ವೆಂಕಟೇಶಂದು ದೂರವಾಣಿ ಕರೆ, " ಅಕ್ಕಾ, ಅಪ್ಪಂದು ತಿಥಿ ಇದೇ ತಿಂಗಳು 25ನೇ ತಾರೀಕು...."
" ಹ್ಞೂ " ಅಂದ್ಬಿಟ್ಟು ತಾರೀಕು ನೆನಪಿಗಾಗಿ ಕ್ಯಾಲೆಂಡರ್ ಪುಟದಲ್ಲಿ ಗುರುತು ಮಾಡಿಟ್ಟೂ ಆಯಿತು. ಈಗ ಮರೆತು ಹೋಗದಂತಿರಲು ಆ್ಯಪ್ಸ್ ಬಂದಿವೆ, ನನ್ನ ಐಪಾಡ್ ಕೂಡಾ reminder apps ಅನ್ನು ಹೊಂದಿದೆ. ಅದೂ ವಾರ, ದಿನ, ಗಂಟೆ ಎಲ್ಲವನ್ನೂ ತುಂಬಿಸಿ ಕೊಟ್ರೆ ಆ ಹೊತ್ತಿಗೆ ಅಲರಾಂ ಕೊಟ್ಬಿಡುತ್ತೆ, ಈಗೇನಿದ್ರೂ ತಂತ್ರಗಳ ಕಾಲ ಅಲ್ವೇ, ಇರಲಿ.
ದಿನ ಮುಂಚಿತವಾಗಿ ಮಗಳೂ ಬೆಂಗಳೂರಿನಿಂದ ಬಂದಿದ್ದಳು. ಒಳ್ಳೆಯದೇ ಆಯಿತು, ಅಜ್ಜನ ತಿಥಿಯ ಹೋಳಿಗೆ ಮೊಮ್ಮಗಳು ತಿನ್ನದಿದ್ದರಾದೀತೇ, ಬೆಳಗಿನ ಜಾವ ಟಿಫಿನ್ ಮುಗಿಸಿ ನಮ್ಮ ವಾಹನ ಹೊರಟಿತು.
ಶ್ರಾದ್ಧದ ಔಪಚಾರಿಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳುತ್ತಿದ್ದಂತೆ ಐ ಫೋನ್ ಕೆಮರಾವೂ ಅಲ್ಪಸ್ವಲ್ಪ ಕೆಲಸ ಮಾಡದೇ ಬಿಡಲಿಲ್ಲ. ಹಳೆಯಮನೆಯನ್ನು ಹಾಗೇ ಉಳಿಸಿಕೊಂಡು ಅದಕ್ಕೆ ತಾಗಿದಂತೆ ಮನೆಯನ್ನು ಹೊಸ ಮಾದರಿಯಲ್ಲಿ ವಿಸ್ತರಿಸಿದ್ದರು ನಮ್ಮಪ್ಪ. ಆಧುನಿಕ ವಿನ್ಯಾಸದ ಕಾಂಕ್ರೀಟ್ ಕಟ್ಟಡಗಳೇ ಎಲ್ಲೆಡೆ ತುಂಬಿ ಹೋಗಿರುವಾಗ ಹಳೇ ಕಟ್ಟಡಗಳ ಕುಸುರಿ ಕೆಲಸ ಈಗ ಎಲ್ಲೂ ಕಾಣ ಸಿಗದು.
ನಮ್ಮ ಮಧು, ಎರಡು ವರ್ಷಗಳ ಹಿಂದೆ ಕುವೆಂಪು ಅವರ ಕುಪ್ಪಳ್ಳಿ ನಿವಾಸವನ್ನು ನೋಡಿಕೊಂಡು ಬಂದಿದ್ದ. " ಹಾಗಿದೆ, ಹೀಗಿದೆ... " ಮುಗಿಯದ ವರ್ಣನೆ ಕೇಳಿ ನಾನು ಸುಸ್ತು. ಕಣ್ಣೆದುರಲ್ಲಿ ಕಾಷ್ಠ ಕಲೆಯನ್ನು ನೋಡುತ್ತಲೇ ಬೆಳೆದವರು ನಾವು, ಅವನಿಗದೆಲ್ಲಿಂದ ಅರ್ಥವಾಗಬೇಕು ?
