Saturday, 30 August 2014
ಬಂದಿತು ದೀವಿಹಲಸು.....
...... ಮರದಿಂದಿಳಿದು ಬಂದಿತು ದೀವಿಹಲಸು. ಯಾತಕ್ಕೆ ಹೀಗೆ ಹೇಳಿದ್ದೂಂದ್ರೆ ಬೇಸಿಗೆಯಲ್ಲಿ ಒಂದಾದರೂ ಕೊಯ್ಯಲು ಸಿಕ್ಕಿರಲಿಲ್ಲ. ಬಿಸಿಲಿಗೆ ಉದುರಿದ ಕಾಯಿಗಳನ್ನು ನೋಡಿದ್ದೇ ಬಂತು. ಮಳೆಗಾಲ ಬಂದೇ ಬಂತು. ಇನ್ನಾದರೂ ಕೊಯ್ದು ತರಹೇವಾರಿ ಅಡುಗೆಗಳನ್ನು ಮಾಡಿ ಉಣಬಹುದಲ್ಲ ಅಂದುಕೊಂಡಿದ್ದರೆ ಪ್ರಾರಂಭವಾದ ಮಳೆ ಆಟಿ ತಿಂಗಳು ಮುಗಿಯುವ ತನಕ ಬಿಡದೇ ಸುರಿಯಿತು. ಸೋಣೆ ತಿಂಗಳಲ್ಲಿ ಬಿಸಿಲು ಕಂಡರೂ ಜೀಗುಜ್ಜೆಗಳು ಮಳೆಯ ರಭಸಕ್ಕೆ ಹಣ್ಣಾಗಿಯೋ, ಬಾವಲಿಗಳು ತಿಂದೋ ಏನು ಕಥೆಯೋ ಕಾಣಿಸಲೇ ಇಲ್ಲ. ಹಿಂದಿನಂತೆ ತೋಟದೊಳಗೆ ಕೆಲಸದಾಳುಗಳು ಈಗ ಇಲ್ಲ, ಬಿಸಿಲು ಕಣ್ತೆರೆದ ಮೇಲೆ ಮರದ ತಪಾಸಣೆ ನಾನೇ ಮಾಡಬೇಕಾಯಿತು. ಒಂದೆರಡು ಜೀಗುಜ್ಜೆ ಇವೆಯೆಂದು ಸಮಾಧಾನ ಪಟ್ಟುಕೊಳ್ಳುತ್ತ " ಉದ್ದನೆಯ ದೋಟಿಗೆ ಕತ್ತಿ ಕಟ್ಟಿ ಕೊಯ್ದು ಕೊಡಿ " ಅಂತ ನಮ್ಮೆಜಮಾನ್ರನ್ನು ಪುಸಲಾಯಿಸಿದಾಗ ಮರದಿಂದಿಳಿದು ಬಂದಿತು ದೀವಿಹಲಸು.
ಇಬ್ಬರ ಊಟಕ್ಕೆ ಜೀಗುಜ್ಜೆ ಸಾಕಷ್ಟು ದೊಡ್ಡ ಗಾತ್ರದಲ್ಲಿದ್ದಿತು. ಅರ್ಧ ಭಾಗದ ಸಿಪ್ಪೆ ಗೂಂಜು ಕೆತ್ತಿ ತೆಗೆದು ಒಂದು ಕೊದ್ದೆಲ್ ತಯಾರಾಯಿತು. ಉಳಿದರ್ಧ ಸಿಪ್ಪೆ ಗೂಂಜು ತೆಗೆಯಲ್ಪಟ್ಟು ಚಿಪ್ಸ್ ಆಗೇ ಹೋಯ್ತು, ಇನ್ನೆರಡು ದಿನದಲ್ಲಿ ಮಗಳು ಬರ್ತಾಳೆ.
ಕೊದ್ದೆಲ್ ಮಾಡೂದು ಹೇಗೇ ?
ತೊಗರಿಬೇಳೆ ಬೇಯಿಸಿಟ್ಕೊಂಡಿದ್ದೀರಾ, ದೀವಿಹಲಸಿನ ಹೋಳುಗಳನ್ನು ಬೇಯಿಸಿ. ಉಪ್ಪು, ಹುಳಿ ಹಾಕ್ಕೊಳ್ಳಿ.
ಒಂದು ಕಡಿ ತೆಂಗಿನ ತುರಿ
2-3 ಒಣಮೆಣಸು
2 ಚಮಚ ಕೊತ್ತಂಬ್ರಿ
1 ಚಮಚ ಉದ್ದಿನಬೇಳೆ
ಕಾಲು ಚಮಚಾದಷ್ಟು ಜೀರಿಗೆ, ಮೆಂತೆ
ಬೇಳೆ ಗಾತ್ರದಷ್ಟು ಇಂಗು
ಚಿಟಿಕೆ ಅರಸಿನ, ಕರಿಬೇವು
ಎಣ್ಣೆಪಸೆಯಲ್ಲಿ ಮಸಾಲಾ ಸಾಮಗ್ರಿಗಳನ್ನು ಹುರಿದು ತೆಂಗಿನತುರಿಯೊಂದಿಗೆ ಅರೆದು, ಬೇಯಿಸಿಟ್ಟ ತರಕಾರಿ ಹಾಗೂ ಬೇಳೆಗಳಿಗೆ ಕೂಡಿಸಿ, ಕುದಿಸಿ. ಒಗ್ಗರಣೆ ಇರಲಿ.
ಈಗ ಜೀಗುಜ್ಜೆ ಬೆಂದಿ ಮಾಡೋಣ. ಇದಕ್ಕೆ ಬೇಕಾಗಿರುವುದೇನೇನು ?
ಜೀಗುಜ್ಜೆ ಹೋಳುಗಳು
10-12 ಹಲಸಿನ ಬೇಳೆ, ತುಂಡು ಮಾಡಿದ್ರೂ ಆದೀತು, ಗುಂಡುಕಲ್ಲಿನಲ್ಲಿ ಜಜ್ಜಿ ಇಟ್ಟರೂ ಆದೀತು.
10-12 ಕೆಸುವಿನೆಲೆ, ಆದಷ್ಟು ಪುಟ್ಟ ಎಲೆಗಳ ಆಯ್ಕೆ ಉತ್ತಮ. ಕೆಸುವಿನೆಲೆಗಳನ್ನು ದಿನ ಮುಂಚಿತವಾಗಿ ಕೊಯ್ಯಬೇಕಾಗುತ್ತದೆ. ಬಾಡಿದ ಎಲೆಗಳನ್ನು ಮಾತ್ರ ಸುರುಳಿ ಸುತ್ತಿ ಗಂಟು ಹಾಕಲು ಸಾಧ್ಯವಿದೆ. ಇದೀಗ ಚೇಟ್ಳ ತಯಾರಾಯಿತು.
ತಯಾರಾದಿರಲ್ಲ, ಎಲ್ಲವನ್ನೂ ಉಪ್ಪು, ಹುಳಿಯೊಂದಿಗೆ ಬೇಯಿಸಿ.
ಈ ಮೊದಲು ಹೇಳಿದ ಕೊದ್ದೆಲ್ ಪಾಕ ವಿಧಾನವನ್ನೇ ಅನುಸರಿಸಿ.
ಇಲ್ಲಿ ತೊಗರಿಬೇಳೆ ಹಾಕಲಿಕ್ಕಿಲ್ಲ, ತೆಂಗಿನ ತುರಿಗೆ ಹುರಿದ ಒಣಮೆಣಸು ಮಾತ್ರ ಹಾಕಿ ಅರೆಯುವುದೂ ಇದೆ. ಒಗ್ಗರಣೆಗೆ ಬೆಳ್ಳುಳ್ಳಿ ಸುಲಿದು ಹಾಕಬಹುದು.
ದೀವಿಹಲಸೇ ಆಗಬೇಕೆಂದಿಲ್ಲ, ಹಣ್ಣು ಸೌತೆಕಾಯಿಯಿಂದಲೂ ಇದೇ ಥರ ಬೆಂದಿ ಮಾಡುವುದಿದೆ.
ಹಲಸಿನ ಬೇಳೆ ಇಲ್ವೇ, ಚಿಂತೆ ಬೇಡ, ಇಲ್ಲದಿದ್ದರೂ ನಡೆಯುತ್ತದೆ.
Posted via DraftCraft app
Saturday, 23 August 2014
ಜಾಮ್ ಜಾಮ್ ತಿಂಡಿತಿನಿಸು
ಒಂದು ಸಂದರ್ಭದಲ್ಲಿ ನಾವು ಬಂಧುಬಳಗವೆಲ್ಲ ಸೇರಿದ್ದೆವು, ತಿಂಡಿತೀರ್ಥಗಳಿಗೂ ಮಾತುಕತೆಗಳಿಗೂ ಕೊರತೆಯಿಲ್ಲ. ಚಕ್ಕಪ್ಪ ಹಿಂದಿನದನ್ನು ಜ್ಞಾಪಿಸಿಕೊಳ್ಳುತ್ತಾ " ಅತಿರಸ ಎಷ್ಟು ಚೆನ್ನಾಗಿ ಮಾಡ್ತಿದ್ಳು ನನ್ನಮ್ಮ " ಅಂದರು.
" ಹ್ಞ ಹೌದ, ಅಜ್ಜಿ ಅಡಿಗೆ ಮಾಡಿದ್ದನ್ನು ಒಮ್ಮೆಯೂ ನೋಡಿಲ್ಲ, ಅಪ್ಪಚ್ಚಿ ಸುಳ್ಳು ಹೇಳ್ತೀಯ..."
