ಶಾಲೆಗೆ ಹೋಗುತ್ತಿದ್ದ ಆ ದಿನಗಳಲ್ಲಿ ಕಂಪಾಸ್ ಬಾಕ್ಸ್ ಒಳಗೆ ಅಡಗಿಸಿಟ್ಟು ತಿನ್ನುತ್ತಿದ್ದ ಕಾಟಂಗೋಟಿ ಹಣ್ಣುಗಳಲ್ಲಿ ರಾಜನೆಲ್ಲಿಕಾಯಿ ಕೂಡಾ ಇತ್ತಲ್ಲವೇ ? ಮನೆಹಿತ್ತಲಲ್ಲಿ ಮರ ಇದ್ದ ಹುಡುಗಿಯರು ತರಲಿಕ್ಕೆ, ಉಳಿದವರು " ಏ, ನಂಗೊಂದು ಕೊಡೇ..." ಎಂದು ಅಂಗಲಾಚಿ ತಿನ್ನಲಿಕ್ಕೆ. ತಂದವಳಿಗೆ ಸ್ನೇಹಿತರು ಏನಾದರೂ ಉಪಕಾರ ಮಾಡಿಯೇ ಮಾಡುತ್ತಿದ್ದರು, ನೋಟ್ಸ್ ಕೊಟ್ಟು, ಲೆಕ್ಕದ ಪಾಠ ಬಿಡಿಸಿ ಕೊಟ್ಟು.
ನನ್ನ ಮಗಳು, ಚಿಕ್ಕಮ್ಮನ ಮನೆಗೆ ಹೋಗಿ ಬಂದವಳು " ನೋಡಮ್ಮಾ, ಚಿಕ್ಕಮ್ಮನ ಪೇಟೆ ಮನೆಯಲ್ಲಿ ರಾಜನೆಲ್ಲಿ ಮರ ಇದೆ, ಉಪ್ಪಿನಕಾಯಿ ಎಷ್ಟು ಚೆನ್ನಾಗಿತ್ತು ಅಂತೀಯ, ಇಲ್ಲಿ ಇರೂದು ಬರೇ ಬೀಂಬುಳಿ "
" ಹಾಗಂತೀಯ, ರಾಜನೆಲ್ಲಿಕಾಯಿ ಗಿಡ ನೆಡೋಣ "
ಮುಂದಿನ ಪ್ರಯಾಣದಲ್ಲಿ ನನ್ನ ತಂಗಿಯೇ ನೆಲ್ಲಿಕಾಯಿ ಗಿಡ ಹೊತ್ತು ತಂದಳು.
" ತೋಟದಲ್ಲಿ ಇದೆ ಓಬೀರಾಯನ ಕಾಲದಲ್ಲಿ ನೆಟ್ಟಿದ್ದು, ಆದ್ರೆ ನೆಲ್ಲಿಕಾಯಿ ಆಗಿದ್ದು ನಾ ನೋಡೇ ಇಲ್ಲ " ಅಂದೆ.
" ತೋಟದೊಳಗೆ ನೆರಳು ಅಲ್ವೇ, ಚೆನ್ನಾಗಿ ಬಿಸಿಲು ಬೀಳೋ ಜಾಗದಲ್ಲಿ ನೆಟ್ಟರೆ ಆದೀತು " ತಂಗಿ ಅಂದಳು.
<><><> <><><>
" ಅಂತೂ ಈಗ ನೆಲ್ಲಿಕಾಯಿ ಆಯ್ತು " ಮಗಳಿಗೆ ಫೋನ್ ಮಾಡುತ್ತಿರಬೇಕಾದರೆ ಅಂದಿದ್ದು.
" ನಾನು ಬರದೇ ಒಂದನ್ನೂ ಕೊಯ್ಯಬಾರದು "
ವಾರದ ಕೊನೆಗೆ ಬರುತ್ತಿರುತ್ತಾಳೆ, ಬಂದಳು.
