Pages

Ads 468x60px

Sunday, 8 February 2026

ಚಕೋತಾ ರಸರುಚಿ




ತೋಟದಿಂದ ತಾಜಾ ಚಕೋತ ಬಂದಿದೆ.  ರಂಗಣ್ಣ ಕೊಯ್ದು ತಂದಿಟ್ಟದ್ದು.

ಸಿಪ್ಪೆ ಬಿಡಿಸಿ, ಎಸಳುಗಳನ್ನು ಬೇರ್ಪಡಿಸಿ ತಿನ್ನುವುದು ಸಾಮಾನ್ಯ ವಿಧಾನ.  

ನಮ್ಮದು ಹೊಸರುಚಿ ಆಗಬೇಡವೇ,  ಮಾಡೋಣ ಕೋಸಂಬರಿ.  ಹೇಗೇ?


ಚಕೋತಾ ಎಸಳು ಬಿಡಿಸಿ, 

ರುಚಿಗೆ ತಕ್ಕಷ್ಟು ಉಪ್ಪು, 

ಖಾರದ ಬಾಬ್ತು ಕಾಳುಮೆಣಸಿನ ಪುಡಿ, 

ಬೇಕಿದ್ದರೆ ನಿಂಬೆ ರಸ,

ಇದ್ದರೆ ಕೊತ್ತಂಬರಿ ಸೊಪ್ಪು,

ಪುಟ್ಟದೊಂದು ಒಗ್ಗರಣೆ…

ಇಷ್ಟಾದರೆ ಕೋಸಂಬರಿ ಆಯಿತು.


ಈಗ ಚಕೋತಾ ತಂಬುಳಿ ಮಾಡೋಣ.

ಚಕೋತಾ ಎಸಳುಗಳನ್ನು ಸೊಗಸಾಗಿ ಬಿಡಿಸುವುದು ಅವಶ್ಯವಿದೆ.

ಉಳಿದಂತೆ ಕಾಯಿತುರಿ,  ಸಿಹಿಮಜ್ಜಿಗೆ ಯಾ ಸಿಹಿ ಮೊಸರು,  ಹುರಿದ ಜೀರಿಗೆ, ಕಾಳುಮೆಣಸು, ರುಚಿಗೆ ಉಪ್ಪು ಕೂಡಿ ನುಣ್ಣಗೆ ಅರೆಯಿರಿ.   ಒಗ್ಗರಣೆಯೊಂದಿಗೆ ಎಸಳುಗಳನ್ನು ಬೆರೆಸುವಲ್ಲಿಗೆ ತಂಬುಳಿ ಸಿದ್ಧವಾಯಿತು.  ಕುದಿಸುವುದೂ ಬೇಡ, ನಾಳೆಗೆ, ರಾತ್ರಿಗೆ ಇಡುವುದಕ್ಕೂ ಇಲ್ಲ.

ಇನ್ನೀಗ ಚಕೋತಾ ಸಿಪ್ಪೆ ಉಳಿದಿದೆ.  ಅದನ್ನೂ ಸವಿರುಚಿಯಾಗಿಸೋಣ.

ಚಕೋತಾ ಸಿಪ್ಪೆ ತುಂಬ ಕಹಿ,  ಕಹಿ ತೆಗೆಯೋಣ.

ಹಸಿರು ಬಣ್ಣದ ಸಿಪ್ಪೆ ಹೆರೆದು ತೆಗೆಯಿರಿ, ಬೆಳ್ಳಗಿನ ತಿರುಳು ಮಾತ್ರ ನಮಗೆ ಸಾಕು,  ಕತ್ತರಿಸಿ ಚೆನ್ನಾಗಿ ಬೇಯಿಸಿ, ನೀರು ಬಸಿದು, ತಿರುಳನ್ನೂ ಹಿಂಡಿ ಇಟ್ಟುಕೊಳ್ಳಿ.