" ನೀನು ನೋಡಿಲ್ಲ, ಅಮ್ಮ ಮಾಡಿದ್ದನ್ನು ತಿಂದೋನು ನಾನಲ್ವೇ.."
" ಹೇಗೆ ಮಾಡೂದಂತ ಗೊತ್ತಿದ್ರೆ ಹೇಳು, ಟ್ರೈ ಮಾಡಿ ನೋಡ್ತೇನೆ "
" ಅದಾ, ಬೆಲ್ಲ, ಅಕ್ಕಿ, ಕಾಯಿ ಇಷ್ಟು ಬಗೆ ಇದ್ದರೆ ಸಾಕು, ಸಣ್ಣಕೆ ಕಡೆದು ಚಟ್ಟೆ ಚಟ್ಟೆ ವಡೆ ತಟ್ಟಿ ಎಣ್ಣೆಯಲ್ಲಿ ಹುರಿಯುವುದು, ಅದಕ್ಕೆ ಕಾಳುಮೆಣಸೂ ಹಾಕಲಿಕ್ಕುಂಟು, ಸಿಹಿ, ಖಾರ....ವಾಹ್ ಏನ್ ರುಚಿ ಗೊತ್ತಾ " ಅಂದ್ರು ಚಿಕ್ಕಪ್ಪ.
" ಎಷ್ಟ್ ಎಣ್ಣೆ ಕುಡೀತದೋ ಈ ಅತ್ರಸ?"
" ಹಾಗೇನಿಲ್ಲ, ಮಾಡಿದ್ದನ್ನು ಮಣ್ಣಿನ ಅಳಗೆಯಲ್ಲಿ ಹಾಕಿಡೂದು, ಹೆಚ್ಚಾದ ಎಣ್ಣೆ ಎಲ್ಲ ಮಣ್ಣಿನ ಪಾತ್ರೆ ಕುಡೀತದೆ ಗೊತ್ತಾಯ್ತಾ .."
ಓ, ಮಣ್ಣಿನ ಮಡಕೆಯ ಒಳಗುಟ್ಟು ಹೀಗೂ ಉಂಟಲ್ವ !"
ಆದರೆ ಈ ಮಾತುಕತೆ ಆದ ನಂತರ " ಯಾರಿಗೆ ಬೇಕು ಈ ಓಬೀರಾಯನ ಕಾಲದ ತಿಂಡಿಗಳ ಸಹವಾಸ " ಅನ್ನೋ ಥರ ಅತಿರಸ ಮರೆತೇ ಹೋಗಿತ್ತು.
ಟೀವಿ ಮಾಧ್ಯಮ ಮನೆಯೊಳಗೆ ಬಂದಿತಲ್ಲ, ಅದರ ಆರಂಭಿಕ ಪ್ರಹಸನವನ್ನು ಈ ಹಿಂದೆಯೇ ಬರೆದಿದ್ದೇನೆ. ಕನ್ನಡ ಕಾರ್ಯಕ್ರಮಗಳು, ಅದರಲ್ಲೂ ದಿನನಿತ್ಯ ಅಡುಗೆ ವೀಕ್ಷಣೆ ಸಿಗಲಾರಂಭಿಸಿದ ನಂತರ ನಾನೂ ನೋಡಿಟ್ಕೊಂಡು, ಬರೆದಿಟ್ಟುಕೊಳ್ಳಲೂ ನನ್ನಮ್ಮನೇ ಪ್ರೇರಣೆ.
ಒಂದು ದಿನ ಟೀವಿ ಅಡುಗೆಯನ್ನು ಠೀವಿಯಿಂದ ನೋಡುತ್ತಿದ್ದಾಗ ಅರೆ! ಅತಿರಸ ಪ್ರತ್ಯಕ್ಷವಾಯಿತು. ಪೂರ್ತಿ ಕಾರ್ಯಕ್ರಮ ವೀಕ್ಷಿಸಿ ಪ್ರಯೋಗಕ್ಕೆ ಸಿದ್ಧತೆ ನಡೆಯಿತು. ಆ ಕಾರ್ಯಕ್ರಮದಲ್ಲಿ ಹೇಳಿಕೊಟ್ಟಂತೆ ಅಕ್ಕಿ ಹಾಗೂ ಸಕ್ಕರೆಯ ಮಿಶ್ರಣದ ಹಿಟ್ಟಿನಿಂದ ವಡೆ ತಟ್ಟಿ ಕಾದ ಎಣ್ಣೆಗೆ ಇಳಿಸಿದೆನಾ, ಹಿಟ್ಟೆಲ್ಲವೂ ಎಣ್ಣೆಗೆ ಬಿಟ್ಟುಕೊಂಡಿತು. ನನ್ನ ಪಾಕ ಸರಿಯಾಗಿರಲಿಲ್ವೋ, ಟೀವಿ ಪಾಕತಜ್ಞೆ ಹೇಳ್ಕೂಟ್ಟಿದ್ದು ನನ್ನ ತಲೆಗಿಳಿದಿಲ್ವೋ... ಚಿಂತೆ ಮಾಡ್ತಾ ಕೂತರಾಗಲಿಲ್ಲ, ಸ್ವಯಂಬುದ್ಧಿಯಿಂದ ಹಿಟ್ಟಿಗೆ ಗೋಧಿ ಹುಡಿ ಬೆರೆಸಿ ಇನ್ನೊಮ್ಮೆ ಎಣ್ಣೆಗಿಳಿಯಿತು ಅತಿರಸದ ವಡೆ. ಚೆನ್ನಾಗಿ ಮೇಲೆದ್ದು ಬಂದಿತು. ಅಂತೂ ಕಲಸಿದ ಹಿಟ್ಟು ವ್ಯರ್ಥವಾಗಲಿಲ್ಲ, ಮಕ್ಕಳೂ, ಮಕ್ಕಳ ಅಪ್ಪನೂ ಸಂಜೆಯ ಈ ತಿನಿಸನ್ನು ಸಂಭ್ರಮದಿಂದ ತಿಂದರು.
ಸಾಂಪ್ರದಾಯಿಕವಾಗಿ ಅತಿರಸ ಹೀಗೆ ಮಾಡೋಣ. ತೆಂಗಿನ ಕಾಯಿ, ಬೆಲ್ಲ, ಅಕ್ಕಿ ಇವಿಷ್ಟು ಪರಿಕರಗಳಿಂದ ವೈವಿಧ್ಯಮಯ ತಿಂಡಿತಿನಿಸುಗಳನ್ನು ಮಾಡುವಲ್ಲಿ ನಮ್ಮ ಹಿಂದಿನ ತಲೆಮಾರಿನ ಗೃಹಿಣಿಯರು ಸಿದ್ಧಹಸ್ತರು. ಇವಿಷ್ಟೇ ಪರಿಕರಗಳಿಂದ ಮಾಡಬಹುದಾದ ತಿಂಡಿತಿನಿಸುಗಳು ಸಾಕಷ್ಟಿವೆ.
ಅಕ್ಕಿಹುಡಿ 1 ಕಪ್, ನುಣ್ಣಗಿನ ಹುಡಿಯಾಗಿರಬೇಕು.
ಬೆಲ್ಲದ ಹುಡಿ 1 ಕಪ್
ತೆಂಗಿನತುರಿ 1 ಕಪ್
ರುಚಿಗೆ ಉಪ್ಪು
ಕಾಳುಮೆಣಸಿನ ಹುಡಿ, ಏಲಕ್ಕಿ ಹುಡಿ, ಹುರಿದ ಎಳ್ಳು - ಪರಿಮಳಕ್ಕೆ ತಕ್ಕಷ್ಟು ಬಿದ್ದರೆ ಸಾಕು.
ತೆಂಗಿನತುರಿಯನ್ನು ನೀರು ಹಾಕದೆ ಮಿಕ್ಸೀಯಲ್ಲಿ ಎರಡು ಸುತ್ತು ತಿರುಗಿಸಿ ತೆಗೆಯಿರಿ.
ಬೆಲ್ಲ ಹಾಗೂ ಕಾಯಿತುರಿಗಳನ್ನು ನಾನ್ ಸ್ಟಿಕ್ ತವಾದಲ್ಲಿಟ್ಟು ಬೆಚ್ಚಗೆ ಮಾಡಿಕೊಳ್ಳಿ.
ಬೆಲ್ಲ ಕರಗಿ ಕಾಯಿತುರಿಯೊಂದಿಗೆ ಸೇರಿತೇ, ಕೆಳಗಿಳಿಸಿ.
ಉಪ್ಪು, ಇನ್ನಿತರ ಪರಿಕರಗಳನ್ನು ಕೂಡಿಸಿ, ಬೆರೆಸಿಕೊಳ್ಳಿ.
ಅಕ್ಕಿಹುಡಿಯನ್ನೂ ಹಾಕಿ ಅವಶ್ಯವಿದ್ದಷ್ಟೇ ನೀರೆರೆದು ಮುದ್ದೆಗಟ್ಟುವ ಹದಕ್ಕೆ ತನ್ನಿ.
ಚಪಾತಿಗೆ ಗೋಧಿಹಿಟ್ಟು ಕಲಸಿದ ಮುದ್ದೆಯಂತಿರಬೇಕು.
