Pages

Ads 468x60px

Monday 28 September 2020

ಪಚ್ಚ ಬಾಳೆಯ ಹುಳಿ

 


ತೋಟದಲ್ಲಿರುವ ಪಚ್ಚಬಾಳೆ ಗೊನೆ ಹಾಕಿದೆ,  ನೆನಪಿಟ್ಟುಕೊಂಡು ಬಿರುಮಳೆಯ ಅಬ್ಬರ ಕಡಿಮೆ ಆದ ನಂತರ ಈಗ ಬಿಸಿಲುಬಂದಾಗ,  ನೋಡಿಯೇ ಬಿಡೋಣ ಎಂದು ಕತ್ತಿಯೊಂದಿಗೆ ತೋಟದತ್ತ ಹೆಜ್ಜೆ ಹಾಕಿದಾಗ  ಬಾವಲಿಗಳ ಧಾಳಿಗೊಳಗಾದ ಪಚ್ಚಬಾಳೆಸ್ವಾಗತ ನೀಡಿತು.  ಉಳಿದ ಬಾಳೆಕಾಯಿಗಳನ್ನು ಗೊನೆ ಕಡಿದು ತಂದಿದ್ದಾಯ್ತು.


ಹಣ್ಣು ರುಚಿಯಾದರೂ ಎಲ್ಲ ಹಣ್ಣುಗಳನ್ನೂ ತಿಂದು ಮುಗಿಸಲು ನಮ್ಮಿಂದ ಸಾಧ್ಯವಾಗದು ಸಂಕ್ರಾಂತಿಯ ಪೂಜಾ ವಿಧಿಗಳಲ್ಲಿಪಚ್ಚಬಾಳೆ ಬಳಸುವಂತಿಲ್ಲ ದೇವರಿಗೆ ಕದಳೀ ಹಣ್ಣುಗಳೇ ಆಗಬೇಕು ಇರುವ ಬಾಳೆಕಾಯಿಗಳನ್ನು ಅಡುಗೆಗೇ ಬಳಸೋಣ ಅಂಗಡಿ ತರಕಾರಿ ತರಬೇಕಿಲ್ಲ.

ಒಂದು ದಿನ ಸಾಂಬಾರು ಮಾರನೇ ದಿನ ಹುಳಿ ಪಲ್ಯ..  ಸಿಪ್ಪೆಯಿಂದಾನೂ ಪಲ್ಯ ಆಗುತ್ತೆ.   ಹೀಗೆಲ್ಲ ಲೆಕ್ಕ ಹಾಕಿದ್ದಾಯ್ತು.


ಮೊದಲಾಗಿ ಸಾಂಬಾರ್ ಮಾಡೋಣ.


ಎರಡು ಬಾಳೆಕಾಯಿ ಸಾಕು.

ಒಂದು ಹಿಡಿ ತೊಗರಿಬೇಳೆ ಬೇಯಿಸತಕ್ಕದ್ದು.

ಬಾಳೆಕಾಯಿಯ ಹಸಿರು ಸಿಪ್ಪೆ ತೆಳ್ಳಗೆ ಹೆರೆದು ಹೋಳು ಮಾಡುವುದು ದೊಡ್ಡ ಗಾತ್ರ ಆದರೆ ಉತ್ತಮ ಅಂದ ಹಾಗೆಪಚ್ಚಬಾಳೆಯಲ್ಲಿ ಕನರು ಯಾ ಚೊಗರು ಇಲ್ಲ ಆದರೂ ನಾವು ಕತ್ತರಿಸಿದ ಹೋಳುಗಳನ್ನು ನೀರಿನಲ್ಲಿ ಹಾಕಿರಿಸೋಣ ತುಂಬ ಕನರುಇರುವ ಬಾಳೆಕಾಯಿಗಳನ್ನು ಹುಳಿ ಮಜ್ಜಿಗೆ ಎರೆದು ಇಟ್ಟಲ್ಲಿ ಕನರು ಬಿಟ್ಟು ಮಡಿ ಮಡಿಯಾಗಿ ಸಿಗುತ್ತೆ.