ಒಗ್ಗರಣೆಗಿಟ್ಟು,  ಉಪ್ಪು ಹುಣಸೆ ರಸ, ಬೆಲ್ಲ ಹಾಗೂ ನೀರು ಎರೆದು ಕುದಿಸಿದ ದ್ರಾವಣಕ್ಕೆ ಹಿಂಡಿ ಇರಿಸಿದ ಚಕೋತಾ ಸಿಪ್ಪೆಯ ಚೂರುಗಳನ್ನು ಸೇರಿಸುವಲ್ಲಿಗೆ ಗೊಜ್ಜು ಸಿದ್ಧವಾಗಿದೆ.

ಈ ಗೊಜ್ಜು ಇನ್ನೂ ಪರಿವರ್ತಿತವಾಗಲಿದೆ.  ಖಾರ ಬೇಕಿದ್ದರೆ ಮೆಣಸ್ಕಾಯಿ,  ಸಿಹಿ ಸಾಕು ಎಂದಿದ್ದರೆ ಸಾಸಮೆಯೂ ಆಗುತ್ತದೆ.

ತೆಂಗಿನ ತುರಿಯೊಂದಿಗೆ ಸಾಸಿವೆ, ಬೆಲ್ಲ, ಹಸಿ ಮೆಣಸು ಅರೆದು, ಸಿಹಿ ಮಜ್ಜಿಗೆ ಎರೆಯುವಲ್ಲಿಗೆ ಸಾಸಮೆ ಬಂದಿದೆ.

ಎಳ್ಳು ಹುರಿದು, ಸಾಂಬಾರ ಮಸಾಲೆ ಹಾಗೂ ತೆಂಗಿನ ತುರಿ ಅರೆದು ಕೂಡುವುದು.  ಬೆಲ್ಲ ಹಾಕಲೇ ಬೇಕು.  ಚೆನ್ನಾಗಿ ಕುದಿಸಿ, ಕರಿಬೇವಿನ ಒಗ್ಗರಣೆ ಬೀಳಲೇ ಬೇಕು,  ಒಗ್ಗರಣೆಗೂ ತೆಂಗಿನೆಣ್ಣೆಯೇ ಆಗಬೇಕು.  ಇದೀಗ ಮೆಣಸ್ಕಾಯಿ.

ಬೇಯಿಸಿದ ಸಿಪ್ಪೆಯನ್ನು ತಂಬುಳಿಯಾಗಿಸುವುದೂ ನಮ್ಮ ಕೈಯಲ್ಲಿ ಇದೆ ಎಂದು ಬೇರೆ ಹೇಳಬೇಕಿಲ್ಲ.


ತಂಬುಳಿ ಊಟಕ್ಕೆ ತುಂಬಾ ತಂಪಾಗಿರುತ್ತದೆ ಮತ್ತು ಜೀರ್ಣಕ್ರಿಯೆಗೆ ರಾಮಬಾಣ. ಬಿಸಿ ಅನ್ನದ ಜೊತೆ ಊಟ ಮಾಡಲು ಇದು ತುಂಬಾ ರುಚಿ.

ಚಕೋತದಲ್ಲಿ ನಾರಿನಂಶ ಹೆಚ್ಚಿರುವುದರಿಂದ, ವಯಸ್ಸಾದಂತೆ ಕಾಡುವ ಮಲಬದ್ಧತೆಯಂತಹ ಸಮಸ್ಯೆಗೆ ಸೂಕ್ತ ಮನೆಮದ್ದು.

ವಿಟಮಿನ್ ಸಿ ಹೇರಳವಾಗಿದೆ. ಇದು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಇದರಲ್ಲಿರುವ ಪೊಟ್ಯಾಶಿಯಂ ರಕ್ತದೊತ್ತಡವನ್ನು ಹತೋಟಿಯಲ್ಲಿಡಲು ಸಹಾಯಕ.


