ಬಚ್ಚಲುಮನೆಯ ಹಿಂದೆ ಸ್ನಾನಗೃಹದ ನೀರು ಹರಿದು ಬರುವಲ್ಲಿ ಮುಂಡಿಗೆಡ್ಡೆ ಬೆಳೆದು ನಿಂತಿದೆ. ದಿನವೂ ಅದರ ಬೆಳವಣಿಗೆಯತ್ತ ಒಂದು ನೋಟ ಇದ್ದೇ ಇದೆ. ಕಾಡುಹಂದಿಯ ಕಣ್ಣನೋಟ ತಗಲದಿರಲಿ ಎಂದು ವರಾಹರೂಪಿ ಭಗವಂತನಲ್ಲಿ ಬೇಡಿಕೊಳ್ಳುತ್ತಾ ಇದ್ದಂತೆ ಆ ದಿನ ಬಂದೇ ಬಿಟ್ಟಿತು.
ನಮ್ಮ ಮಾವನವರು ಇದ್ದಾಗ ತೋಟ ತುಂಬಾ ಇದ್ದಂತಹ ಮುಂಡಿಗೆಡ್ಡೆಯ ಬೆಳೆ ಕಾಡುಹಂದಿಗಳ ಹಾವಳಿಯಿಂದಾಗಿ ನಿರ್ನಾಮವಾಗುವ ಹಂತ ತಲಪುತ್ತಿದ್ದಂತೆ ಜಾಗೃತನಾದ ಚೆನ್ನಪ್ಪ ಈಗ ಇರುವಲ್ಲಿ ನೆಟ್ಟ. ನೀರೂ ಹರಿದು ಬರುವ ಜಾಗ, ಬಿಸಿಲೂ ಇದೆ, ರಾತ್ತಿವೇಳೆ ವಿದ್ಯುತ್ ಬೆಳಕೂ ಇದೆ, ಕಣ್ಗಾವಲಿಗೂ ಉತ್ತಮ ಸ್ಥಳ.
ಹಿರಿಯರ ಕಾಲದಲ್ಲಿ ಮನೆಯಲ್ಲಿ ಯಾವತ್ತೂ ಹಬ್ಬಹರಿದಿನಗಳು, ವಿಜೃಂಭಣೆಯಿಂದ ಆಚರಿಸುವ ಪದ್ಧತಿ. ವರ್ಷದಲ್ಲಿ ನಾಲ್ಕಾರು ಬಾರಿ ಹೋಳಿಗೆಯ ಔತಣದೂಟ ಇದ್ದೇ ಇರುತ್ತಿತ್ತು. ಹೋಳಿಗೆಯ ಊಟ ಎಂದೊಡನೆ ಊಟದೊಂದಿಗೆ ಹತ್ತುಹಲವು ವ್ಯಂಜನಗಳು ಇದ್ದೇ ತೀರಬೇಕು. ಪಲ್ಯಗಳು, ಹುಳಿ, ಮೆಣಸ್ಕಾಯಿ, ಚಿತ್ರಾನ್ನ, ಗೊಜ್ಜು, ಕೋಸಂಬ್ರಿ, ಉಪ್ಪಿನಕಾೖ, ಘಮಘಮಿಸುವ ತುಪ್ಪ, ಗಂಧಸಾಲೆ ಅನ್ನದೊಂದಿಗೆ ಪಾಯಸಗಳು...
