Pages

Ads 468x60px

Sunday 9 August 2020

ಪತ್ರೊಡೆ ಸುರುಳಿ

 


ಕೆಸುವಿನ ಪತ್ರೊಡೆ ಮಾಡಲೇ ಬೇಕು,  ಹಿಂದಿನ ವರ್ಷ ಬೆಂಗಳೂರಿಗೆ ಹೋಗಿ ಬರುವಷ್ಟರಲ್ಲಿ ಕರಿ ಕೆಸು ಹಂದಿ ಧಾಳಿಗೆ ತುತ್ತಾಗಿ ನೆಲಕಚ್ಚಿತ್ತು.


ಈಗ ಹೇಗೂ ಎಲ್ಲಿಗೂ ಹೋಗುವುದಕ್ಕೂ ಇಲ್ಲ ಮನೆಗೆ ಯಾರೂ ಬರುವುದಕ್ಕೂ ಇಲ್ಲ ತೋಟದ ಕೆಲಸಕ್ಕೆ ಬರುತ್ತಿದ್ದವರೆಲ್ಲ ಗತಿಗೋತ್ರವಿಲ್ಲದವರಂತೆ ಎಲ್ಲೋ ಮರೆಯಾಗಿದ್ದಾರೆ.

ಅಂಗಳವೆಂದರೆ ಹಸಿರು ಗಿಡಗಳ ತಾಣ ನನಗೆ ಬೇಕಾದಂತಹ ಕೆಸುವಿನ ಎಲೆಗಳನ್ನು ಕೊಯ್ದಾಯ್ತುಅದೂ ದಂಟು ಸಹಿತವಾಗಿ ಕೊಯ್ದರೆ ಉತ್ತಮ ಕೆಸುವಿನ ದಂಟನ್ನು ಪದಾರ್ಥಕ್ಕೆ ಬಳಸಬಹುದು ಅಷ್ಟರಲ್ಲಿ ಜಡಿ ಮಳೆ ಶುರು ಮನೆಯೊಳಗೆ ಓಡಿ ಬಂದಿದ್ದಾಯ್ತು.   ತೋಟದಿಂದ ಬಾಳೆ ಎಲೆ ತರಲಿಕ್ಕೂ ಸಮಸ್ಯೆ.  


ತೊಂದರೆಯಿಲ್ಲ ಪತ್ರೊಡೆಯನ್ನು ಬಾಳೆ ಎಲೆ ಇಲ್ಲದಿದ್ದರೂ ಮಾಡಲಿಕ್ಕಾಗುತ್ತದೆ.  


ಮೊದಲಾಗಿ ಅಕ್ಕಿ ತೊಳೆದು ನೆನೆಯಲು ಇರಿಸುವುದು.

ಕುಚ್ಚುಲಕ್ಕಿ ಬೆಳ್ತಿಗೆ ಅಕ್ಕಿಯಾವುದೂ ಆದೀತು ಮಿಕ್ಸಿಯಲ್ಲಿ ಕುಚ್ಚುಲಕ್ಕಿ ಅರೆಯುವುದು ತುಸು ತ್ರಾಸದ ವ್ಯವಹಾರ.


ನಾವೇನು ಮಾಡೋಣಾ ಅಂದರೆ ಒಂದು ಲೋಟ ಬೆಳ್ತಿಗೆ ಅಕ್ಕಿಯನ್ನು ಕುದಿಯುವ ನೀರು ಎರೆದು ಹತ್ತು ನಿಮಿಷ ಮುಚ್ಚಿಇರಿಸುವುದು.

ಇನ್ನೊಂದು ಲೋಟ ಬೆಳ್ತಿಗೆ ಅಕ್ಕಿಯನ್ನು ತಣ್ಣೀರು ಎರೆದು ಇಡುವುದು.

ಹತ್ತು ನಿಮಿಷದ ತರುವಾಯ ಎರಡೂ ಪ್ರತಿ ಅಕ್ಕಿಗಳನ್ನು ಒಟ್ಟಿಗೆ ಹಾಕಿರಿಸುವುದು ಅಕ್ಕಿಯ ವ್ಯವಸ್ಥೆ  ರೀತಿಯಾಗಿ ಪೂರ್ಣಗೊಂಡಂತಾಯಿಕು.

