" ನೋಡೂ, ನಾಡಿದ್ದು ಸಂಜೆ ನಾಲ್ಕಾರು ಪ್ರೆಂಡ್ಸ್ ಬರ್ತಿದಾರೆ, ಏನಾದ್ರೂ ಆಗ್ಬೇಕಲ್ಲ..."
" ಅಯ್ಯೋ ಬಿಡಿ, ಅವಲಕ್ಕಿ ಸಜ್ಜಿಗೆ ಮಾಡಿದ್ರಾಯ್ತು, ಬಾಳೆಹಣ್ಣು ಇದೆ.."
"ಹಾಗಂತೀಯಾ, ಬೇಕರಿಯಿಂದ ಏನಾದ್ರೂ ತರಲಾ ?"
" ಬೇಕಿದ್ರೆ ತಂದಿಟ್ಕೊಳ್ಳಿ "
ಬೇಕರಿಯಿಂದ ನಮ್ಮೆಜಮಾನ್ರು ತಂದ ತಿಂಡಿಗಳೇನೇನಿವೆ ಎಂದು ತಪಾಸಿಸುವ ಉಸಾಬರಿಗೇ ನಾನು ಹೋಗಲಿಲ್ಲ. ಪಟ್ಟಣದಿಂದ ಬರುವ ಅತಿಥಿಗಳಿಗೆ ನಮ್ಮ ಊರಿನ ಸಾಂಪ್ರದಾಯಿಕ ತಿಂಡಿಗಳೇ ಇಷ್ಟವಾದೀತು ಎಂಬ ಅನಿಸಿಕೆ ನನ್ನದಾಗಿತ್ತು.
ಮಧ್ಯಾಹ್ನದ ಅಡುಗೆಗೆ ತೆಂಗಿನಕಾಯಿ ತುರಿಯುತ್ತಿದ್ದಂತೆ ಅವಲಕ್ಕಿಗೂ, ಸಜ್ಜಿಗೆಗೂ ಕಾಯಿತುರಿ ತೆಗೆದಿಸಿದ್ದೂ ಆಯಿತು.
ಸಾಂಬಾರಿಗೆ ಅರೆಯುವ ಮೊದಲೇ ಅವಲಕ್ಕಿ ಅರಪ್ಪು (ಮಸಾಲೆ ) ಮಾಡಿಟ್ಕೊಳ್ಳೋಣ.
ಒಂದು ಹಿಡಿ ಕಾಯಿತುರಿ
2 ಚಮಚ ಮೆಣಸಿನ ಹುಡಿ
ಚಿಟಿಕೆ ಅರಸಿಣ
ಒಂದು ಚಮಚಾ ಕೊತ್ತಂಬ್ರಿ
ಕಾಲು ಚಮಚ ಜೀರಿಗೆ
ರುಚಿಗೆ ಉಪ್ಪು
ಇಷ್ಟೂ ಸಾಮಗ್ರಿಗಳನ್ನು ಮಿಕ್ಸಿಯಲ್ಲಿ ತಿರುವಿ ತೆಗೆದಿಟ್ಟೂ ಆಯ್ತು, ನೀರು ಹಾಕುವಂತಿಲ್ಲ.
ಸಾಂಬಾರ್ ವಗ್ಗರಣೆ ಅವಲಕ್ಕಿ ಮಸಾಲೆಗೂ ಬಿದ್ದಿತು.
ಈ ಮಸಾಲೆಯನ್ನು ಸಂಜೆಯ ಚಹಾ ಹೊತ್ತಿನಲ್ಲಿ ಅವಲಕ್ಕಿಯೊಂದಿಗೆ ಮೊರೆಸುವುದು.
ಊಟವಾಗಿ ತುಸು ವಿರಾಮದ ವೇಳೆ, ಹ್ಞಾ... ಚಹಾ ಮಾಡಲಿಕ್ಕೂ ಹಾಲು ಬೇಕಲ್ಲ !
" ಮಧೂ, ಒಂದು ಲೀಟರು ಹಾಲು ತಂದಿಟ್ಟಿರು ತಿಳೀತಾ, ಪ್ಯಾಕೆಟ್ ಹಾಲು ಬೇಡ, ಮೂರು ಗಂಟೆಗೆ ಡೈರಿ ಬಾಗಿಲು ತೆಗಿಯುತ್ತೆ, ಒಳ್ಳೆಯ ಊರ ಹಾಲು ಹಿಡ್ಕಂಡು ಬಾ.. "
ಅವನ ಹ್ಞೂಗುಟ್ಟುವಿಕೆಯಿಂದ ನಿಶ್ಚಿಂತೆ, ಮಧ್ಯಾಹ್ನದ ಲಘು ನಿದ್ರೆ ತೆಗೆದು ಎದ್ದಾಯಿತು.