ಒಂದೆರಡು ಘಂಟೆ ಹಿಟ್ಟನ್ನು ಮುಚ್ಚಿಟ್ಟಿರಿ.
ಲಿಂಬೆ ಗಾತ್ರದ ಉಂಡೆ ಮಾಡಿಟ್ಕೊಳ್ಳಿ.
ಪಾಲಿಥೀನ್ ಹಾಳೆ ಅಥವಾ ಬಾಳೆಲೆಗೆ ಎಣ್ಣೆ ಸವರಿ, ವಡೆಯಂತೆ ತಟ್ಟಿ ಇಟ್ಟಾಯ್ತೇ,
ಏನೂ ಬೇಡ, ಅಂಗೈಯಲ್ಲೇ ವಡೆ ಒತ್ತಿಕೊಳ್ಳಬಹುದು.
ಒಲೆ ಮೇಲೆ ಎಣ್ಣೆ ಬೆಚ್ಚಗಾಯ್ತೇ,
ಒಂದೊಂದೇ ವಡೆಯನ್ನು ಎಣ್ಣೆಗಿಳಿಸಿ ಕರಿದು ತೆಗೆಯಿರಿ.
ಬಿಸಿ ಆರಿದ ನಂತರ ಬಿಸಿ ಚಹಾದೊಂದಿಗೆ ಸವಿಯಿರಿ. ಮಳೆ ಬರುವಾಗ ಮನೆಯೊಳಗೆ ಬೆಚ್ಚಗೆ ಕುಳಿತು ತಿನ್ನಲು ಚೆನ್ನ.
ಮಾಡುವ ವಿಧಾನವನ್ನು ಬರೆಯುತ್ತಿರಬೇಕಾದರೆ, ಕಳೆದ ಮಳೆಗಾಲದಲ್ಲಿ ಮಾಡಿ ತಿಂದಿದ್ದ ಈ ಅತಿರಸವನ್ನು ಇನ್ನೊಮ್ಮೆ ಮಾಡಿ ತಿನ್ನದಿದ್ದರೆ ಹೇಗೆ? ಬರವಣಿಗೆಯನ್ನು ನಿಲ್ಲಿಸಿ ಅಡುಗೆಮನೆಯೆಂಬ ಲ್ಯಾಬೋರೇಟರಿಯೊಳಗೆ ಬೇಕಾದ ಪರಿಕರಗಳಿವೆಯೇ ಎಂದು ಪರಿಶೀಲಿಸಲಾಗಿ,
ಮುಂಜಾನೆಯ ತೆಳ್ಳವು ಎರೆದ ಅಕ್ಕಿಹಿಟ್ಟು " ನಾನಿದ್ದೇನೆ ಅಕ್ಕಾ " ಅಂದಿತು.
ತೆಂಗಿನ ಕಡಿ ಬಾಯ್ತೆರೆದು ಕುಳಿತಿತ್ತು.
ಬೆಲ್ಲ ಡಬ್ಬದಿಂದ ಹೊರ ನೆಗೆಯಿತು.
ಅಕ್ಕಿಹಿಟ್ಟಿನ ಅನಾವಶ್ಯಕ ನೀರನ್ನು ಬಸಿದು ತೆಗೆಯಲಾಯಿತು.
ತೆಂಗಿನ ತುರಿ, ಬೆಲ್ಲದ ಹುಡಿ ಮಿಕ್ಸಿಯಲ್ಲಿ ತಿರುಗಿ ಬಾಣಲೆಗೆ ಬಿದ್ದು ಬಿಸಿಯ ತಾಪದಲ್ಲಿ ಪಾಕವಾಯಿತು.
ಅಕ್ಕಿ ಹಿಟ್ಟು, ಕಾಳುಮೆಣಸು, ಹುರಿದ ಎಳ್ಳು ಪಾಕದಲ್ಲಿ ಕೂಡಿದಾಗ ಮುದ್ದೆಯಾಗಿ ಒದ್ದೆಯಾಗಿ ಪಾಕ ಎಡವಟ್ಟಾಯಿತು.
ಅಕ್ಕಿ ಹುಡಿ ಇಲ್ಲದಿರಲು
ಗೋಧಿಹುಡಿ ಹೊರಗೆ ಬರಲು
ಆಯಿತಲ್ಲ, ಒಂದು ಮುದ್ದೆ
ಅಂತೂ ನಾನು ಗೆದ್ದೆ
ಅತಿರಸವೆಂದು ಹೆಸರಿಸಲಾಗದಿದ್ದರೇನಾಯಿತು
ಜಾಮ್ ಜಾಮ್ ತಿಂಡಿತಿನಿಸು ದೊರೆಯಿತು.
ಈ ಹಳೆಯಕಾಲದ, ನಮ್ಮ ಅಜ್ಜಿಯಂದಿರು ಮಾಡಿಟ್ಟುಕೊಳ್ಳುತ್ತಿದ್ದ ತಿಂಡಿಗಳ ನೆನಪು ಮೂಡಿಸಿದ್ದು ಒಂದು ಮುದ್ದಾದ ಫೊಟೋದೊಂದಿಗೆ ಫೇಸ್ ಬುಕ್ ಮಿತ್ರರಾದ ಶಾಂತಾರಾಂ ಶೆಟ್ಟಿ. ಈ ಬರಹಕ್ಕೆ ಪ್ರೇರಣೆ ನೀಡಿದ ಜಾಮ್ ಜಾಮ್ ತಿಂಡಿ ಇಲ್ಲಿದೆ. ತುಳು, ಕೊಂಕಣಿ, ಕನ್ನಡಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ಒಂದೇ ತಿಂಡಿ ಇರುವುದು ಸಾಮಾನ್ಯ. ಎಣ್ಣೆಮುಳ್ಕ ಅಂತಲೂ, ಎಣ್ಣೆಕಜ್ಜಾಯ ಎಂದೂ ಹೆಸರಿಸಬಹುದಾದ ಈ ತಿಂಡಿ ನಮ್ಮ ಕಡೆ ಹೋಟಲ್ ಗಳಲ್ಲಿ ಜಾಂಬೂ ಅನಿಸಿಕೊಂಡಿದೆ. ಮಾಡುವ ವಿಧಾನ ಹೇಳಿಕೊಟ್ಟಿದ್ದು ಪಕ್ಕದಮನೆಯ ಹೇಮಾ ಚಿದಾನಂದ್.
" ಜಾಂಬೂ ಗೊತ್ತಿಲ್ವ, ಅಕ್ಕಿ, ಬೆಲ್ಲ, ತೆಂಗಿನ್ಕಾಯಿ ಅರೆದು ಎಣ್ಣೆಗೆ ಹಾಕೂದು ಅಷ್ಟೇ, ಮತ್ತೇನಿಲ್ಲ. ಮುಂಚೆ ಮಾಡ್ತಿದ್ದೆ, ಈಗ ಇವ್ರಿಗೆ ಶುಗರು.. ಅದೆಲ್ಲ ಮಾಡ್ಲಿಕ್ಕಿಲ್ಲ "
" ಹಾಗೆಯಾ, ನಾವು ಸುಟ್ಟವು ಅಂತ ಮಾಡ್ತೇವಲ್ಲ, ಅದೇ ಥರ ..."
" ಹಾಂ, ಇದಕ್ಕೆ ಗೋಡಂಬಿ ಬೇಕಾದ್ರೆ ಹಾಕ್ಬಹುದು, ಅದು ಹಾಕದಿದ್ರೂ ನಡೀತದೆ "
ಇನ್ನು ಹೋಟಲ್ ಜಾಂಬೂ ಹೇಗೆ ಮಾಡ್ತಾರೋ ಎಂದೂ ತಿಳಿಯುವ ಕುತೂಹಲ ಹುಟ್ಟಿತು. ಸಿದ್ಧಿಕ್ ಆಗಮನವಾಯಿತು. ಇವನು ಊರೂರು, ದೇಶವಿದೇಶ ಸುತ್ತಿದವನು. ಗೊತ್ತಿದೀತು, " ಈ ನಮೂನೆಯ ತಿಂಡಿ ಗೊತ್ತಾ ?"
" ಜಾಂಬುವಾ, ಗೊತ್ತುಂಟಲ್ಲ, ನಾನು ಎರಡು ವರ್ಷ ಹೋಟ್ಲು ಕೆಲ್ಸವೂ ಮಾಡಿದ್ದೇನೆ ಅಕ್ಕ "
" ಹಾಗಿದ್ರೆ ಮಾಡುವ ಕ್ರಮ ಹೇಳಿಬಿಡು "
" ಬೆಲ್ಲದ ಪಾಕ ಮಾಡ್ಬೇಕು, ತಣಿದ ಮೇಲೆ ಮೈದಾ, ಸೋಡಹುಡಿ ಹಾಕಿ ಕಲಸೂದು. ಬಿಸಿಬಿಸೀ ಎಣ್ಣೆಗೆ ಕೈಯಲ್ಲಿ ಉರುಟುರುಟಾಗಿ ಹಾಕುದು ಅಷ್ಟೇಯ..."
" ಗೋಳಿಬಜೆ ಥರಾನೇ..."
" ಹೂಂ, ಚೆಂಡಿನ ಹಾಗೆ ಉಬ್ತದೆ... ಸೌಟಿನಲ್ಲೂ ಎಣ್ಣೆಗೆ ಇಳಿಸ್ ಬೋದು "
" ತೆಂಗಿನ್ಕಾಯಿ ಹಾಕ್ಲಿಕ್ಕಿಲ್ಲವಾ..."
