಯ ಹೋದಂತೆ ಅತ್ತೆ ಮಾವಂದಿರು ಕೈಲಾಸ ಸೇರಿದರು.  ಅಣ್ಣತಮ್ಮಂದಿರಲ್ಲಿ ಮನೆ ಗದ್ದೆ ತೋಟ, ಜಾನುವಾರುಗಳೂ ಪಾಲಾದವು.  ರಂಗಣ್ಣನೂ ಕಲ್ಯಾಣಿಯೂ ಸಿಕ್ಕಿದ ಪಾಲನ್ನು ಪಡೆದು ಗದ್ದೆ ಭೂಮಿಯಲ್ಲಿ ಮುಳಿ ಗುಡಿಸಲು ಕಟ್ಟಿ ಕೊಂಡರು. 


ಮಕ್ಕಳೂ, ಕೈಲಾಗದ ಗಂಡನನ್ನೂ ನಿಭಾಯಿಸಲು ಕಲ್ಯಾಣಿಯೂ ಹೊರಕೆಲಸಕ್ಕೆ ಹೋಗಬೇಕಾಯಿತು.  ಜಮೀನುದಾರ ನರಸಯ್ಯ ಆಕೆಗೆ ತೋಟದ ಕೆಲಸ ಅಂತ ಕೊಟ್ಟರೇನೋ ಸರಿ.   ಸಂಬಳ ಮಾತ್ರ ವಾರದ ರೇಷನ್ ಸಾಮಗ್ರಿ ಕೊಂಡೊಯ್ಯಲು ಸಾಕಾಗುವಷ್ಟೇ ಕೊಡುತ್ತಿದ್ದುದು.


ಸರಕಾರ ಬದಲಾದಂತೆ ಕಾರ್ಮಿಕರ ಸವಲತ್ತುಗಳೂ ಹೆಚ್ಚಾಗತೊಡಗಿದೆ.  ಈಗ ಕಲ್ಯಾಣಿ ಬ್ಯಾಂಕ್ ಖಾತೆ ತೆರೆದಿದ್ದಾಳೆ.  ಹಿಂದಿನಂತೆ ದಿನ ಮಜೂರಿಗಾಗಿ ಜಮೀನ್ದಾರರ ಮನೆಗೆ ಹೋಗಬೇಕಾಗಿಲ್ಲ.  ಕಾರ್ಮಿಕರ ಗುಂಪು ಜತೆಯಲ್ಲಿ,  ಎಲ್ಲಿ ಕೆಲಸ ಏನು ಕೆಲಸ ಎಂದು ಕೇಳುವ ಸಂಗತಿ ಇಲ್ಲ.  


ಮುಳಿಹುಲ್ಲಿನ ಮನೆ ಇರುವಲ್ಲಿ  ಸೊಗಸಾದ ಟೆರೇಸ್ ಕಟ್ಟಡದ ಮನೆ ಬಂದಿದೆ,  ಮಕ್ಕಳೂ ವಿದ್ಯಾವಂತರು. ಮಗ ಬ್ಯಾಂಕ್ ಉದ್ಯೋಗಿ,  ಮಗಳೂ ಮದುವೆಯಾಗಿ ಗಂಡನ ಮನೆ ಸೇರಿದ್ದಾಳೆ.   ಎರಡು ಮೊಮ್ಮಕ್ಕಳೂ ಸೇರಿ ತುಂಬಿದ ಸಂಸಾರ.


ಆದರೂ ಗಂಡನ ಅಲ್ಪ ಆದಾಯದಲ್ಲಿ ಕಾಸಿಗೆ ಕಾಸು ಕೂಡಿಟ್ಟು,  ಊರಿನ ಕೃಷ್ಣಪ್ಪಾಚಾರಿಯಲ್ಲಿ ಮಾಡಿಸಿದ ಕರಿಮಣಿ ಸರ  ಕಳೆದು ಮನೆಗೆ ತೆರಳುವುದುಂಟೇ?