ಈಗ ಸಜ್ಜಿಗೆ ಮಾಡುವ ಸಮಯ. ನೆಂಟರಿಷ್ಟರು ಬರ್ತಾರೆ ಅಂದ್ಬಿಟ್ಟು ಸಿಕ್ಕಾಪಟ್ಟೆ ಮಾಡಿಟ್ರೂ ಆಗದು, ಯವುದಕ್ಕೂ ಒಂದು ಹದ ಹಾಳಿತ ಇದ್ರೇನೇ ಚೆನ್ನ.
ಎಂಟು ಜನರ ಅಂದಾಜು ಇಟ್ಕೊಂಡು ಒಂದು ಪಾವು ಸಜ್ಜಿಗೆ ಅಳೆಯಿರಿ. ಚಿರೋಟಿ ರವೆ ಉತ್ತಮ, ಬೇಗನೆ ಆಗುವಂಥದು. ಚೆನ್ನಾಗಿ ಹುರಿಯುವ ಅಗತ್ಯ ಇಲ್ಲಿದೆ, ಹುರಿಯದೇ ಹಾಗೇನೇ ಬಿಸಿ ನೀರು ಎರೆದಿರಾ, ಅಂಟುಮುದ್ದೆಯಂತಾದೀತು.
ದಪ್ಪ ತಳದ ಬಾಣಲೆಗೆ ಒಂದೆರಡು ಚಮಚ ಎಣ್ಣೆ ಎರೆದು ಒಗ್ಗರಣೆ ಮಾಡಿಕೊಳ್ಳಿ. ಕರಿಬೇವಿನೆಸಳು, ಶುಂಠಿ, ಹಸಿಮೆಣಸು ಚಿಕ್ಕದಾಗಿ ಹಚ್ಚಿಟ್ಟುಕೊಂಡಿದ್ದನ್ನು ಬಾಣಲೆಗೆ ಹಾಕಿ ಬಾಡಿಸಿ. ಚಿಟಿಕೆ ಅರಸಿಣ ಬೀಳಲಿ.
ಒಂದು ಅಳತೆ ಚಿರೋಟಿ ರವೆಗೆ ಒಂದೂವರೆ ಅಳತೆ ನೀರು, ಈ ಲೆಕ್ಕಾಚಾರದಲ್ಲಿ ನೀರು ಎರೆಯಿರಿ. ರುಚಿಗೆ ಉಪ್ಪು, ಸಿಹಿಗೆ ಸಕ್ಕರೆ ಈ ಹಂತದಲ್ಲಿ ಹಾಕತಕ್ಕದ್ದು. ನೀರು ಕುದಿದಾಗ ಹುರಿದ ರವೆಯನ್ನು ಸುರುವಿ ಮುಚ್ಚಿ ಬೇಯಿಸಿ. ಸುಮ್ಸುಮ್ನೇ ಸೌಟಾಡಿಸದಿರಿ. ಬೇಗನೇ ಬೇಯುವ ಚಿರೋಟಿ ರವೆಗೆ ಮೇಲಿನಿಂದ ಘಮಘಮಿಸುವ ತುಪ್ಪ ಹಾಕದಿದ್ದರೆ ಹೇಗೆ ? ಎರಡು ದೊಡ್ಡ ಚಮಚ ತುಪ್ಪ ಹಾಗೂ ಕಾಯಿತುರಿ ಹಾಕುವಲ್ಲಿಗೆ ಸಜ್ಜಿಗೆಯ ಅಲಂಕರಣ ಸಂಪೂರ್ಣವಾದಂತೆ ಎಂದು ತಿಳಿಯಿರಿ. ಬಿಸಿ ಬಿಸಿಯಾಗಿ ತೆಗೆದಿರಿಸಿ.
ಸಜ್ಜಿಗೆ ಮಾಡುವ ವಿಧಾನ ತಿಳಿದಾಯ್ತು, ಇದೇ ಮಾದರಿಯಲ್ಲಿ ಶಿರಾ ಮಾಡ್ಬಿಡೋಣ. ಇಲ್ಲಿ ಘಮಘಮಿಸುತ್ತಿರುವ ತುಪ್ಪ ಹಾಗೂ ಸಕ್ಕರೆ ಬೇಕಾಗುತ್ತವೆ. ದ್ರಾಕ್ಷಿ, ಗೋಡಂಬಿ, ಯಾಲಕ್ಕಿ ಇದ್ದ ಹಾಗೆ ಉಪಯೋಗಿಸುವುದು.
ಒಂದು ಪಾವು ಚಿರೋಟಿ ರವೆ ಹುರಿಯಿರಿ, ಒಂದೂವರೆ ಪಾವು ನೀರು ಕುದಿಸಿರಿ, ನೀರು ತುಸು ಹೆಚ್ಚಾದರೂ ಅಡ್ಡಿಯಿಲ್ಲ, ಚೆನ್ನಾಗಿ ಬೇಯುವುದು ಅವಶ್ಯ. ಹಾಲು ಎರೆದು ಬೇಯಿಸಿದಿರಾದರೆ ನಮ್ಮ ಈ ಸಿಹಿ ತಿನಿಸು ಕ್ಷೀರ ಎಂದು ಕರೆಯಲ್ಪಡುತ್ತದೆ, ಅದೂ ನಮ್ಮೂರಿನ ಹವ್ಯಕ ಕನ್ನಡಿಗರಲ್ಲಿ. ಕರ್ನಾಟಕದ ಇನ್ನಿತರ ಪ್ರದೇಶಗಳಲ್ಲಿ ಈ ಶಬ್ದ ಬಳಕೆಯಲ್ಲಿಲ್ಲ ಎಂದು ನನ್ನ ತಿಳುವಳಿಕೆ.