 ಬಹು ಬೇಗನೆ ಬೇಯುವ ಪಚ್ಚಬಾಳೆಗೆ ಕುಕರ್ ಬೇಡ ಎರಡು ಮೂರು ನಿಮಿಷದಲ್ಲಿ ಬೆಂದಿರುತ್ತದೆ ತೊಗರಿಬೇಳೆ ಬೆಂದ ನಂತರಅದೇ ಕುಕರಿನಲ್ಲಿ ಬೇಯಿಸಿ ಕುಕರ್ ಸೀಟಿಯೇನೂ ಬೇಡ ಎರಡು ಬಾರಿ ಕುದಿಯುವಲ್ಲಿಗೆ ಬೆಂದಿತೆಂದೇ ತಿಳಿಯಿರಿ.


ಬೇಯಿಸುವ ಹೊತ್ತಿನಲ್ಲಿ ಮಸಾಲೆ ಸಿದ್ಧವಾಗಬೇಕಿದೆ.

ತೆಂಗಿನ ಅರಪ್ಪು ತಯಾರಿ ಹೇಗೆ?


ಎರಡು ಹಿಡಿ ತೆಂಗಿನತುರಿ

ನಾಲ್ಕರಿಂದ ಐದು ಒಣಮೆಣಸು

ಒಂದು ಚಮಚ ಉದ್ದಿನಬೇಳೆ

ಎರಡು ಚಮಚ ಕೊತ್ತಂಬರಿ

ಉದ್ದಿನಕಾಳಿನಷ್ಟು ಇಂಗು

ಸ್ವಲ್ಪ ಜೀರಿಗೆ ಹಾಗೂ ಮೆಂತೆ

ಒಂದೆಸಳು ಕರಿಬೇವು


ಎಣ್ಣೆ ಪಸೆಯಲ್ಲಿ ಹುರಿದು ತೆಂಗಿನತುರಿಯೊಂದಿಗೆ ನೆಲ್ಲಿಗಾತ್ರದ ಹುಳಿ ಚಿಟಿಕೆ ಅರಸಿಣ ಹುಡಿ ಸೇರಿಸಿ ಅರೆಯಿರಿ ಮಸಾಲೆಯತಾಜಾ ಸುವಾಸನೆಗಾಗಿ ನೀರು ತಾಕಿಸದೆ ಅರೆದರೆ ಉತ್ತಮ ಅರಸಿಣ ಹುಡಿಯನ್ನು ತರಕಾರಿ ಬೇಯಿಸುವಾಗಲೂ ಮರೆತುಹೋದರೆ ಕೊನೆಗೆ ಒಗ್ಗರಣೆಯೊಂದಿಗೂ ಹಾಕಬಹುದಾಗಿದೆ ಒಟ್ಟಿನಲ್ಲಿ ರಕ್ತಶುದ್ಧಿಕಾರಕ ಅರಸಿಣವನ್ನು ಮರೆಯಬಾರದು.


ಬೆಂದ ಬೇಳೆ ತರಕಾರಿಗಳೊಂದಿಗೆ ತೆಂಗಿನ ಅರಪ್ಪು ಕೂಡಿಸಿರುಚಿಗೆ ಉಪ್ಪು ಹಾಗೂ ನೀರಿನ ಹೊಂದಾಣಿಕೆ ಮಾಡಿಕೊಳ್ಳತಕ್ಕದ್ದು ಕುದಿಸಿಕರಿಬೇವಿನ ಒಗ್ಗರಣೆ ಕೊಡುವಂತವರಾಗಿನಿಮ್ಮ ಆಯ್ಕೆಗನುಸಾರ ಬೆಳ್ಳುಳ್ಳಿ ಯಾ ಇಂಗು ಒಗ್ಗರಣೆಗೆ ಸೇರಿಸಬಹುದಾಗಿದೆ.