 



Saturday, 24 January 2026

ಚಿತ್ರ ಕವನ




 

ಏನೋ ಕೊರೋನಾ ಅಂತೆ

ಯಾರನ್ನೂ ಮುಟ್ಟಬಾರದಂತೆ

ಶಾಲೆಗೆಂತು ಹೋಗಲಿ

ಗೆಳೆಯರಿಲ್ಲ ಆಟವಿಲ್ಲ

ಪಾಠ ಓದು ಇಲ್ಲ

ಮೊಬೈಲು ಪಾಠಪಟ್ಟಿ ಓದಲೆಂತು

ತಿಳಿಯಲಾರೆ ಹೇಳಲಾರೆ

ಅಕ್ಕಾ, ಕಾಣೆ ನಾನು ಮೊಬೈಲು



Friday, 16 January 2026

ಅಡುಗೆ ~ ಆರೋಗ್ಯ




 

ಅಡುಗೆಯಲ್ಲಿ ಆರೋಗ್ಯಪಾಲನೆ, ಇದು ಗೃಹಿಣಿಯ ಕರ್ತವ್ಯ.  ಗಂಡಿನೊಂದಿಗೆ ಸಮಾನತೆ ಹೊಂದಿರುವ ಮಹಿಳೆ ಹೊರಗೂ ಒಳಗೂ ದುಡಿಯುವವಳಾಗಿದ್ದಾಳೆ.  ಒತ್ತಡದ ಜೀವನಶೈಲಿಯಿಂದಾಗಿ ಶುಚಿರುಚಿಯಾಗಿ ಅಡುಗೆ ಮಾಡಿ ಇಡುವುದರಲ್ಲಿಯೂ ಪ್ರಾವೀಣ್ಯತೆ ಇರಲೇ ಬೇಕು.  ಹೀಗಿರುವಾಗ ಕೆಲವು ಮೂಲಭೂತ ಸೌಕರ್ಯಗಳನ್ನು ನೋಡಿಕೊಳ್ಳೋಣ.


ಕುಡಿಯುವ ನೀರು:

ನೀರನ್ನು ಸ್ವಚ್ವವಾದ ಸ್ಟೀಲ್ ಯಾ ತಾಮ್ರದ ತಂಬಿಗೆಯಲ್ಲಿ ಶೇಖರಿಸಿ ಇಡುವವರಾಗಿ.  ಮಣ್ಣಿನ ಹೂಜಿ ಅತ್ಯುತ್ತಮ.  ಪ್ಲಾಸ್ಟಿಕ್ ಜಾಡಿ ಯಾ ಬಾಟಲ್ ಸರ್ವಥಾ ಕೂಡದು.


ಪಾತ್ರೆಗಳೇ ಪ್ರಮುಖ ಶತ್ರುಗಳು:

ಇಂದು ಪ್ರತಿ ಮನೆಯಲ್ಲೂ ರಾರಾಜಿಸುತ್ತಿರುವ 'ನಾನ್-ಸ್ಟಿಕ್' (Non-stick) ತವಾಗಳು ಮತ್ತು ಅಲ್ಯೂಮಿನಿಯಂ ಕುಕ್ಕರ್‌ಗಳು ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಇವು ಅತಿಯಾಗಿ ಬಿಸಿಯಾದಾಗ ಆಹಾರದೊಂದಿಗೆ ರಾಸಾಯನಿಕಗಳನ್ನು ಬೆರೆಸುತ್ತವೆ, ಇದು ದೀರ್ಘಕಾಲದಲ್ಲಿ ಕ್ಯಾನ್ಸರ್ ಮತ್ತು ಹಾರ್ಮೋನ್ ಸಮಸ್ಯೆಗಳಿಗೆ ದಾರಿಯಾಗಬಹುದು.

ಪರಿಹಾರವೇನು?

ನಮ್ಮ ಬೇರುಗಳತ್ತ ಮರಳುವುದೇ ಇದಕ್ಕೆ ಏಕೈಕ ಪರಿಹಾರ.

• ಮಣ್ಣಿನ ಪಾತ್ರೆ: ಇದು ಪ್ರಕೃತಿಯ ಕೊಡುಗೆ. ಇದರಲ್ಲಿ ಅಡುಗೆ ಮಾಡಿದರೆ ಆಹಾರದ ಪೋಷಕಾಂಶಗಳು ಶೇ.೧೦೦ ರಷ್ಟು ಉಳಿಯುತ್ತವೆ.