" ಏಯಿ.. ಅದೆಲ್ಲ ಬೇಡ "
ಅಂತೂ ಜಾಂಬೂ ವಿಧಗಳನ್ನು ತಿಳಿದಾಯ್ತು. ಹೇಮಕ್ಕ ತಿಳಿಸಿಕೊಟ್ಟಂತೆ ಈಗ ಮಾಡೋಣ. ಇದನ್ನು ಮಾಡಲು ಸುಲಭ ಹಾಗೂ ತಿನ್ನಲು ರುಚಿಕರ ಖಾದ್ಯ.
ಅಕ್ಕಿಹಿಟ್ಟು 2 ಕಪ್
ಬೆಲ್ಲ ಒಂದು ಕಪ್
ಕಾಯಿತುರಿ ಒಂದು ಕಪ್
ರುಚಿಗೆ ಉಪ್ಪು
ಕರಿಯಲು ತೆಂಗಿನೆಣ್ಣೆ
ಬೆಲ್ಲ ಕಾಯಿತುರಿಗಳನ್ನು ಅರೆಯಿರಿ, ಬಾಣಲೆಗೆ ಹಾಕಿ ಬೆಚ್ಚಗಾಗಿಸಿ.
ಅಕ್ಕಿ ಹಿಟ್ಟು ಎರೆದು, ಉಪ್ಪು ಕೂಡಿಸಿ. ಹಿಟ್ಟನ್ನು ಉಂಡೆಯಾಗಿಸುವ ಹದಕ್ಕೆ ತನ್ನಿ. ಇದು ಈಗ ಅರೆಬೆಂದ ಹಿಟ್ಟಾಗಿದೆ, ಬಾಣಲೆ ಕೆಳಗಿಳಿಸಿ.
ಒಲೆಯ ಮೇಲೆ ಎಣ್ಣೆ ಕಾಯಲು ಇಟ್ಟಾಯ್ತೇ, ಕಾದ ಎಣ್ಣೆಗೆ ಪುಟ್ಟ ಲಿಂಬೇಗಾತ್ರದ ಹಿಟ್ಟು ಇಳಿಸುತ್ತಾ ಬನ್ನಿ. ಎಣ್ಣೆಯಲ್ಲಿ ಹಿಡಿಸುವಷ್ಟು ಹಾಕಿ ಕರಿದು ತೆಗೆಯಿರಿ.
ನಾನೂ ಇದೇ ಮೊದಲ ಬಾರಿ ಮಾಡ್ತಿರೋದು, ರುಚಿ ಹೇಗಿರುತ್ತೆ ಎಂಬ ಕುತೂಹಲ. ಮಗಳೂ ಮನೆಯಲ್ಲಿದ್ದಳು, " ಅಮ್ಮ, ತುಂಬಾ ಟೇಸ್ಟ್ ಇದೇ... ಸಂಜೆ ಹಾಸ್ಟೆಲ್ ಗೆ ಹೋಗುವಾಗ ಕಟ್ಟಿಕೊಡು " ಅಂದಳು. ನಮ್ಮೆಜಮಾನ್ರು ಕೇಳ್ಬೇಕೇ... ತಿಂದರು.
ಸಂಜೆ ಗಂಟೆ ಆರಾಗಿತ್ತು, ಸಮೀಪದ ಪಳ್ಳತ್ತಡ್ಕದಿಂದ ನಮ್ಮ ಅನಂತ ಹರಟೆ ಹೊಡೆಯಲು ಬಂದ. ಮಾಡಿದ ಜಾಂಬೂ ತಟ್ಟೆಯಲ್ಲಿ ಇನ್ನೂ ಎರಡಿತ್ತು. ಬಿಸಿ ಚಹಾದೊಂದಿಗೆ ಇದ್ಯಾವ ತಿಂಡಿ ಎಂಬ ವಿವರಣೆಯೊಂದಿಗೆ ಜಾಂಬೂ ತಿಂಡಿಯನ್ನು ಅವನೂ ತಿಂದ.
Posted via DraftCraft app
Saturday, 16 August 2014
ಇಂದ್ರ ಧನುಷ್!
ಟ್ವಿಂಕಲ್ ಟ್ವಿಂಕಲ್
ಬಾನಿನಲ್ಲಿ ರಂಗವಲ್ಲಿ|
ಇಂದ್ರಚಾಪ ಬಂತು ಇಲ್ಲಿ
ಮಕ್ಕಳಂತೆ ಹರುಷವಿಲ್ಲಿ
ಯಕ್ಷಲೋಕ ಇಳಿಯಿತಿಲ್ಲಿ
ಹರಿಯಿತಿಲ್ಲಿ
ಗಾನ ಮುರಲಿ|
ಇಂದ್ರಚಾಪ ಹರಡಿದಂತೆ
ನೆಲ ಮುಗಿಲು ಬೆರೆತಂತೆ
ಬಣ್ಣದ ನೀರು
ಚೆಲ್ಲಿದ್ಯಾರು
ಹೇಳಕ್ಕಾ, ನೀ ಜಾಣೆ|
Posted via DraftCraft app
Saturday, 9 August 2014
ಆಷಾಢದ ಅಡುಗೆ
ಊಟ ತಯಾರಿದೆ,
ಇಂದಿನ ಸ್ಪೆಶಲ್
ಹಲಸಿನ ಬೇಳೆ ಪಲ್ಯ
ಮಳೆಗಾಲದ ಆರಂಭದಲ್ಲಿ ದಾಸ್ತಾನು ಮಾಡಿಟ್ಟ ಹಲಸಿನ ಬೇಳೆಗಳು ಒಂದೆರಡು ತಿಂಗಳು ಕಳೆದ ನಂತರ ಸಿಹಿ ರುಚಿಯನ್ನು ಪಡೆಯುತ್ತವೆ. ಇದಲ್ಲವೇ ಪ್ರಕೃತಿ ವೈಚಿತ್ರ್ಯ , ಎಲ್ಲಿಂದ ಹೇಗೆ, ಸಿಹಿ ಹುಟ್ಟಿತು ಈ ಬೇಳೆಯೊಳಗೇ...
ಕೇವಲ ಹಲಸಿನ ಬೇಳೆ ಸಾಲದು, ಒಂದು ಹಣ್ಣು ಸೌತೆ ಅವಶ್ಯವಿದೆ.
ಸೌತೆಯನ್ನು ತೆಳ್ಳಗೆ ಹೋಳು ಮಾಡಿಕೊಳ್ಳಿ.
7-8 ಹಲಸಿನ ಬೇಳೆಗಳನ್ನು ಸಿಪ್ಪೆ ತೆಗೆದು ತುಂಡುಮಾಡಿ.
ಬಾಣಲೆಯಲ್ಲಿ ಒಗ್ಗರಣೆಗಿಟ್ಟು, ಸಾಸಿವೆ ಸಿಡಿದಾಗ ಕರಿಬೇವಿನೆಸಳು, ಚಿಟಿಕೆ ಅರಸಿನ ಬೀಳಲಿ.
ಸೌತೆಹಾಗೂ ಬೇಳೆ ಹೋಳುಗಳನ್ನು ಹಾಕಿ, ಬೇಯಲು ಅಗತ್ಯದ ನೀರು ಎರೆದು, ರುಚಿಗಿಷ್ಟು ಉಪ್ಪು ಕೂಡಿಸಿ.
ಮಂದಾಗ್ನಿಯಲ್ಲಿ ಮುಚ್ಚಿ ಬೇಯಿಸಿ.
ಬೇಳೆ ಹಾಗೂ ಸೌತೆ ಬೇಗನೆ ಬೇಯುವಂಥವು.
ಒಮ್ಮೆ ಸೌಟಾಡಿಸಿ, ಕಾಯಿತುರಿಯ ಅಲಂಕರಣವೂ ಇರಲಿ.
ಈ ಪ್ರಕಾರದ ಪಲ್ಯಕ್ಕೆ ಮಳೆಗಾಲದಲ್ಲಿ ಯಥೇಚ್ಛವಾಗಿ ಲಭಿಸುವ ತಗತೇಸೊಪ್ಪು ಹಾಕುವ ರೂಢಿಯೂ ಇದೆ. ಮಾಡಲು ಬಹಳ ಸರಳ ಈ ಪಲ್ಯ. ನಿಸರ್ಗದಲ್ಲಿ ಉಚಿತವಾಗಿ ಲಭ್ಯವಾಗುವ ಪರಿಕರಗಳಿಂದಲೇ ಶರೀರಕ್ಕೆ ಹಿತವಾದಂತಹ ಅಡುಗೆಗಳನ್ನು ಮಾಡಲು ನಮ್ಮ ಹಿರಿಯರು ತಿಳಿದಿದ್ದರು ಅಲ್ಲವೇ ? ಆಷಾಢದ ಮಾಸದಲ್ಲಿ ಈ ರೀತಿಯಲ್ಲೇ ಅಡುಗೆ ಮಾಡಿ ಉಣ್ಣಬೇಕೆಂಬ ನಿಯಮವೂ ನಮ್ಮದು. ಮಳೆಗಾಲದ ಕಾಯಿಲೆಕಸಾಲೆಗಳನ್ನು ನಿಸರ್ಗದಲ್ಲೇ ಲಭ್ಯ ಉತ್ಪನ್ನಗಳ ಹಿತಮಿತವಾದ ಬಳಕೆಯಿಂದ ದೂರತಳ್ಳುವ ಜಾಣ್ಮೆಯೂ ಇಲ್ಲಿದೆ.
