Pages

Ads 468x60px

Friday, 17 February 2023

ತುಂಟಿ ಬಾವಿಗೆ ಬಿದ್ದಳು

 

“  ಒಂದು ನಾಯಿ ಇರಲೇ ಬೇಕು.."

ಯಾಕೆ ಸುಮ್ಮನೆ ನಾಯಿ ಬೆಕ್ಕು ಇಂತಾದ್ದೆಲ್ಲ ನಂಗೆ ಇನ್ನು ಬೇಡ... "

ಹೋಗ್ಲಿ ಬಿಡಿ ಅತ್ತೆಗೆ ನಾಯಿ ಬೇಡಾಂದ್ರೆ ತರೂದು ಬೇಡ.."  ಎಂದಳು ಮೈತ್ರಿ.


ನಾವೆಲ್ಲ ಬೆಂಗಳೂರಿಗೆ ಹೋದ್ಮೇಲೆ ನೀನೂ ಅಪ್ಪನೂ ಇಬ್ಬರೇ ಇರ್ತೀರ ಜೊತೆಗೆ ನಾಯಿ ಇದ್ದರೆ ಉತ್ತಮ..  ಯಾರು ಬಂದ್ರೂನೂ ಬೊಗಳುತ್ತೆ... ಇದೀಗ ಪುಟ್ಟ ಮರಿ ಹೊಂದಿಸಿ ಕೊಳ್ಳಲು ಸುಲಭ." ತರಲು ನಿಶ್ಚಯಿಸಿದ್ದ ಮಗ ಹೀಗಂದ.   ರಸ್ತೆಯಲ್ಲಿ ಅನಾಥವಾಗಿ ಬಿದ್ದುಕೊಂಡಿದ್ದ ನಾಯಿಮರಿಯನ್ನು ನನ್ನ ಮಾವ ಉಳಿಸಿದ್ದಾರೆ... " ಎಂದು ಮಂಜೇಶ್ವರದ ಮಾವನ ಮನೆಯಲ್ಲಿನಾಯಿ ಸುರಕ್ಷಿತವಾಗಿರುವುದನ್ನೂ ತಿಳಿಸಿದ.


ಹಾಗಿದ್ರೆ ಅವರೇ ಸಾಕಿಕೊಳ್ಳಲಿ ಬಿಡು.. "

ಅವರ ಬಳಿ ದೊಡ್ಡ ಜಾತಿಯ ಎರಡು ನಾಯಿ ಉಂಟಲ್ಲ...  ಇದನ್ನು ನಾನು ತರ್ತೇನೆ ಅಂತ ಹೇಳಿಯೂ ಆಗಿದೆ..."

ಹಾಗೆ ವಿಷಯ ಅನ್ನು.. "  ಹೆಣ್ಣುನಾಯಿಯೆಂಬ ಅಸಡ್ಡೆಗೊಳಗಾಗಿ ರಸ್ತೆಯಲ್ಲಿ ಇದ್ದಂತಹ ನಾಯಿಮರಿ  ಮಾನವೀಯಕರುಣೆಯಿಂದ ಉಳಿದಿದೆ ನಾನೇಕೆ ಬೇಡ ಅನ್ನಲಿ...    ಮೈತ್ರಿಯೇ ನಾಯಿಗೆ ತುಂಟಿ ಎಂಬ ನಾಮಕರಣ ಮಾಡಿಟ್ಚು ಬೆಂಗಳೂರಿಗೆ ಹೋದಳು.


ಮರಿ ನಾಯಿ ದೊಡ್ಡದಾಯಿತು.   "ತುಂಟಿ.. ತುಂಟಿ.. " ಅಂದರೆ ಸಾಕು ಎಲ್ಲಿದ್ದರೂ ಓಡಿ ಬರುತ್ತೆ ನಮ್ಮವರು  ಹಲವು ಆಟಪಾಠಗಳನ್ನು ಕಲಿಸುವ ಮೇಸ್ಟ್ರು.   ಚೆಂಡು ದೂರ ಎಸೆದ್ರೂ ಓಡಿ ಹೋಗಿ ತರುತ್ತೆ ಅಂತೂ ನಮಗೂ ಹೊತ್ತು ಕಳೆಯಲು ಸುಲಭ ಸಾಧನ.

