Pages

Ads 468x60px

Saturday, 17 January 2015

ತೆರೆದಿದೆ ಮನೆ, ಬಾ ಅತಿಥೀ....






ತೋಟದೊಳಗೆ ತಿರುಗಾಟ ಮುಗಿಸಿ ಒಳ ಬಂದು ಕೂತಿದ್ದೆ. ಅಡುಗೆಮನೆಯ ಕೆಲಸಕಾರ್ಯಗಳು ಇನ್ನೂ ಆರಂಭ ಆಗಬೇಕಿದೆ. ಮೊದಲು ಒಂದು ಚಹಾ.... ಅಂದುಕೊಳ್ಳುತ್ತಿದ್ದ ಹಾಗೇ,
" ಚಿಕ್ಕಮ್ಮಾ, ಏನು ಮಾಡ್ತಾ ಇದ್ದೀ.... ಬ್ಲಾಗ್ ನಲ್ಲಿರುವ ತಿಂಡಿ ಏನಾದ್ರೂ ಇದ್ಯಾ " ಅನ್ನುತ್ತಾ ಶ್ಯಾಮ ಒಳ ಬಂದ.
" ಅರೆ, ನೀನ್ಯಾವಾಗ ಬಂದಿದ್ದು ?"
" ನಾನು ಹಾಗೇ ರಬ್ಬರು ತೋಟ ಸುತ್ತಾಡಿ ಬಂದೆ "
" ಓ, ಹೆಂಡ್ತೀನೂ ಬಂದಿದ್ದಾಳೋ.... ಈಗ ಆಸರಿಗೆ ಏನು ?"
" ಅಯ್ಯೊ ಏನೂ ಬೇಡಾ, ತಣ್ಣಗೆ ನೀರು ಸಾಕು "
ಅವನು ನೀರು ಸಾಕೂ ಅಂದ್ರೆ ನೀರನ್ನೇ ಕೊಟ್ರೆ ಹೇಗಾದೀತು, ನಿನ್ನೆ ಸಂಜೆ ಮಾಡಿದ್ದ ಗೋಳಿಬಜೆ ಇದ್ದಿತು, ಮಗಳ ಅಪ್ಪಣೆಯಂತೆ ಮಾಡಿದ್ದು. ಹೇಗೂ ಬ್ಲಾಗ್ ತಿಂಡಿ ಅನ್ನುತ್ತಾ ಬಂದಿದ್ದಾನೆ, ಬೇಗ ಬೇಗ ಚಹಾ ಎಲ್ಲರಿಗೂ ತಯಾರಾಯಿತು. ಅದೂ ಇದೂ ಮಾತಾಡುತ್ತ ಎಲ್ಲರೂ ಟೀ, ಗೋಳಿಬಜೆ ಖಾಲಿ ಮಾಡಿ ಎದ್ದರು.

" ಗೋಳಿಬಜೆ ಹೊಸ ಕ್ರಮದಲ್ಲಿ ಮಾಡಿದ್ದೂ " ಅನ್ನುತ್ತಾ ಮಾಡೋ ವಿಧಾನ ಅವನ ಮುಂದೆ ಗೋರ್ಕಲ್ಲ ಮೇಲೆ ನೀರು ಸುರಿದ ಹಾಗೆ ಒದರಿದ್ದೂ ಆಯಿತು. ಮನೆಯಲ್ಲಿ ಏನೋ ಪೂಜಾ ಕಾರ್ಯಕ್ರಮಕ್ಕೆ ಆಮಂತ್ರಣವನ್ನೂ ಕೊಟ್ಟು ಶ್ಯಾಮಸೂರ್ಯ ಹೊರಟ.