ಇಂತಹ ಅಡುಗೆಯಲ್ಲಿ ಮುಖ್ಯವಾದ ಪ್ರಾಶಸ್ತ್ಯ ಮುಂಡಿಗೆಡ್ಡೆಗೆ ನೀಡಲಾಗುತ್ತಿತ್ತು. ತೋಟದೊಳಗೆ ಹೆಜ್ಜೆಗೊಂದರಂತೆ ಸಿಗುವ ಮುಂಡಿ ಬೆಳೆ ಸಹಜವಾಗಿಯೇ ತರಕಾರಿಯಾಗಿ ಸಿಗುವ ವಸ್ತು. ಮುಂಡಿ ಪಲ್ಯ, ಮಜ್ಜಿಗೆ ಹುಳಿ, ಅಗತ್ಯ ಬಿದ್ದರೆ ಉಪ್ಪಿನಕಾಯಿಗೂ ಮುಂಡಿ ರೆಡಿ. ಉಪ್ಪಿನಕಾಯಿ ಎಂದಾಗ, ಒಂದಾನೊಂದು ಕಾಲದಲ್ಲಿ ನಾನೂ ಚಿಕ್ಕವಳಾಗಿದ್ದೆ. ನಮ್ಮ ತೋಟದಮನೆಯಲ್ಲೂ ಹುಲುಸು ಈ ಮುಂಡಿ ಬೆಳೆ. ಅಪ್ಪನೂ ಮುಂಡಿಗೆಡ್ಡೆಯ ಉಪಯೋಗದಲ್ಲಿ ನಿಷ್ಣಾತರು. ತೋಟದಲ್ಲಿ ಕಡಿದು ತರಬಹುದಾದ ಮುಂಡಿಯನ್ನು ನೋಡಿಟ್ಟು, ಕೆಲಸದಾಳುಗಳ ಮೂಲಕ ಕಾಸರಗೋಡಿನ ಮನೆಗೂ ತರಿಸಿಟ್ಟುಕೊಳ್ಳುತ್ತಿದ್ದರು. ಒಮ್ಮೆ ಏನಾಯಿತಂದ್ರೆ ತೋಟದ ಕೆಲಸಕ್ಕಾಗಿ ಹತ್ತು ಹದಿನೖದು ಕಾರ್ಮಿಕರು ಬಂದಿದ್ದ ಹಾಗೇ ಕಾರ್ಮಿಕರ ಅಡುಗೆ ವ್ಯವಸ್ಥೆಯೂ ಇದೆಯಲ್ಲ, ಅವರ ಅಡುಗೆ ಏರ್ಪಾಡು ತೋಟದೊಳಗೇ ಕಲ್ಲು ಹೊಂದಿಸಿ ಒಲೆಯೂ ಕ್ಷಣಮಾತ್ರದಲ್ಲಿ ಸಿದ್ಧವಾಗ್ತಾ ಇತ್ತು. ಏನೇ ಆದರೂ ಮಜ್ಜಿಗೆ ಉಪ್ಪಿನಕಾಯಿಗಳನ್ನು ಅಮ್ಮನೇ ಕೊಡಬೇಕಾಗಿತ್ತು. ಮಜ್ಜಿಗೆ ಕೊಡುತ್ತಾ " ಉಪ್ಪಿನಕಾೖ ಇಲ್ವಲ್ಲಾ.. " ಅಂದರು ಅಮ್ಮ. " ಅಕ್ಕ, ಮುಂಡಿ ಉಪ್ಪಾಡೂ ಆದೀತು " ಎಂದ ಆ ಭೂಪ ತೋಟದಲ್ಲಿದ್ದ ದೈತ್ಯ ಗಾತ್ರದ ಮುಂಡಿ ಸಸ್ಯ ಸಂಕುಲದೆಡೆ ಕಣ್ಣು ಹಾಯಿಸುತ್ತಾ. ಅವನನ್ನು ಹೇಗೋ ಸಾಗ ಹಾಕಿದ ನನ್ನಮ್ಮ " ಮುಂಡಿ ಉಪ್ಪಿನಕಾಯಿ ಮನೆಯೊಳಗಿದೆ ಅಂತ ಇವನಿಗ್ಯಾರು ಹೇಳಿದ್ದಂತೇ.." ಎಂದು ಅಚ್ಚರಿ ಪಟ್ಟಿದ್ದಿದೆ.