2ರಿಂದ 3 ಚಮಚ ಮೆಂತೆ ಕಾಳು ಮೊಸರು ಎರೆದು ನೆನೆಯಲಿಕ್ಕೆ ಇಡುವುದು

ಅರ್ಧ ಲೋಟದಷ್ಟು ಹಸಿ ತೆಂಗಿನತುರಿ

4ರಿಂದ 5 ಒಣಮೆಣಸು ತಣ್ಣೀರಿನಲ್ಲಿ ಹಾಕಿ ಇಟ್ಟರೆ ಅರೆಯಲಿಕ್ಕೆ ಉತ್ತಮ.

ಒಂದು ಚಮಚ ಕೊತ್ತಂಬರಿ.

ಸ್ವಲ್ಪ ಜೀರಿಗೆ ಇಂಗು ಅರಸಿಣ ಹುಡಿ

ರುಚಿಗೆ ಸೂಕ್ತ ಪ್ರಮಾಣದ ಉಪ್ಪು ಬೆಲ್ಲ ಹುಣಸೆಯ ಹುಳಿ.

ಮಸಾಲೆಗಳನ್ನು ನಮ್ಮ ಬಾಯಿರುಚಿಗನುಸಾರ ಹೆಚ್ಚೂಕಮ್ಮಿ ಮಾಡಬಹುದುಮೆಣಸು ಕೊತ್ತಂಬ್ರಿಗಳನ್ನು ಹುರಿದೂ ಹಾಕಬಹುದು.


ಮೆಂತೆ ತೆಂಗಿನತುರಿ ಇತ್ಯಾದಿಯಾಗಿ ಮಸಾಲೆಗಳನ್ಮು ಮೊದಲು ಅರೆಯುವುದು.

ನಂತರ ನೆನೆದ ಅಕ್ಕಿಯನ್ನೂ ಹಾಕಿ ಅರೆಯುವುದು ನುಣ್ಣಗಾದರೆ ಉತ್ತಮ ಇಡ್ಲಿ ಹಿಟ್ಟಿನ ಸಾಂದ್ರತೆಯ ಹಿಟ್ಟು ನಮ್ಮದಾಗಿರಬೇಕು.


ಕೆಸುವಿನ ದಂಟು ಕತ್ತರಿಸಿ ನಾಳೆಯ ಅಡುಗೆಗಾಗಿ ತೆಗೆದಿರಿಸಿ,    ತಂಪು ಪೆಟ್ಟಿಗೆಯ ವ್ಯವಸ್ಥೆ ಬೇಡ ಹಾಗೇನೆ ನೆಲದಲ್ಲಿ ಇಟ್ಟರಾಯಿತು ತುಸು ಬಾಡಿದಾಗ ನಾರು ತೆಗೆಯುವುದು ಸಲೀಸು ನಾಲ್ಕೈದು ದಿನ ಬಿಟ್ಟು ಮಾಡಲೂ ತೊಂದರೆಯಿಲ್ಲ,  


ದೊಡ್ಡ ಗಾತ್ರದ ಕೆಸುವಿನ ಎಲೆಗಳನ್ನು ಒರೆಸಿ ಹಿಂಭಾಗದಲ್ಲಿರುವ ನಾರನ್ನು ಸಾಧ್ಯವಾದಷ್ಟು ಚೂರಿಯಿಂದ ಹೆರೆದು ತೆಗೆಯಿರಿ.

 

 ಹೊತ್ತಿಗೆ ಇಡ್ಲಿ ಪಾತ್ರೆಯನ್ನು ಒಲೆಗೇರಿಸುವುದು.  

ಪತ್ರೊಡೆಯ ಹಿಟ್ಟನ್ನು ಕೆಸುವಿನ ಎಲೆಯ ಹಿಂಭಾಗಕ್ಕೆ ಓಂದು ಸೌಟು ಎರೆದು ಅಂಗೈಯಲ್ಲಿ ಹಿಟ್ಟನ್ನು ಸವರುತ್ತ ಎಲೆ ತುಂಬ ತೆಳ್ಳಗಾಗಿ ಹಿಟ್ಟನ್ನು ಹಚ್ಚುತ್ತ ಬನ್ನಿ ಪತ್ರೊಡೆಯೂ ಪಜೆಮಡಿಕೆಯ ಒಂದು ವಿಧ ಎಂದು ತಿಳಿಯಿರಿ.