" ಹೌದೂ, ಶಿರಾ ಹಾಗೂ ಕೇಸರೀಬಾತ್ ನಡುವೆ ವ್ಯತ್ಯಾಸವೇನು ?"
ಕೇಸರೀಬಾತ್ ನಲ್ಲಿ ಸಕ್ಕರೆಯು ರವೆಯ ದುಪ್ಪಟ್ಟು ಬೇಕಾಗುತ್ತದೆ, ತುಪ್ಪವೂ ಜಾಸ್ತಿ. ಶಿರಾ ಆದ್ರೆ ಹಂಗೇನಿಲ್ಲ, " ಹಾಲಲ್ಲಾದರು ಹಾಕು, ನೀರಲ್ಲಾದರೂ ಹಾಕು... ರಾಘವೇಂದ್ರ " ಸಿನೇಮಾ ಹಾಡಿನ ಥರ. ಸಿಹಿಯಾಗಲು ಬೇಕಾದಷ್ಟೇ ಸಕ್ಕರೆ ಸಾಕು. 1:1 ಅಳತೆಯಾದರಾಯಿತು.
ಬೆಂದಿತು, ಬೇಕಿದ್ದ ಹಾಗೆ ಸಕ್ಕರೆ ಬೀಳಲಿ. ಸಕ್ಕರೆ ಕರಗುತ್ತಾ ಬಂದಂತೆ, ಸೌಟಾಡಿಸುತ್ತಾ ಇದ್ದ ಹಾಗೆ ಘಮಘಮಿಸುತ್ತಿರುವ ತುಪ್ಪ ಎರೆದು ಬಿಡಿ, ಗ್ಯಾಸ್ ಉರಿಯನ್ನೂ ನಿಯಂತ್ರಣದಲ್ಲಿರಿಸಿ. ಬಾಣಲೆಯಿಂದ ಏಳುವ ಹಂತ ಬಂದೊಡನೆ ದ್ರಾಕ್ಷಿ, ಗೋಡಂಬಿಗಳನ್ನು ತುಪ್ಪದಲ್ಲಿ ಹುರಿದು ಹಾಕಿರಿ, ಯಾಲಕ್ಕಿ ಪುಡಿ ಉದುರಿಸಿ.
ಅನಾನಸ್ ಇದ್ದಲ್ಲಿ ನೀರು ಹಾಲಿನ ಬದಲು ಹಣ್ಣಿನ ರಸವನ್ನೇ ಎರೆದಲ್ಲಿ ಅನಾನಸ್ ಶಿರಾ ಆಯ್ತು, ಇದೇ ಥರ ಮಾವಿನಹಣ್ಣು ಕೂಡಾ ಆಗುತ್ತದೆ. ಕೃತಕ ಸುವಾಸಿತ ದ್ರವ್ಯಗಳಿಗಿಂತ ತಾಜಾತನಕ್ಕೇ ಮಹತ್ವ ನೀಡಿದರೆ ಆರೋಗ್ಯಕ್ಕೂ ಮನಸ್ಸಿಗೂ ಹಿತ.
ನಾನೂ ಅಡುಗೆ ಕಲಿಯುವ ಆರಂಭದ ಹಂತದಲ್ಲಿ ತುಪ್ಪ, ಸಕ್ರೆ ಹಾಕಿದ ಇಂತಹ ತಿಂಡಿಯನ್ನು ಮಾಡಿದ್ದಿದೆ, ಆಗ ನನ್ನ ಮಾವ, ಹೊಸರುಚಿಯ ಮೊದಲ ಗ್ರಾಹಕರೂ ಅವರೇ ಆಗಿದ್ದುದರಿಂದ " ಏನೂ ಸೋಜೀ ಸ್ವೀಟು ಮಾಡಿದ್ದೀಯಾ ..." ಅನ್ನುತ್ತಾ ಅಡುಗೆ ಮನೆಗೆ ಬರುತ್ತಿದುದು ನೆನಪಾಯ್ತು ಈಗ.
ಟಿಪ್ಪಣಿ: ಸದಭಿರುಚಿಯ ಮಾಸಪತ್ರಿಕೆ ಉತ್ಥಾನ, 2016, ಮಾರ್ಚ್ ಸಂಚಿಕೆಯಲ್ಲಿ ಪ್ರಕಟಿತ.
0 comments:
Post a Comment