ಮನೆಯಲ್ಲಿ ಟೀವಿ ಅದೂ ಇದೂ ಅಂತ ಇದ್ರೂನೂ ನಾವಿಬ್ಬರೂ ಟೀವಿಯನ್ನು ಓಲೈಸುತ್ತ ಕುಳಿತಿರುವವರಲ್ಲ ಟೀವಿ ಮಾಧ್ಯಮ ಬಹಳ ಹಳೆಯದಾಯ್ತು.


ತುಂಟಿ ಹಾಲು ಕುಡಿದು ದೊಡ್ಡದಾಯಿತು ಅದೇಕೋ ತಿಳಿಯದುಬಟ್ಟಲಿಗೆ ಅನ್ನ ಹಾಕಿದ್ದನ್ನು ತಿನ್ನಲೊಪ್ಪದು.   ಒಂದು ದಿನ ಪುಲಾವ್ ಮಾಡಿದ್ದನ್ನು ಹಾಕಿದಾಗ ಗಬಗಬನೆ ತಿಂದಿತು ಎಲ ಇದರ... ನಿನಗೆ ದಿನಾ ಪುಲಾವ್ ಆಗ್ಬೇಕೂ ಅಂತೀಯಾ.. ಸುಮ್ಮನಿರು ನನ್ನಿಂದಾಗದು. "


ರೇಶನ್ ಶಾಪಿನಿಂದ ನಾಲ್ಕು ಪ್ಯಾಕೇಟು ಗೋಧಿ ಹುಡಿ ಬಂದಿತು.   ಚಪಾತಿ ಮಾಡದೇ ವಿಧಿಯಿಲ್ಲ ತುಂಟಿಗೂ ಹಾಕಲಾಗಿ  ಕುಣಿಕುಣಿದು ತಿಂದಳು.

ನಾಯಿಗೆ ದಿನಾ ಚಪಾತಿ ಕೊಟ್ಟರಾಯಿತು..." ಎಂದರು ನಮ್ಮವರು "ಗೋಧಿ ಹುಡಿಯೂ ಮುಗಿಯುತ್ತೆ..."

ದಿನವೂ ಸಂಜೆ ಹಿಟ್ಟು ಕಲಸಿಟ್ಟು ಚಪಾತಿ ಮಾಡಿಟ್ಟು ನಾಯಿಗೂ ಆಯ್ತು ನನಗೂ ರಾತ್ರಿ ಅನ್ನದ ಬದಲು ಚಪಾತಿ ತಿನ್ನುವ ರೂಢಿ ಆರಂಭವಾದದ್ದು ಇಲ್ಲಿಂದಲೇ... ಎಲ್ಲವೂ ನಾಯಿ ಮಹಿಮೆ ಅನ್ನಿ.


ನಾಯಿಗೆ ಹಲವು ಚಟುವಟಿಕೆಗಳನ್ನು ಕಲಿಸುವ ಮೇಸ್ಟ್ರು ಈಗ ತೋಟಕ್ಕೆ ಧಾಳಿಯಿಡುವ ಹಸುಗಳನ್ನು ಓಡಿಸಲು ಕಲಿಸಲು ಮುಂದಾದರು.


ತುಂಟಿಯೂ ಬೊಗಳುತ್ತ ಓಡಿ ಓಡಿ ಹಸುಗಳನ್ನು ಓಡಿಸಲು ಸಿದ್ಧಳಾದಳು ನಮ್ಮವರೂ ಖುಷಿ ಪಟ್ಟರು ಅಂತೂ ನಾಯಿ ತಂದಿದ್ದು ಸಾರ್ಥಕ ಆಯ್ತು ನಾಯಿ ಪುಟ್ಟದಲ್ವೇ ಗಜಗಾಮಿನಿಯರಂತಿದ್ದ ಹಸುಗಳು ಕ್ಯಾರೇ ಮಾಡಲಿಲ್ಲ ಆದರೂ ತುಂಟಿ ಬಿಡಲೊಲ್ಲದು ಬೊಗಳುತ್ತ ಅಟ್ಟುವ ಪ್ರಯತ್ನ ಮಾಡುತಿತ್ತು.   ನಮಗೂ ಹಸುಗಳು ಇಲ್ಲವೇ ಆಡುಗಳು ಬಂದಿವೆ ಎಂದು ತಿಳಿಯುತಲಿತ್ತು


 ಒಂದು ಮುಂಜಾನೆ ತುಂಟಿಗೆ ಚಪಾತಿ ಹಾಕೋಣ ಅಂತ ಹೊರ ಬಂದ್ರೆ ನಾಯಿ ಕಾಣಿಸದು ಪಕ್ಕದ ಮನೆ ಹೇಮಕ್ಕ ಅಂದಿದ್ದು ನೆನಪಾಯ್ತು ದಿನಾ ಬೆಳಗ್ಗೆ ನಮ್ಮ ಮನೆಗೆ ಬರುತ್ತೆ ನಾನೂ ಬಿಸ್ಕತ್ ಕೊಡುವುದಿದೆ.."  