ಕಾಟ್ ಕೆಸುವಿನ ಪುಟ್ಟ ಪುಟ್ಟ ಚಿಗುರು ಸೊಪ್ಪುಗಳನ್ನು ಕೊಯ್ದು ತಂದ ಅರ್ಧ ಗಂಟೆಯೊಳಗೆ ಬಾಡಿ ಹೋಗುವುದು. ಇಂತಹ ಬಾಡಿದ ಎಲೆಗಳನ್ನು ಚಾಪೆಯಂತೆ ಸುರುಳಿ ಸುತ್ತಿ, ಗಂಟು ಹಾಕಿಟ್ಟು ಹಲಸಿನ ಬೇಳೆ ಪಲ್ಯಕ್ಕೆ ಸೇರಿಸುವ ವಾಡಿಕೆಯೂ ಇದೆ. ಈ ಪಲ್ಯಕ್ಕೆ ಕೆಸುವಿನ ಚೇಟ್ಳ ಪಲ್ಯ ಎಂಬ ಹೆಸರೂ ಇದೆ. ಕೆಸುವಿನ ಸೊಪ್ಪು ಹೆಚ್ಚು ಹಾಕಲಿಕ್ಕಿಲ್ಲ, ಹಾಕುವುದಿದ್ದರೆ ತುಸು ಹುಳಿ ಸೇರಿಸಬೇಕಾದೀತು.
ಒಂದು ಹಲಸಿನ ಕಾಯಿಯಲ್ಲಿ ಒಂದೆರಡಲ್ಲ, ನೂರಾರು ಬೀಜಗಳಿರುತ್ತವೆ. ಬೃಹತ್ ಫಲವಾದ ಹಲಸಿನಕಾಯಿ 3ರಿಂದ 30 ಕಿಲೋ ಮೇಲ್ಪಟ್ಟು ತೂಕ ಹೊಂದಿರುವಂತಹುದು. ದೈತ್ಯ ವೃಕ್ಷವೂ ಆಗಿರುವ ಹಲಸಿನ ಮರದ ಒಂದು ಪುಟ್ಟ ಬೀಜದಲ್ಲಿ ಮುಂದಿನ ವೃಕ್ಷಾಂಕುರವಿರುತ್ತದೆ.
ಪಿಷ್ಟವೂ ಅಧಿಕವಾಗಿರುವ ಹಲಸಿನಬೇಳೆ ಹಿಂದಿನಕಾಲದಲ್ಲಿ ಬಡವರ ಆಹಾರವೂ ಆಗಿತ್ತು. ಗದ್ದೆಯ ಬೆಳೆ ಕೈಗೆ ಬರುವ ತನಕ ಉಪವಾಸವೇ ಗತಿಯಾಗಿದ್ದ ಕಾಲದಲ್ಲಿ ಬೇಳೆಯಿಂದಲೇ ಉಣಬಹುದಾದ ಖಾದ್ಯಗಳನ್ನು ತಿಳಿದಿದ್ದರು ನಮ್ಮ ಜನ. ಬೇಳೆಯನ್ನು ಮಳೆಗಾಲದ ಆರಂಭದಲ್ಲೇ ಸಂಗ್ರಹಿಸಿಟ್ಟು, ಕೆಡದಂತೆ ದಾಸ್ತಾನು ಇಡುವ ತಿಳುವಳಿಕೆಯೂ ನಮ್ಮ ಹಿಂದಿನ ತಲೆಮಾರಿನ ಜನರಲ್ಲಿತ್ತು.
ಒಳ್ಳೆಯ ಕೆಂಪುಮಣ್ಣಿನ ಲೇಪ ಕೊಡುವ ವಿಧಾನದಿಂದ ಹಾಗೂ ತಂಪು ಸ್ಥಳದಲ್ಲಿ ಶೇಖರಿಸಿಟ್ಟು ಬೇಕಾದಾಗ ತೆಗೆದು ಉಪಯೋಗಿಸುವ ಪದ್ಧತಿ ಇತ್ತು. ನನ್ನಮ್ಮ, ನನ್ನತ್ತೆ ಮಣ್ಣು ಉಜ್ಜಿಟ್ಟ ಬೇಳೆಗಳಿಂದ ಅಡುಗೆಯಲ್ಲಿ ತರುತ್ತಿದ್ದ ವೈವಿಧ್ಯತೆಯನ್ನು ಮರೆಯಲುಂಟೇ ? ಆದರೆ ಈಗ ಕಾಲ ಮುಂದುವರಿದಿದೆ. ಹಲಸಿನಬೇಳೆಯನ್ನು ಚೆನ್ನಾಗಿ ತೊಳೆದು, ನೀರಪಸೆ ಹೋಗುವ ತನಕ ಗಾಳಿಗೆ ಆರಲು ಬಿಟ್ಟು ಒಳ್ಳೆಯ ಪಾಲಿಥೀನ್ ಚೀಲದೊಳಗೆ ಗಾಳಿ ಹೋಗದಂತೆ ಭದ್ರಪಡಿಸಿದರಾಯಿತು. ಈ ಹೊಸ ವಿದ್ಯೆಯನ್ನು ನನ್ನ ಕೆಲಸದಾಕೆ ಕಲ್ಯಾಣಿ ಹೇಳಿಕೊಟ್ಟಳು. ಹಲಸಿನಬೇಳೆ ಲಭ್ಯವಿದ್ದ ಹಾಗೆ ಸಂಗ್ರಹಿಸಿಟ್ಟುಕೊಳ್ಳಿ, ಹಳೆಯ ಖಾದ್ಯಗಳನ್ನು ಮಾಡೋಣ, ಹೊಸ ತಿನಿಸು ಕಂಡುಹಿಡಿಯೋಣ.
ಪ್ರತೀ ನೂರು ಗ್ರಾಂ ಹಲಸಿನ ಬೇಳೆಯಲ್ಲಿರುವ ಪೋಷಕಾಂಶಗಳು ಈ ರೀತಿಯಾಗಿವೆ.
0.4 ಗ್ರಾಂ ಕೊಬ್ಬು
6.6 ಗ್ರಾಂ ಪ್ರೊಟೀನ್
38.4 ಗ್ರಾಂ ಕಾರ್ಬೋಹೈಡ್ರೇಟ್ಸ್ ಹಾಗೂ 1.5 ಗ್ರಾಂ ನಾರಿನಂಶದೊಂದಿಗೆ 98 ಕ್ಯಾಲೊರಿ ಶಕ್ತಿ ಸಮೃದ್ಧವಾಗಿದೆ ಹಲಸಿನಬೇಳೆ.
ಕ್ಯಾಲ್ಸಿಯಂ, ಫಾಸ್ಫರಸ್, ಸೋಡಿಯಂ, ಪೊಟಾಸಿಯಂ ಹಾಗೂ ಕಬ್ಬಿಣಾಂಶಗಳೂ ಮಿತ ಪ್ರಮಾಣದಲ್ಲಿವೆ. ವಿಟಮಿನ್ ಗಳನ್ನೂ ಒಳಗೊಂಡಿರುವ ಹಲಸಿನ ಬೇಳೆಯು ಇತ್ತಿತ್ತಲಾಗಿ ನಿರ್ಲಕ್ಷಿಸಲ್ಪಟ್ಟ ಹಲಸಿನ ಉತ್ಪನ್ನವಾಗಿದೆ ಎಂದರೂ ತಪ್ಪಾಗಲಿಕ್ಕಿಲ್ಲ.
ಹಲಸಿನ ಬೇಳೆಯ ಸಾಂತಾಣಿ:
ಹಲಸಿನ ಹಪ್ಪಳ ತಯಾರಿಯ ಸಂದರ್ಭದಲ್ಲೇ ಸಾಂತಾಣಿ ಮಾಡಿಟ್ಟುಕೊಳ್ಳುವ ವಾಡಿಕೆ, ಆಗ ಬಿಸಿಲೂ ಇರುತ್ತದೆ, ಹಪ್ಪಳ ಒಣಗುವಾಗ ಸಾಂತಾಣಿಯೂ ಒಣಗದೇ... ಡಬ್ಬಿಯಲ್ಲಿ ತುಂಬಿಡುವುದಿದೆ. ಮಳೆಗಾಲದಲ್ಲಿ ಚಳಿ ಚಳಿ ಅನ್ನಿಸುವುದಿದೆ, ಒಂದು ಸಾಂತಾಣಿ ಬಾಯಿಗೆ ಹಾಕಿಕೊಳ್ಳುವುದಿದೆ. ಮಕ್ಕಳೂ ಇಷ್ಟಪಟ್ಟು ತಿನ್ನುವ ಸಾಂತಾಣಿಯನ್ನು ಶಾಲೆಗೂ ಒಯ್ಯುವುದಿದೆ, ಸ್ನೇಹಿತರಿಗೂ ಹಂಚಿ ಕಟುಕುಟು ಅಗಿಯುವುದಿದೆ, ಮೇಸ್ಟ್ರ ಕೋಲಿನ ಏಟಿಗೂ ಗುರಿಯಾಗುವುದಿದೆ.
