ದಿನವೂ ಮಾಡುವ ಅಡುಗೆಯಲ್ಲಿ ವೈವಿಧ್ಯತೆ ಇರಲೇಬೇಕು. ಒಂದೇ ಮಾದರಿಯ ಸಾಂಬಾರು, ಏಕ ಪ್ರಕಾರದ ತಿಂಡಿತಿನಿಸು ಚೆನ್ನಾಗಿದ್ದರೂ ಸಪ್ಪೆಯೇ, ಮಾಡಲಿಕ್ಕೂ ಔದಾಸೀನ್ಯ ಬಂದೀತು. ನಿನ್ನೆ ಇಡ್ಲಿ ಆಯ್ತು, ಇಡ್ಲಿ ತಿಂದ ದಿನ ಜಡ ಜಾಸ್ತಿ. ರಾತ್ರಿ ಊಟವಾದ ನಂತರ ನಾಳೆಯ ತಿಂಡಿಯೇನು ಎಂಬ ಚಿಂತೆ ಕಾಡಿತು, ಅಕ್ಕಿ ಕೂಡಾ ನೆನೆ ಹಾಕಿಲ್ಲ, ತೆಳ್ಳವು ಮಾಡಬಹುದಿತ್ತು. ಇಡ್ಲಿ ಮಾಡಿದ ಅಕ್ಕಿರವೆಯ ನೆನಪಾಯ್ತು, ಆ ಪ್ಯಾಕೇಟಿನಲ್ಲಿ ಇಡ್ಲಿ ಚಿತ್ರವೂ ಆ ರವೆಯಿಂದ ಇಡ್ಲಿಯನ್ನು ಮಾಡುವ ವಿಧಾನ ಇದ್ದಿತು. ಅಕ್ಕಿ ರವೆಯಿಂದ ನಾಳೆ ಪುಂಡಿ ಮಾಡ್ಬಿಡೋಣ. ಇದೀಗ ಪಾತ್ರೆಗಳನ್ನು ಬದಿಗಿಟ್ಟು ಮಲಗುವ ಸಿದ್ಧತೆ.
ಎಂದಿನಂತೆ ಬೆಳಗಾಯಿತು,
ಅಕ್ಕಿ ರವೆಯನ್ನು 2 ಲೋಟ ಅಳೆದು 3 ಲೋಟ ನೀರು ತೆಗೆದಿರಿಸುವುದು.
ಮೊದಲು ಅಟ್ಟಿನಳಗೆಯಲ್ಲಿ ಅಗತ್ಯ ಪ್ರಮಾಣದ ನೀರೆರೆದು ಕುದಿಯಲಿರಿಸಿ. ಅಟ್ಟಿನಳಗೆ ಅಂದ್ರೆ ಇಡ್ಲಿಪಾತ್ರೆ ಎಂದು ನಾವುತಿಳಿದಿದ್ದೇವೆ.
ದಪ್ಪ ತಳದ ಬಾಣಲೆ ಒಲೆಗೇರಿಸಿ, ತುಸು ತೆಂಗಿನೆಣ್ಣೆ ಎರೆದು ಒಗ್ಗರಣೆ ಸಿಡಿಸಿ, ಕರಿಬೇವು ಇರಲಿ.
ಅಳೆದ ಅಕ್ಕಿ ರವೆ ಹಾಗೂ ನೀರು ಬಾಣಲೆಗೆ ಬೀಳಲಿ.
ಸೌಟಾಡಿಸಿ, ಉಪ್ಪಿಟ್ಟು ಯಾ ರಾಗಿ ಮುದ್ದೆ ತರ ಆಯ್ತು ಅನ್ನಿ.
ಇದೀಗ ಒಂದು ಹಿಡಿ ತೆಂಗಿನತುರಿ ಬೀಳಿಸಿ, ಸೌಟಿನಲ್ಲಿ ಮಿಶ್ರ ಗೊಳಿಸಿ. ಒಲೆ ಆರಿಸಿ, ಬಾಣಲೆ ಕೆಳಗಿಳಿಸಿ.
ಬೇಗನೆ ಆರಲು ಇನ್ನೊಂದು ಪಾತ್ರೆಗೆ ವರ್ಗಾಯಿಸಿ.
ಹದ ಗಾತ್ರದ ಉಂಡೆ ಮಾಡಿಟ್ಟು,
ಅಟ್ಟಿನಳಗೆಯಲ್ಲಿ ನೀರು ಕುದಿಯುತ್ತಿದೆ….
ಉಂಡೆಗಳನ್ನು ಅಟ್ಟಿನಳಗೆಯೊಳಗಿಟ್ಟು, ಮುಚ್ಚಿ 12 ನಿಮಿಷ ಬೇಯಿಸಿ.
ಬಿಸಿ ಬಿಸಿಯಾದ ಅಕ್ಕಿ ಪುಂಡಿ ಜಟ್ ಪಟ್ ಆಗೇ ಹೋಯ್ತು.
ಶುಚಿರುಚಿಯಾದ ಪುಂಡಿಗಳನ್ನು ಇಷ್ಟ ಪಡುವ ಚಟ್ಣಿಯೊಂದಿಗೆ ತಿನ್ನಿರಿ.
0 comments:
Post a Comment