Pages

Ads 468x60px

Saturday 28 August 2021

ಬಣ್ಣದ ಜಾಮ್





  

ತಿಂಗಳ ಹಿಂದೆ ಮನೆಹಿತ್ತಲು ಸ್ವಚ್ಛತಾ ಅಭಿಯಾನದಲ್ಲಿ ಎರಡು ಅನಾನಸ್ ಸಿಕ್ಕಿತ್ತು.   ಕೊನೆಯ ಹಣ್ಣುಗಳು ನನ್ನ ನಿರ್ಲಕ್ಷ್ಯದಿಂದ ಹಾಗೇ ಬಿದ್ದುಕೊಂಡಿವೆ ಇವತ್ತು ಅಡುಗೆ ವ್ಯವಹಾರ ಬೇಗನೆ  ಮುಗಿಯಿತು ಅನ್ನದಾಲ್ಪಲ್ಯ ಇಷ್ಟೇ ಮಾಡಿದ್ದು.    ಪೈನಾಪಲ್ ಯೋಗ್ಯತೆ ಹೇಗಿದೆಯೆಂದು ನೋಡೋಣ.


ಮೊದಲಾಗಿ ಅದರ ಕಿರೀಟ ತೆಗೆದಾಯ್ತು ಚೆನ್ನಾಗಿಯೇ ಇದೆಯೆಂಬ ಸೂಚನೆ ದೊರೆಯಿತು.   ಮೆಟ್ಟುಕತ್ತಿಯಲ್ಲಿ ಕತ್ತರಿಸಿ ಹೋಳು ಮಾಡಿದ್ದೂ ಆಯ್ತು ಥಟ್ ಎಂದು ಹೊಸ ಐಡಿಯಾ ಬಂದಿತು.   ಪಲ್ಯಕ್ಕಾಗಿ ಕತ್ತರಿಸಿದ ಬೀಟ್ರೂಟು ಸ್ವಲ್ಪ ಉಳಿದಿದೆ ಅದನ್ನೂ ಇದನ್ನೂ ಸೇರಿಸಿ ಜಾಮ್ ಮಾಡಬಹುದಲ್ಲ...


ಇನ್ನು ತಡ ಮಾಡುವುದಕ್ಕಿಲ್ಲ ಪೈನಾಪಲ್ ಹೋಳುಗಳೊಂದಿಗೆ ನಾಲ್ಕಾರು ಚಮಚದಷ್ಟು ಬೀಟ್ರೂಟು ಮಿಕ್ಸಿಯಲ್ಲಿ ರೊಂಯ್ರೊಂಯ್ ಎಂದು ತಿರುಗಲಾಗಿ ಕೆಂಪು ವರ್ಣದ ದ್ರಾವಣವಾಗಿ...


ಸೋಸಿದರೆ ಉತ್ತಮ ಜಾಲರಿ ತಟ್ಟೆಗಳಲ್ಲಿ ರಸ ಕೆಳಗಿಳಿಯಲಾರದು.   ನಾನು ತೆಂಗಿನ ಹಾಲು ಸೋಸುವುದು ಅಡುಗೆ ಗಣಪಣ್ಣ ಹೇಳಿಕೊಟ್ಟ ವಿಧಾನದಲ್ಲಿ ಇಲ್ಲಿಯೂ ಅದೇ ತಂತ್ರ ಉತ್ತಮ.


ಸೊಳ್ಳೆ ಪರದೆಯಂತಹ ನೈಲಾನ್ ಚೀಲ ಕಾಯಿಹಾಲು ಹಿಂಡಲೂ ಸುಲಭ ತೊಳೆದು ಒಣಗಿಸಲೂ ರಗಳೆಯಿಲ್ಲ. " ಅಂದಿದ್ದ ಗಣಪಣ್ಣ.   ದೊಡ್ಡ ರಂಧ್ರಗಳಿರುವ ಕಾಟನ್ ಬಟ್ಟೆಯೂ ಆದೀತು.   ಒಟ್ಟಿನಲ್ಲಿ ರಸ ಸುಸೂತ್ರವಾಗಿ ಸಂಗ್ರಹಿಸಲು ಬಂದರಾಯಿತು.


ರಸ ತೆಗೆದಿರಿಸಿ ಚರಟ ಬೇರ್ಪಡಿಸಿ ಆಯಿತು ಚರಟ ಹೆಚ್ಚೇನಿಲ್ಲ ಪುಟ್ಟ ಲಿಂಬೇ ಗಾತ್ರದಷ್ಟೇ ಸಿಕ್ಕಿದ್ದು.

ಇನ್ನು ಅಳೆಯುವುದು ಎರಡು ಲೋಟ ರಸ ದಕ್ಕಿದೆ.  

ಎರಡು ಲೋಟ ಸಕ್ಕರೆ ಅಳೆಯಿರಿ.  

ದಪ್ಪ ತಳದ ಪಾತ್ರೆಗೆ ಹಾಕಿಟ್ಟು ಗ್ಯಾಸ್ ಉರಿಯ ಮೇಲಿರಿಸುವುದು ಮರದ ಸಟ್ಟುಗದಲ್ಲಿ ಕೈಯಾಡಿಸಿ,

ಊಟದ ಸಮಯ ಮಂದಾಗ್ನಿಯಲ್ಲಿರಲಿ.

ಊಟ ಮುಗಿಸಿ ಪಾತ್ರೆಪರಡಿಗಳನ್ನು ತೊಳೆದಿರಿಸಿ ಟೇಬಲ್ ಒರೆಸಿ..


ಇನ್ನೇನು ಮಲಗುವ ಸಮಯ ನನ್ನ ಜಾಮ್ ಏನಾಯಿತು ಎಂದು ನೋಡುವುದಕ್ಕಿಲ್ಲವೇ ಆಹ... ಜೇನಿನಂತಹ ದ್ರಾವಣ ಸ್ಟವ್ ಆರಿಸುವುದು ಸೂಕ್ತ ಆರಿದ ನಂತರ ಜಾಡಿಯಲ್ಲಿ ತುಂಬಿಸೋಣ.


ಮನೆಯಲ್ಲಿ ಮಕ್ಕಳ ಪರಿವಾರ ಇರುತ್ತಿದ್ದರೆ ಎರಡೇ ದಿನದಲ್ಲಿ ಖಾಲಿ ಮಾಡ್ತಿದ್ರು.   ಏನು ಮಾಡೋಣ ಎಲ್ಲರಿಗೂ ಫೋಟೊ ಕಳಿಸಿದ್ದಾಯಿತು.


ಇನ್ನೇನು ಕೃಷ್ಣಜನ್ಮಾಷ್ಟಮಿ ಬರಲಿದೆ,   ಬ್ಲಾಗ್ ಓದುಗರಿಗೆ ಬಣ್ಣದ ಜಾಮ್ ವತಿಯಿಂದ ಶುಭಾಶಯಗಳು.






0 comments:

Post a Comment