Pages

Ads 468x60px

Friday, 25 March 2016

ಚಟ್ಣಿಯೂಟ




" ನಾಳೆ ಮಾವಿನಮಿಡಿ ಕೊಯ್ಯುವುದು "  ಅಂದಿದ್ದ ಚೆನ್ನಪ್ಪ.
ಬೆಳಗಾಯಿತು,  ನಮ್ಮ ಮುಂಜಾನೆಯ ತಿಂಡಿತೀರ್ಥಗಳೂ ಆಯ್ತು.   " ಬೇಗ ಬರ್ತೇನೆ ಅಂದಿದ್ದ,  ಯಾಕೋ ಬರಲಿಲ್ಲ.... " ಅಂದರು ನಮ್ಮೆಜಮಾನ್ರು.
" ಹೌದಾ,   ಅವನ ಮಾಮೂಲಿ ಗಂಟೆ ಇನ್ನೂ ಆಗಿಲ್ಲ. "
" ಮಾವಿನಕಾೖ ಕೊಯ್ಯಲಿಕ್ಕೆ ಬಿಸಿಲು ಬರುವ ಮೊದಲೇ ಬರುತ್ತೇನೆ ಅಂದಿದ್ದನಲ್ಲ,  ಯಾಕೋ ಬರಲಿಲ್ಲ.. "  ನಮ್ಮವರ ಒದ್ದಾಟ.
ಇನತ್ತಿಗೆ ಆಗದಿದ್ರೆ ನಾಳೆ ಬರ್ತಾನೆ ಬಿಡಿ,  ಅದ್ಯಾಕೆ ಚಿಂತೆ ಮಾಡ್ತೀರಾ. "

ಇಷ್ಟೆಲ್ಲ ಪಂಚಾಯ್ತಿ ಆಗುತ್ತಿದ್ದಂತೆ ಬೆಳ್ಳಗಿನ ದಿರುಸಿನಲ್ಲಿ ಚೆನ್ನಪ್ಪನ ಆಗಮನವಾಯಿತು.
" ಬಂದ..."  ನನ್ನಲ್ಲೂ ಹೊಸ ಹುರುಪು.
ಬಂದವನೇ ಉಡುಪು ಬದಲಾಯಿಸಿ ಕೆಲಸಕ್ಕೆ ಸಿದ್ಧನಾದ,  ಗೋಣಿಚೀಲವೂ ಬಿದಿರ ದೋಟಿಯೂ ಜೊತೆಗೂಡಿ,  ಹ್ಞಾ,  ಕೈಯಲ್ಲೊಂದು ಕತ್ತಿಯೂ,  ಹೊರಟ.

" ಗಂಟೆ ಹನ್ನೊಂದಾಯಿತು,  ಅವನು ಮರದಿಂದ ಇಳಿದ,  ಚಹಾ ಮಾಡಿ ಆಯ್ತೇ?"  ಅನ್ನುತ್ತಾ ನಮ್ಮೆಜಮಾನ್ರು ಬಂದರು.
" ಹ್ಞೂ ...  ಎಲ್ಲ ತಯಾರಾಗಿದೆ,  ನೀವೂ ಕುಡಿಯಿರಿ. "
" ಮರದಲ್ಲಿ ಒತ್ತೊತ್ತಾಗಿ ಕಾಯಿ ಇದ್ದರೆ ಕೊಯ್ಯಲು ಸಲೀಸು...  ಇದು ಅಲ್ಲೊಂದು ಕಾಯಿ,  ಇಲ್ಲೊಂದು ಕಾಯಿ...  ತುತ್ತ ತುದಿಗೆ ಹತ್ತಲಿಕ್ಕೆ ಆಗಬೇಕಲ್ಲ... "
ಚೆನ್ನಪ್ಪ ಬಸವಳಿದು ಬಂದ,  " ಅಂದುಕೊಂಡ ಹಾಗೆ ಕೊಯ್ಯಲಿಕ್ಕೆ ಮರದಲ್ಲಿ ಕಾಯಿ ಇದ್ದರಲ್ಲವೇ.. " ಅನ್ನುತ್ತ ಚಹ ಕುಡಿದು,  " ಆ ತುದಿಯ ತೆಂಗಿನ ಮರ ಹತ್ತಿ ಕೊಯ್ಯಲಿಕ್ಕೆ ಆಗುತ್ತದೋ ನೋಡ್ಬೇಕು. "  ಅವನ ಉತ್ಸಾಹ ತಗ್ಗಿಲ್ಲ.

ಸರಿ,  ಕೊಯ್ಯಲೀ...  ಈಗ ಮಾವಿನಕಾೖ ಚಟ್ಣಿ ಮಾಡದಿದ್ದರೆ ಹೇಗೆ?
ಮೈಲು ದೂರಕ್ಕೆ ವ್ಯಾಪಿಸುವ ಸುವಾಸನೆ,   ಚಟ್ಣಿಗಾಗಿ ಹೋಳು ಮಾಡುವಾಗಲೂ ಕೈ ತುಂಬ ಸೊನೆ ಪರಿಮಳ!

ಈ ವರ್ಷದ ಮೊದಲ ಮಾವಿನಕಾೖ ಅಲ್ವೇ,  ಇದ್ದುದರಲ್ಲಿ ದೊಡ್ಡ ಗಾತ್ರದ ಮಾವಿನ ಮಿಡಿ ಹೋಳು ಹೋಳಾಯ್ತು,  ಮಿಕ್ಸಿಯಲ್ಲಿ ಗಿರು ಗಿರನೆ ತಿರುಗಿಯೂ ಆಯ್ತು.

ಇನ್ನೇನು ಬೇಕಾಗಿದೆ,  ತೆಂಗಿನ ತುರಿ,  ನಾಲ್ಕಾರು ಗಾಂಧಾರಿ ಮೆಣಸು, ರುಚಿಗೆ ಬೇಕಷ್ಟು ಉಪ್ಪು ಕೂಡಿ ಮಿಕ್ಸೀಯಂತ್ರ ಹಾಗೊಮ್ಮೆ ಹೀಗೊಮ್ಮೆ ತಿರುಗಿದಾಗ ಚಟ್ಣಿ ಸಿದ್ಧವಾಯಿತು.  ಕರಿಬೇವಿನ ಒಗ್ಗರಣೆಯೂ ಬಿದ್ದಿತು.

ಊಟದ ಟೇಬಲ್ ಸಿದ್ಧವಾಯಿತು,   ಮಾವಿನ ಚಟ್ಣಿಯ ಸುಗ್ರಾಸ ಭೋಜನ,  ಬೀಂಬ್ಳಿ ಉಪ್ಪಿನಕಾಯಿ ಮೂಲೆಗೆ ಒತ್ತರಿಸಲ್ಪಟ್ಟಿತು!

ಚಟ್ಣಿಗೆ ನೀರು ಹಾಕಿಲ್ಲ,  ರಾತ್ರಿಯೂಟಕ್ಕೂ ಕೆಡದು.   ಏನಿದ್ದರೂ ಇಂತಹ ಚಟ್ಣಿಯೂಟಕ್ಕೆ ಹಳ್ಳಿಮನೆಯಲ್ಲಿ ವಾಸವಾಗಿರಬೇಕು,  ಮಾವಿನ ಮರಗಳ ತೋಪು ನಮ್ಮದಾಗಿರಬೇಕು.  



  
 

0 comments:

Post a Comment