ತರವಾಡು ಮನೆಗಳ ಸೊಗಸೇ ಬೇರೆ, ದೇವರಮನೆಯ ಬಾಗಿಲು, ದ್ವಾರದ ವಿನ್ಯಾಸ, ಕಿಟಿಕಿಗಳನ್ನು ನಮ್ಮ ಕಡೆ ' ಗಿಳಿಬಾಗಿಲು ' ಅನ್ನೋ ರೂಢಿ, ಗಿಳಿಬಾಗಿಲು ಎಂಬ ಶಬ್ದ ಹೇಗೆ ಅಥವಾ ಯಾಕೆ ಬಳಕೆಗೆ ಬಂದಿತೆಂದು ಕಿಟಿಕಿಯ ವಿನ್ಯಾಸ ನೋಡಿದ್ರೇನೇ ತಿಳಿದೀತು. ಹೊರಚಾವಡಿಯ ಮರದ ಮುಚ್ಚಿಗೆ, ಅದಕ್ಕೂ ಆಧಾರಸ್ತಂಭ ಸಂಪೂರ್ಣವಾಗಿ ಮರದ ಕೆತ್ತನೆ ಕೆಲಸ.
ಬರೆಯುತ್ತಾ ಇದ್ದ ಹಾಗೆ ಇಂತಹ ಆಧಾರಸ್ತಂಭಗಳಿಗೆ ನಮ್ಮ ಕಡೆ ಒಂದು ಹೆಸರಿದೆ ಎಂದು ನೆನಪಾಯಿತು. ಆ ಮನೆಯಲ್ಲೇ ವಾಸವಾಗಿರುವ ತಮ್ಮನ ಬಳಿಯೇ ಕೇಳಬೇಕಾಯಿತು. " ಅಕ್ಕ, ನಾವು ಹೇಳೂದು ಬಾಜಾರ ಕಂಬ " ಅಂತಂದ, " ಇನ್ನು ಕನ್ನಡದಲ್ಲಿ ಹೇಗೆ ಹೇಳುವುದೋ ಗೊತ್ತಿಲ್ಲ "
ಅಂತೂ ಮರೆತು ಹೋದದ್ದು ತಿಳಿದ ಹಾಗೂ ಆಯಿತು. ಕುಂಬ್ಳೆಯಲ್ಲಿ ಸಿವಿಲ್ ಇಂಜಿನಿಯರ್ ತಂಗಿ ಇರುವಾಗ ಸೂಕ್ತ ಕನ್ನಡ ಪದ ತಿಳಿಯಲು ಕಷ್ಟವೇನೂ ಆಗದು ಎಂಬ ಅನಿಸಿಕೆ ನನ್ನದಾಗಿತ್ತು.
" ಅದೂ ಇಂಗ್ಲೀಷಿನಲ್ಲಿ column ಅಂತಾರೆ, ಕನ್ನಡದಲ್ಲಿ ಹೇಗೋ ಗೊತ್ತಿಲ್ಲ.... " ಅಂದಳು ಗಾಯತ್ರಿ.
" ಹೌದಾ, ಬೇಕಾದಷ್ಟು online ಡಿಕ್ಷನರಿಗಳು ಸಿಗ್ತವೆ, ಆ್ಯಪ್ ಕೂಡಾ ಇರುವಾಗ, ನಿನ್ನ ಇಂಗ್ಲೀಷ್ ಶಬ್ದಕ್ಕೆ ಕನ್ನಡ ಅರ್ಥ ಸಿಗಬಹುದು "
ಹುಡುಕಾಟ ನಡೆಸಿದಾಗ ' ಕುಂದ ' ಪದ ಪದಾರ್ಥ ಸಿಕ್ಕಿಯೇ ಬಿಟ್ಟಿತು!
"ಸಿಕ್ತಾ... "
" ಹ್ಞೂ, ಕುಂದ ಅನ್ನುತ್ತಾರೆ ನಮ್ಮ ಕನ್ನಡ ಭಾಷೇಲಿ "
" ಅಡಿಕೆ ಮರದ ಕುಂದ ಹಾಕೂದು ... " ಅವಳಿಗೆ ನಗು.
0 comments:
Post a Comment