Pages

Ads 468x60px

Sunday 5 September 2021

ಕಡಲೆ ಉಸುಲಿ


 


ಏನಾಗಿತ್ತೂ ಅಂದರೆ ರೇಷನ್ ಶಾಪ್ ಉಚಿತ ಕಿಟ್ ಸವಲತ್ತುಗಳಲ್ಲಿ ಕಡಲೆಕಾಳು ಹಾಗೇ ಉಳಿದಿದೆ.   ಮೊದಲಾಗಿದ್ದರೆ ಇಂತಹ ಉಳಿಕೆ ಸಾಮಗ್ರಿಗಳು ಕೆಲಸಗಿತ್ತಿಯರ ಪಾಲು.   ಕೊರೋನಾ ಕಾರಣ ಹಾಗೂ ನಮ್ಮ ಕೇರಳ ರಾಜ್ಯದ ಸರ್ವಸಮಾನತೆಯ ಧರ್ಮದಿಂದಾಗಿ ಕಾರ್ಮಿಕರೇ ಇಲ್ಲವಾಗಿದ್ದಾರೆ ಹೋಗಲಿ ನಮಗೇಕೆ ಬೇಡದ ರಗಳೆ ಈಗ ಕಡಲೆಕಾಳು ಅಡುಗೆಮನೆಯಲ್ಲಿ ಯಾವ ರೂಪಾಂತರ ಹೊಂದಿತೆಂದು ನೋಡೋಣ.


ಇಂತಹ ಕಾಳುಗಳ ಅಡುಗೆಯೆಂದರೆ ದಿನ ಮುಂಚಿತವಾಗಿ ನೀರೆರೆದು ಇಡಬೇಕಾಗಿತ್ತು ನೆನಪಾಗದೇ ಹೋಯಿತು ಈಗ ನನ್ನ ಆಸಕ್ತಿಯ ತಾಣ ಫೇಸ್ ಬುಕ್ ಇತ್ಯಾದಿ ಮಾತ್ರವಲ್ಲದೆ ಕ್ಲಬ್ ಹೌಸ್ ಕೂಡಾ ಸೇರಿದೆ ಕ್ಲಬ್ ಚಟುವಟಿಕೆಗಳ ಕುರಿತು ಇನ್ನೊಮ್ಮೆ ಬರೆಯಲಿದ್ದೇನೆ.


ಕಡಲೆಕಾಳು ನೆನೆಯಬೇಕಾಗಿತ್ತು ಈಗ ರೈಸ್ ಕುಕ್ಕರಲ್ಲಿ ನೀರು ಬಿಸಿ ಬಿಸಿಯಾಗಿ ಇರುವುದರಿಂದ  ಒಂದು ಲೋಟ ಕಡಲೆಕಾಳನ್ನು ತೊಳೆದು ಹಾಕಿ ಮುಚ್ಚಿ ಇಡಲಾಯಿತು ಬೇಯದಂತೆ ಪ್ಲಗ್ ತೆಗೆಯಲಾಯಿತು ಇಂಡಕ್ಷನ್ ಸ್ಟವ್ ಹಾಳಾಗಿದೆ ಕಣ್ರೀ ಅಗತ್ಯಕ್ಕಿರಲಿ ಎಂದು ನೀರು ಕುದಿಸಲು  ರೈಸ್ ಕುಕ್ಕರ್,   ಇಲ್ಲಾಂದ್ರೆ ಗ್ಯಾಸ್ ನಾಲ್ಕೇ ದಿನದಲ್ಲಿ ಮುಗಿದೀತು.


ಅಡುಗೆ ಆಯ್ತು ಊಟವೂ ಮುಗಿಯಿತು ಒಂದರೆ ತಾಸು ಮಲಗಿ ಎದ್ದೂ ಆಯ್ತು.   ಸಂಜೆಗೇನು ತಿಂಡಿ ಎಂದು ಚಿಂತಿಸುತ್ತಲೇ ಒಳಬಂದಾಗ ರೈಸ್ ಕುಕ್ಕರ್ ಒಳಗಿದ್ದ ಕಡಲೆಕಾಳು ಕೈ ಬೀಸಿ ಕರೆಯಿತು.