ನೆಲ್ಲಿಕಾಯಿ ಗಿಡವನ್ನು ದೋಟಿಯಲ್ಲಿ ಕುಟ್ಟೀ ಕುಟ್ಟೀ, ಕೆಳಗೆ ಬಿದ್ದ ಕಾಯಿಗಳನ್ನು ಹೆಕ್ಕೀ ಹೆಕ್ಕೀ, ನಲ್ಲೀ ನೀರಿನಲ್ಲಿ ತೊಳೆದೂ ತೊಳೆದೂ, ಉಪ್ಪು ಹಾಕಿ ತಿಂದಿದ್ದೂ ತಿಂದಿದ್ದೇ.
ಮದ್ಯಾಹ್ನ ಆಗೋ ಹೊತ್ತಿಗೆ " ಹೊಟ್ಟೆ ನೋಯುತ್ತೆ " ಅಂದಳು.
" ಹಾಗೆ ಯಾಕೆ ತಿಂತೀಯ, ಉಪ್ಪಿನಕಾಯಿ ಹಾಕಿ ಇಟ್ಟುಕೊಳ್ಳೋಣ "
ಅಡುಗೆ ಪುಸ್ತಕಗಳ ಸಂಗ್ರಹ ಹೊರ ಬಂದಿತು. ಶಾಂತಾದೇವಿ ಮಾಳವಾಡ ಬರೆದಿರುವ ' ರಸಪಾಕ ' ಪುಸ್ತಕದಲ್ಲಿ ಉಪ್ಪಿನಕಾಯಿ ಹಾಗೂ ಚಟ್ನಿ ಪಾಕವಿಧಾನ ಸಿಕ್ಕಿತು. ಅವರು ಈ ನೆಲ್ಲಿಯನ್ನು ರಾಯನೆಲ್ಲಿಕಾಯಿ ಎಂದು ಹೆಸರಿಸಿದ್ದಾರೆ.
ಚಟ್ನಿ ಮಾಡೋಣ,
ಒಂದು ಕಡಿ ತೆಂಗಿನತುರಿ
7 - 8 ರಾಜನೆಲ್ಲಿಕಾಯಿ ಬೀಜ ತೆಗೆದದ್ದು
2 ಹಸಿ ಮೆಣಸು
ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆ ಸಾಮಗ್ರಿಗಳು
ಮಿಕ್ಸೀಗೆ ಹಾಕಿ ತಿರುಗಿಸಿ, ಬೇರೆ ನೀರು ಹಾಕುವ ಅಗತ್ಯವೇ ಇಲ್ಲ. ಒಗ್ಗರಣೆ ಕೊಡಿ. ಈ ಗಟ್ಟಿ ಚಟ್ನಿಯನ್ನು ಅನ್ನದೊಂದಿಗೆ, ಚಪಾತಿ, ಪೂರಿಗಳೊಂದಿಗೆ ಸವಿಯಿರಿ. ನಾನಂತೂ ಗಿಡದಲ್ಲಿದ್ದ ನೆಲ್ಲಿಕಾಯಿಗಳು ಮುಗಿಯುವ ತನಕ ದಿನವೂ ಚಟ್ನಿ ಮಾಡಿ ಆಯ್ತು.
ಉಪ್ಪಿನಕಾಯಿ ಹಾಕೋಣ,
ಇದಕ್ಕೂ ಹೆಚ್ಚಿನ ಶ್ರಮವೇನೂ ಇಲ್ಲ. ಈಗ ದಿಢೀರ್ ಉಪ್ಪಿನಕಾಯಿ ಹುಡಿಗಳು ಸಿಗುತ್ತವೆ. ಸಾಲದೂಂತ ನಾನೂ ಸಾಸಿವೆ, ಜೀರಿಗೆ, ಇಂಗು ಹುರಿದು ಹುಡಿ ಮಾಡಿ ಹಾಕಿ ಬೆರೆಸುವಷ್ಟರಲ್ಲಿ " ಆಯ್ತಾ ಅಮ್ಮ, ಉಪ್ಪಿನ್ಕಾಯಿ ? " ಕೇಳುತ್ತಾ ಮಗಳು ಆಗಮಿಸಿದಳು.