ತುಂಡಾಗದ, ಮೊಳಕೆ ಬಂದಿರದ ಒಳ್ಳೆಯ ಗುಣಮಟ್ಟದ, ಗಾತ್ರದಲ್ಲಿ ದೊಡ್ಡ ಬೇಳೆಗಳನ್ನು ಆಯ್ದು ಪ್ರೆಶರ್ ಕುಕ್ಕರಿನಲ್ಲಿ ತುಂಬಿಸಿ. ರುಚಿಗೆ ಉಪ್ಪು ಹಾಗೂ ಬೇಳೆ ಬೇಯಲು ಅಗತ್ಯವಾದ ನೀರು ಎರೆದು ಒಂದು ವಿಸಿಲ್ ಕೂಗಿದ ನಂತರ ಸ್ಟವ್ ಆರಿಸಿ ತಣಿಯಲು ಬಿಡಿ. ಆರಿದ ಮೇಲೆ ನೀರು ಬಸಿದು ತೆಗೆಯಿರಿ. ನಾಲ್ಕಾರು ದಿನ ಬಿಸಿಲಿಗೆ ಇಟ್ಟು ಒಣಗಿಸಿಕೊಳ್ಳಿ. ಚೆನ್ನಾಗಿ ಒಣಗಿದ ಈ ಹಲಸಿನ ಬೇಳೆ ಈಗ ಸಾಂತಾಣಿ ಎಂಬ ಹೆಸರನ್ನು ಹೊಂದಿತು!
ಹಲಸಿನ ಬೇಳೆಯನ್ನು ಇನ್ನಿತರ ದವಸಧಾನ್ಯಗಳಂತೆ ಅಡುಗೆಯಲ್ಲಿ ಬಳಸಬಹುದು. ಮಿತಪ್ರಮಾಣದಲ್ಲಿ ರಸಂ. ಕೂಟು ಇತ್ಯಾದಿಗಳಿಗೆ ಹಾಕಲಡ್ಡಿಯಿಲ್ಲ. ಎಣ್ಣೆಯಲ್ಲಿ ಕರಿದು ಬೇಳೆವಡೆ ಕೂಡಾ ಮಾಡಬಹುದು. ಇಷ್ಟು ಸಾಲದು ಎಂಬಂತೆ ಪಾಯಸ, ಹೋಳಿಗೆ ಯಾ ಒಬ್ಬಟ್ಟು ಕೂಡಾ ಬೇಳೆಯ ಖಾದ್ಯಗಳಲ್ಲಿವೆ. ಬರೆಯುತ್ತಾ ಇದ್ದ ಹಾಗೆ ಒಂದು ಶಿಶುಗೀತೆ ನೆನಪಾಯಿತು....
ಒಂದು ಎರಡು
ಬಾಳೆಲೆ ಹರಡು
ಮೂರು ನಾಲ್ಕು
ಪಲ್ಯ ಹಾಕು
ಐದು ಆರು
ಬೇಳೆ ಸಾರು....
ಇಲ್ಲಿರುವಂಥ ಬೇಳೆ ಸಾರು ಹಲಸಿನ ಬೇಳೆಯಿಂದಲೂ ಮಾಡಿಕೊಳ್ಳಬಹುದು. ತೊಗರಿಬೇಳೆ ಬೇಡ, ನಾಲ್ಕು ಹಲಸಿನ ಬೇಳೆ ಹೊರಗಿನ ಸಿಪ್ಪೆ ತೆಗೆದು ಬೇಯಿಸಿ, ಸಾರಿನ ಮಸಾಲಾ ಸಾಮಗ್ರಿಗಳೊಂದಿಗೆ ಅರೆಯಿರಿ. ಉಪ್ಪು, ಹುಳಿ, ಬೆಲ್ಲದೊಂದಿಗೆ ಸಾಕಷ್ಟು ನೀರು ಕೂಡಿಸಿ, ಕುದಿಸಿ, ಒಗ್ಗರಣೆ ಕೊಡಿ. ಹುಳಿಗೆ ಟೊಮ್ಯಾಟೋ ಹಾಕಿದರೂ ಆದೀತು. ಅಲಂಕಾರಕ್ಕೆ ಕೊತ್ತಂಬರಿ ಸೊಪ್ಪು ಇರಲಿ.
Posted via DraftCraft app
Friday, 1 August 2014
ಹಲಸಿನ ಹಣ್ಣಿನ ಪಾಯಸ
ತೋಟದ ಮರಗಳಲ್ಲಿರುವ ಹಲಸಿನ ಹಣ್ಣುಗಳನ್ನು ಎಲ್ಲವನ್ನೂ ಸ್ವಾಹಾ ಮಾಡಲಿಕ್ಕಾಗುವುದಿಲ್ಲ. ಹಾಗೇ ಸುಮ್ಮನೆ ಕೇಳುವವರಿಲ್ಲದೆ ಬಿದ್ದು ಕೊಳೆತು ಹೋಗುವುದೇ ಜಾಸ್ತಿ. ಮುಗಿಯಿತೆಂದರೆ ಮುಗಿಯುವುದಿಲ್ಲ, ನಿನ್ನೆ ಹತ್ತು ಗಂಟೆಯ ಚಹಾ ಕುಡಿದು ನಮ್ಮೆಜಮಾನ್ರು ಬೈಕ್ ಹತ್ತಿ ಉಪ್ಪಳದ ಕಡೆ ಹೋದರು. ನಮ್ಮ ಅಂತರ್ಜಾಲ ಸಂಪರ್ಕ ಸಾಧನದ ಮೋಡೆಮ್ಮು ಸರಿಯಾಗಿ ಕೆಲ್ಸ ಮಾಡ್ತಿರಲಿಲ್ಲ. ಅದರ ಕಾರ್ಯಭಾರ ನಿಮಿತ್ತ ಹೋದವ್ರು ಬರುವಾಗ ಸಂಜೆಯಾಗಿತ್ತು. ಬರುವಾಗ ಚೀಲ ತುಂಬ ಹಲಸಿನ ಹಣ್ಣಿನ ಸೊಳೆಗಳು. ಇದನ್ನೇ ನಾನು ಮುಗಿಯಿತೆಂದರೆ ಮುಗಿಯುವುದಿಲ್ಲ ಅಂದಿದ್ದು. ಉಪ್ಪಳ ಪೇಟೆಯ ಕೆಲಸ ಮುಗಿಸಿ ವಾಪಸ್ಸಾಗುವಾಗ ಬೇಕೂರಿನ ಬಳಿ ಕಳಂದೂರು ಉಷಕ್ಕನ ಮನೆ, ಸೀದಾ ಅಲ್ಲಿಗೆ ಹೋಗಿದ್ದಾರೆ, ಸಂಜೆತನಕ ಹರಟೆ ಹೊಡೆದು, ಹಲಸಿನಹಣ್ಣು ತಿಂದು, ಬರುವಾಗ ಮನೆಗೂ ಹಣ್ಣು ಕೊಟ್ಟಿದ್ದಾಳೆ ಉಷ.
" ಉಷತ್ತೆ ಕೊಟ್ಟಿದ್ದಂತೇ..... ಹಲಸಿನಹಣ್ಣು ಬಂತೂ ನೋಡಮ್ಮಾ" ಅನ್ನುತ್ತಾ ಮಗಳು ಅಪ್ಪನ ಬೈಕಿನಲ್ಲಿ ನೇತಾಡುತ್ತಿದ್ದ ಪ್ಲಾಸ್ಟಿಕ್ ಕ್ಯಾರೀ ಬ್ಯಾಗ್ ಒಳಗೆ ತಂದಳು.
" ಕೊಟ್ಟಿಗೆ ಮಾಡಿಡು "
" ಹೇಗಿದೇ ಹಣ್ಣು "
" ತಿಂದು ನೋಡಲ್ಲ ..."
" ಈಗ ರಾತ್ರಿ ಏಳು ಗಂಟೆ ಆಯ್ತಲ್ಲ, ತೋಟದಿಂದ ಬಾಳೆಲೆ ತರೋರ್ಯಾರು ?"
" ಇಡ್ಲಿ ತಟ್ಟೆಯಲ್ಲಿ ಮಾಡು " ಅಂದರು ಮಗಳ ಅಪ್ಪ.
" ಅದಾಗಲಿಕ್ಕಿಲ್ಲ, ಇಷ್ಟು ಹಣ್ಣಿಗೆ ಮೂರು ಪಾವು ಅಕ್ಕಿ ಬೇಕಾದೀತು, ಮಾಡಿಟ್ರಾಯ್ತಾ, ತಿನ್ನಲಿಕ್ಕೆ ಯಾರುಂಟು ... ಪಾಯಸ ಮಾಡಿ ಕುಡಿದರೆ ಹೇಗೆ ?"
" ಅದೂ ಮಾಡು "
ಚಳಿಚಳಿ ಅನ್ನಿಸುವ ಹಾಗೆ ಮಳೆ ಬೇರೆ ಬರ್ತಿದೆ, ಬಿಸಿಬಿಸಿಯಾಗಿ ದಿಢೀರ್ ಪಾಯಸ ತಯಾರಾಯಿತು, ಉಳಿದ ಹಣ್ಣೆಲ್ಲವೂ ಮಿಕ್ಸಿಯಲ್ಲಿ ಮುದ್ದೆಯಾಗಿ, ಮಿಕ್ಸಿಯಲ್ಲಿ ಮುದ್ದೆಯಾದ ಹಣ್ಣಿನ ಮುದ್ದೆಯಲ್ಲಿ ಒಂದು ಹಿಡಿಯಷ್ಟು ತೆಗೆದಿಟ್ಟು, ಬೆಲ್ಲವೂ ಸೇರಿಕೊಂಡು ಒಲೆಯ ಮೇಲೆ ಕುಳಿತಿತು. " ಜಾಮ್ ಇಲ್ಲವೇ ಬೆರಟಿ ಆಗಲಿದ್ದೇನೆ " ಅಂದಿತು.
