Pages

Ads 468x60px

Monday 2 March 2020

ಸಿಪ್ಪೆಯ ಸೂಪ್





" ಯಾವ ಸಿಪ್ಪೇರೀ...? "
" ಕಿತ್ತಳೆ ಸಿಪ್ಪೇದು ಕಣ್ರೀ... "
" ಓ.. ಅದಾ.. ನಮಗೂ ಗೊತ್ತು.."

ಸಂಕ್ರಾಂತಿಯ ಪೂಜಾದಿಗಳ ನಂತರ ಹಿರಣ್ಯದ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಅನ್ನ ಸಂತರ್ಪಣೆಯೂ ಆದ ತರುವಾಯ ಪ್ರಸಾದವೆಂದು ಬಂದಿದ್ದ ಹಣ್ಣುಹಂಪಲುಗಳ ಪ್ಯಾಕೇಟ್ ಬಿಡಿಸಿ ಟೇಬಲ್ ಮೇಲೆ ಇಟ್ಟರು ಗೌರತ್ತೆ. ದಾಳಿಂಬೆ, ಆ್ಯಪಲ್, ಕಿತ್ತಳೆ, ಮೂಸಂಬಿ, ಬಾಳೆಯಹಣ್ಣು, ಕುಂಕುಮ, ಮಲ್ಲಿಗೆಯಮಾಲೆ, ಸೇವಂತಿಗೆ, ಕಿಸ್ಕಾರ, ಸಿಂಗಾರ..

" ಈ ಮಲ್ಲಿಗೆಯ ಮಾಲೆ ಮುಡಿದುಕೋ... ಕುಂಕುಮದ ಕರಡಿಗೆ ಎಲ್ಲಿದೆ? ನಾನೇ ತುಂಬಿಸಿ ಇಡ್ತೇನೆ.."
" ಅಲ್ಲೇ ಕನ್ನಡಿ ಎದುರುಗಡೆ ನೋಡಿ.. ಕುಂಕುಮದ ಕರಡಿಗೆ ಇದೆ. ಇಲ್ಲಾಂದ್ರೆ ದೇವರ ಕೋಣೆಯಲ್ಲಿ ಇಟ್ಕಳ್ಳಿ. "

" ಕಿತ್ತಳೆ ಹಣ್ಣು ಚೆನ್ನಾಗಿದೆ, ಸಿಪ್ಪೆಯ ಗೊಜ್ಜು ಮಾಡ್ತೀಯಲ್ಲ, ಊಟಕ್ಕೆ ಒಂದು ಐಟಂ.. "
" ಆಯ್ತು ಮಾಡುವಾ... "

ಎಂದಿನ ಅಡುಗೆ ಮುಗಿಯಿತು, ಅನ್ನ, ಸಾಂಬಾರ್, ಪಲ್ಯ..
ಕಿತ್ತಳೆ ಹಣ್ಣು ತಿಂದು ಸಿಪ್ಪೆ ಟೇಬಲ್ ಮೇಲೆ ಇಟ್ಟಿದ್ರು ಗೌರತ್ತೆ.

ಇದ್ದ ಸಿಪ್ಪೆಯೆಲ್ಲ ಯಾತಕ್ಕೆ ಅಂದ್ಬಿಟ್ಟು, ಎರಡು ಚೂರು ಸಿಪ್ಪೆಯನ್ನು ಚೂರಿಯಲ್ಲಿ ಚೂರುಚೂರಾಗಿಸಿ,
ಹಾಗೇನೇ ಒಂದು ಹಸಿಮೆಣಸನ್ನೂ ಸಿಗಿದು,
ಮಿಕ್ಸಿಯಲ್ಲಿ ಪುಡಿ ಪುಡಿ ಆಗಿ ಬಿಟ್ಟಿತು.

ಹೊಸ ಹುಣಸೆಯಹಣ್ಣನ್ನು ಗಿವುಚಿ ರಸ ತೆಗೆದಿಟ್ಟು,
ಬೆಲ್ಲ ಪುಡಿ ಮಾಡಿಟ್ಟು,
ತಪಲೆಗೆ ಒಂದು ಲೋಟ ನೀರೆರೆದು, ಹುಣಸೇಹಣ್ಣಿನ ರಸ, ಬೆಲ್ಲ, ಉಪ್ಪು ಸೇರಿ ಕುದಿಯಲಿ.

ಒಂದು ಚಮಚದಷ್ಟು ಕಿತ್ತಳೆ ಸಿಪ್ಪೆ ಹಾಗೂ ಹಸಿಮೆಣಸಿನ ಹುಡಿಯನ್ನು ಕುದಿಯುತ್ತಿರುವ ಎಸರಿಗೆ ಹಾಕಿದಾಗ...
ಘಂ.. ಎಂದು ಸುವಾಸನೆ ಎದ್ದಿತು.
ಪುಟ್ಟ ಚಮಚ ತುಪ್ಪ ಎರೆದು,
ಊಟದ ಟೇಬಲ್ ಮೇಲೆ ಕಿತ್ತಳೆ ಸಿಪ್ಪೆಯ ಸೂಪ್ ಸಿದ್ಧವಾಗಿ ಕುಳಿತಿತು.

ನಿನ್ನೆಯ ಅನ್ನಸಂತರ್ಪಣೆಯ ಭೂರಿಭೋಜನದೂಟ ಉಂಡು, ಇವತ್ತಿನ ಸರಳ ಸೂಪ್ ಕುಡಿದು ಹೊಟ್ಟೆಗೂ ಹಿತವಾಯ್ತು ಅನ್ನಿ.