ಹೆಚ್ಚೇನೂ ಚಿಂತಿಸದೆ ನನ್ನ ಇನ್ನಿತರ ಮನೆಕಲಸಗಳ ಬಗ್ಗೆ ಗಮನ ಹರಿಸಿದೆ ಮಧ್ಯಾಹ್ನ ಆದ್ರೂ ತುಂಟಿ ನಾಪತ್ತೆ.    ನಾಯಿಎಲ್ಹೋಯ್ತು ಸ್ವಲ್ಪ ನೋಡ್ತೀರಾ..." ಎಂದು ನಮ್ಮವರ ಮುಂದೆ ಒದರಿದ್ದು ಗೋರ್ಕಲ್ಲ ಮೇಲೆ ನೀರೆರೆದ ಹಾಗಾಯ್ತು.   ಅದು ನಾಯಿಯಲ್ಲವೇ ಎಲ್ಲೋ ತಿರುಗಾಟಕ್ಕೆ ಹೋಗಿರಬೇಕು."   

"ಸರಿ ಹಾಗಿದ್ರೆ.."  ಚಿಂತೆಗಿಟ್ಟುಕೊಂಡಿತು ತುಂಟಿಯು ನಾಯಿಗಳ ಜೊತೆಗೂಡಿ ತಿರುಗುವುದೆಂದರೇನು ಬಸಿರಾಗಿ ಬಂದೀತು.   ನಾಳೆಯೇ ಮಗನಿಗೊಂದು ಫೋನ್ ಮಾಡಿ ಹೇಳುವುದು  ಕೂಡಲೇ ವೆಟರಿನರಿ ಡಾಕ್ಟರರನ್ನು ಭೇಟಿಯಾಗತಕ್ಕದ್ದು ಸುಮ್ಮನೇ ನಾಯಿ ತಂದರಾಗಲಿಲ್ಲ.


ಸಂಜೆ ಆಯ್ತು ನಮ್ಮವರಿಗೊಂದು ಫೋನ್ ಬಂದಿತು ಇವರೂ ಆತುರಾತುರವಾಗಿ ಕಾರಿನಲ್ಲಿ ಹೋದರು ಮತ್ತೊಂದರ್ಧ ಗಂಟೆಯಲ್ಲಿ ಮನೆಗೆ ಬಂದರು ಜೊತೆಯಲ್ಲಿ ತುಂಟಿ!


ಏನಾಯಿತು? "

ಮೊದಲು ನಾಯಿಗೆ ತಿನ್ನಲಿಕ್ಕೆ ಕುಡಿಯಲಿಕ್ಕೆ ಕೊಡು..  ಪಾಪ ಬೆಳಗಿನಿಂದ ಉಪವಾಸ.."

ಹ್ಞಾಂ ಎಲ್ಲಿಗೆ ಹೋಗಿದ್ದು ತುಂಟಿ? "

ಬಾವಿಗೆ ಬಿದ್ದಿತ್ತುಇಲ್ಲೇ ನಮ್ಮ ಆಯುರ್ವೇದ ಡಾಕ್ಟರ ಮನೆ ಬಾವಿಗೆ..."

ಅಯ್ಯೋ ದೇವ್ರೇ..."

ಡಾಕ್ಟರೂ ಕ್ಲಿನಿಕ್ಕಿಗೆ ಹೋಗಿರ್ತಾರೆ ಅವರಿಗೆ ಮಧ್ಯಾಹ್ನವೇ ಯಾರೋ ಸುದ್ದಿ ತಿಳಿಸಿದ್ದರಂತೆ ನಿಮ್ಮ ಬಾವಿಯೊಳಗೆ ನಾಯಿ ಅಂತ.   ಸಂಜೆ ಬಂದು ನೋಡ್ತಾರೇ.. ಇದು ತುಂಟಿ "

ಮತ್ತೇ.."

