ಮಳೆಗಾಲದ ಅಗತ್ಯಗಳಿಗೆ ಬೇಕಾದಂತೆ ಹುಳಿ, ಪಲ್ಯ, ರೊಟ್ಟಿ, ಉಂಡ್ಳಕಾಳು ಇತ್ಯಾದಿ ಮಾಡಬೇಕಿದ್ದರೆ ಉಪ್ಪಿನಲ್ಲಿ ಹಲಸಿನ ಸೊಳೆ ಹಾಕಿಡುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅದೂ ಹಿಂದೆ ದಿನದ ಕೆಲಸಕ್ಕೆ ಹತ್ತೂ ಹದಿನೈದು ಕಾರ್ಮಿಕರು ಇರುವಾಗ ಅವರ ಊಟೋಪಚಾರಗಳಿಗೆಂದೇ ದೊಡ್ಡದಾದ ಮಣ್ಣಿನ ಪೀಪಾಯಿ ( ಮಂಡಗೆ ) ಗಳಲ್ಲಿ ಹಲಸಿನ ಸೊಳೆ ಮಾತ್ರವಲ್ಲದೆ ಮಾವಿನಕಾಯಿಗಳನ್ನೂ ಕಾಪಿಡಲಾಗುತ್ತಿತ್ತು. ಈಗ ಕಾಲ ಬದಲಾಗಿದೆ, ನಮ್ಮ ನಿತ್ಯೋಪಯೋಗಕ್ಕೆ ಬೇಕಾದಷ್ಟಾದರೂ ಉಪ್ಪು ಸೊಳೆ ಹಾಕಿಟ್ಟುಕೊಳ್ಳೋಣ, ಮೂರು ಹಲಸಿನಕಾಯಿಗಳು ಸಾಕು ಎಂದು ತೀರ್ಮಾನಿಸಲಾಯಿತು. ಹಲಸಿನಕಾಯಿಗಳು ಚೆನ್ನಪ್ಪನಿಂದ ಕೊಯ್ಯಲ್ಪಟ್ಟು, ಅವನಿಂದಲೇ ಆಯ್ದು ಸಿದ್ಧಗೊಳಿಸಲ್ಪಟ್ಟೂ ಆಯಿತು.
ಉಪ್ಪು ಸೊಳೆ ಹಾಕಲು ಪುಡಿಯಾದ, ಮೆತ್ತಗಾದ, ಹಣ್ಣಾಗಲು ತಯಾರಾದ, ತುಸು ಎಳೆಯ ಹಲಸೂ ಆಗುವಂತದಲ್ಲ. ಬೇಳೆ ಬೇರ್ಪಡಿಸಿದ ಬಿಡಿ ಸೊಳೆಗಳು ಚೆನ್ನಾಗಿಯೂ ಇರಬೇಕು. ಗುಣಮಟ್ಟ ಚೆನ್ನಾಗಿಲ್ಲದ ಸೊಳೆಗಳನ್ನು ಪಲ್ಯ, ಕೂಟು, ದೋಸೆ ಇತ್ಯಾದಿಗಳಿಗೆ ಬಳಸಬಹುದಾಗಿದೆ.
ಚೆನ್ನಪ್ಪ ಅಂದ, " ಇದರಲ್ಲಿ ಒಂದು ಹಲಸಿನಕಾಯಿ ಎಳತ್ತು ( ಎಳೆಯದು ) ಬಂದಿದೇ.. ಏನು ಮಾಡುವುದೂ ?"
" ಅದನ್ನು ಸೋಂಟೆ ಮಾಡಿಟ್ಕೊಳ್ಳೋಣ ", ಹೇಗೂ ಮಗಳು ತಿನ್ನಲು ತಯಾರಿದ್ದಾಳೆ, ಚಿಂತೆಯಿಲ್ಲ.
" ಸೋಂಟೆ ಅಂದ್ರೇನೂ.... ?"
ತರಕಾರಿಗಳಾದ ಬಟಾಟೆ, ಬಾಳೆಕಾೖ, ಸಿಹಿಗೆಣಸು ಇತ್ಯಾದಿಗಳ ಚಿಪ್ಸ್ ( ಉಪ್ಪೇರಿ ) ಮಾಡೋದಿದೆಯಲ್ಲ, ಹಾಗೇನೇ ಸೋಂಟೆಯನ್ನು ಹಲಸಿನಕಾಯಿ ಚಿಪ್ಸ್, ಅಚ್ಚಗನ್ನಡದಲ್ಲಿ ಉಪ್ಪೇರಿ ಅನ್ನಿ.
ಹಲಸಿನ ಸೊಳೆಗಳನ್ನು ಆಯ್ದು ಉದ್ದುದ್ದವಾಗಿ ಸೀಳುವುದು, ಚೂರಿ ಚಾಕುಗಳ ಹಂಗಿಲ್ಲದೆ ಕೈಯಲ್ಲೇ ಸೀಳಬಹುದು.
ಒಂದು ತಟ್ಟೆಯಲ್ಲಿ ಕಡು ಉಪ್ಪಿನ ದ್ರಾವಣ ಮಾಡಿಟ್ಕೊಳ್ಳಿ, ಪುಟ್ಟ ಚಮಚ ಇರಲಿ.
ಬಾಣಲೆಯಲ್ಲಿ ಎಣ್ಣೆ ಎರೆದು ಬಿಸಿಯಾಗಲು ಇರಿಸಿ.
ಎಣ್ಣೆ ಕಾಯಲಿ, ಎಣ್ಣೆಯಲ್ಲಿ ಹಿಡಿಸುವಷ್ಟು ಸೊಳೆಗಳನ್ನು ಹಾಕಿರಿ.
ಒಂದೇ ಹದನಾದ ಉರಿಯಲ್ಲಿ ಗರಿಗರಿಯಾದಾಗ ಒಂದು ಚಮಚ ಉಪ್ಪುನೀರು ಎರೆದು ಬಿಡಿ.
ಎಣ್ಣೆಯಲ್ಲಿ ನೀರಿನ ಸದ್ದು ನಿಂತಾಗ ಸೋಂಟೆಗಳನ್ನು ಕಣ್ಣುಸಟ್ಟುಗದಲ್ಲಿ ತೆಗೆದು, ಎಣ್ಣೆ ಬಸಿದು ಹೋಗಲು ತೂತಿನ ತಟ್ಟೆಗೆ ಹಾಕಿಟ್ಟುಕೊಳ್ಳಿ. ಖಾರ ಬೇಕಿದ್ದರೆ ಮೆಣಸಿನಹುಡಿ, ಗರಂ ಮಸಾಲಾ ಹುಡಿ ಉದುರಿಸಿ.
ಎಲ್ಲವನ್ನೂ ಇದೇ ಥರ ಪುನರಾವರ್ತಿಸಿ, ಆರಿದ ನಂತರ ಡಬ್ಬದಲ್ಲಿ ತುಂಬಿಟ್ಟು, ಬೇಕೆನ್ನಿಸಿದಾಗ ಕಟುಕುಟು ತಿನ್ನಿ.
ಗಮನಿಸಿ, ಸೋಂಟೆ ಮಾಡಬಹುದಾದ ಹಲಸು, ನಾಳೆ ಹಣ್ಣಾಗುವ ಮಾದರಿಯದಾಗಿರಬಾರದು, ದಪ್ಪ ದಪ್ಪ ಸೊಳೆಗಳೂ ಆಗದು, ತೀರಾ ಎಳಸಾದ ಹಲಸಿನ ಸೊಳೆಗಳೂ ಆಗುವಂತಿಲ್ಲ.
0 comments:
Post a Comment