" ಈಗ್ಲೇ ತಿನ್ಬೇಡ್ವೇ, ಇದು ಉಪ್ಪು ಮೆಣಸು ಎಳೆದು, ನೆಲ್ಲಿಕಾಯಿಯ ಹುಳಿ ಬಿಟ್ಟು ಒಂದು ಹದಕ್ಕೆ ಬರಬೇಕಾದರೆ ನಾಲ್ಕು ದಿನ ಬೇಕಾದೀತು. ಸ್ವಲ್ಪ ಜಜ್ಜಿಕೊಂಡರೆ ಉತ್ತಮ ಅಂತ ಆ ಪುಸ್ತಕದಲ್ಲಿ ಬರ್ದಿದಾರೆ ನೋಡು " ಅಂದೆ ಚಮಚಾದಲ್ಲಿ ಜಜ್ಜುತ್ತಾ.
ನೆಲ್ಲಿಕಾಯಿ ಕೊಯ್ಯುತ್ತಿರಬೇಕಾದರೆ ಪಕ್ಕದಲ್ಲೇ ಕಾಟ್ ಕಿಸ್ಕಾರದ ಹೂಗಳು ಅರಳಿ ನಗುತ್ತಿರಬೇಕೆ, ಅದನ್ನೇಕೆ ಬಿಡಲಿ, ನೆಲ್ಲಿಯೊಂದಿಗೆ ಕಿಸ್ಕಾರ ಹೂಗಳೂ ಅಡುಗೆಮನೆಯೊಳಗೆ ಬಂದವು. ಕಿಸ್ಕಾರದ ತಂಬುಳಿ, ನೆಲ್ಲಿ ಚಟ್ನಿ ಹೀಗೆ ಎರಡು ಐಟಂ ಬೇಡ, ಒಟ್ಟಿಗೆ ಹಾಕಿ ಒಂದು ಹೊಸ ಬಗೆಯ ಚಟ್ನಿ ಸಿದ್ಧವಾಯಿತು. ಮಜ್ಜಿಗೆ ಎರೆಯಲಿಲ್ಲ. ಎರಡು ಗಾಂಧಾರಿ ಮೆಣಸು ರುಬ್ಬುವಾಗ ಹಾಕಿದ್ದು ಅಷ್ಟೇ. ಮಳೆ ಬರುವಾಗ ಬಿಸಿ ಬಿಸಿಯಾದ ಕುಚ್ಚುಲಕ್ಕಿ ಅನ್ನದೊಂದಿಗೆ ಈ ಚಟ್ನಿ ಸವಿದೇ ತಿಳಿಯಿರಿ.
ಜಾಮ್ ಕೂಡಾ ಮಾಡಬಹುದು, ಸಕ್ಕರೆಪಾಕದಲ್ಲಿ ಹಾಕಿ ಕುದಿಸಿ ಸವಿಯಬಹುದು, ಇಟ್ಟುಕೊಳ್ಳಲೂ ಬಹುದು. ಚಿಗುರೆಲೆಗಳಿಂದ ತಂಬುಳಿ ತಯಾರಿಸಿ. ಹಣ್ಣುಗಳ ಜ್ಯೂಸ್ ಮಾಡಬಹುದು, ಬೀಜಗಳನ್ನು ತೆಗೆಯುವ ಕೆಲಸ ಮಾತ್ರ ಇಲ್ಲಿ ಇದೆ.