"ಅವರೂ ಮೇಲೆತ್ತಲು ತುಂಬ ಪ್ರಯತ್ನ ಪಟ್ಟರಂತೆ ಕೈಲಾಗದ ಮೇಲೆ ಕತ್ತಲಾಗುತ್ತ ಬಂತಲ್ಲ ಅಂತ ನನಗೆ ಸುದ್ದಿ ತಿಳಿಸಿದ್ರು. "

ಹಾಗೇ ಮೇಲೆ ಹೋಗುವಾಗ ಬಾಲಕೃಷ್ಣ ಶೆಟ್ಟಿ ಸಿಕ್ಕಿದಅವನು ಇದ್ದದ್ದು ನಮ್ಮ ಪುಣ್ಯ."

ಅವನ ಸಾಹಸದಿಂದ ನಾಯಿ ಮೇಲೆ ಬಂತು.." ವೀಡಿಯೋ ತೆಗೆದಿದ್ದೇನೆ  ಮೇಲೆ ನೋಡು ಈಗ ತುಂಟಿಗೇನಾದ್ರೂ ಕೊಡು.."

ಕೊಟ್ಟಾಯ್ತು ಒಂದು ಲೋಟ ಹಾಲು ಮೂರು ಚಪಾತಿ..."


ವೀಡಿಯೋ ಚಿತ್ರಣ ಮೊಬೈಲಲ್ಲಿ ತೇಲಿ ಬಂತು ಸಂಜೆಗತ್ತಲ ಚಿತ್ರಣ.

 ವೇಳೆಗೆ ಬಾಲಕೃಷ್ಣನೇ ಅಲ್ಲಿಗೆ ಬಂದ ಭಾಗ್ಯದ ನಾಯಿ ಇದು ಹಗ್ಗ  ಕಟ್ಟಿ ಬಾವಿಗೆ ಇಳಿದು ಬುಟ್ಟಿಯಲ್ಲಿ ನಾಯಿಯನ್ನು ಕೂರಿಸಿ ಮೇಲೆ ಕಳಿಸಲಿಕ್ಕೆ ಏನೂ ಕಷ್ಟ ಆಗಲಿಲ್ಲ ಹಂಗೆ ಬಾವಿಯಲ್ಲಿ ನೀರು ಹೇಳುವಷ್ಟೇನೂ ಇಲ್ಲ.  

ಪುನಃ ಹಗ್ಗದ ಸಹಾಯದಿಂದ ನಾನು ಮೇಲೆ ಹತ್ತ ಬೇಕಲ್ಲ ಕೈ ರಟ್ಟೆಯೇ ಸೋತು ಹೋಯ್ತು..."


ಹೌದೂ ನಾಯಿ ಬಾವಿಗೆ ಬಿದ್ದಿದ್ದಾದರೂ ಹೇಗೆ? "  ಇದೊಂದು ಪ್ರಶ್ನೆ ನಮ್ಮನ್ನು ಕಾಡದಿರಲಿಲ್ಲ ಸಾಮಾನ್ಯವಾಗಿ ಹಸುಗಳನ್ನುಮೇಯಲು ಮುಂಜಾನೆಯೇ ಬಿಡುತ್ತಾರೆ ಹಾಗೆ ಬೆಳಗಾಗಬೇಕಾದರೆ ಹಸುಗಳು ತೋಟಕ್ಕೆ ಧಾಳಿಯಿಟ್ಟಿವೆ ಹಸುಗಳನ್ನು ಓಡಿಸುವ ರಭಸದಲ್ಲಿ ನಾಯಿಗೆ ಎದುರಿನ ಬಾವಿ ಕಾಣದೇ ಹೋಗಿದೆ..  ಇಂತಹ ಒಂದು ತೀರ್ಮಾನಕ್ಕೆ  ಬರಬೇಕಾಯಿತು.

ತುಂಟಿಯ ಸ್ವಭಾವದಲ್ಲೂ ಬದಲಾವಣೆ ಬಂದಿದೆ ಈಗ ಯಾವುದೇ ಪಶುಪ್ರಾಣಿ ಬಂದರೂ ಓಂದೆರಡು ಬಾರಿ ಬೊಗಳಿ ಸುಮ್ಮನಿದ್ದು ಬಿಡುತ್ತೆ




ಟಿಪ್ಪಣಿ ಫೆಬ್ರವರಿ ತಿಂಗಳ ಉತ್ಥಾನ ಮಾಸಪತ್ರಿಕೆಯಲ್ಲಿ ಪ್ರಕಟಿತವಾದ ಲಲಿತ ಪ್ರಬಂಧ




0 comments:

Post a Comment