ಪಚ್ಚಬಾಳೇಕಾಯಿಯ  ಸಾಂಬಾರಿನಲ್ಲಿ ಉಣ್ಣುವಾಗ ಜೀಗುಜ್ಜೆಯೆಂಬ ತರಕಾರಿಯಲ್ಲಿ ಉಂಡಷ್ಟೇ ಹಿತಾನುಭವ ದೊರೆತದ್ದುಮಾತ್ರ ಸುಳ್ಳಲ್ಲ!





ಪಚ್ಚಬಾಳೆಯ ಮೇಲಾರ ಮಾಡೋಣ.


ಯಥಾಪ್ರಕಾರ ಎರಡು ಬಾಳೆಕಾಯಿ ಹೆಚ್ಚಿ ಇಡುವುದು.

ಅರ್ಧ ತೆಂಗಿನಕಾಯಿ ತುರಿ ಅವಶ್ಯವಿದೆ ತುರಿಯಿರಿ ಹಾಗೂ ನುಣ್ಣಗೆ ಅರೆಯಿರಿ.

ಎರಡು ಲೋಟ ಸಿಹಿ ಮಜ್ಜಿಗೆ ಇರಲೇಬೇಕುಮೊಸರು ಬೇಡ


ತರಕಾರಿ ಬೇಯಿಸಿ ಆಯ್ತು ಬೇಯಿಸಿದ ನೀರು ಬಸಿದು ಇಟ್ಕೊಳ್ಳಿ.

ಮಜ್ಜಿಗೆ ಎರೆಯಿರಿ.

ತೆಂಗಿನ ಅರಪ್ಪು ಬೆರೆಸಿರಿ.

ಸೌಟಿನಲ್ಲಿ ಹಗುರಾಗಿ ಕಲಕಿ ಅವಶ್ಯವಿದ್ದರೆ ಮಾತ್ರ ತರಕಾರಿ ಬೇಯಿಸಿದ ನೀರು ಎರೆಯಿರಿ.

ರುಚಿಗೆ ಸೂಕ್ತವಾಗುವಂತೆ ಉಪ್ಪು ಹಾಕುವುದು ಹಾಗೂ ಒಮ್ಮೆ ಕುದಿಸುವುದು.

ಕರಿಬೇವುಒಣಮೆಣಸುಗಳಿಂದ ಒಗ್ಗರಿಸುವುದು ಚಿಟಿಕೆ ಅರಸಿಣ ಹಾಕುವುದು.

ಖಾರ ಬೇಕಿದ್ದವರು ತೆಂಗಿನಕಯಿ ಅರೆಯುವಾಗ ಒಂದು ಹಸಿಮೆಣಸು ಹಾಕಿಕೊಳ್ಳಿ.   ಬೇಳೆಕಾಳು ಬೆಲ್ಲ ಬೇಕಿಲ್ಲ



ನಾಲ್ಕು ಬಾಳೆಕಾಯಿಗಳ ಸಿಪ್ಪೆ ಸುಲಿಯಿರಿ,  

ಸಿಪ್ಪೆ ಎಸೆಯಬೇಡಿ ಪಲ್ಯ ಮಾಡೋಣ ಹಸಿರು ನಮ್ಮ ಉಸಿರು ಅನ್ನಿ.


ಸಿಪ್ಪೆಗಳನ್ನು ಪಲ್ಯಕ್ಕೆ ಸೂಕ್ತವಾಗುನಂತೆ ಹೆಚ್ಚಿಕೊಳ್ಳಿ.

ನೀರೆರೆದು ಇಟ್ಟುಕೊಳ್ಳಿ.

ಎರಡು ಚಮಚ ಕಾಯಿ ತುರಿಯನ್ನು ತುಸು ಜೀರಿಗೆ ಹಾಕಿ ರುಬ್ಬಿಕೊಳ್ಳಿ.