ಮುಚ್ಚಳ ತೆರೆದಾಗ ಬಿಸಿ ನೀರಿನಲ್ಲಿ ಮಿಂದ ಕಾಳುಗಳು ಹಿಗ್ಗಿ ಉಬ್ಬಿವೆ ಪರವಾಯಿಲ್ಲ ನೀರು ಸಹಿತವಾಗಿ ಕಡಲೆಕಾಳು ಕುಕ್ಕರ್ ಸೇರಿ ಗ್ಯಾಸ್ ಒಲೆಯೇರಿ ಮೂರು ಸೀಟಿ ಹಾಕಿಸ್ಕೊಂಡಿತು ಆರಲಿ.    ಅಂದ ಹಾಗೆ ರುಚಿಗೆ ಬೇಕಾದ ಉಪ್ಪು ಹಾಕಿಯೇ ಬೇಯಿಸುವುದು.


ಒಂದು ದೊಡ್ಡ ನೀರುಳ್ಳಿ ಹೆಚ್ಚಿ ಇಡುವುದು.

ಪಲ್ಯಕ್ಕಾಗಿ ಕಾಯಿ ತುರಿಯುವಾಗ ಸ್ವಲ್ಪ ತೆಂಗಿನ ತುರಿ ತೆಗೆದಿರಿಸಿದ್ದು ಒಳ್ಳೆಯದೇ ಆಯಿತು.


ಕುಕ್ಕರ್ ತಣಿದಿದೆ ಕಾಳು ಬೆಂದಿದೆ.

ಒಂದೊಂದೇ ಕಾಳು ಬಾಯಿಗೆಸೆದು ತಿನ್ನಲು ಮಕ್ಕಳು ಮನೆಯಲ್ಲಿಲ್ಲ ನಮ್ಮ ತಿನಿಸು ಹೇಗಿರಬೇಕು?


ಮಿಕ್ಸಿಯ ಪುಟ್ಟ ಜಾರ್ ಒಳಗೆ ಮೂರು ಸೌಟು ಕಡಲೆಕಾಳು ತುಂಬಿ ಒಂದೇ ಬಾರಿ ಟೊರ್ರ್ ಅನ್ನಿಸಿ,

ಅಂತೆಯೇ ನೀರುಳ್ಳಿ ಚೂರುಗಳೂ ಮಿಕ್ಸಿಯಲ್ಲಿ ಇನ್ನಷ್ಟು ಚಿಕ್ಕ ಚೂರುಗಳಾಗಿ,

ಬಾಣಲೆಯಲ್ಲಿ ಒಗ್ಗರಣೆಗಿಟ್ಟು,

ಸಾಸಿವೆ ಸಿಡಿಸಿ,

ಕರಿಬೇವು ಬೀಳಿಸಿ,

ನೀರುಳ್ಳಿಕಾಯಿತುರಿ ಬೀಳಿಸಿ ಸೌಟಾಡಿಸಿ,

ಚಿಟಿಕೆ ಅರಸಿಣ,

ರುಚಿಗೆ ಸಕ್ಕರೆ ಬೆರೆಸಿ,

ಕಡಲೆಕಾಳಿನ ಮುದ್ದೆಯನ್ನು ಸೇರಿಸಿ.

ಇಲ್ಲಿಗೆ ನಮ್ಮಈ ಸಂಜೆಯ ತಿನಿಸು ಆಗಿಯೇ ಹೋಯ್ತು.

ತಟ್ಟೆಗೆ ಹಾಕಿಕೊಂಡು ಚಹಾಪಾನದೊಂದಿಗೆ ಉಸುಲಿ ತಿಂದು ಮುಗಿಯಿತು.


