ಇಬ್ಬರು ಕಟ್ಟಾಳುಗಳೊಂದಿಗೆ ನಮ್ಮೆಜಮಾನ್ರು ತೋಟಕ್ಕೆ ಹೋಗಿದ್ದರು. ಹಳೆಯದಾದ ಒಂದು ಮಾವಿನ ಮರ ಸತ್ತಿದೆ, ಅದರ ವಿಲೇವಾರಿ ವಹಿವಾಟು ಆಗ್ಬೇಕಾಗಿತ್ತು ಅಷ್ಟೇ. ಆ ಹೊತ್ತಿಗೇ ಮಗನ ಫೋನ್ ಕಾಲ್, " ಅಪ್ಪ ಎಲ್ಲೀ ?"
" ತೋಟದಲ್ಲಿ... ಅದೇನೂಂದ್ರೆ ಉದ್ದ ಮಾವಿನಮರ ಹೋಗಿಬಿಟ್ಟಿತು.. ಕಡಿದು ಕೊಡುವುದಂತೆ ಇನ್ನು "
" ಹ್ಞ.. ಉದ್ದ ಮಾವಿನಹಣ್ಣು ಇನ್ನು ಇಲ್ವಾ ... ಎಂಥ ಪರಿಮಳದ ಹಣ್ಣೂ "
ಅಡ್ಡಬೊಡ್ಡನಂತಿದ್ದ ಮಾವಿನಮರದ ಹಣ್ಣು ತೋತಾಪುರಿ ಮಾವಿನಂತೆ ಉದ್ದವಾಗಿದ್ದಿತು ಹೊರತು ಮರವೇನೂ ತಾಳೆಮರದಂತಿದ್ದಿರಲಿಲ್ಲ, ಹಣ್ಣು ಕೂಡಾ ಸಿಹಿಯಾಗಿ ಜೀರಿಗೆ ಪರಿಮಳ ಇದ್ದಿತು. ಇನ್ನಿತರ ಕಾಟ್ಟು ಮಾವಿನ ಹಣ್ಣುಗಳ ಮುಂದೆ ಈ ಹಣ್ಣು ರಾಜನಂತಿತ್ತು.
" ಏನು ಮಾಡೂದು, ಅದರ ಅಕ್ಕಪಕ್ಕ ಅಂಥದ್ದೇ ಮಾವಿನ ಸಸಿ ಉಂಟಲ್ಲ, ಅದರ ಗೊರಟು ಬಿದ್ದು ಹುಟ್ಟಿದ್ದು.. ಯಾವಾಗ್ಲಾದ್ರೂ ಫಲ ಕೊಟ್ಟೀತು, ನೀ ಚಿಂತೆ ಮಾಡ್ಬೇಡ "
ಮಾತು ಮುಗಿಸಿ ಇನ್ನಿತರ ಕೆಲಸಕಾರ್ಯಗಳಲ್ಲಿ ತೊಡಗಿದ್ದಂತೆ ಮದ್ಯಾಹ್ನವೂ ಆಯಿತು. ನಮ್ಮವರೂ ತೋಟದಿಂದ ಬಂದರು. ಕೆಲಸದಾಳುಗಳೂ ಬಂದರು. ತಲೆಯಲ್ಲಿ ಹಲಸಿನಹಣ್ಣುಗಳ ಹೊರೆ. ನಮ್ಮ ಖರ್ಚಿಗೆಂದು ಅರ್ಧ ಹಣ್ಣು ಇರಿಸಿಕೊಂಡು ಉಳಿದ ಹಲಸುಗಳನ್ನು ತೋಟದಿಂದ ಹೊತ್ತು ತಂದ ಮಲ್ಲರಿಗೇ ಕೊಡೋಣವಾಯ್ತು.
" ಹಲಸಿನ ಹಣ್ಣು ಬಂದಿದೆ, ಏನಾದ್ರೂ ಮಾಡು "
" ಇದು ನಾಳೆ ಚೆನ್ನಾಗಿ ಹಣ್ಣಾದೀತು, ನಾಳೆ ನೋಡುವಾ.."
