ಉಪ್ಪು ಸೊಳೆ ಹಾಕಲು ಹೊರಟಿದ್ದು ನೆನಪಿದೆ ತಾನೆ, ಹಲಸಿನ ಸೊಳೆಗಳನ್ನು ಆಯ್ದು ಇಟ್ಟಾಗಿದೆ. ಉಪ್ಪು ಸೊಳೆ ಎಂಬ ಹೆಸರಿಗೆ ತಕ್ಕ ಹಾಗೆ ಉಪ್ಪು ಬೇಕಲ್ವೇ, ಭರ್ತಿ 2 ಕಿಲೋ ಉಪ್ಪು, ಅದೂ ಹರಳುಪ್ಪು ತರಿಸಿದ್ದೂ ಆಗಿದೆ. ಈಗಿನ ಕಾಲಕ್ಕೆ ತಕ್ಕ ಹಾಗೆ ಪ್ಲಾಸ್ಟಿಕ್ ಜಾಡಿಗಳಲ್ಲಿ (ಡ್ರಮ್ಮು) ಹಾಕಿಡಬಹುದಾಗಿತ್ತು. ಹಿಂದಿನವರ ಪಿಂಗಾಣಿ ಭರಣಿಗಳು ಇರುವಾಗ, ಅದ್ರಲ್ಲೇ ಹಾಕೋದು ಎಂದು ನಿಶ್ಚೈಸಿ, ಭರಣಿ ತೊಳೆದು, ಒಣಗಿಸಿದ್ದೂ ಆಗಿದೆ.
ಸರಿ, ಭರಣಿಯ ತಳದಲ್ಲಿ ಒಂದು ಹಿಡಿ ಉಪ್ಪು ಮೊದಲಾಗಿ ಹಾಕುವುದು. ಮೇಲಿನಿಂದ ಹಲಸಿನ ಸೊಳೆಗಳು, ಅದರ ಮೇಲೆ ಪುನಃ ಉಪ್ಪು.... ಹೀಗೆ ಪೇರಿಸುತ್ತಾ ಬಂದಾಗ, ಭರಣಿ ತುಂಬಿ ಸೊಳೆಗಳೂ ಹೊರಗಿಣುಕುವಲ್ಲಿಗೆ ಚೆನ್ನಪ್ಪ ಉದ್ಗರಿಸಿದ " ಉಪ್ಪು ಸಾಲದು, ಮೇಲಿಂದ ಮುಚ್ಚಲಿಕ್ಕೆ ಉಪ್ಪು ಆಗಬೇಕಲ್ಲ "
ಈಗಾಗಲೇ ಸಂಜೆಯಾಗಿದೆ, " ನಾಳೆ ಹಾಕಿದರಾಯಿತು..."
" ನಾಳೆ ನಾನು ಬೇರೆ ಹೋಗಲಿಕ್ಕಿದೆ, ಏನು ಮಾಡುವುದು ?" ಚೆನ್ನಪ್ಪನಿಗೂ ಚಿಂತೆ.
" ಅಷ್ಟೇ ಅಲ್ವ, ಮೇಲಿಂದ ಉಪ್ಪು ನಾನೇ ಹಾಕ್ತೇನೆ ಬಿಡು, ಈಗ ಭರಣಿ ಮುಚ್ಚಳ ಹಾಕಿ ಬಾಯಿ ಬಿಗಿದು ಬಿಡು... "
ಭರಣಿಗೆ ಭದ್ರವಾದ ಮರದ ಮುಚ್ಚಳವೂ ಇತ್ತಾಗಿ, ಅದರ ಮೇಲೆ ಪ್ಲಾಸ್ಟಿಕ್ ಹಾಳೆಯನ್ನೂ ಹೊದಿಸಿ, ಬಾಯಿ ಬಿಗಿದೂ ಆಯ್ತು.
ಭರಣಿ ಯಾ ಮಣ್ಣಿನ ಮಂಡಗೆಯೇ ಆಗಬೇಕೆಂದೇನೂ ಇಲ್ಲ. ಮನೆಯ ಸದಸ್ಯರೂ ಈಗ ಸೀಮಿತ ಸಂಖ್ಯೆಯಲ್ಲಿರುವುದರಿಂದ ಅಗತ್ಯ ಗಾತ್ರದ ಜಾಡಿಯಲ್ಲಿ ಹಾಕಿಟ್ಟರೂ ನಡೆಯುತ್ತದೆ. ಭದ್ರವಾದ ಗಾಳಿಯಾಡದ ಪ್ಲಾಸ್ಟಿಕ್ ಜಾಡಿಗಳು ಅತ್ಯುತ್ತಮ, ಉಪ್ಪು ಕಡಿಮೆಯಾದರೂ ಹಾಳಾಗುವ ಭಯವಿಲ್ಲ.
ಎರಡು ದಿನ ಬಿಟ್ಟು ಉಪ್ಪು ಸೊಳೆ ಹೇಗಿದೆ ಎಂದು ತಪಾಸಣೆ ಮಾಡಿದಾಗ ಭರಣಿಯಿಂದ ಹೊರ ಬರಲು ತವಕಿಸುತ್ತಿದ್ದ ಸೊಳೆಗಳನ್ನು ಉಪ್ಪು ಕೆಳಗಿಳಿಸಿಯೇ ಬಿಟ್ಟಿತ್ತು. ಬೇಕಿದ್ದರೆ ಈ ಹಂತದಲ್ಲಿ ಇನ್ನೊಮ್ಮೆ ಹಲಸಿನ ಸೊಳೆಗಳನ್ನು ಆಯ್ದು ಪುನಃ ತುಂಬಿಸಿಕೊಳ್ಳಬಹುದಾಗಿದೆ.
ಉಪ್ಪು ಸೊಳೆ ಹಾಕಿ ಹತ್ತು ಹದಿನೈದು ದಿನಗಳ ನಂತರ ಅಡುಗೆಗೆ ಉಪಯೋಗಿಸಲು ಪ್ರಾರಂಭಿಸಬಹುದಾಗಿದ, ಸೊಳೆ ಮುಗಿಯಬೇಡವೇ ! ಪಲ್ಯ, ಬೋಳುಹುಳಿ, ರೊಟ್ಟಿ, ಉಂಡ್ಳಕಾಳು, ವಡೆ, ಮುದ್ದೆಹುಳಿ, ಸೋಂಟೆ, ಹಪ್ಪಳ ಇತ್ಯಾದಿಯಾಗಿ ಇನ್ನೂ ಏನೇನೋ ಮಾಡಬಹುದು ಈ ಉಪ್ಪು ಸೊಳೆಯಲ್ಲಿ ! ಹೊಸ ಹಲಸಿನ ಋತು ಪ್ರಾರಂಭವಾದಾಗ ಭರಣಿಯಲ್ಲಿ ಉಳಿದದ್ದು ತೆಂಗಿನಮರದ ಬುಡಕ್ಕೆ ಹೋಗಲಿ, ಉತ್ತಮ ಗೊಬ್ಬರ ಎಂದು ತಿಳಿಯಿರಿ !
0 comments:
Post a Comment