ನಿನ್ನೆ ಸಂಜೆ ಮನೆಯ ಹಿಂದೆ ಚಿಕ್ಕದೊಂದು ಕತ್ತಿ ಹಿಡಿದು ಅಡ್ಡಾಡುತ್ತಿದ್ದಾಗ ಕರಿ ಕೆಸುವಿನ ಬುಡದಲ್ಲಿ ಇನ್ಯಾವುದೋ ಸಸ್ಯ ಎತ್ತರವಾಗಿ ಬೆಳೆಯುವ ಹವಣಿಕೆಯಲ್ಲಿ ಇದ್ದುದು ಗಮನಕ್ಕೆ ಬಂತು. ಕತ್ತಿಯಾಡಿಸಿ ಅದರ ಕಾಂಡ ಮುರಿದು ತೆಗೆದಾಗ ನನ್ನ ಮುದ್ದಿನ ಕರಿ ಕೆಸುವಿನ ಎಲೆಯೊಂದು ದಂಟಿನೊಂದಿಗೆ ಮುರಿದು ಹೋಯಿತಲ್ಲ.
ಚಿಂತೆಯಿಲ್ಲ, ನಾಳೆ ಕೆಸುವಿನ ಎಲೆಯ ಚಟ್ಣಿ ಮಾಡಿದರಾಯಿತು. ಒಂದೆಲೆ ಸಾಲದು, ಇದು ಬರೇ ಪುಟ್ಟದು, ಇಂತಹ ಕಿರುಗಾತ್ರದ ಕಾಡು ಕೆಸು ಅಲ್ಲಲ್ಲಿ ಪೊದರಿನಂತೆ ಹಬ್ಬಿಕೊಂಡಿವೆ. ಐದಾರು ಕಾಡು ಕೆಸು ಎಲೆಗಳನ್ನು ಚಿವುಟಿ, ನಲ್ಲಿ ನೀರಿನಲ್ಲಿ ಕಾಲು ತೊಳೆದು ಒಳ ಬಂದು ಕೆಸುವಿನ ಸೊಪ್ಪುಗಳನ್ನು ತರಕಾರಿ ಬುಟ್ಟಿಯೊಳಗಿಟ್ಟು ಚಟ್ಣಿ ಅಡುಗೆಯ ವಿಧಾನಕ್ಕಾಗಿ ಜಯಾ ಶೆಣೈ ಬರೆದ ಅಡುಗೆ ಪುಸ್ತಕದ ಅವಲೋಕನ..
ಕೆಸುವಿನೆಲೆಗಳನ್ನು ತೊಳೆದು ಒರೆಸಿ ಇಡುವುದು.
ಪುಟ್ಟದಾದ ಐದಾರು ಎಲೆಗಳು ನಮ್ಮದು.
ಚಿಕ್ಕದಾಗಿ ಹೆಚ್ಚಿ ತುಸು ನೀರೆರೆದು ಉಪ್ಪು ಹಾಗೂ ಹುಣಸೆ ಹಣ್ಣಿನ ರಸ ಎರೆದು ಬೇಯಿಸುವುದು.
ಹಣಸೆ ಹಣ್ಣು ನೆಲ್ಲಿಕಾಯಿ ಗಾತ್ರದಲ್ಲಿರಲಿ.
ಎಂದಿನಂತೆ ಕುಕ್ಕರ್ ಒಳಗೆ ತುಂಬಿ ಒಂದು ಸೀಟಿ ಹಾಕಿಸಿದ್ದಾಯ್ತು.
ಅರ್ಧ ತೆಂಗಿನಕಾಯಿಯ ಅರ್ಧದಷ್ಟು ಕಾಯಿತುರಿ ಇರಲಿ.
ಒಣ ಕೊಬ್ಬರಿ ಬೇಡ.
