ಕಾಸರಗೋಡಿನವರಾದ ನನ್ನ ವಯೋಮಾನದವರು ಕಲಿತದ್ದು ಕನ್ನಡ ಮಾಧ್ಯಮದಲ್ಲಿ. ನನ್ನ ಹೈಸ್ಕೂಲು ಶಿಕ್ಷಣವೂ ಕನ್ನಡ ಮಾಧ್ಯಮದಲ್ಲಿ ಮುಗಿಯಿತು. ಪ್ರಥಮ ಶ್ರೇಣಿಯಲ್ಲಿ ಪಾಸೂ ಆಯಿತು. ಆನಂದಿತರಾದ ನನ್ನ ತಂದೆಯವರು ಕಾಸರಗೋಡು ಸರಕಾರೀ ಕಾಲೇಜಿನಲ್ಲಿ ವಿಜ್ಞಾನ ಹಾಗೂ ಗಣಿತದಲ್ಲಿ ಪ್ರೀ ಡಿಗ್ರೀ ತರಗತಿಗೆ ಸೇರಿಸಿಯೇ ಬಿಟ್ಟರು.
ಒಂದನೇ ತರಗತಿಯಿಂದ ಹತ್ತರ ತನಕ ಕನ್ನಡದಲ್ಲೇ ಉಸಿರಾಡುತ್ತಿದ್ದ ವಿದ್ಯಾರ್ಥಿಯಾಗಿದ್ದ ನನಗೆ ಕಾಲೇಜಿನ ಇಂಗ್ಲಿಷ್ ಮಾಧ್ಯಮ ತಲೆಯೊಳಗೆ ಇಳಿಯಲೇ ಇಲ್ಲ. ಶೂನ್ಯ ಸಂಪಾದನೆಯೇ ಗತಿಯಾಗುವ ಭಯ ಉಂಟಾದಾಗ, ಅಪ್ಪನೇ ಗುರುವಾಗಿ, ರಸಾಯನಶಾಸ್ತ್ರ, ಗಣಿತದ ತ್ರಿಕೋನಮಿತಿ ಪಾಠ ಸುಲಭವೆಂದು ತಿಳಿಸಿಕೊಟ್ಟರು. ಕನ್ನಡ ವ್ಯಾಕರಣವೆಂದರೆ ಕಬ್ಬಿಣದ ಕಡಲೆಯೆಂದು ತಿಳಿದಿದ್ದೆ, ಅಲ್ಲಿಯೂ ಸುಲಭ ಸೂತ್ರಗಳನ್ನು ತಂದೆಯವರು ತಿಳಿಸಿ ಕೊಟ್ಟರು. ಮನೆಯೆ ಮೊದಲ ಪಾಠಶಾಲೆ, ತಂದೆತಾಯಿ ಮೊದಲ ಗುರುಗಳು.
ಒಂದನೇ ತರಗತಿ ಮೊದಲ್ಗೊಂಡು ಡಿಗ್ರಿ ಕೊನೆಯ ಹಂತದವರೆಗೆ ಅಗಣಿತ ತಾರಾಗಣದಂತೆ ಅಧ್ಯಾಪಕರು ಎದುರಾಗುತ್ತಾರೆ. ಎಲ್ಲರನ್ನೂ ಭಯಭಕ್ತಿಯಿಂದ ಕಾಣುವ ಶ್ರದ್ಧೆ ನಮ್ಮದು. ಪ್ರೊ. ಶ್ರೀಕೃಷ್ಣ ಭಟ್ಟರು ನಮ್ಮ ಎರಡನೇ ವರ್ಷದ ಡಿಗ್ರಿ ತರಗತಿಗೆ ರಾಘವಾಂಕನ ಹರಿಶ್ಚಂದ್ರ ಕಾವ್ಯ ಸಂಗ್ರಹ ಎಂಬ ಪುಸ್ತಕವನ್ನು ತಲಸ್ಪರ್ಶಿಯಾಗಿ ಬೋಧಿಸಿದವರಾಗಿದ್ದಾರೆ. ಹರಿಶ್ಚಂದ್ರ ಕಾವ್ಯ ಈಗಲೂ ನನ್ನ ಬಳಿ ಇದೆ.
ಪದವಿ ಪಡೆದ ನಂತರ ಪ್ರೊ. ಶ್ರೀಕೃಷ್ಣ ಭಟ್ಟರು “ ಬಾ, ಕನ್ನಡ ಎಂ. ಎ. ಕ್ಲಾಸಿಗೆ ಸೇರಿಕೋ. “ ಎಂದು ಆಹ್ವಾನಿಸಿದ್ದರು. ಆದರೆ ನನಗೇಕೋ ಸಾಧ್ಯವಾಗದೇ ಹೋಯಿತು.
ಅವರ ಹಳೆ ವಿದ್ಯಾರ್ಥಿಗಳು ಸೇರಿ ಇಳಿವಯಸ್ಸಿನಲ್ಲಿ ಸನ್ಮಾನಿಸಲು ಹೊರಟಿರುವುದು ಸಂತಸದ ವಿಚಾರ. ನನ್ನದೂ ಒಂದು ಕಿರುಕಾಣಿಕೆ ಇಲ್ಲಿ ಬಂದಿದೆ.
ರಾಘವಾಂಕನ ಪ್ರಸಿದ್ಧ ಕೃತಿ ನಮಗೆ ಕನ್ನಡ ಪಠ್ಯವಾಗಿ ದೊರೆತಿದ್ದು ನಮ್ಮ ಭಾಗ್ಯ ವಿಶೇಷವೇ ಸರಿ. ಹರಿಶ್ಚಂದ್ರನ ಕತೆ ತುಂಬ ಹಳೆಯದು. ಅದರಲ್ಲೂ ವಸಿಷ್ಠ ವಿಶ್ವಾಮಿತ್ರರ ಸಂವಾದವೂ, ಕೊನೆಯಲ್ಲಿ ಹರಿಶ್ಚಂದ್ರ ಮಾತಿಗೆ ಬದ್ಧನಾಗಿ ರಾಜ್ಯ ಬಿಟ್ಟು ತೊಲಗುವ ಪ್ರಸಂಗದ ವರ್ಣನೆ ಈಗಲೂ ಮನದಲ್ಲಿ ಉಳಿದಿದೆ. “ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ” ಈ ಸಾಲುಗಳು ಮರೆಯಲಾಗದು. ಪ್ರೊ. ಶ್ರೀಕೃಷ್ಣ ಭಟ್ಟರ ಪಾಠದ ಶೈಲಿಯೇ ಅಂತಹುದು.
ಟಿಪ್ಪಣಿ:
ಈ ಕಿರು ಬರಹ, ಬೃಹತ್ ಹೊತ್ತಗೆಯಲ್ಲಿ ಸೇರಿಕೊಂಡಿದೆ, ಬರೆಯಲು ಉತ್ತೇಜಿಸಿದ ಗೆಳತಿ, ಡಾ. ಮಹೇಶ್ವರಿಗೆ ಕೃತಜ್ಞತೆಗಳು.