" ಇದೇ ಕೊನೆಯದು, ಇನ್ನು ಮುಂದಿನ ವರ್ಷಕ್ಕೆ ಆಯ್ತಷ್ಟೆ, ತಿಳೀತಾ..."
" ಹ್ಞೂಂ... ತಿಳೀತು " ಅಂತೂ ಕೊನೆಯ ಹಣ್ಣನ್ನು ತಿನ್ನದೇ ಬಿಸಾಡುವಂತಿಲ್ಲ.
ಸಂಜೆ ಹೊತ್ತಿಗೆ ನಾಡಿದ್ದು ಮಗಳು ಬರಲಿದ್ದಾಳೆಂದು ತಿಳಿಯಿತು. ಅವಳಿಗೂ ಹಲಸಿನ ಹಣ್ಣು ಈ ವರ್ಷ ಇನ್ನೂ ತಿನ್ನಲು ಸಿಕ್ಕಿಲ್ಲ. ಆದರೆ ಇದು ಮಳೆಗಾಲದ ಹಣ್ಣು, ಎಷ್ಟು ಚೆನ್ನಾಗಿದ್ದೀತು ? ಹಣ್ಣಿನ ಕೊಟ್ಟಿಗೆ ಮಾಡಿದ್ರೆ ಮುಂಜಾನೆಗೊಂದು ತಿಂಡಿಯೂ ಆಯಿತು. ಹೀಗೆಲ್ಲ ಲೆಕ್ಕಾಚಾರದಲ್ಲಿ ದಿನ ಹೋಯಿತು, ಅವಳೂ ಬಂದಳು. ಮದ್ಯಾಹ್ನದೂಟವೂ ಆಯ್ತು.
ವಿರಾಮವಾಗಿ ಕುಳಿತು ಹಣ್ಣು ಬಿಡಿಸಲ್ಪಟ್ಟು ತಟ್ಟೆಯಲ್ಲಿ ತುಂಬಿ ಒಳಗೆ ಬಂದಿತು. ಹೊರಗೆ ಜಡಿಮಳೆ ಬರುತ್ತಿದೆ, ಚಳಿಯೆನ್ನಿಸುವ ಗಾಳಿ ಬೇರೆ. ಆ ಕ್ಷಣದಲ್ಲಿ ನೆನಪಾಯಿತು ಹಲಸಿನ ಹಣ್ಣಿನ ಪೋಡಿ , ಹಿಂದೆ ನನ್ನ ತಂಗಿ ಗಾಯತ್ರಿ ಹೇಳ್ಕೊಟ್ಟಿದ್ದು. ಸಿವಿಲ್ ಇಂಜಿನಿಯರ್ ಆಗಿದ್ದುಕೊಂಡು ದಿನವಿಡೀ ಸುತ್ತಾಟ. ಕಣ್ಣಾನ್ನೂರಿಗೆ ಹೋಗಿದ್ದಾಗ ಅಲ್ಲೊಂದು ಮನೆಯಲ್ಲಿ ಗಾಯತ್ರಿಗೆ ಇಂತಹುದೊಂದು ಖಾದ್ಯ ಸಿಕ್ಕಿದೆ. " ತುಂಬಾ ಚೆನ್ನಾಗಿತ್ತಕ್ಕ, ನೀನೂ ಮಾಡಿ ನೋಡು " ಅಂದಿದ್ದಳು.
ಮಳೆಬರುತ್ತಿರುವಾಗ, ಚಳಿಚಳಿ ಎನ್ನಿಸುವಾಗ ಬಿಸಿಬಿಸಿಯಾಗಿ ಎಣ್ಣೆಯಲ್ಲಿ ಕರಿದ ಹಣ್ಣಿನ ತಿಂಡಿ ಮಾಡೋಣ.
