Pages

Ads 468x60px

Thursday 25 June 2020

ಹಲಸಿನ ವಡೆ



ಹಲಸಿನ ಸೊಳೆಗಳು ನಮಗೇನು ಗತಿಯೆಂದು ಕಾದು ಕುಳಿತಿವೆ.

ಹಾಗೇನೇ ಗುಳುಂಕರಿಸಲಾದೀತೇ, ನಮ್ಮ ಪಾಕಶಾಲೆಗೆ ಒಯ್ಯಲಾಯಿತು.  

ಚೂರಿಯಲ್ಲಿ ಚಕಚಕನೆ ಕತ್ತರಿಸಿ,

ಮಿಕ್ಸಿಯಲ್ಲಿ ಗಿರಗಿರನೆ ತಿರುಗಿಸಿ,

ರುಚಿಯ ಯೋಗ್ಯತೆಗೆ ತಕ್ಕಷ್ಟು ಉಪ್ಪು ಕೂಡಿಸಿ,

2 ಲೋಟದಷ್ಟು ಮುದ್ದೆ ಹಿಟ್ಟು ಆಗಿ ಬಿಟ್ಟಿತು.


ಒಂದು ದೊಡ್ಡ ನೀರುಳ್ಳಿ, 2 ಹಸಿಮೆಣಸು, ಸಿಪ್ಪೆ ಹೆರೆದ ಶುಂಠಿಗಳನ್ನು ಕತ್ತರಿಯಾಡಿಸಿ ಹಿಟ್ಟಿಗೆ ಸೇರಿಸಲಾಯಿತು. ಕರಿಬೇವು ಕೊತ್ತಂಬರಿ ಸೊಪ್ಪುಗಳನ್ನೂ ಬಿಡುವಂತಿಲ್ಲ.

ಕಡ್ಲೆ ಗಾತ್ರದ ಇಂಗು ನೀರಿನಲ್ಲಿ ನೆನೆದು ಕೂಡಿಕೊಂಡಿತು.

ಡಬ್ಬದಿಂದ ಅಕ್ಕಿ ಹುಡಿ ಹೂರ ಬಂದಿತು.

ಅರ್ಧ ಲೋಟ ನೀರು ಪಕ್ಕದಲ್ಲಿರಲಿ, 

ಅಗತ್ಯವಿದ್ದಲ್ಲಿ ಸೇರಿಸಲು ನೀರು ಇರಬೇಕು.

ಒಂದು ಲೋಟ ಅಕ್ಕಿ ಹಿಟ್ಟು ಬೆರೆಸಿ ಮುದ್ದೆಯಾಯಿತೇ..

ಕೈಗಳಿಗೆ ಅಂಟಿಕೊಳ್ಳದಂತಿರಬೇಕು, ಸಾಲದಿದ್ದರೆ ಅಕ್ಕಿ ಹಿಟ್ಟು ಹಾಕಿದರಾಯಿತು.  

ಉದ್ದಿನ ವಡೆಯ ಹಿಟ್ಟಿನಂತಾಯಿತು ಅನ್ನಿ.


ಬಾಣಲೆಗೆ ಎಣ್ಣೆ ಎರೆದು ಒಲೆಯ ಮೇಲಿರಿಸಿ

ಹಿಟ್ಟನ್ನು ಲಿಂಬೆ ಗಾತ್ರದ ಉಂಡೆಗಳನ್ನಾಗಿಸಿ

ಅಂಗೈಯಲ್ಲಿ ತಟ್ಟಿ 

ಬೆರಳಿನಲ್ಲಿ ತೂತು ಕೊರೆದು

ಎಣ್ಣೆಗಿಳಿಸಿ.

ಒಂದೇ ಬಾರಿ ಎಣ್ಣೆಯಲ್ಲಿ ಹಿಡಿಸುವಷ್ಟು ಹಾಕಿ,

ಕವುಚಿ ಮಗುಚಿ

ಎರಡೂ ಬದಿ ಬೆಂದ ನಂತರ ತೆಗೆಯಿರಿ.


ಬಿಸಿ ಇರುವಾಗಲೇ ಚಹಾ ಜೊತೆ " ಅಹ.. ಅಹ.. " ಅನ್ನುತ್ತ ಸವಿಯಿರಿ.






0 comments:

Post a Comment