Pages

Ads 468x60px

Saturday 22 August 2020

ಜೀಗುಜ್ಜೆ ಉಪ್ಪೇರಿ

 



ತೀರ್ಥ ಅಮಾವಾಸ್ಯೆಯ ಪವಿತ್ರಸ್ನಾನಕ್ಕಾಗಿ ಹಿರಣ್ಯದ ಪವಿತ್ರ ಜಲಧಾರೆಗೆ ತಲೆಯೊಡ್ಡಿ ಮೀಯಲು  ಕೋವಿಡ್ ಮುನ್ನೆಚ್ಚರಿಕೆಯಿದ್ದರೂ ಜನ ನೆರೆದು ಮಿಂದು ಪುನೀತರಾದರು ಎಲ್ಲರೂ ಹೋದ ನಂತರ ನನ್ನದೂ ನೀರ ಪುಳಕ ಸ್ನಾನ ಆಯಿತು ಇರಲಿ ಬಂದಂತಹ ಭಕ್ತ ಮಹನೀಯರಿಂದ ನನಗೆ ಬಸಳೆಜೀಗುಜ್ಜೆಗಳ ಗಿಫ್ಟ್ ಸಿಕ್ಕಿತು.


ಬಲಿತ ಜೀಗುಜ್ಜೆಯಿಂದ ಮಾಡುವಂತಹ ಸಾಂಬಾರ್ ಅತಿ ರುಚಿಕರ ಬೇಗನೇ ಬೇಯುವ ತರಕಾರಿ ಕುಕ್ಕರ್ ಬೇಡವೇ ಬೇಡ.

ಅರ್ಧ ಜೀಗುಜ್ಜೆಯ ಹೋಳುಗಳನ್ನೆಲ್ಲ ಸಾಂಬಾರಿಗೆ ಹಾಕಿದರೆ ತಿಂದು ಮುಗಿಯದು ಚಿಪ್ಸ್ ಮಾಡೋಣ ಕೊರೋನಾ ಸಂತ್ರಸ್ತರಿಗ ಸರಕಾರದ ರೇಷನ್ ಕಿಟ್ ಮೂಲಕ ಕೊಟ್ಟಂತಹ ತೆಂಗಿನೆಣ್ಣೆ, ಸನ್ ಫ್ಲವರ್ ಎಣ್ಣೆಗಳು ಸುಮ್ಮನೇ ಡಬ್ಬದಲ್ಲಿ ಇವೆ ಅದಕ್ಕೂ ದಾರಿ ಕಾಣಿಸದಿದ್ದರೆ ನಮ್ಮ ಅಡುಗೆಮನೆ ವ್ಯವಹಾರ ನಿರರ್ಥಕ.


ಒಂದರ್ಧವನ್ನು ಫ್ರಿಜ್ ಒಳಗೆ ನಾಳೆಗಾಗಿ ತೆಗೆದಿರಿಸಲಾಯಿತು.

ಉಳಿದರ್ಧದ ಅರ್ಧ ಈಗ ಚಿಪ್ಸ್ ಆಗಲಿದೆ.


ಸಿಪ್ಪೆಯನ್ನು ತೆಳ್ಳಗೆ ಹೆರೆದುಗೂಂಜು ಎಂಬ ಮಯಣ ಒಸರುವ ಭಾಗವನ್ನೂ ತೆಗೆದುಎಷ್ಟಾದರೂ ಜೀಗುಜ್ಜೆಯು ಹಲಸಿನಕಾಯಿಯ ತಮ್ಮನಲ್ಲವೇ..  ಮಯಣ ನಿವಾರಣೆಗಾಗಿ ನೀರಿನಲ್ಲಿ ಹಾಕಿ ಇಡುವುದು.


ಚಿಪ್ಸ್ ಅಥವಾ ಉಪ್ಪೇರಿಗಾಗಿ ಇರುವ ಸಾಧನದಲ್ಲಿ ತೆಳ್ಳಗೆ ಕತ್ತರಿಸಿ ಒಂದು ತಟ್ಟೆಯಲ್ಲಿ ಹಾಕಿ ಇರಿಸುವುದು.  