“ಬಟ್ಟೆ ತೊಳೆಯುವಾಗ ನೀರಿನೊಟ್ಟಿಗೆ ಪೈಪಿನಲ್ಲಿ ಹೋಗಿದ್ದರೆ ಸಿಗುವುದು ಕಷ್ಟವೇ,  ಆದರೂ ತೋಟದಲ್ಲಿ ನೀರು ಬಿದ್ದ ಜಾಗದಲ್ಲಿ ಹುಡುಕಲಿಕ್ಕೆ ಈಗ ಸಂಜೆಗತ್ತಲು,  ಯಾವುದಕ್ಕೂನಾಳೆ ಕೂಲಿಯಾಳುಗಳನ್ನು ಬರಹೇಳಿ ನೋಡೋಣ. “ ಎಂದರು ನರಸಯ್ಯ.

“ಭರ್ತಿ ಒಂದೂವರೆ ಪವನು ಚಿನ್ನ ಇತ್ತು … ಕಲ್ಯಾಣಿಯ ಕಣ್ಣೀರು.

 

ಯಾವುದಕ್ಕೂ ಇರಲಿ ಎಂದು ಗೀತಕ್ಕ ಅವಳ ಮನೆಗೆ ಫೋನ್ ಮಾಡಿದಾಗ ಕಲ್ಯಾಣಿಯ ಸೊಸೆ ಉತ್ತರಿಸಿದಳು,  “ ಅತ್ತೆಯ ಸರ ಹಾಸಿಗೆಯಲ್ಲಿ ಇತ್ತು,  ತೆಗೆದಿರಿಸಿದ್ದೇನೆ. “ ಕರಿಮಣಿ ಇಲ್ಲದೇ ಮನೆಯಿಂದ ಹೊರಟಿದ್ದು ಅವಳು ಗಮನಿಸಿಯೂ ಸುಮ್ಮನಿದ್ದಳು.

“ಹೌದ! “ ಕಲ್ಯಾಣಿ ಗೆಲುವಾದಳು.  “ಮಲಗುವಾಗ ತೆಗೆದಿಟ್ಟು,  ಎದ್ದ ನಂತರ ಹಾಕ್ಕೊಳ್ಳುವುದು,  ಇವತ್ತು ಹಾಗೇ ಬಂದಿದೀನಾ,  ಓ ದೇವ್ರೇ..”


“ ನಾಳೆ ಬರುವಾಗ ಸಂತೆ ಕರಿಮಣಿ ಹಾಕಿಕೋ,  ಇಲ್ಲದಿದ್ದರೆ ನಾನೇ ಕೊಡ್ತೇನೆ.  ದೂರಪ್ರಯಾಣ ಮಾಡುವಾಗ ನಾನೂ ಸಂತೆಯ ಸರಕನ್ನೇ ಹಾಕಿ ಕೊಳ್ಳುವುದು. “ ಎಂದಳು ಗೀತಕ್ಕ.





Friday, 3 May 2024

ಬೆಂಡೆಯ ಲೋಳೆ

 



ಈ ಕಡು ಬೇಸಿಗೆಯಲ್ಲಿ ಬೆಂಡೆ, ಅದೂ ಊರ ಬೆಂಡೆಕಾಯಿ ಬೆಳೆದವರ ಹೊಟ್ಟೆ ತಣ್ಣಗಿರಲಿ ಎಂಬ ಹಾರೈಕೆ ನಮ್ಮದು.  ಬೆಂಡೆಕಾಯಿ ಅಂಗಡಿಯಿಂದ ಬಂದಿತ್ತು.   ಮಗನೂ ಬಂದಿದ್ದ ವೋಟು ಹಾಕಲಿಕ್ಕೆ.  “ ಹೇಗೂ ಬಂದಿದ್ದೀಯ,  ನನಗೆ ತಲೆಗೆ ಮೀಯುವುದಿದೆ.  ಬನ್ಪಿನ ಸೊಪ್ಪು  ತಂದ್ಕೊಡು..”  ನಾನು ಬರುವಾಗ್ಲೇ ನೋಡ್ಕೊಂಡು ಬಂದಿದ್ದೇನೆ,  ಮರದ ಎಲೆಗಳೆಲ್ಲ ಕರಟಿ ಹೋಗಿವೆ,  ಉರಿಬಿಸಿಲಿಗೆ ಹಾಗಾಗಿದೆ,  ಮಳೆ ಬಂದ್ಮೇಲೆ ಸೊಪ್ಪು ಕೇಳು… “


ಯಾವುದಿದು ಬನ್ಪು? ಸೊಪ್ಪು ಯಾಕೆ ಅಂತೆಲ್ಲ ಕೇಳಿಯೇ ಕೇಳ್ತೀರಾ… ನನ್ನದೂ ಉತ್ತರ ತಯಾರಿದೆ.


