ಗಜಲಿಂಬೆಯ ಹಣ್ಣುಗಳ ಗೊಂಚಲು ಗಿಡದಲ್ಲಿ ತೊನೆದಾಡುತ್ತಿರುವಾಗ, ಸಂಜೆಯ ಹೊತ್ತು ಯಾರೇ ಬರುವವರಿದ್ದರೂ ಶರಬತ್ತು ಮಾಡಿಟ್ಟು ರೂಢಿ ಆಗ್ಹೋಗಿದೆ. ಕಾಫಿ, ಟೀ ಅಂತೆಲ್ಲ ಮಾಡೋದೇನಿದ್ರೂ ಮುಂಜಾನೆ ಹೊತ್ತು.
ಅದರಲ್ಲೂ ಈಗ ನಮ್ಮ ಮನೆ ಹುಡುಗ ಪ್ರಕಾಶ್, ಬೆಂಗಳೂರಿನಲ್ಲಿ ಮನೆ ಖರೀದಿಸಿದ್ದಾನೆ. ಗೃಹಪ್ರವೇಶ ಆಗ್ಬೇಡವೇ, ನಾವೆಲ್ಲ ಹೋಗ್ಬೇಡವೇ, ಆಮಂತ್ರಣದೊಂದಿಗೆ ಸಂಜೆ ಮನೆ ಕಡೆ ಬಂದ. ಬರುವಾಗ ಸಕುಟುಂಬ ಸಹಿತವಾಗಿ ಎಲ್ಲರೂ ಬಂದ್ರು. ಬರ್ತಾನೇಂತ ಗೊತ್ತಿದ್ದುದರಿಂದ ಲಿಂಬೇ ಪಾನಕ ಮಾಡಿದ್ದೂ ಆಗಿತ್ತು.
" ಅರೆ! ಪಾನಕ ಮಾಡೋ ವಿಧಾನ ಸ್ವಲ್ಪ ಹೇಳ್ರೀ "
10 - 12 ಲೋಟ ಪಾನಕ ಆಗಬೇಕಿದೆ.
4 ಲಿಂಬೆ ಹಣ್ಣು.
ಒಂದು ಪಾವು ಸಕ್ಕರೆ.
ಪಾವು ಅಳತೆ ತಿಳಿಯದವರು 2 ದೊಡ್ಡ ಸೌಟು ಸಕ್ಕರೆ ಅಂತ ಬರೆದುಕೊಳ್ಳಿ.
3 ಲೋಟ ನೀರು ಕುದಿಯಲಿ.
ಕುದಿದ ನೀರಿಗೆ ಸಕ್ಕರೆ ಬೀಳಲಿ, ಕರಗುತ್ತಾ ಇರಲಿ.
ಉಳಿದ 9 ಲೋಟ ನೀರನ್ನೂ ಬಿಸಿ ಮಾಡ್ತಾ ಇದ್ದ ಹಾಗೆ ಲಿಂಬೆ ಹಣ್ಣುಗಳನ್ನು ಕತ್ತರಿಸಿ ರಸ ತಗೆದು, ಬೀಜಗಳಿದ್ದರೆ ಆರಿಸಿ ತೆಗೆಯಿರಿ.
ಲಿಂಬೆಯ ಸಿಪ್ಪೆಗಳನ್ನೂ ನೀರಿಗೆ ಹಾಕಿ ಹಿಂಡಿ ತೆಗೆಯಬಹುದಾಗಿದೆ, ಸಿಪ್ಪೆ ಒಂದು ಅತ್ಯುತ್ತಮ ಆ್ಯಂಟಿ ಓಕ್ಸಿಡೆಂಟ್.
ಸಿದ್ಧವಾದ ಸಕ್ಕರೆಯ ದ್ರಾವಣಕ್ಕೆ ಲಿಂಬೆರಸ, ಬಿಸಿನೀರು ಎರೆಯಿರಿ.
ಬಿಸಿ ಬಿಸಿ ಶರಬತ್ತು ತಯಾರಕರು ಮೊದಲಾಗಿ ಕುಡಿದು " ವಾಹ್ ವಾಹ್ " ಅನ್ನಿರಿ.
ಬಂದವರೆಲ್ಲ ಅಚ್ಚುಕಟ್ಟಾಗಿ ಶರಬತ್ತು ಕುಡಿದು ಹೋದರು. ಆದರೂ ಒಂದು ಲೋಟ ಶರಬತ್ತು ಉಳಿಯಿತು, ನಾನೇ ಕುಡಿಯಬಹುದಾಗಿತ್ತು, ಆದ್ರೇನ್ಮಾಡ್ಲೀ, ಈಗಾಗಲೇ 2 ಲೋಟ ಕುಡಿದಿದ್ದಾಗಿದೆ, ನಾಳೆಗೆ ಇಟ್ಕೊಳ್ಳೋಣ.
ಆ ನಾಳೆ ಬಂದಿತು. ಚಹಾ ಸಮಯ, ಗಂಟೆ ಹತ್ತಾಯಿತು.
ಅರ್ಧ ಲೋಟ ನೀರು ಕುದಿಯಿತು, ಚಹಾಪುಡಿ ನೀರಿಗೆ ಬಿದ್ದಿತು.
ತಣ್ಣನೆಯ ಶರಬತ್ತು ಬೆಚ್ಚಗಾಯಿತು, ಕುದಿಸದಿರಿ.
ಬಿಸಿಬಿಸಿಯಾದ ಚಹಾ ದ್ರಾವಣ ಲಿಂಬೇ ಪಾನಕಕ್ಕೆ ಇಳಿಯಿತು.
" ವಾರೆವ್ಹಾ, ಲೆಮೆನ್ ಟೀ ಅಂದ್ರೆ ಇದು " ನಮ್ಮೆಜಮಾನ್ರು ಈ ಚಹಾ ಕುಡಿದು ನೂರಕ್ಕೆ ನೂರು ಮಾರ್ಕು ಕೊಟ್ಟಿದ್ದು ಸುಳ್ಳಲ್ಲ !
ಅಂದ ಹಾಗೆ ಕುದಿಯುವ ನೀರಿನಲ್ಲಿ ಶರಬತ್ತು ಮಾಡಲು ಸೂಚಿಸಿದ್ದು ನನ್ಮಗ ಮಧು, ಅವನೂ ಬೆಂಗಳೂರಿನಲ್ಲಿದಾನೇ, " ತಣ್ಣಗಿನ ನೀರು ಇಲ್ಲಿ ಕುಡಿಯೋ ಹಾಗಿಲ್ಲ, ನಾವು ಹಾಟ್ ಜ್ಯೂಸ್ ಕುಡಿಯೋದು " ಅಂದಿದ್ದ.
0 comments:
Post a Comment