ಐದಾರು ಒಣಮೆಣಸು,
ಒಂದು ದೊಡ್ಡ ಚಮಚ ಕೊತ್ತಂಬರಿ ಹಾಗೂ ಅಷ್ಟೇ ಉದ್ದಿನಬೇಳೆ,
ತುಸು ಎಣ್ಣೆಪಸೆಯಲ್ಲಿ ಹುರಿಯಿರಿ, ಉದ್ದಿನಬೇಳೆ ಹೊಂಬಣ್ಣ ಬರಬೇಕು.
ಬೇಯಿಸಿದ ಸೊಪ್ಪು, ಕಾಯಿತುರಿ, ಹಾಗೂ ಹುರಿದ ಸಾಮಗ್ರಿಗಳನ್ನೆಲ್ಲ ನುಣ್ಣಗೆ ಅರೆಯಿರಿ. ಸೊಪ್ಪು ಬೇಯಲು ಎರೆದ ನೀರಿನಿಂದಲೇ ಅರೆಯಿರಿ. ನೀರು ಜಾಸ್ತಿ ಹಾಕದಿರಿ. ರುಚಿಗೆ ಬೇಕಾದ ಉಪ್ಪು ಹಾಗೂ ಸಿಹಿ ಬೇಕಿದ್ದರೆ ಬೆಲ್ಲವನ್ನೂ ಅರೆಯುವಾಗಲೇ ಹಾಕಿರಿ.
ಬಾಣಲೆಯಲ್ಲಿ ನಾಲ್ಕು ಚಮಚ ತೆಂಗಿನೆಣ್ಣೆ ಎರೆದು ಒಗ್ಗರಣೆ ತಯಾರಿ ಆಗಬೇಕಿದೆ.
ಉದ್ದಿನಬೇಳೆ, ಸಾಸಿವೆ ಹಾಗೂ ಒಣಮೆಣಸಿನ ಚೂರುಗಳು.
ಸಾಸಿವೆಯ ಸಿಡಿ ಸಿಡಿ ಸದ್ದು ನಿಂತಾಗ ಅರೆದ ಅರಪ್ಪನ್ನು ಹಾಕುವುದು. ನೀರಿನಂಶ ಆರುವ ತನಕ ಸೌಟಾಡಿಸಿ.
ಗಟ್ಟಿ ಮುದ್ದೆ ಆದರೆ ಸಾಕು. ಕೆಳಗಿಳಿಸಿ, ಅನ್ನದೊಂದಿಗೆ ಕೂಡಿ ತಿನ್ನಲು ರುಚಿಯಾದ ವ್ಯಂಜನ ನಮ್ಮದಾಯಿತು.
ಆದರೇನಂತೆ, ನಮ್ಮ ಊಟದ ವ್ಯವಹಾರದಲ್ಲಿ ಈ ಕೆಸುವಿನೆಲೆಯ ಚಟ್ಣಿ ಮುಗಿಯಲಿಲ್ಲ.
ನಾಳೆಗೂ ಇಡಬಹುದು, ಆದರೆ " ನಿನ್ನೆಯ ಚಟ್ಣಿ ಬೇಡ.." ಎಂಬ ಮಾತು ಕೇಳಬೇಕಾದೀತು.
ಮುಂಜಾನೆಯ ಚಪಾತಿಗಾಗಿ ಹಿಟ್ಟು ರಾತ್ರಿಯೇ ಕಲಸಿಟ್ಟು ರೂಢಿ, ರಾತ್ರಿಯೂಟಕ್ಕಾಗಿ ಚಟ್ಣಿಯ ಹೂರಣದ ಪರೋಟಾ ಸಿದ್ಧವಾಗಿಬಿಟ್ಟಿತು!
ಪರೋಟಾ ತಿಂದು ಮುಗಿಯಿತು, ಚಟ್ಣಿಯೂ ಖಾಲಿ ಆಯ್ತೆಂದು ಬೇರೆ ಹೇಳಬೇಕಿಲ್ಲ.