" ತೆಗೆದಿಟ್ಟ ಹಣ್ಣೇನ್ಮಾಡ್ತೀರಾ ..."
" ಅದು ಮುಂಜಾನೆಗೊಂದು ತಿಂಡಿ ಆಗ್ಲೇಬೇಕಲ್ಲ. ಅದಕ್ಕಾಗಿ ಮೀಸಲಿಟ್ಟಿದ್ದು "
" ಹೌದಲ್ಲ, ಕ್ಷಣಮಾತ್ರದಲ್ಲಿ ಹಲಸಿನ ಹಣ್ಣಿನ ಪಾಯಸ ಹೇಗೆ ?"
ಹಲಸಿನಹಣ್ಣಿನ ಸೊಳೆಗಳು, 15ರಿಂದ 20 ಸೊಳೆಗಳು ಸಾಕು.
ತೆಂಗಿನಕಾಯಿ ಹಾಲು, ದಪ್ಪ ಹಾಲು ತೆಗೆದಿರಿಸಿ, ನೀರು ಕಾಯಿಹಾಲನ್ನೂ ತೆಗೆಯಿರಿ.
ಸೊಳೆಗಳನ್ನು ಹುಡಿ ಆಗುವಂತೆ ಮಿಕ್ಸಿಯಲ್ಲಿ ತಿರುಗಿಸಿ ತೆಗೆಯಿರಿ. ಕತ್ತಿಯಲ್ಲಿ ಕೊಚ್ಚಿದರೂ ಆದೀತು. ಹಿಟ್ಟಿನಂತಾಗಬಾರದು.
ನೀರು ಕಾಯಿಹಾಲಿನಲ್ಲಿ ಬೇಯಲಿ.
2 ಚಮಚ ಅಕ್ಕಿಹಿಟ್ಟು ನೀರುಕಾಯಿಹಾಲಿನಲ್ಲಿ ನೆನೆಸಿ ಬೆಂದ ಹಣ್ಣಿಗೆ ಎರೆಯಿರಿ.
ಅಕ್ಕಿಹಿಟ್ಟು ಕುದಿಯಿತೇ, ಸೌಟಾಡಿಸಿ.
ಸಿಹಿಗೆ ಬೆಲ್ಲ,
ಡಬ್ಬದಲ್ಲಿ ಸಾಕಷ್ಟು ಇರಲಿಲ್ಲ,
ಚಿಂತೆಯಿಲ್ಲ,
ಸಕ್ಕರೆ ಇದೆಯಲ್ಲ.
ಏಲಕ್ಕಿ ಉಂಟಲ್ಲ,
ಹಾಕಿರಲ್ಲ,
ದಪ್ಪ ಕಾಯಿಹಾಲು ಎರೆದಿರಲ್ಲ,
ಪಾಯಸ ಆಗೇ ಹೋಯ್ತಲ್ಲ.
ಇಷ್ಟೆಲ್ಲ ಆಗುವಾಗ, ಊಟ ಮುಗಿಸಿ, ಪಾಯಸ ಕುಡಿದು ಎದ್ದಾಗ, ಒಲೆಯ ಮೇಲೆ ಇದ್ದ ಹಣ್ಣು ಬೆಂದೆನೆಂದಿತು. ಇನ್ನು ನಾಳೆ ನೋಡಿಕೊಂಡರಾಯಿತು. ಮಲಗುವ ಮೊದಲು ಮಗನಿಗೊಂದು ಫೋನ್ ಹೋಯಿತು.
" ಹೌದ, ಬೆರಟಿ ಕಾಯಿಸಿ ಇಟ್ಟಿರು, ಮುಂದಿನವಾರ ಬರುವೆ ..." ಉತ್ತರ ದೊರೆಯಿತು.
" ಅಣ್ಣ ಬಾ ಅಂತಿದಾನೆ " ಅನ್ನುತ್ತ ಎರಡು ದಿನ ಬಿಟ್ಟು ಮಗಳು ಬೆಂಗಳೂರಿಗೆ ಹೊರಟಳು. ಹಲಸಿನ ಹಣ್ಣಿನ ಜಾಮ್ ತಯಾರಿತ್ತು.
ಇದು ಯಂತ್ರೋಪಕರಣಗಳ ಯುಗ. ಏನೇ ಕಠಿಣ ಕೆಲಸಗಳನ್ನು ನಿಭಾಯಿಸಲು ಅಡುಗೆಮನೆಯಲ್ಲಿ ಏನೇನೋ ಸಾಧನಗಳನ್ನು ತಂದಿಟ್ಟುಕೊಳ್ಳುತ್ತೇವೆ. ಹೌದೂ, ನಮ್ಮಜ್ಜಿಯಂದಿರು ಏನ್ಮಾಡ್ತಿದ್ರಂತೆ, ಕೇಳಿರಲ್ಲ ? ಹಲಸಿನ ಹಣ್ಣು, ಬಾಳೆಹಣ್ಣುಗಳನ್ನು ಅಗತ್ಯ ಬಿದ್ದಾಗ ಅಡಿಕೆ ಮರದ ಅಗಲವಾದ ಹಾಳೆಯ ಮೇಲೆ ಹಣ್ಣುಗಳನ್ನು ಸುರುವಿ, ಚಕಚಕನೆ ನಾಲ್ಕಾರು ಬಾರಿ ಬಾಳಂಗತ್ತಿಯಲ್ಲಿ ಕೊಚ್ಚಿದಾಗ ಹಣ್ಣುಗಳು ಬೇಕಾದ ಹಾಗೆ ತುಂಡಾಗಿ ಸಿದ್ಧವಾಗುತ್ತಿದ್ದುವು. ನಾನೇ ಅದೆಷ್ಟೋ ಬಾರಿ ನನ್ನಮ್ಮನಿಗೆ ಹೀಗೆ ಹಣ್ಣುಗಳನ್ನು ಕೊಚ್ಚಿ ಕೊಟ್ಟಿಲ್ಲ ? ಹೀಗೆ ಕೊಚ್ಚಿದ ಹಣ್ಣಿಗೆ ನಂತರ ಹಲಸಿನ ಹಣ್ಣಿನ ಕೊಚ್ಚಲು ಎಂಬಂತಹ ಹೆಸರು ಕೂಡಾ ಇದೆ. ಫ್ರುಟ್ ಸಲಾಡ್ ಪ್ರಿಯರಿಗೆ ಹಲಸಿನ ಹಣ್ಣಿನ ಕೊಚ್ಚಲು ಮೇಲಿಂದ ಹಾಲಿನ ಐಸ್ ಕ್ರೀಂ ಎರೆದು ಫ್ರೀಜ಼ರ್ ಒಳಗಿಟ್ಟು ಕೂಡಾ ತಿನ್ನಬಹುದು.
ಈಗ ಈ ಬರಹ ಸಿದ್ಧ ಪಡಿಸುತ್ತಿದ್ದಾಗ ಬಾಳಂಗತ್ತಿಯ ನೆನಪಾಯಿತು. ವಾಸ್ತವವಾಗಿ ಬಾಳಂಗತ್ತಿಯನ್ನು ಅಡಿಕೆತೋಟದ ಮಾಲೀಕರು ರಾತ್ರಿವೇಳೆ ತೋಟ ಕಾಯುವ ಕೆಲಸಗಾರನ ಕೈಯಲ್ಲಿರಿಸುತ್ತಿದ್ದರು. ಅಡಿಕೆ ಹಣ್ಣಾಗಿ, ತೋಟದಿಂದ ಅಂಗಳಕ್ಕೆ ಬಂದು, ಅಂಗಳದಲ್ಲಿ ಒಣಗಿ, ಅಟ್ಟದ ದಾಸ್ತಾನು ಕೊಠಡಿಯೆಂಬ ಪತ್ತಾಯದ ಒಳ ಸೇರುವ ತನಕ ಬಾಳಂಗತ್ತಿಯ ಕಾವಲು. ಬಾಳಂಗತ್ತಿಯೂ ಅಡಿಕೆ ಕೃಷಿಕರ ಮರ್ಜಿಗನುಸಾರ ವಿಧ ವಿಧ ವಿನ್ಯಾಸಗಳಲ್ಲಿರುತ್ತಿದ್ದವು. ಸಾಂಪ್ರದಾಯಿಕ ತರವಾಡು ಮನೆಗಳಲ್ಲಿ ಈಗ ಬಾಳಂಗತ್ತಿ ಉಪಯೋಗವಿಲ್ಲದೆ ಮೂಲೆಯಲ್ಲಿರುವ ಸಾಧ್ಯತೆಯೇ ಹೆಚ್ಚು.