ಇಂತಹ ಕಾಳುಗಳ ಸೇವನೆ ಆರೋಗ್ಯ ದೃಷ್ಟಿಯಿಂದಲೂ ಉತ್ತಮ.   ವೈದ್ಯರು ಕೊಡುವ ಮಲ್ಟಿ ವಿಟಮಿನ್ ಟಾನಿಕ್ ಇದರ ಮುಂದೆ ಏನೂ ಅಲ್ಲ ಪ್ರೊಟೀನ್ ಸಮೃದ್ಧಿಯಿಂದ ಕೂಡಿರುವ ಕಾಳುಗಳನ್ನು ದಿನವೂ ಸೇವಿಸುತ್ತಲಿರಬೇಕು ರೋಗರುಜಿನಗಳು ಕಣ್ಮುಂದೆ ಹಾಯದಂತೆ ಬದುಕಲು ಕಲಿಯೋಣ.


ಇದೇ ಮಾದರಿಯಲ್ಲಿ ಹಾಗೇನೇ ತಿನ್ನಲು ಕಷ್ಟವೆನಿಸುವ ಇನ್ನಿತರ ಕಾಳುಗಳ ಉಸುಲಿ ಮಾಡಬಹುದಾಗಿದೆ.

ನಿಮ್ಮ ರುಚಿಯ ಆಯ್ಕೆಗನುಸಾರ ಮಸಾಲೆ ಪುಡಿಗಳನ್ನು ಹಾಕಿರಿ.


ಬೇಯಿಸಿದ ಎಲ್ಲ ಕಡಲೆಕಾಳುಗಳು ಉಸುಲಿಯಾಗಿ ಮಾರ್ಪಟ್ಟಿಲ್ಲ ಉಳಿದ ಕಾಳುಗಳು ರಾತ್ರಿಯ ಫಳಾರಕ್ಕೆ ಪರೋಟಾ ಆಗಿವೆ.   ನನ್ನ ರಾತ್ರಿಯ ರೊಟ್ಟಿ ಹೇಗಾಯ್ತು?


ಚಪಾತಿ ಹಿಟ್ಟು ಎಂದಿನಂತೆ ಮಾಡಿ ಇಡುವುದು.

ಕಡಲೆಕಾಳುಗಳು ಮಿಕ್ಸಿಯಲ್ಲಿ ಹುಡಿ ಆಗಲಿ.

ಮಧು ಬೆಂಗಳೂರಿನಿಂದ ತಂದಿದ್ದ ಆರ್ಗಾನಿಕ್ ಬೆಲ್ಲದ ಹುಡಿ ಇದ್ದಿತು ಎರಡು ಚಮಚ ಬೆಲ್ಲದ ಹುಡಿಯನ್ನು ಬೆರೆಸಿನನಗೆ ಬೇಕಿದ್ದ ಎರಡು ಉಂಡೆಅಂದರೆ ಹೂರಣ ಮಾಡಿಕೊಳ್ಳಲಾಯಿತು  ಹೂರಣ ತುಂಬಿ ಲಟ್ಟಿಸಿ ಬೆಣ್ಣೆ ಹಾಕಿ ರೊಟ್ಟಿ ಬೇಯಿಸಲಾಯಿತು.


ತಾಜಾ ತುಪ್ಪ ಮೇಲಿನಿಂದ ಎರೆದು ತಿಂದಾಯ್ತು.

ಅರೆ ಇನ್ನೂ ಸ್ವಲ್ಪ ಬೆಲ್ಲ ಹಾಕಿರುತ್ತಿದ್ದರೆ ಹೋಳಿಗೆ ಯಾ ಒಬ್ಬಟ್ಟು ಅನ್ನಬಹುದಾಗಿತ್ತು ಕಣ್ರೀ...  





0 comments:

Post a Comment