• ಕಬ್ಬಿಣದ ಪಾತ್ರೆ (Cast Iron): ಇವುಗಳಲ್ಲಿ ಅಡುಗೆ ಮಾಡುವುದರಿಂದ ದೇಹಕ್ಕೆ ನೈಸರ್ಗಿಕವಾಗಿ ಕಬ್ಬಿಣದ ಅಂಶ ದೊರೆಯುತ್ತದೆ, ಇದು ರಕ್ತಹೀನತೆಯನ್ನು ತಡೆಯಲು ಸಹಕಾರಿ.

• ಹಿತ್ತಾಳೆ ಮತ್ತು ಕಂಚು: ರೋಗನಿರೋಧಕ ಶಕ್ತಿ ಹೆಚ್ಚಿಸಲು ಇವು ಅತ್ಯುತ್ತಮ.


ಪ್ಲಾಸ್ಟಿಕ್ ಮುಕ್ತವಾಗಲಿ:

ಬಿಸಿ ಆಹಾರವನ್ನು ಪ್ಲಾಸ್ಟಿಕ್ ಡಬ್ಬಗಳಲ್ಲಿ ಹಾಕಿಡುವುದು ಅಥವಾ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕುಡಿಯುವುದು ವಿಷ ಸೇವನೆಗೆ ಸಮ. ಇದರ ಬದಲಿಗೆ ಸ್ಟೀಲ್, ಗಾಜು ಅಥವಾ ಪಿಂಗಾಣಿ ಪಾತ್ರೆಗಳನ್ನು ಬಳಸುವುದು ಸುರಕ್ಷಿತ. ಹಾಗೆಯೇ, ಅಡುಗೆಗೆ ಬಳಸುವಾಗ ರಿಫೈನ್ಡ್ (Refined) ಎಣ್ಣೆಯ ಬದಲು 'ಗಾಣದ ಎಣ್ಣೆ', ಬಿಳಿ ಸಕ್ಕರೆಯ ಬದಲು 'ಬೆಲ್ಲ' ಮತ್ತು ಪುಡಿ ಉಪ್ಪಿನ ಬದಲು 'ಕಲ್ಲುಪ್ಪು' ಬಳಸಿದರೆ ಅರ್ಧದಷ್ಟು ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ.

ಮುಕ್ತಾಯ:

ಬದಲಾವಣೆ ರಾತ್ರೋರಾತ್ರಿ ಸಾಧ್ಯವಿಲ್ಲದಿರಬಹುದು. ಆದರೆ, "ಆರೋಗ್ಯವೇ ಭಾಗ್ಯ" ಎಂಬ ಮಾತು ಸತ್ಯವಾಗಬೇಕಾದರೆ, ನಮ್ಮ ಬದಲಾವಣೆ ಅಡುಗೆಮನೆಯಿಂದಲೇ ಆರಂಭವಾಗಲಿ. ಇಂದೇ ಒಂದು ನಾನ್-ಸ್ಟಿಕ್ ಪಾತ್ರೆಯನ್ನು ಅಥವಾ ಪ್ಲಾಸ್ಟಿಕ್ ಡಬ್ಬವನ್ನು ಹೊರಹಾಕಿ, ಆರೋಗ್ಯಕರ ಆಯ್ಕೆಯನ್ನು ಅಳವಡಿಸಿಕೊಳ್ಳೋಣ.



Thursday, 1 January 2026

ಬಾನಂಚಿನ ಭರವಸೆ





ಗೆರೆಗಳು 

ನಿರಾಡಂಬರ ಚೆಲುವು

ಆಹ ಬೆಳ್ಳಿ ಕೂದಲ ನಲಿವು

ಸೀರೆಯಲ್ಲಿದೇ ನಮ್ಮ ಒಲವು

ಮುಡಿಯ ತುಂಬ ಮಲ್ಲಿಗೆ

ಕಣ್ಣಲೊಂದು ಹೂ ನಗೆ