ದೊಡ್ಡದಾದ ಎಲೆ ತುದಿ ಹಾಗೂ ತೊಟ್ಟಿನ ಭಾಗಗಳನ್ನು ಮಡಚಿದಾಗ ಆಯತಾಕಾರ ಇಲ್ಲವೇ ಚೌಕಾಕಾರಕ್ಕೆ ಬಂದಿದೆ ಪುನಃ ಹಿಟ್ಟು ಸವರಿ ವೃತ್ತಾಕಾರದಲ್ಲಿ ಮಡಚಿ ಮಡಚುವಾಗಲೂ ಹಿಟ್ಟು ಹಚ್ಚುತ್ತ ಬರಬೇಕು.

ಎಲ್ಲ ಎಲೆಗಳನ್ನೂ ಇದೇ ಪ್ರಕಾರವಾಗಿ ಹಿಟ್ಟಿನಿಂದ ಆವೃತಗೊಳಿಸಿ ಚಾಪೆಯಂತೆ ಸುರುಳಿ ಸುತ್ತಿ ನೀರು ಕುದಿಯುತ್ತಿರುವ ಇಡ್ಲಿಪಾತ್ರೆಯೊಳಗಿರಿಸಿಭಧ್ರವಾಗಿ ಮುಚ್ಚುವುದು.


ನೀರು ಕುದಿದ ನಂತರ 25ರಿಂದ 30 ನಿಮಿಷ ಬೇಯಲು ಸಮಯ ಬೇಕು.   ಅದಕ್ಕೆ ಸೂಕ್ತ ಪ್ರಮಾಣದ ನೀರನ್ನು ನಾವು ಇಡ್ಲಿ ಪಾತ್ರೆಗೆ ಒದಗಿಸುವ ಅಗತ್ಯವೂ ಇದೆ.


ನನ್ನ ಇಡ್ಲಿಪಾತ್ರೆಯೆಂಬ ಅಟ್ಟಿನಳಗೆ ಇಂಡಕ್ಷನ್ ಸ್ಟವ್ ಜೊತೆ ಹೊಂದಿಕೊಂಡಿದೆ ಸಮಯದ ಲೆಕ್ಕಾಚಾರವೂ ಉಷ್ಣತೆಯ ನಿಯಂತ್ರಣವೂ ಅದರಲ್ಲಿ ಇರುವುದರಿಂದ ಇಂಡಕ್ಷನ್ ಸ್ಟವ್ ನನ್ನ ಅಚ್ಚುಮೆಚ್ಚಿನ ಒಲೆ ವಿದ್ಯುತ್ ಹೋಗದಿದ್ದರಾಯಿತು.


ಚಿಕ್ಕ ಚಿಕ್ಕ ಎಲೆಗಳನ್ನು ಒಂದರ ಮೇಲಿನ್ನೊಂದರಂತೆ ಮೂರು ಯಾ ನಾಲ್ಕು ಎಲೆಗಳನ್ನಿಟ್ಟು ಹಿಟ್ಟನ್ನೂ ಸವರಿ ಸುರುಳಿ ಸುತ್ತಿ ಇಡುವುದು.


 ಮಾದರಿಯ ಕೆಸುವಿನ ಪತ್ರೊಡೆ ಬಾಳೆ ಎಲೆಯನ್ನು ಬಯಸದು ಕರಾವಳಿಯ ಕೊಂಕಣಿಗರ ಅಚ್ಚುಮೆಚ್ಚಿನ ಖಾದ್ಯ ಇದಾಗಿದೆ ನಾಲ್ಕೇ ನಾಲ್ಕು ಕಾಡು ಕೆಸುವಿನೆಲೆ ಸಿಕ್ಕಿದ್ರೂ ಸಾಕು ಊಟದೊಂದಿಗೆ ನಂಜಿಕೊಳ್ಳಲು ಪತ್ರೊಡೆ ಸಿದ್ಧ.  