ಈ ರಾಜನೆಲ್ಲಿಕಾಯಿಯ ಮೂಲನೆಲೆ ಭಾರತವೇ ಆಗಿದೆ. ಆಮ್ಲೀಯ ಮಣ್ಣಿನಲ್ಲಿ ಬಹು ಬೇಗನೆ ಫಲ ನೀಡುವಂತಹ ಮಧ್ಯಮ ಗಾತ್ರದ ಸಸ್ಯ. ಚೆನ್ನಾಗಿ ಹಣ್ಣಾದ ನೆಲ್ಲಿಯ ಬೀಜಗಳಿಂದ ಹೊಸ ಗಿಡಗಳನ್ನು ಪಡೆಯಬಹುದಾಗಿದೆ. ವರ್ಷಕ್ಕೆರಡು ಬಾರಿ ಫಲ ನೀಡುವ ಈ ಮರ, ಒಮ್ಮೆ ಮಳೆಗಾಲದ ಆರಂಭದ ಮೊದಲು, ಮಗದೊಮ್ಮೆ ಮಳೆ ಕಡಿಮೆಯಾಗುವ ಹಂತದಲ್ಲಿ, ಸೆಪ್ಟೆಂಬರ - ಅಕ್ಟೋಬರದಲ್ಲಿ. ಸಸ್ಯಶಾಸ್ತ್ರೀಯವಾಗಿ Phyllanthus acidus ಅನ್ನಿಸಿಕೊಂಡಿದೆ, Phyllanthaceae ಕುಟುಂಬದಿಂದ ಬಂದಿದೆ. ಅಸಲು ನೆಲ್ಲಿಕಾಯಿಯೊಂದಿಗೆ ಯಾವುದೇ ಹೋಲಿಕೆಯಿಲ್ಲದ ಈ ಹಣ್ಣು ಬೀಂಬುಳಿ, ದಾರೆಹುಳಿಗಳಂತೆ ಒಂದು ಹುಳಿ ಹಣ್ಣು. ನೆಲ್ಲಿಕಾಯಿಯಲ್ಲಿ ಅಧಿಕ ವಿಟಮಿನ್ ಸಿ ಇರುವುದಾದರೆ ಇದರಲ್ಲಿ ವಿಟಮಿನ್ ಸಿ ಕನಿಷ್ಠವಾಗಿರುವುದು. ಕತ್ತರಿಸಿದಾಗ ನೆಲ್ಲಿಕಾಯಿಯಂತಹುದೇ ಗಟ್ಟಿಯಾದ ಬೀಜವೂ, ಕತ್ತರಿಸಿದ ಭಾಗ ನಕ್ಷತ್ರಾಕೃತಿಯಿರುವುದರಿಂದ ಆಂಗ್ಲ ಭಾಷೆಯಲ್ಲಿ ಸ್ಟಾರ್ ಗೂಸ್ ಬೆರಿ ಎಂದಾಗಿದೆ. ಶೇಕಡಾ 91 ಪಾಲು ನೀರು ಉಳಿದಂತೆ ಕ್ಯಾಲ್ಸಿಯಂ, ಪ್ರೊಟೀನ್, ಫಾಸ್ಫರಸ್ ಹಾಗೂ ಕಬ್ಬಿಣಾಂಶವನ್ನೂ ಒಳಗೊಂಡಿರುವ ರಾಜನೆಲ್ಲಿಕಾಯಿ ಪುಷ್ಟಿದಾಯಕ ಹಣ್ಣು, ರಕ್ತಶುದ್ಧಿಕಾರಕ ಹಾಗೂ ಹಸಿವನ್ನು ಪ್ರಚೋದಿಸುವಂಥದ್ದು. ರಾಜನೆಲ್ಲಿಕಾಯಿ ಯಾವುದೇ ಕೀಟನಾಶಕಗಳ ಬಳಕೆಯಿಲ್ಲದೆ, ರಸಗೊಬ್ಬರಗಳ ಹಂಗಿಲ್ಲದೆ ಆಗುವಂತಹದು. ಎಲೆ, ಬೀಜ, ಕಾಂಡದ ತೊಗಟೆ ಕೂಡಾ ಔಷಧೀಯ ಗುಣವುಳ್ಳದ್ದಾಗಿದೆ, ಆಂಟಿ ಓಕ್ಸಿಡೆಂಟ್ ಎಂದೇ ಹೇಳಬಹುದಾಗಿದೆ.
Posted via DraftCraft app