ಸೂಪ್ ಬೇಕಿಲ್ಲವೇ, ಅನ್ನದೊಂದಿಗೆ ಕಲಸಿ ಉಣಬಹುದಾದ ಸಾರು ಮಾಡೋಣ.
ಕರಿಬೇವು, ಇಂಗು ಕೂಡಿದ ಸಾಸಿವೆಯ ಒಗ್ಗರಣೆ ಬೀಳುವಲ್ಲಿಗೆ ಈಗ ತಯಾರಿಸಿದಂತಹ ಸೂಪ್ ಕಿತ್ತಳೆ ಸಿಪ್ಪೆಯ ಸಾರು ಎಂಬ ಹೆಸರನ್ನು ಹೊಂದಿತು. ಒಗ್ಗರಣೆಗೆ ತುಪ್ಪದ ಬಳಕೆಯೇ ಸೂಕ್ತ.

ಇನ್ನೂ ಎರಡು ಚಮಚ ಕಿತ್ತಳೆ ಸಿಪ್ಪೆಯ ಹುಡಿ ಉಳಿದಿದೆ.
ನಾಳೆ ಏನೋ ಒಂದು ತಿನಿಸು ಬರಲಿದೆ ಅನ್ನಿ.





ಕಿತ್ತಳೆ ಸಿಪ್ಪೆಯ ದೋಸೆ

ನನ್ನದು ನೀರುದೋಸೆಯ ಹಿಟ್ಟು ತಯಾರಾಯ್ತು.
ಎರಡು ಚಮಚ ಕಾಯಿತುರಿ
ಒಂದು ಹಸಿಮೆಣಸು
ಅರ್ಧ ನೀರುಳ್ಳಿ, ಉಳಿದರ್ಧ ಚಟ್ಣಿಗಾಗಿ
3 ಎಸಳು ಕರಿಬೇವು
ತುಸು ಕೊತ್ತಂಬರಿ ಸೊಪ್ಪು
ಎಲ್ಲವನ್ನೂ ಮಿಕ್ಸಿಯಲ್ಲಿ ಜಜ್ಜಿಕೊಳ್ಳಿ
ದೋಸೆ ಹಿಟ್ಟಿಗೆ ಬೆರೆಸಿ,
ಹ್ಞಾ.. ನಿನ್ನೆಯ ಕಿತ್ತಳೆ ಸಿಪ್ಪೆ ಪುಡಿ ಎಲ್ಹಿ?
ಅದನ್ನೂ ಸೇರಿಸಿ ತೆಳ್ಳವು ಹಿಟ್ಟಿಗೆ ಬೆರೆಸಿ,
ಘಮಘಮಿಸುವ ನೀರುದೋಸೆ ಸವಿದರು ಗೌರತ್ತೆ.

" ಇನ್ನೂ ಉಂಟಾ ಸಿಪ್ಪೇ? "
" ಉಂಟಲ್ಲ.. "
" ಮದ್ಯಾಹ್ನದೂಟಕ್ಕೆ ಸಿಪ್ಪೇ ಪುಡಿ ಹಾಕಿ ಒಂದು ಬಟಾಟೆ ಗೊಜ್ಜು ಮಾಡಿದ್ರಾದೀತು..."
" ಹೆಹೇ.. ಆಯ್ತು. ನಾಳೆ ಮಾಡೋಣ."

ಬಟಾಟೆ ಗೊಜ್ಜು ಮಾಡಿದ್ದು ಹೇಗೆ?

ಒಂದು ದೊಡ್ಡ ಗಾತ್ರದ ಬಟಾಟೆಯನ್ನು ತೊಳೆದು 3 ಹೋಳು ಮಾಡಿಟ್ಟು ಕುಕ್ಕರಿನಲ್ಲಿ 3 ಸೀಟಿ ಕೂಗಿಸಿ.
ಆರಿದ ನಂತರ ಸಿಪ್ಪೆ ತೆಗೆಯಿರಿ, ಮೃದುವಾಗಿ ಕೈಯಲ್ಲಿ ಹಿಸುಕಿರಿ.
2 ಚಮಚ ಕಾಯಿತುರಿ
2 ಹಸಿಮೆಣಸು
1 ನೀರುಳ್ಳಿ
ಸ್ವಲ್ಪ ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕಷ್ಟು ಉಪ್ಪು
ಮಿಕ್ಸಿಯಲ್ಲಿ ನೀರು ಹಾಕದೆ ರುಬ್ಬಿಕೊಳ್ಳಿ.
ಅರೆದ ಮಿಶ್ರಣ, ಕಿತ್ತಳೆ ಸಿಪ್ಪೆಯ ಹುಡಿ, ಒಂದು ಲೋಟ ಮೊಸರು ಸಹಿತವಾಗಿ ಬೇಯಿಸಿದ ಬಟಾಟೆಗೆ ಬೆರೆಸಿ.
ಟೇಬಲ್ ಮೇಲೆ ಬಿಡಿಸಿಟ್ಟ ದಾಳಿಂಬೆ ಗೋಚರವಾಗಿ, ಅದನ್ನೂ ಹಾಕಿ ಅಲಂಕರಿಸಲಾಯಿತು.
ಒಗ್ಗರಣೆ ಬೇಕಿದ್ದರೆ ಹಾಕಬಹುದು.
ಅಂತೂ ಈ ಪ್ರಕಾರವಾಗಿ ಕಿತ್ತಳೆಸಿಪ್ಪೆಯ ಮೊಸರುಗೊಜ್ಜು ತಯಾರಿಸಲಾಯಿತು.




0 comments:

Post a Comment