ಬಾಣಲೆಯಲ್ಲಿ ಎಣ್ಣೆಯಿಟ್ಟು ಬಿಸಿಯೇರಿದಾಗ ,

ಎಣ್ಣೆಯಲ್ಲಿ ಹಿಡಿಸುವಷ್ಟೂ ಹಾಕುವುದು.

ನುರಿತ ಪಾಕತಜ್ಞರು ನೇರವಾಗಿ ಎಣ್ಣೆಗೇ ಕತ್ತರಿಸಿ ಹಾಕಬಲ್ಲರು ಅಂತಹ ಸಾಹಸಕ್ಕೆ ನಾನು ಇದುವರೆಗೆ ಕೈ ಹಾಕಿಲ್ಲ.


ಎಣ್ಣೆಗೆ ಹಾಕಿದ ಕೂಡಲೇ ಸೌಟಿನಲ್ಲಿ ಕೆದಕಬಾರದು ಬೇಯಲು ಸ್ವಲ್ಪ ಸಮಯ ಕೊಟ್ಟು ನಂತರ ಕವುಚಿ ಮಗುಚಿ ಹಾಕುತ್ತ ಇದ್ದಂತೆ ಗರಿ ಗರಿಯಾಗಿ ಎದ್ದು ಬಂದಿತೇ,

ಈಗ ಒಂದು ಚಮಚ ಪುಡಿಯುಪ್ಪು ಹಾಗೂ ತುಸು ಇಂಗು ಸ್ವಲ್ಪವೇ ನೀರಿನಲ್ಲಿ ಕರಗಿಸಿ,

 

ಒಂದು ಚಮಚದಷ್ಟು ಉಪ್ಪು ನೀರನ್ನು ಎರೆಯಿರಿ.

ನೀರು ಸಿಡಿಯುವ ಸದ್ದು ನಿಂತಾಗ ತೂತಿನ ಸಟ್ಟುಗದಲ್ಲಿ ತೆಗೆದುಇನ್ನೊಂದು ತೂತಿನ ಡಬರಿಗೆ ಹಾಕುವುದು.


ನನ್ನ ಚಿಪ್ಸ್  ಥರ ಎರಡು ಬಾರಿ ಹಾಕುವಲ್ಲಿಗೆ ಆಯಿತು ರೇಷನ್ ಕಿಟ್ ಸಾಮಗ್ರಿಯಲ್ಲಿ ಬಂದಮತಹ ಮೆಣಸಿನ ಹುಡಿ ಚಿಮುಕಿಸಿ ಡಬ್ಬದಲ್ಲಿ ತುಂಬಿ ಇಟ್ಟಾಯ್ತು.


ಸಂಜೆಯ ಚಹಾ ರುಚಿಕರವಾಗಿತ್ತು ಎಂದು ಬೇರೆ ಹೇಳಬೇಕಾಗಿಲ್ಲ.   ನಮ್ಮ ನಾಯಿಯೂ ಹಾರಿ ಹಾರಿ ತಿಂದಿತು ಇನ್ನೂ ಉಳಿದ ಅರ್ಧ ಜೀಗುಜ್ಜೆಯನ್ನೂ ಹೀಗೇ ಚಿಪ್ಸ್ ಮಾಡಿ ಇಟ್ಟುಕೊಳ್ಳತಕ್ಕದ್ದು ಎಂದು ಸರ್ವಾನುಮತದ ನಿರ್ಣಯ ಆಗಿ ಹೋಯಿತು.


ಉಪ್ಪೇರಿ ಅಚ್ಚ ಕನ್ನಡ ಪದ.  ಇಂತಹ ಉಪ್ಪೇರಿಗಳನ್ನು ನೇಂದ್ರ ಬಾಳೆಕಾಯಿ, ಸಿಹಿಗೆಣಸು, ಬಟಾಟೆ, ಇತ್ಯಾದಿಗಳಿಂದ ಮಾಡಿಕೊಳ್ಳಬಹುದಾಗಿದೆ.  ನಮ್ಮ ಊರ ಕದಳಿ ಬಾಳೆಕಾಯಿ ಕೂಡಾ ಆಗುತ್ತದೆ.






0 comments:

Post a Comment