ಗಾಯತ್ರಿ ಹೇಳಿದ್ದು ಹೀಗೆ, " ನಾವು ಕಡ್ಲೇಹಿಟ್ಟಿನಲ್ಲಿ ಕರಿದು ಮಾಡ್ತೀವಲ್ಲ, ಪೋಡಿ ಅದೇ ಥರ, ಮೈದಾ ಹಿಟ್ಟಿನಲ್ಲಿ ಕರಿದ ಹಾಗಿತ್ತು..." ಮೈದಾ ಇರಲಿಲ್ಲ, ಮಗಳಿಗೂ ಮೈದಾ ಹಾಕಿದ ತಿಂಡಿ ಆಗದು.
ಕಡ್ಲೇಹಿಟ್ಟು, ಅಕ್ಕಿಹಿಟ್ಟು ಸಮ ಪ್ರಮಾಣದಲ್ಲಿ ಅಳೆದು, ರುಚಿಗೆ ಉಪ್ಪು, ನೀರು ಕೂಡಿಸಿ ಇಡ್ಲಿ ಹಿಟ್ಟಿನ ಹದ ಬರಲಿ.
ಗ್ಯಾಸ್ ಉರಿಯ ಮೇಲೆ ಎಣ್ಣೆ ಬಿಸಿಯೇರಲಿ.
ಹಲಸಿನ ಹಣ್ಣಿನ ಸೊಳೆಗಳನ್ನು ಹಿಟ್ಟಿಗಿಳಿಸಿ, ಎಣ್ಣೆಗಿಳಿಯಲಿ.
ಎರಡು ಬದಿಯೂ ಕಾಯಲಿ.
ಹೊಂಬಣ್ಣ ಬಂದಾಗ ಸಟ್ಟುಗದಲ್ಲಿ ಮೇಲೆ ಬರಲಿ.
" ಚಹಾ ಮಾಡಿಯಾಗಲಿ,
ತಿನ್ನೋಣ ಜೊತೆಯಲಿ "
ಅನ್ನುವ ಮೊದಲೇ ತಟ್ಟೆ ಖಾಲಿ ಖಾಲಿ...
ಹಣ್ಣುಗಳನ್ನು ಕರಿದ ತಿಂಡಿಗಳು ಕೇರಳದ ವಿಶೇಷ, ನೇಂದ್ರ ಬಾಳೆಹಣ್ಣನ್ನು ಈ ಥರ ಕರಿಯುವ ವಾಡಿಕೆ. ಮಲಯಾಳಂ ಉಚ್ಛಾರಣೆಯಲ್ಲಿ Pazham Pori ಎಂದು ಓದಿಕೊಳ್ಳಬೇಕಾಗುತ್ತದೆ. ಪೊರಿ = ಎಣ್ಣೆಯಲ್ಲಿ ಕರಿದದ್ದು ಎಂದರ್ಥವಾಗಿದೆ. ಇನ್ನು Pazham = ಫಲ, ಹಣ್ಣು ಹೀಗೆ ಅರ್ಥೈಸಬಹುದು.
ಮಾರನೇ ದಿನವೂ ನನ್ಮಗಳು " ಇವತ್ತೂ ಪೋಡಿ ಮಾಡಮ್ಮ " ಅನ್ನೋದೇ.
" ಹಲಸಿನಹಣ್ಣು ಎಲ್ಲಿದೇ... ತಾ, ಮಾಡೋಣ "
" ಬಾಳೆಹಣ್ಣು ಉಂಟಲ್ಲ, ಅದೇ ಆದೀತು..." ಎಂದಳು ಜಾಣೆ.
ಚೆನ್ನಾಗಿ ಬೆಳೆದ ಕದಳಿ ಬಾಳೆಹಣ್ಣು ಇದ್ದಿತು. ಬೂದಿ ಬಾಳೆಹಣ್ಣು ಕೂಡಾ ಆದೀತು.
ಅಂತೂ ಪೋಡಿ ಮಾಡಿ ತಿಂದಾಯ್ತು.
Posted via DraftCraft app