ಮುಂಡಿ ಸಸ್ಯ ವರ್ಗದಲ್ಲಿಯೂ ಎರಡು ಜಾತಿಗಳಿವೆ, ತುರಿಕೆಯಿರುವುದೂ ಹಾಗೂ ತುರಿಸದೇ ಇರುವಂತದ್ದು. ತುರಿಸುವ ಮುಂಡಿಗೆಡ್ಡೆಯ ಸುದ್ದಿಗೆ ಕಾಡುಹಂದಿಯೂ ಬರುವುದಿಲ್ಲ. ಅತಿ ವೇಗವಾಗಿ ನಗರೀಕರಣ ಆಗುತ್ತಿರುವ ಈ ಹೊತ್ತಿನಲ್ಲಿ ಕಾಡುಪ್ರಾಣಿಗಳೂ ಊರೊಳಗೆ ಬಂದಿವೆ. ಹಗಲು ಎಲ್ಲೋ ಪೊದೆಯಲ್ಲಿ ಅವಿತಿದ್ದು ಕತ್ತಲಾಗುತ್ತಲೇ ಆಹಾರವನ್ನರಸುತ್ತಾ ನೆಟ್ಟು ಬೆಳೆಸಿದ ಗೆಡ್ಡೆಗೆಣಸುಗಳನ್ನು ಸ್ವಾಹಾ ಮಾಡ್ಬಿಟ್ಟು ಪರಾರಿಯಾಗುತ್ತವೆ. ಹಿಂದೆಲ್ಲಾ ತೋಟದೊಳಗೆ ರಾತ್ರಿಪಾಳಿಯ ಕೆಲಸಗಾರರು ಇರುತ್ತಿದ್ದರಿಂದ, ಸಂಜೆಯಾಗುತ್ತಲೇ ಚಳಿ ಕಾಯಿಸುತ್ತ, ತೋಟದೊಳಗೆ ಅಲ್ಲಲ್ಲಿ ಬೆಂಕಿಯ ಅಗ್ಗಿಸ್ಟಿಕೆಗಳನ್ನು ಮಾಡಿದಾಗ ಬೆಳಕಿನ ವೈಭವ ನಿರ್ಮಾಣವಾಗುತ್ತಿತ್ತು. ತೆಂಗಿನ ಮಡಲಿನ ಸೂಟೆ ಬೀಸುತ್ತಾ ತೋಟದೊಳಗೆ ತಿರುಗಾಡುತ್ತಿದ್ದರೆ ಕೊಳ್ಳಿ ದೆವ್ವವೋ ಎಂಬಂತೆ ಭಾಸವಾಗುವವ ಕಾಲ ಅಂದಿನದು. ಈ ತೆರನಾದ ಸರಳ ಉಪಾಯಗಳಿಂದ ಕಾಡು ಪ್ರಾಣಿಗಳ ಉಪಟಳ ಇಲ್ಲದ ಕಾಲ ಅದಾಗಿತ್ತು. ಈಗ ಕಾಲ ಬದಲಾಗಿದೆ, ಅಂದಿನ ನಿಷ್ಠಾವಂತ ಕಾರ್ಮಿಕ ವರ್ಗ ಇಂದಿಲ್ಲ, ತೋಟದ ಕೆಲಸಗಳಿಗೆ ಜನರ ಅಭಾವ ಬಂದಿದೆ. ದೊಡ್ಡ ಪ್ರಮಾಣದ ಕೃಷಿಕರು ಹೇಗೋ ಸುಧರಿಸಿಕೊಂಡು ಹೋಗುತ್ತಿದ್ದಾರೆ. ಸಣ್ಣಪುಟ್ಟ ಬೆಳೆಗಾರರಿಗೆ ಕೃಷಿಕೆಲಸ ಒಂದು ಸವಾಲಾಗಿ ಪರಿಣಮಿಸಿದೆ, ಉಪ ಉದ್ಯೋಗ ಇದ್ದಲ್ಲಿ ಮಾತ್ರ ಬದುಕಲು ಸಾಧ್ಯ ಎಂಬಂತಹ ವಾತಾವರಣ ಈಗ ಇದೆ.
ಈಗ ನಾವು ಮುಂಡಿಯನ್ನು ಕಡಿದು, ಅಡುಗೆಗೆ ಸಿದ್ಧಪಡಿಸುವ ಸಾಹಸೀ ಚಿತ್ರಣಗಳನ್ನು ನೋಡಿಕೊಳ್ಳೋಣ. ನಮ್ಮ ಕಣ್ಣಿಗೆ ಗೆಡ್ಡೆಯಂತೆ ಕಂಡರೂ ಅಡುಗೆಗೆ ಬಳಕೆಯಾಗುವ ಭಾಗ ಕಾಂಡವಾಗಿರುತ್ತದೆ. ಈ ಗೆಡ್ಡೆಯ ಹೊರ ಪದರ ಕಪ್ಪಾಗಿ ಕಣ್ಣಿಗೆ ಅನಾಕರ್ಷಕವಾಗಿರುವುದು ಹಾಗೂ ಕ್ಯಾಲ್ಸಿಯಂ ಓಕ್ಸಲೇಟ್ ಎಂಬ ರಸದ್ರವ್ಯದ ಇರುವಿಕೆಯಿಂದಾಗಿ ತುರಿಸುವ ತೊಂದರೆ ಇದೆ. ನುರಿತ ಕೆಲಸಗಾರರು ತುರಿಕೆಯ ಭಾಗವನ್ನು ಸ್ಪರ್ಶಿಸದೆ ಕಡಿಯಬಲ್ಲರು. ಇದರ ಎಲೆ ಕೂಡಾ ಭೀಮಗಾತ್ರದ್ದು, ಸಂಡಿಗೆ ಎರೆಯಲು ಚಾಪೆಯಂತೆ ಬಳಕೆ, ಜೋರಾಗಿ ಮಳೆ ಬರುತ್ತಿದೆಯಾದಲ್ಲಿ ತೋಟದೊಳಗಿರುವವರಿಗೆ ಎಲೆಯೇ ಕೊಡೆಯಾಗಿ ಬಿಡುವುದು, ಉದ್ದನೆಯ ಕೈ ಕೂಡಾ ಇರುವುದರಿಂದ ನಿರಾತಂಕದಿಂದ ಮಳೆಯನ್ನು ಎದುರಿಸಬಹುದಾಗಿದೆ. ನಾವೆಲ್ಲ ಮುಂಡೀ ಕೊಡೆ ಉಪಯೋಗಿಸಿದವರೇ. ಮುಂಡಿ ಎಲೆಯ ಉದ್ದನೆಯ ದಂಟು ಕೂಡಾ ದೋಸೆ ಕಾವಲಿಗೆ ತುಪ್ಪ ಯಾ ಎಣ್ಣೆ ಪಸೆ ಮಾಡಲೂ ಬಳಕೆಯಾಗುವಂಥದು ಸಸ್ಯವಿಜ್ಞಾನದಲ್ಲಿ ಇದಕ್ಕೆ ಸಾಟಿಯಾದ ಎಲೆ ಇನ್ನೊಂದಿಲ್ಲ. alocasia macrorrhiza ಎಂಬ ನಾಮಧಾರಿಯಾಗಿ ಸಸ್ಯಶಾಸ್ತ್ರಜ್ಞರ ಅಧ್ಯಯನಕ್ಕೆ ವಸ್ತುವಾಗಿರುವ ಮುಂಡಿಗೆಡ್ಡೆ, elephent ear yam ಅಂತಲೂ, giant taro ಎಂದೂ ಹೆಸರುವಾಸಿಯಾಗಿದೆ. ನಮ್ಮ ಭರತಭೂಮಿಯೇ ಇದರ ನೆಲೆವೀಡು. ಕಾರ್ಬೋಹೈಡ್ರೇಟ್ ಸಮೃದ್ಧವಾಗಿರುವ ಈ ಗೆಡ್ಡೆಯ ಉಪಯುಕ್ತತೆಯನ್ನು ನಮ್ಮ ಜನ ಅನಾದಿಯಿಂದಲೇ ಅರಿತಿದ್ದರು ಎಂದರೂ ತಪ್ಪಾಗಲಾರದು. ಹಾಗಾಗಿ ಇದು ಕಾಡುಬೆಳೆಯಲ್ಲ, ಜನರಿದ್ದ ಕಡೆ ಇರುವಂಥದು. ವಿಟಮಿನ್ ಸಿ, ಐರನ್, ಫಾಸ್ಫರಸ್ ಗಳ ಆಗರ ಈ ಮುಂಡೀಗೆಡ್ಡೆ.
ಮುಂಡೀಗೆಡ್ಡೆಯೇನೂ ನೆಲದಾಳದಿಂದ ಬಗೆದು ತೆಗೆಯುವ ಶ್ರಮವನ್ನು ನೀಡುವುದಿಲ್ಲ. ಸಸ್ಯ ಬೆಳೆದಂತೆ ಗೆಡ್ಡೆಯೂ ಮೇಲ್ಪದರದಲ್ಲಿ ಕಾಣುವಂತೆ ಬೆಳೆಯುತ್ತಿರುತ್ತದೆ. ಬೆಳವಣಿಗೆಯ ಒಂದು ಹಂತದಲ್ಲಿ ಕತ್ತಿಯೇಟಿನಿಂದ ಕತ್ತರಿಸಿ ತೆಗೆದು, ಕರ್ರಗಿನ ಹೊರಸಿಪ್ಪೆಯನ್ನು ತೆಗೆದು, ಬೆಳ್ಳಗೆ ಹಾಲಿನಷ್ಟು ಬಿಳುಪಾದ ಗೆಡ್ಡೆ ಖಾದ್ಯಯೋಗ್ಯವಾಗಿ ದೊರೆಯುವಂಥದು. ನಿಧಾನ ಗತಿಯಲ್ಲಿ ಬೇಯುವ ಈ ಗೆಡ್ಡೆಯನ್ನು ಬೇಯಿಸಲು ಪ್ರೆಶರ್ ಕುಕ್ಕರ್ ಸೂಕ್ತ.