ಮದುವೆಯಾಗುವ ತನಕ ಕಾಸರಗೋಡಿನಲ್ಲಿ ನಮ್ಮ ನೆರೆಕರೆಯ ಮನೆಗಳು ಗೌಡಸಾರಸ್ವತರದ್ದಾಗಿತ್ತು ಅವರು ಮಾಡುತ್ತಿದ್ದ ಖಾರಾಪತ್ರೊಡೆ ನನಗೂ ಸಿಗುತ್ತಿತ್ತು

ರುಚಿಯಾಗಿರುತ್ತಿದ್ದ ಪತ್ರೊಡೆಗೆ ಬೆಲ್ಲ ಹಾಕಲಿಕ್ಕಿಲ್ಲ

ಮಸಾಲೆಯ ಕೊತ್ತಂಬರಿ ಜೀರಿಗೆಮೆಣಸು ತುಸು ಜಾಸ್ತಿಅರೆಯುವಾಗ ಅಕ್ಕಿ ಮಾತ್ರವಲ್ಲದೆ ಉದ್ದಿನಬೇಳೆ ಕಡ್ಲೆಬೇಳೆಗಳನ್ನೂ ಮಿತಪ್ರಮಾಣದಲ್ಲಿ ಹಾಕಲಿಕ್ಕಿದೆ.

ನೀಟಾಗಿ ಕತ್ತರಿಸಿ ಕಾವಲಿಯಲ್ಲಿಟ್ಟು ಎಣ್ಣೆ ಎರೆದು ಎರಡೂ ಬದಿ ಕೆಂಪಗಾಗುವಂತೆ ಕರಿದು ಊಟದ ಬಟ್ಟಲಿಗೆ ಬಡಿಸುವ ಕ್ರಮ ಸಂಜೆಯ ಚಹಾ ಸಮಯಕ್ಕೂ ಸೂಕ್ತ ತಿಂಡಿ.


 ವಿಧಾನದಲ್ಲಿ ಪತ್ರೊಡೆಯ ಹಿಟ್ಟು ಹೆಚ್ಚು ಬೇಕಾಗುವುದಿಲ್ಲ ನನ್ನ ಹಿಟ್ಟು ಉಳಿಯಿತು ಬಾಳೆ ಎಲೆ ಇದ್ದಿದ್ದರೆ ತೆಳ್ಳಗೆ ಹಚ್ಚಿ ಪಜೆಮಡಿಕೆ ಮಾಡಬಹುದಾಗಿತ್ತು ಖಾರಾ ಪಜೆಮಡಿಕೆ ಎಂದು ಹೆಸರು ಇಡಬಹುದಾಗಿತ್ತು.


ಹಿಟ್ಟನ್ನು ತೆಗೆದಿರಿಸಿ ನಾಳೆ ಪತ್ರೊಡೆಯೊಂದಿಗೆ ಖಾರ ತೆಳ್ಳವು ಎರೆದು ಇಡಬಹುದುನಮ್ಮ ನಾಯಿ ಪತ್ರೊಡೆ ತಿನ್ನದೇ ಹೋದರೆ ಕಾರತೆಳ್ಳವು ತಿನ್ನಲಿ.


ಹೀಗೂ ಮಾಡಬಹುದು ಸುರುಳಿ ಸುತ್ತಿದ ಪತ್ರೊಡೆಯನ್ನು ಹಬೆಯಲ್ಲಿ ಬೇಯಿಸುವ ಬದಲು ಉರುಟುರುಟಾಗಿ ಕತ್ತರಿಸಿ ಉಳಿದ ಹಿಟ್ಟಿನಲ್ಲಿ ಅದ್ದಿ ಕಾವಲಿಯಲ್ಲಿ ದೋಸೆಯಂತೆ ಬೇಯಿಸುವುದು ಎಣ್ಣೆಯನ್ನೂ ಎರೆದು ಕೆಂಪಾಗುವಂತೆ ಎರಡೂ ಬದಿ ಬೇಯಬೇಕು ಇದು ಊಟದೊಂದಿಗೆ ಸಹವ್ಯಂಜನವಾಗಿ ತಿನ್ನಲಿಕ್ಕೆ ಚೆನ್ನಾಗಿರುತ್ತದೆ ಪತ್ರೊಡೆಯ ಪೋಡಿ ಎಂದರಾದೀತು.


ನಾವು ಮುಂಜಾನೆ ತಿಂದಿದ್ದು ಹೇಗೆ?