" ಗೋಳಿಬಜೆ ಮಾಡಮ್ಮಾ " ಅಂದಿದ್ದು ಮಗಳು. ಅವಳು ಹೇಳಿಯೇ ಹೇಳ್ತಾಳೆ ಅಂತ ಕಡ್ಲೆಹುಡಿ, ಮೈದಾಹುಡಿ ತರಿಸಿ ಇಟ್ಕೊಂಡಿದ್ದೆ. ಮೈದಾ ಏನೋ ಹೇಗೋ ಮುಗಿಯುತ್ತಾ ಬಂದಿತ್ತು. ಕಡ್ಲೆಹಿಟ್ಟಿಗೆ ಜೊತೆಯಾಗುವಷ್ಟು ಇಲ್ಲವಲ್ಲ ಅಂದ್ಕೊಳ್ಳುತ್ತಇದ್ದ ಹಾಗೇ ಗೋಧಿಹುಡಿ ಹಾಕಿದ್ರಾದೀತು ಎಂಬ ಐಡಿಯಾ ಬಂದಿತು.
ಸರಿ, ಇದ್ಧಷ್ಟು ಮೈದಾ, ಗೋಧಿಹುಡಿ, ಕಡ್ಲೆಹುಡಿಗಳು ಅಳೆಯಲ್ಪಟ್ಟು ತಪಲೆಗೆ ಇಳಿದುವು.
ಒಂದು ಕಳಿತ ಬಾಳೆಹಣ್ಣೂ ನುರಿನುರಿದು ಹಿಟ್ಟುಗಳೊಡನಾಡಿತು.
ಉಪ್ಪು, ಸಕ್ರೆ, ಮಸಾಲಾಪುಡಿ, ಎಳ್ಳು, ಜೀರಿಗೆ..... ಓಮದ ಡಬ್ಬ ಸಿಗಲಿಲ್ಲ, ಎಲ್ಹೋಯ್ತೋ...
ನೀರು ಕೂಡಿಸಿ ಕಲಸಿಟ್ಟಾಯ್ತು. ಹ್ಞಾಂ, ಸೋಡಪುಡಿ ಪುಟ್ಟ ಚಮಚಾದಲ್ಲಿ ಅರ್ಧ ಕೂಡಿಕೊಳ್ಳುವಲ್ಲಿಗೆ ಮಿಶ್ರಣ ತಯಾರಾಯಿತು.
ಎಣ್ಣೆಯೂ ಬಿಸಿಯಾಗುತ್ತಲಿತ್ತು. ಹಿಟ್ಟಿನ ಮಿಶ್ರಣ ತೀರ ಗಟ್ಟಿ ಉಂಡೆಯಾಗಕೂಡದು. ದೋಸೆಹಿಟ್ಟಿನಂತಲೂ ಆಗಿರಬಾರದು, ಕೈಯಲ್ಲಿ ಮುದ್ದೆಯಾಗಿ ತೆಗೆದು ಎಣ್ಣೆಗೆ ಹಾಕುವಂತಿರಬೇಕು.

ಗೋಳಿಬಜೆಯನ್ನು ಅಳಿದುಳಿದ ಹುಡಿಗಳಿಂದಲೂ ಮಾಡಬಹುದೆಂದು ತಿಳಿಯಿತಲ್ಲ. ತರಕಾರಿಗಳ ಪೋಡಿ ಅಥವಾ ಬಜೆ ಯಾ ಬಜ್ಜಿ ಮಾಡ ಹೊರಟಾಗಲೂ ತಪಲೆಯಲ್ಲಿ ತುಸು ಕಡ್ಲೇಹಿಟ್ಟು ಉಳಿದಿರುತ್ತದೆ. ಬೇಕಿದ್ದರೆ ಈ ಸಂದರ್ಭದಲ್ಲೂ ಮೈದಾ ಬೆರೆಸಿ ಗೋಳಿಬಜೆ ಮಾಡಿಕೊಳ್ಳಬಹುದು. 





ಟಿಪ್ಪಣಿ:  10 /9 /2016 ರಂದು ಮುಂದುವರಿದಿದೆ.


                                                                 ಕಾವೇರಿ ರಜೆ ಹಾಗೂ ಗೋಳಿಬಜೆ

ಮಗಳು ಮನೆಗೆ ಬರಲಿರುವ ಸೂಚನೆ ಕೊಟ್ಟಳು,   ಮುಂಜಾನೆ ಹಾಜರಿರುತ್ತಾಳೆ,   ಅವಳಿಗೆ ಪ್ರಿಯವಾದ ಉದ್ದಿನದೋಸೆ ಹಿಟ್ಟು ಸಿದ್ಧವಾಯಿತು.

ಮುಂಜಾನೆ ಬಂದವಳೇ ಬಿಸಿನೀರ ಸ್ನಾನ ಮುಗಿಸಿ,  ಟೀವಿ ನೋಡುತ್ತ ತಿಂಡಿ ತಿಂದು,  ಅದೂ ಇದೂ ಮಾತನ್ನಾಡಿ ತಲೆದಿಂಬು ಹಿಡಿದು ಅಡ್ಡಾದವಳು ಎದ್ದಿದ್ದು ಮಧ್ಯಾಹ್ನದ ಊಟಕ್ಕೆ.