ಮುಂಡಿಯನ್ನು ನಾಟಿ ಮಾಡುವುದು ಹೇಗೆ?
ಕಡಿದಾಯಿತಲ್ಲ, ಕಾಂಡದ ತುದಿಯಲ್ಲಿ ಸಸ್ಯಭಾಗ ಇರುವಂತೆ ಒಂದು ಗೇಣುದ್ದದಷ್ಟು ಗೆಡ್ಡೆ ಇರುವ ಹಾಗೆ ಕತ್ತರಿಸಿದಲ್ಲಿ ನೆಡಲು ಸಿದ್ಧವಾದ ಮುಂಡಿ ದೊರೆಯಿತು. ಸೂಕ್ತವಾದ ಚಿತ್ರಗಳನ್ನೂ ಹಾಕಿರುವುದರಿಂದ ಹೆಚ್ಚು ವಿವರಣೆಯ ಅವಶ್ಯವಿಲ್ಲ.
ಇಷ್ಟೆಲ್ಲ ಬರೆದು ಒಂದು ಅಡುಗೆಯ ಮಾದರಿ ಹಾಕದಿದ್ದರೆ ಹೇಗಾದೀತು, ಪಲ್ಯ ಮಾಡೋಣ.
ಸುಮಾರಾಗಿ 30ರಿಂದ 40 ಕಿಲೋ ಭಾರದ ಮುಂಡಿಗೆಡ್ಡೆಯ ಹೋಳು ಮಾಡಿಕೊಳ್ಳಲು ತ್ರಾಣ ಇದ್ದವರ ಸಹಾಯವೂ ಬೇಕಾದೀತು. ವರ್ಷಗಳ ಹಿಂದೆ ಕೆಲಸದಾಕೆಯೇ ಇಂತಹ ಘನಕಾರ್ಯಗಳ ನಿರ್ವಹಣೆ ಮಾಡುತ್ತಿದ್ದಳು. ಈಗ ಆ ನನ್ನ ಕೆಲಸದಾಕೆ ಕಲ್ಯಾಣಿ ಕೇರಳ ಸರ್ಕಾರದ ಗ್ರಾಮೀಣ ರೋಜ್ಗಾರ್ ಯೋಜನೆಯ ಫಲಾನುಭವಿಯಾಗಿರುವುದರಿಂದ ಅವಳಿಗೆ ಮುಂಡಿಗೆಡ್ಡೆಯ ಕೊದ್ದೆಲ್ ತಿನ್ನುವ ಭಾಗ್ಯವಿಲ್ಲ ಅಂದುಕೊಳ್ಳುತ್ತ ನಾನೇ ಪಲ್ಯಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಬೇಕಾಯಿತು.
ಚಿಕ್ಕಗಾತ್ರದ ಹೋಳುಗಳು ಉತ್ತಮ. ಹೋಳು ಮಾಡಿಕೊಳ್ಳುವಾಗ ಕೈ ಒದ್ದೆಯಾಗಿರಕೂಡದು. ಗೆಡ್ಡೆಗೂ ನೀರ ಹನಿ ಬೀಳಕೂಡದು. ಹೋಳುಗಳನ್ನು ತೂತಿನ ಜಾಲರಿ ತಟ್ಟೆಯಲ್ಲಿ ಹಾಕಿಟ್ಟು ನೀರಿನಲ್ಲಿ ತೊಳೆಯಿರಿ. ಇವಿಷ್ಟೂ ಕೈ ತುರಿಸದಂತಿರಲು ಮಾಡಬೇಕಾದ ವಿಧಿವಿಧಾನಗಳು.
ರುಚಿಗೆ ತಕ್ಕ ಉಪ್ಪು ಬೆರೆಸಿ ಪ್ರೆಶರ್ ಕುಕ್ಕರಿನಲ್ಲಿ ಬೇಯಿಸಿ. ಚೆನ್ನಾಗಿ ಬೆಂದ ಮುಂಡಿ ತುರಿಸುವುದಿಲ್ಲ.
ಒಗ್ಗರಣೆ ಸಿದ್ಧಪಡಿಸಿ.
ಬೇಯಿಸಿದ ಅನಾವಶ್ಯಕ ನೀರು ಚೆಲ್ಲಿ, ಒಗ್ಗರಣೆ ಸಿಡಿದಾಗ ಹೋಳುಗಳನ್ನು ಹಾಕಿ. ತೆಂಗಿನತುರಿಯಿಂದ ಅಲಂಕರಿಸಿ.
0 comments:
Post a Comment