ಹಿಂದೆ ಅಂದರೆ ನನ್ನ ಬಾಲ್ಯದ ನೆನಪಿನ ಪುಟಗಳಲ್ಲಿ ಹಲಸು ಮರದಲ್ಲಿ ಗುಜ್ಜೆ ಬಿಟ್ಟಲ್ಲಿಂದ ಪ್ರಾರಭವಾಗಿ ಹಣ್ಣಾಗಿ ಮುಗಿಯುವ ತನಕದ ಎಲ್ಲ ಹಂತಗಳಲ್ಲೂ ಹಲಸು ದಿನನಿತ್ಯದ ಉಪಯೋಗಕ್ಕೆ ಲಭ್ಯವಿತ್ತು. ಈಗ ಹಾಗಿಲ್ಲ, ಹಲಸು ತಿನ್ನಿ ಎಂದು ತಮಟೆ ಹೊಡೆದು ಹೇಳುವಂಥಲ್ಲಿಗೆ ನಾವು ತಲಪಿದ್ದೇವೆ. ಅಲ್ಲಿಲ್ಲಿ ಹಲಸುಮೇಳ, ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಗಳನ್ನು ಕಾಣುತ್ತಿದ್ದೇವೆ. ವರ್ಷಕ್ಕೊಮ್ಮೆ ಇಂತಹ ಮೇಳಗಳಲ್ಲಿ ದೊರಕಿದ್ದನ್ನು ತಿಂದು ಬಾಯಿ ಚಪ್ಪರಿಸಿದರೇನು ಬಂತು ? ಗ್ರಾಮೀಣ ಪ್ರದೇಶಗಳಲ್ಲಿ ಹಲಸು ವರ್ಷವಿಡೀ ದೊರೆಯುವಂಥದ್ದು ಎಂಬ ವಾಸ್ತವ ಎಷ್ಟು ಮಂದಿಗೆ ತಿಳಿದಿದೆ ? ನೂರಾರು ಹಲಸು ಮರಗಳಿರುವ ಭೂಪ್ರದೇಶದಲ್ಲಿ ಒಂದಲ್ಲ ಒಂದು ಮರ ಫಲ ನೀಡುತ್ತಿರುತ್ತದೆ. 40 ವರ್ಷಗಳ ಹಿಂದೆ, ನಮ್ಮ ಹಿರಿಯರ ಯಜಮಾಂತಿಕೆಯ ಕಾಲದಲ್ಲಿ ಹಲಸಿಗೆ ಇಂತಹ ಶೋಚನೀಯ ಸ್ಥಿತಿ ಇರಲಿಲ್ಲ. ಕೃಷಿ ಕಾರ್ಮಿಕರು ಹಾಗೂ ಮರಗಳ ಬಾಂಧವ್ಯ ಚೆನ್ನಾಗಿತ್ತು. ಸಂಜೆಯಾಗುತ್ತಲೇ ಹಣ್ಣುಗಳನ್ನು ಹೊತ್ತು ತರುವ ಕಾರ್ಮಿಕರು ಮನೆ ಯಜಮಾನನ ಅಗತ್ಯ ನೋಡಿಕೊಂಡು ತಮ್ಮೊಳಗೆ ವಿನಿಮಯ ಮಾಡಿಕೊಳ್ಳುತ್ತಿದ್ದರು. ಹಣ್ಣು ಮಾತ್ರವಲ್ಲ, ಬೇಳೆ ಕೂಡಾ ಸದುಪಯೋಗ ಆಗುತ್ತಿದ್ದುದನ್ನು ನೋಡುತ್ತ ದೊಡ್ಡವರಾದವರು ನಾವು.
ಕಾಸರಗೋಡು ನಗರದ ನಮ್ಮ ಮನೆಗೆ ಊರಿನ ತೋಟದಿಂದ ಕೆಲಸದಾಳುಗಳೇ ಹಲಸನ್ನು ಹೊತ್ತು ತರುತ್ತಿದ್ದರು. ಉಪ್ಪುಸೊಳೆಯೂ ಸಿದ್ಧವಾಗುತ್ತಿತ್ತು, ಉಂಡ್ಳಕಾಳನ್ನೂ ಮಾಡಬಹುದಾಗಿತ್ತು. ಗುಜ್ಜೆ ಪಲ್ಯ, ಉಪ್ಪಿನಕಾಯಿ, ಬೇಳೆಚಕ್ಕೆ ಕೊದಿಲ್, ಹಲಸಿನಕಾಯಿ ದೋಸೆ, ಸೋಂಟೆ, ಹಪ್ಪಳ, ಹಣ್ಣಿನ ಕೊಟ್ಟಿಗೆ, ಹಣ್ಣುಹಪ್ಪಳ, ಬೆರಟಿ ಪಾಯಸ, ಹಲಸಿನ ಹಣ್ಣುತುಪ್ಪ ಹೀಗೆ ಮುಗಿಯದ ಲಿಸ್ಟ್... ಉಪ್ಪು ಸೊಳೆಯ ರೊಟ್ಟಿ, ಬೋಳುಹುಳಿ, ಪಲ್ಯ ಇವೆಲ್ಲ ವಿಭಿನ್ನ ರುಚಿಯ ಖಾದ್ಯಗಳು.
ಹಲಸಿನ ರೆಚ್ಚೆ ಜೊತೆ ಕಡಿಯಕ್ಕಿ ಬೇಯಿಸಿ ಉತ್ತಮ ಪಶು ಆಹಾರ ಸಿದ್ಧಪಡಿಸುತ್ತಿದ್ದರು ನಮ್ಮ ಜನ. ಕರೆಯುವ ಹಸು ಎಮ್ಮೆಗಳಿಗೆ ಈ ಆಹಾರದಿಂದ ಧಾರಾಳ ಹಾಲು. ಕೊಂಡು ತರುವ ಪಶು ಆಹಾರಗಳಲ್ಲೂ ಮಿತವ್ಯಯ ಸಾಧಿಸಬಹುದು. ಜಾನುವಾರುಗಳೂ ಇಷ್ಟಪಟ್ಟು ಪಾಯಸ ಹೀರಿದಂತೆ ಕುಡಿಯುವ ಸಂಭ್ರಮವನ್ನು ನೋಡಿಯೇ ಆನಂದಿಸಬೇಕು. ಅಂತೂ ಹಲಸಿನ ಹಣ್ಣಿನ ಯಾವ ತುಂಡೂ ನಿರುಪಯುಕ್ತವಲ್ಲ ಎಂಬುದು ನಮಗೆ ತಿಳಿದಿದೆ. ಆದರೆ ಈಗ ಪ್ರಚಾರ ಬೇಕಾಗಿದೆ, ಯಾಕೆ ಹೀಗಾಗಿದೆ ? ಆತ್ಮಾವಲೋಕನ ನಾವೇ ಮಾಡಿಕೊಳ್ಳಬೇಕಾಗಿದೆ. ನೆನಪಿರಲಿ, ಹಲಸುಬೆಳೆಗೆ ಕೀಟನಾಶಕಗಳ ಸಿಂಪರಣೆ ಇಲ್ಲ, ರಸಗೊಬ್ಬರಗಳನ್ನೂ ಅದು ಕೇಳುವುದಿಲ್ಲ. ಪ್ರಕೃತಿಯಲ್ಲಿ ಉಚಿತವಾಗಿ ದೊರೆಯುವ ಪರಿಶುದ್ಧವಾದ ಹಲಸಿನ ಹುಲುಸು ಬೆಳೆಯನ್ನು ನಿರ್ಲಕ್ಷಿಸದಿರೋಣ.
ಹಲಸಿನ ಹಣ್ಣಿನ ದೋಸೆ
ಹಲಸಿನ ಹಣ್ಣಿನ ಪಾಯಸ ಕುಡಿದಾಯ್ತಲ್ಲ, ಉಳಿದ ಹಣ್ಣು ಮಿಕ್ಸೀಯಲ್ಲಿ ಮುದ್ದೆಯಾಗಿದ್ದುದ್ದರಲ್ಲಿ ಒಂದು ಹಿಡಿ ತೆಗೆದಿಟ್ಟಿದ್ದೆನೆಂದು ಬರೆದಿದ್ದೆನಲ್ಲ, ಅದೇನಾಯ್ತೂಂತ ಬರೆಯದಿದ್ದರೆ ಹೇಗೆ?
ಮಗಳ ಹುಕುಂ ಪ್ರಕಾರ ಉದ್ದಿನದೋಸೆಗಾಗಿ ಅಕ್ಕಿ, ಉದ್ದು, ಮೆಂತೆ ಸಂಜೆಯೇ ನೆನೆ ಹಾಕಿ ಆಗಿತ್ತು. ಇದೀಗ ಹಲಸಿನ ಹಣ್ಣನ್ನೂ ಕೂಡಿಸಿಕೊಂಡು ಅರೆದಿದ್ದಾಯಿತು. ಉದ್ದು ತುಸು ಕಮ್ಮಿ ಹಾಕಿದ್ರೂ ಆಗ್ತಿತ್ತು, ಆದ್ರೇನ್ಮಾಡೋಣಾ, ಉದ್ದು ನೀರಿಗೆ ಹಾಕಿ ಆಗಿತ್ತಲ್ಲ, ಚಿಂತೆಯಿಲ್ಲ.
ಅಳತೆ ಪ್ರಮಾಣ:
ಬೆಳ್ತಿಗೆ ಅಕ್ಕಿ 3 ಕಪ್
ಉದ್ದು ಒಂದು ಕಪ್
ಮೆಂತೆ 2-3 ಚಮಚ
ಹಲಸಿನ ಹಣ್ಣು 7-8 ಸೊಳೆ
ರುಚಿಗೆ ಉಪ್ಪು ಕೂಡಿಸಿ ಮುಚ್ಚಿ ಇಟ್ಟು ಮಾರನೇ ದಿನ ಮುಂಜಾನೆಗೊಂದು ತಿಂಡಿ ರೆಡಿ.
Posted via DraftCraft app
Subscribe to:
Posts (Atom)