ಬಾಲ್ಯದಿಂದಲೇ ತಲೆಗೆ ಮೀಯುವುದು ಅಂದರೆ ಸೀಗೇ ಹುಡಿ ಹಾಗೂ ಗೊಂಪು ತಲೆಗೆ ಮೆತ್ತಿ ಸ್ನಾನ ಮಾಡಿ ರೂಢಿ,   ಅದೂ ದಟ್ಟ ನೀಳ ಕೇಶರಾಶಿಯನ್ನು ತೊಳೆಯಲು ಅಮ್ಮ ಹಾಗೂ ಅಜ್ಜಿ ಬಹಳ ಮುತುವರ್ಜಿ ವಹಿಸುತ್ತಿದ್ದರು .  ನನ್ನ ತಲೆ ಸಾಬೂನು ಯಾ ಶಾಂಪೂ ದ್ರಾವಣವನ್ನು ಕಂಡಿದ್ದೇ ಇಲ್ಲ.  ಕಾಸರಗೋಡಿನ ನಮ್ಮ ಮನೆಯಲ್ಲಿ ಯಾವುದೇ ಗೊಂಪು ಸಸ್ಯ ಇರಲಿಲ್ಲ,  ಇದ್ದೀತು ದಾಸವಾಳ,  ಅದೆಲ್ಲ ನನ್ನ ತಲೆಗೂದಲಿಗೆ ಸಾಲದು.  ಹಾಗಾಗಿ ಹಳ್ಳಿಯ  ಮನೆಯ ತೋಟದಿಂದ ದಡಸಿನ ಮರದ ತೊಗಟೆಯನ್ನು ತರಿಸಿ,  ಒಣಗಿಸಿ ಇಟ್ಟುಕೊಳ್ಳುತ್ತಿದ್ದರು.  ದಡಸು ಎಂಬ ಈ ಸಸ್ಯವನ್ನು ತೋಟದ ಬದಿಯಲ್ಲಿ ಬೇಲಿಗಾಗಿ ನೆಡಲಾಗುತ್ತಿತ್ತು. 

ಒಣಗಿದ ತೊಗಟೆಯನ್ನು ಕುದಿಯುವ ನೀರೆರೆದು ಗುಂಡುಕಲ್ಲಿನಿಂದ ಜಜ್ಜಿದರೆ ಸೈ,  ಧಾರಾಳ ಗೊಂಪು…

ಮನೆಮಂದಿಯೆಲ್ಲ ಆ ದಿನ ತಲೆಗೆ ಮಿಂದೇ ಸಿದ್ಧ.


ಮದುವೆಯಾದ ನಂತರ ನನ್ನ ಗೊಂಪು ಸ್ನಾನ ಅತ್ತೆಯವರಿಗೆ ತಿಳಿಯಿತು.  “ ಇದಾ ನೋಡು, ನೀ ಚಿಂತೆ ಮಾಡಡ,  ಇಲ್ಲೇ ಮೇಲೆ ಬನ್ಪಿನ ಮರ ಇದ್ದು,  ಈಗ ಬರೇ ಸಣ್ಣ ಗಿಡ ಅದು.. “  ಎಂದು ತೋರಿಸಿಯೂ ಕೊಟ್ಟರು.  ಈಗ ಅದು ದೊಡ್ಡ ಮರವಾಗಿದೆ,  ಸಾಲದ್ದಕ್ಕೆ ಹೊಸ ಗಿಡಗಳೂ ಸೃಷ್ಟಿಯಾಗುತ್ತಲಿವೆ.  

ನನ್ನ ಮಕ್ಕಳೂ ಬನ್ಪು ಸೊಪ್ಪಿನಿಂದಲೇ ಮೀಯಲು ಕಲಿತಿದ್ದಾರೆ.


“ ದಡಸಿನ ಮರ ನಾವು ಕಾಣೆವಕ್ಕ,  ನಿಮಗೆ ಬೇಕಿದ್ದರೆ ಎರಪ್ಪೆ ಸೊಪ್ಪು ತಂದು ಕೊಟ್ಟೇನು. “  ಎಂದಳು ಕಲ್ಯಾಣಿ.    ಆಂದಿನ ದಿನಗಳಲ್ಲಿ ಬಾಯಾರು ದೇವಸ್ಥಾನದ ಆಸುಪಾಸಿನಲ್ಲಿ ಸಿಗುವ ಎರಪ್ಪೆ ಸೊಪ್ಪು ನನ್ನ ಸ್ನಾನಕ್ಕಾಗಿ ಬರುತ್ತಿತ್ತು.


ಸಮೀಪದಲ್ಲೇ ತಲೆಂಗಳ ಮನೆ, ನನ್ನ ಮಾವನವರ ಅಕ್ಕನ ಮನೆ ಅದು.  ಮಾವನ ಅಕ್ಕ ಅಂದರೆ ಹಿರಣ್ಯದಲ್ಲೇ ಹುಟ್ಟಿ ಬಳೆದವರಾದ್ದರಿಂದ ಇಲ್ಲಿನ ಸೊಪ್ಪು ಸದೆಗಳೆಲ್ಲ ಅವರಿಗೆ ಗೊತ್ತು.  “ ಮುಜ ಅಂತ ಇನ್ನೊಂದು ಮರ ಇದೆ,  ಅದರ ಸೊಪ್ಪು ಬಲೇ ಪರಿಮಳ,  ಒಣಗಿದ ಎಲೆಯೂ ಧಾರಾಳ ಗೊಂಪು ಕೊಡುತ್ತೆ. “ ಎಂಬ ಸಲಹೆ ದೊರೆಯಿತು.


ಹೌದೂ, ಗೊಂಪು ಅಂದ್ರೇನು? ಹ್ಯಾಗಿರುತ್ತೆ?

ಒಂದು ದಾಸವಾಳದ ಹೂವನ್ನು ಕೈಯಲ್ಲಿ ಹಿಸುಕಿ,  ಅಂಗೈ ಒಂಥರ ಜಿಗುಟು ಜಿಗುಟಾಗಿ ಬರುತ್ತೆ, ಅದೇ ಗೊಂಪು ಎಂದು ತಿಳಿಯಿರಿ.


ನನ್ನ ಸಮಾಧಾನ ಏನಪ್ಪಾ ಅಂದ್ರೆ ಗೊಂಪು ಸಿಗದಿದ್ರೂ ಬೆಂಡೆಕಾಯಿ  ಬಂದಿದೆ.   ಇದೂ ಸಾಕಷ್ಟು ಗೊಂಪು ಕೊಡುವಂತಹುದು.   ಅಡುಗೆಗೆ ಬಳಸುವ ಬೆಂಡೆಕಾಯಿಯಲ್ಲಿ ಕೆಲವಾದರೂ ಬಲಿತದ್ದು,  ಮುರುಟಿದ್ದು ಇರುತ್ತವೆ. ಇಂತಹದ ನಾಲ್ಕು ಬೆಂಡೆಕಾಯಿ ಸಿಕ್ಕಿದರೂ ಸಾಕು,  ಚೆನ್ನಾಗಿ ತೊಳೆದು,  ಕಡೆಕೊಡಿ ಕತ್ತರಿಸಿ, ಹೇಗೆ ಬೇಕಿದ್ರೂ ಸೀಳಿ ,   ಮುಳುಗುವಷ್ಟು ನೀರು ಧಾರಾಳ ಎರೆದು ಚೆನ್ನಾಗಿ ಹತ್ತು ನಿಮಿಷ ಕುದಿಸಿ,  ಮರೆತೂ ಉಪ್ಪು ಹುಳಿ ಹಾಕದಿರಿ.  ಈಗ ಏನಾಯ್ತು?  ನೀರು ಲೋಳೆ ಲೋಳೆ ಆಯ್ತು,  ಇದೇ ನಮ್ಮ ಗೊಂಪು.   ಜಾಲರಿಯಲ್ಲಿ ಶೋಧಿಸಿ ಬೆಂಡೆಯ ಕಸ ತೆಗೆದರೆ ಉತ್ತಮ. 