ಬೆಂದಂತಹ ಪತ್ರೊಡೆಗಳನ್ನು ಕತ್ತರಿಸಿ ಚಿಕ್ಕ ಚಿಕ್ಕ ಚೂರುಗಳನ್ನಾಗಿಸಿ,

ಬಾಣಲೆಯಲ್ಲಿ ಒಗ್ಗರಣೆಗಿಟ್ಟು,

ಕಾಯಿತುರಿಬೆವ್ಲದ ಪುಡಿಉಪ್ಪು ಸೇರಿಸಿ ಪತ್ರೊಡೆ ಒಗ್ಗರಿಸಿ ತಿಂದದ್ದು.  


ಪತ್ರೊಡೆ ಇನ್ನೂ ಇದ್ದರೆ ಸಾಂಬಾರ್ ಗಸಿ ಜೀರಿಗೆ ಬೆಂದಿ ಮಜ್ಜಿಗೆ ಹುಳಿ ಇತ್ಯಾದಿ ವ್ಯಂಜನಗಳನ್ನೂ ಮಾಡೀ ಸವಿಯಿರಿ.


Colocasia esculenta ಇದರ ವೈಜ್ಞಾನಿಕ ಹೆಸರು.   ದಕ್ಷಿಣ ಭಾರತವೇ ಇದರ ಮೂಲ ನೆಲೆ ಒಳ್ಳೆಯ ಗೊಬ್ಬರದ ಮಣ್ಣಿನಲ್ಲಿವಿಸ್ತಾರವಾದ ಎಲೆಗಳಿಂದ ಸೊಗಸಾಗಿರುತ್ತದೆ ಆಡುಭಾಷೆಯಲ್ವಿ ಇದು ಮುಂಡಿ ಕೆಸು ಇದರಲ್ಲಿ ಹಸಿರು ಹಾಗೂ ಕಡು ಹಸಿರುಬಣ್ಣದ ವರ್ಗಗಳಿವೆ ಕಡು ಬಣ್ಣದ ಎಲೆಯ ಕಾಂಡ ನಸು ಕಪ್ಪು ಬಣ್ಣದಲ್ಲಿದ್ದು ಕರಿಕೆಸು ಎಂದು ಕರೆಯಲ್ಪಡುತ್ತದೆ ಇದಕ್ಕೆ ಏನೂತುರಿಕೆಯಿಲ್ಲ ದಂಟು ಕೂಡಾ ಹಿತವಾದ ಆಹಾರ ಗೆಡ್ಡೆಯಂತೂ ಬಲು ರುಚಿ ಹಾಗಾಗಿ ಕಾಡು ಪ್ರಾಣಿಗಳ ಉಪಟಳ ಜಾಸ್ತಿ.  

ಇದರಲ್ಲಿ ಬಣ್ಣ ಬಣ್ಣದ ಅಲಂಕಾರಿಕ ಸಸ್ಯಗಳೂ ಇವೆ ಮನೆಯಂಗಳದಲ್ಲಿ ಹೂಗಿಡಗಳೊಂದಿಗೆ ನೆಡಬಹುದು ಅಷ್ಟೇ.


ನಾರುಯುಕ್ತವಾದ ಕೆಸುವಿನೆಲೆಯಲ್ಲಿ ವಿಟಮಿನ್ ಗಳೂ ಖನಿಜಾಂಶಗಳೂ ಸಮೃದ್ಧಿಯಾಗಿ ಇವೆ ಪತ್ರೊಡೆ ಪ್ರಿಯರಿಗೆ ಮಳೆಗಾಲದಲ್ಲಿ ಕಾಡು ಕೆಸು ಧಾರಾಳವಾಗಿ ಸಿಗುವಂತಹದು.    ದೇಹಾರೋಗ್ಯದಲ್ಲಿ ಸಮತೋಲನ ಕಾಪಾಡಿಕೊಳ್ಳುತ್ತ ಆಯಾಋತುಮಾನದಲ್ಲಿ ಸಿಗುವಂತಹ ಪ್ರಕೃತಿಯ ಉಚಿತ ಕೊಡುಗೆಗಳನ್ನು ಸ್ವೀಕರಿಸಿ ಮುನ್ನಡೆಯೋಣ.





0 comments:

Post a Comment