ಅವಳಿಗಿಷ್ಟವಾದ ಸೌತೆಕಾಯಿ ಸಾಂಬಾರ್,  ಉದ್ದಿನ ಹಪ್ಪಳ,  ತರಕಾರಿಗಳ ಉಪ್ಪಿನಕಾಯಿ ಟೇಬಲ್ ಮೇಲಿಟ್ಟಾಗ,   " ಅಮ್ಮ,  ಸಾರು ಮಾಡಿಲ್ವಾ? "  ಅಂದ್ಳು.
 
" ಟೊಮ್ಯಾಟೋ,  ಕೊತ್ತಂಬ್ರಿ ಸೊಪ್ಪು,  ನೀರುಳ್ಳಿ,  ಹಸಿಮೆಣಸು,  ಶುಂಠಿ ತರೂದಿಕ್ಕೆ ಹೇಳು ಅಪ್ಪನ ಹತ್ತಿರ.. "

ಸಂಜೆಯಾಗುತ್ತಲೂ  " ಟೀ ಕುಡಿಯೋ ಹೊತ್ತಾಯ್ತು,  ಗೋಳಿಬಜೆ ಮಾಡಮ್ಮ.. " ಅನ್ನೋದೇ!
ಯಾವಾಗ ನೋಡಿದ್ರೂ ಇದೇ ಗೋಳಾಯ್ತು,  ಉದ್ದಿನ ದೋಸೆ ಹಿಟ್ಟು ಉಂಟಲ್ಲ,  ದೋಸೆ ಎರೆದು... "

" ದೋಸೆ ಆಗ ತಿಂದಾಯ್ತಲ್ಲ,  ಈಗ ಗೋಳಿಬಜೆ... "

" ಹ್ಞೂ,  ಮೈದಾ ಇದೆ,  ಪತಂಜಲಿ ಸ್ಟೋರಿನಿಂದ ತಂದ ಸಬ್ಜೀ ಮಸಾಲಾ ಇದೆ,  ಸೋಡ ಹುಡಿ ಇದೆ...  ಎಲ್ಲ ಇದೆ,  ಆದ್ರೆ ಈ ದೋಸೆಹಿಟ್ಟು ದಂಡ ಆಗುತ್ತಲ್ಲ. "

" ಅದೆಲ್ಲ ನನಗ್ಗೊತ್ತಿಲ್ಲ... "

ಅವಳಪ್ಪಣೆ ಮೀರಲಿಕ್ಕುಂಟೇ,   ದೋಸೆಹಿಟ್ಟಿನ ತಪಲೆಯನ್ನು ದಿಟ್ಟಿಸುತ್ತಿದ್ದ ಹಾಗೆ,  ನಾಲ್ಕು ಚಮಚ ಪತಂಜಲಿ ಸಬ್ಜೀ ಮಸಾಲಾ,  ರುಚಿಗೆ ಉಪ್ಪು,  ಚಿಟಿಕೆ ಸೋಡ ಹುಡಿ,  ನಾಲ್ಕಾರು ಚಮಚ ಸಕ್ಕರೆ,  ಒಂದು ಪಾವು ಮೈದಾ ದೋಸೆ ಹಿಟ್ಟಿಗೆ ಇಳಿಯಲಾಗಿ....

ಗೋಳಿಬಜೆ ಮಿಶ್ರಣ ಸಿದ್ಧವಾಯಿತು.   ಚಿಂತೆಯಿಲ್ಲದೆ ಎಣ್ಣೆ ಒಲೆಗೇರಿತು.   ಭಲೇ ಚೆನ್ನಾಗಿತ್ತು ಎಂದು ಬೇರೆ ಹೇಳಬೇಕಾಗಿಲ್ಲ ಅಲ್ವೇ?  

ಒಂದು ಫೋಟೋ ಹಾಕ್ಬೇಕಾಗಿತ್ತು,  ಆದ್ರೇನ್ಮಾಡ್ಲೀ,  ಗೋಳಿಬಜೆ ಖಾಲಿಯಾಗ್ಹೋಯ್ತಲ್ಲ....



  ಗೋಳಿಬಜೆಯ ಇನ್ನೊಂದು ಅವತರಣಿಕೆ ಓದಲು  

ಮಿಂಚು: ಸಂಜೆಗೊಂದು ತಿನಿಸು 



0 comments:

Post a Comment