ಈಗ ಬೆಂಡೆಯ ಗೊಂಪು ನೀರು ಸ್ನಾನಗೃಹಕ್ಕೆ ಹೋಗಲಿ,  ಸೀಗೇಹುಡಿ  ಎರಡು ಚಮಚ ತೆಗೆದಿಟ್ಟಿರಿ.  ಈಗ ಹೆಚ್ಚಿನ ಮಹಿಳೆಯರು ಬಾಬ್ ಕಟ್ಟಿಣಿಯರಾಗಿರುವುದರಿಂದ ಅರ್ಧ ಲೀಟರ್ ಗೊಂಪು ನೀರು ಸಾಕಾದೀತು.   ಸೀಗೇ ಹುಡಿಯನ್ನೂ ಬೆರೆಸಿದ ಗೊಂಪು ನೀರನ್ನು ತಲೆಗೆರೆದು ಐದು ನಿಮಿಷ ಬಿಟ್ಟು ತಲೆಯನ್ನು ಮಸಾಜ್ ಮಾಡಿದಂತೆ ತಿಕ್ಕಿದರಾಯಿತು.   ನಂತರ ತಲೆಗೆ ನೀರೆರೆದು ತೊಳೆಯಿರಿ.  ಕೂದಲಿನ ಆರೈಕೆಗೆ ತಣ್ಣೀರಿನ ಬಳಕೆ ಅತ್ಯುತ್ತಮ.   ತಲೆ ಕ್ಲೀನ್ ಆಯ್ತು ಅನ್ನಿ.




ಟಿಪ್ಪಣಿ:  ಬನ್ಪು ಬಣ್ಪು  ಕರಿಮತ್ತಿ ಇತ್ಯಾದಿ ಹೆಸರುಗಳುಳ್ಳ ಈ ಗೊಂಪಿನ ಬೃಹತ್ ವೃಕ್ಷಗಳ ಜಾತಿಗೆ ಸೇರಿದ ಬಣ್ಪಿನ ಮರ, ನೀರನ್ನು ಹಿಡಿದಿಟ್ಟು ಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.  ಹಾಗೇನೇ  ಬಣ್ಪಿನ ಮರ ಇದ್ದಲ್ಲಿ ನೀರಿನ ಸೆಲೆ ಇದೆಯೆಂದು ನಮ್ಮ ಹಿಂದಿನವರು ತಿಳಿದಿದ್ದರು.  ಸಸ್ಯಶಾಸ್ತ್ರೀಯ ಹೆಸರು  terminalia eliptica ಎಂದಾಗಿರುತ್ತದೆ.


ಎರಪ್ಪೆ ಸರಳಿ ಸಳ್ಳೆ ಮರ ಇತ್ಯಾದಿ ಹೆಸರುಗಳುಳ್ಳ  ಇನ್ನೊಂದು ಗೊಂಪಿನ ಸಸ್ಯ, ಆಂಗ್ಲ ಭಾಷೆಯಲ್ಲಿ  Lindley's aporosa ಎಂದಿರುತ್ತದೆ ಹಾಗೂ ಸಸ್ಯಶಾಸ್ತ್ರ ರೀತ್ಯಾ Aporosa cardiosperma.


ದಡಸಲು,  ದಡಸು, ದಡಶಿ ಎಂದೆಲ್ಲ ಕರೆಯಲ್ಪಡುವ ಈ ಸಸ್ಯ ಪ್ರಬೇಧ ಅಳಿವಿನಂಚಿನಲ್ಲಿದೆ.  ಇದರ ನಾರು ಗೊಂಪು ನಿಡುವಂತದ್ದು.   ಮಲಯಾಳದಲ್ಲಿ ಮಾಲ ತೆಂಗು,  ತಮಿಳಿನಲ್ಲಿ ಕಟ್ಟು ತೆಂಗೈ,  ಆಂಗ್ಲ ಭಾಷೆಯಲ್ಲಿ ವೈಲ್ಡ್ ಕೋಕೊನಟ್ ಎಂದೂ ಹೆಸರಿರಿಸಿದ್ದಾರೆ.   ಸಸ್ಯ ವಿಜ್ಞಾನವು  arenga wightii ಎಂದಿದೆ.