ಬಾಣಲೆಯಲ್ಲಿ ಒಗ್ಗರಣೆ ಸಾಹಿತ್ಯಗಳನ್ನು ಉದುರಿಸಿ.

ಸಾಸಿವೆ ಸಿಡಿದ ನಂತರ ಕರಿಬೇವು ಚಿಟಿಕೆ ಅರಸಿಣ ಹಾಕುವುದು.

ನೀರು ಬಸಿದು ಬಾಳೆಕಾಯಿ ಸಿಪ್ಪೆಗಳನ್ನು ತಾಕುವುದು.

ರುಚಿಗೆ ತಕ್ಕಷ್ಟು ಉಪ್ಪು ಬೀಳಲಿ.

ಮಧ್ಯಮ ಉರಿಯಲ್ಲಿ ಬೇಯಲಿ.

ಒಂದೆರಡು ಬಾರಿ ಸೌಟಾಡಿಸಿ.

ಬೇಗನೇ ಬೇಯುವ ಪಚ್ಚಬಾಳೆಯ ಸಿಪ್ಪೆ ಕೂಡಾ ರುಚಿಕರ.

ಅರೆದಿಟ್ಟ ತೆಂಗಿನತುರಿ ಹಾಕಿ ಒಮ್ಮೆ ಮಗುಚುವುದು.

ಪಲ್ಯ ಆಯ್ತು.


ಪಲ್ಯ ಮಾಡುತ್ತಿದ್ದಾಗ ಮೊಸರು ಗೊಜ್ಜಿನ ಐಡಿಯಾ ಹುಟ್ಟಿತು.

ಪಲ್ಯ ಮಾಡ್ಕೊಂಡಿರಾ ತೆಂಕಿನ ತುರಿ ಹಾಕದೇ ಪಲ್ಯವನ್ನು ಆರಲು ಬಿಡಿ ಹೊಂದಿಕೆಯಾಗುವಂತೆ ಮೊಸರು ಎರೆಯಿರಿ.


ಇದೇ ಪ್ರಕಾರವಾಗಿ ಬಾಳೆಕಾಯಿ ಯಾ ಹಣ್ಣು ಕೂಡಾ ಮೊಸರು ಗೊಜ್ಜು ಮಾಡಿ ಉಣ್ಣಬಹುದು.





ಹಣ್ಣುಗಳನ್ನು ವೃತ್ತಾಕಾರದಲ್ಲಿ ಹೆಚ್ಚಿಟ್ಟು,  

ತುಪ್ಪದಲ್ಲಿ ಹುರಿದು,

ತುಪ್ಪದಲ್ಲಿ ಹುರಿಯಲು ಗುಳಿಕಾವಲಿ ಉತ್ತಮ.

ಸಕ್ಕರೆ ಪಾಕ ಮಾಡಿಟ್ಟು,

ಸುವಾಸನೆಗ ಏಲಕ್ಕಿ ಹಾಕಿ,

ಹುರಿದ ಬಾಳೆ ಹಣ್ಣುಗಳನ್ನು ಸಕ್ಕರೆ ಪಾಕದಲ್ಲಿ ನೆನೆಸಿ.

ಬಾಳೆ ಹಣ್ಣಿನ ಜಾಮೂನ್ ಎಂದು ಹೆಸರಿಟ್ಟು ಸವಿಯಿರಿ.


ಉಳಿದಿರುವ ಬಾಳೆಹಣ್ಣುಗಳನ್ನು ಹೀಗೇ ಜಾಮೂನ್ ಮಾಡಿ ಇಟ್ಟುಕೊಳ್ಳತಕ್ಕದ್ದು ಎಂಬಲ್ಲಿಗೆ ನಮ್ಮ ಪಚ್ಚಬಾಳೆ ಗೊನೆ ಮುಗಿದಿದೆ.







0 comments:

Post a Comment