Pages

Ads 468x60px

Sunday, 4 January 2015

ಬಾಳೆಹಣ್ಣಿನ ರೊಟ್ಟಿ



ಬಾಳೆಗೊನೆ ಹಣ್ಣಾಯಿತು. ಅದರಲ್ಲೇನೂ ವಿಶೇಷವಿಲ್ಲ ಬಿಡಿ, ಹಣ್ಣನ್ನು ತಿಂದು ಮುಗಿಸಲು ನಮ್ಮಿಬ್ಬರಿಗೆ ಸಾಧ್ಯವಿಲ್ಲ. ತುಪ್ಪ ಸಕ್ಕರೆ ಹಾಕಿ ಹಲ್ವಾ ಮಾಡಲೂ ಮನಸ್ಸಿಲ್ಲ. ದಿನವಿಡೀ ತೋಟದ ಕೆಲಸಕಾರ್ಯಗಳಲ್ಲೇ ಮಗ್ನರಾಗಿರುವ ನಮಗೆ ಹಲ್ವ ಮಾಡಿಟ್ಟುಕೊಳ್ಳಲೂ ಪುರುಸೊತ್ತಿಲ್ಲ ಅಂದರೂ ನಡೆದೀತು. ಸಂಜೆಯ ಲಘು ಉಪಹಾರಕ್ಕಾಗಿ ಬಾಳೆಹಣ್ಣುಗಳಿಂದಲೇ ಏನಾದರೂ ಸಿದ್ಧಪಡಿಸಬೇಕಾಗಿದೆ.

8-10 ಬಾಳೆಹಣ್ಣುಗಳು, ಸಿಪ್ಪೆ ಸುಲಿದು ಚೆನ್ನಾಗಿ ನುರಿದು ಬಾಣಲೆಗೆ ಹಾಕಿ ಕಾಯಿಸಿ, ತುಪ್ಪ ಸಕ್ಕರೆ ಹಾಕಬೇಕಾಗಿಲ್ಲ. ರುಚಿಗೆ ಉಪ್ಪು ಇರಲಿ. ಬಾಳೆಹಣ್ಣಿನ ದ್ರಾವಣ ಬಿಸಿಯೇರಿ ಕುದಿಯಲಾರಂಭಿಸಿತೇ, ಈಗ ಒಂದು ಲೋಟ ಅಕ್ಕಿಹುಡಿ ಯಾ ಚಿರೋಟಿ ರವೆ ಸುರಿಯಿರಿ. ಉರಿ ನಂದಿಸಿ. ಮರದ ಸಟ್ಟುಗದಲ್ಲಿ ಹಿಟ್ಟನ್ನು ಕೂಡಿಸಿ ಮುದ್ದೆಗಟ್ಟಿಸಿ ತುಸು ಆರಲು ಬಿಡಿ,

ಸರಸರನೆ ತೋಟದಿಂದ ಬಾಳೆಲೆಗಳನ್ನು ತಂದಿರಾ,
ಹಿಟ್ಟಿನ ಉಂಡೆ ಮಾಡಿಟ್ಕೊಂಡಿರಾ,
ಬಾಳೆಲೆಯನ್ನು ಚೆನ್ನಾಗಿ ಒರೆಸಿ ಒಂದು ಬದಿಗೆ ತುಪ್ಪ ಸವರಿ ಇಟ್ಕೊಂಡಿರಾ,



ರೊಟ್ಟಿ ಮಣೆ ಇದೆಯಾ, ಇಲ್ವೇ, ಲಟ್ಟಣಿಗೆಯೂ ಆದೀತು.
ಉಂಡೆಯನ್ನು ಒತ್ತಿ ಇಟ್ಟಾಯಿತು.
ಕಾವಲಿಗೆ ಒಲೆಯ ಮೇಲೇರಿತು.
ಎರಡೂ ಬದಿ ತುಪ್ಪದ ಪಸೆಯಲ್ಲಿ ಬೆಂದಿತು.
ದಿನದ ಆಯಾಸವೆಲ್ಲ ಬಾಳೆಹಣ್ಣಿನ ರೊಟ್ಟಿಯ ಘಮಘಮಿಸುವ ಸ್ವಾದದ ಮುಂದೆ ತೊಲಗಿಯೇ ಹೋಯಿತು.





0 comments:

Post a Comment