Pages

Ads 468x60px

Thursday, 21 January 2016

ಈ ಸಂಭಾಷಣೇ.....




ಮನೆಕೆಲ್ಸ ಆಗ್ಹೋಯ್ತು,  ಊಟವೂ ಆಯ್ತು.   ಅಪ್ಪ ಮಗ ಜತೆಯಲ್ಲಿ ಎಲ್ಲಿಗೋ ಹೊರಟಿದ್ರು.   ಇನ್ನೇನು ಆರಾಮವಾಗಿ ಮಲಗೋದು ಅಂತ ಸಿದ್ಧತೆಯಲ್ಲಿದ್ದಾಗ ಬಾಗಿಲಿನ ಶಬ್ದ ಆಯಿತು.   ಈ ಮಟ ಮಟ ಮದ್ಯಾಹ್ನ ... " ಯಾರಪ್ಪಾ ....?" ಅನ್ನುತ್ತಾ ಹೊರ ಬಂದಾಗ ಕೈಲೊಂದು ದೊಡ್ಡ ಬ್ಯಾಗ್ ಹಿಡಿದ ಸೂಟು ಬೂಟುಧಾರಿ ಎದುರಾದ.

" ಯಾರೂ ಇಲ್ಲದ ಹೊತ್ತಿಗೆ ಯಾಕೇ ಬರ್ತೀರಾ... ಹೋಗ್ಬಹುದು "
ಅವನೋ ಶುದ್ಧ ಮಲಯಾಳ ಭಾಷೆಯಲ್ಲಿ ಬಡಬಡಿಸಲು ಪ್ರಾರಂಭಿಸಿದ.
" ನೋಡೂ... ನಂಗೆ ಮಲಯಾಳ ಬರೂದಿಲ್ಲ,  ಹೋಗು "
ಅವನು ಬಿಡಬೇಕಲ್ಲ,  " ಕೈರಳಿ ಟೀವಿ ನೋಡ್ತೀರಾ .." ಪ್ರಶ್ನೆ ಎಸೆದ.
" ಇಲ್ಲವಲ್ಲ.."
" ಅದ್ರಲ್ಲಿ ಅಡುಗೆ ಕಾರ್ಯಕ್ರಮ ನೋಡ್ತೀರಾ...." 
" ಅದನ್ನೆಲ್ಲ ನೋಡುವುದಕ್ಕಿಲ್ಲ "
" ಹ್ಞಾ,  ಅವರ ಅಡುಗೆ ಕಾರ್ಯಕ್ರಮದಲ್ಲಿ ಇಂತದ್ದೇ ಪಾತ್ರೆಯಲ್ಲಿ ಮಾಡೂದು,  ನೋಡಿ..." ಅನ್ನುತ್ತಾ ಬ್ಯಾಗು ಬಿಡಿಸಿ ನಾಲ್ಕು ಕಪ್ಪುಕಪ್ಪಗಿನ ಬೋಗುಣಿಗಳಂತಹ ಪಾತ್ರೆಗಳನ್ನು ಎದುರಿಗಿಟ್ಟ.
" ಕೈರಳಿ ಟೀವಿಯ ಲಕ್ಷ್ಮೀ ಗೋಪಾಲನ್ ಇದರಲ್ಲೇ ಅಡುಗೆ ಮಾಡ್ತಾರೆ " ಅಂತ ಹೇಳ್ಬಿಟ್ಟು ಯಾವುದೋ ಪ್ರಸಿದ್ಧ ಕಂಪೆನಿಯ ರಟ್ಟಿನ ಪೆಟ್ಟಿಗೆ ತೋರಿಸಿದ.
"ಇರಲೀ,  ನನಗೇನೂ ಇದು ಬೇಡ.... ನೀನು ಹೋಗು "
" ಇಲ್ಲಮ್ಮ,  ಒಂದು ಚಿಕ್ಕ ಪ್ರಶ್ನೆ... ಉತ್ತರ ಹೇಳಿದ್ರೆ ಈ ಎಲ್ಲ ಪಾತ್ರೆಯೂ ನಿಮಗೇ ಕೊಡ್ತೀನಿ "
" ಪ್ರಶ್ನೆಯೂ ಬೇಡ,  ನಿನ್ನ ಪಾತ್ರೆಯೂ ಬೇಡ "
" ನೀರಿನಲ್ಲಿ ಹುಟ್ಟಿ ನೀರಿನಲ್ಲಿ ಸಾಯುವಂಥದು ಯಾವ್ದೂಂತ ಹೇಳಿದ್ರೆ ಸಾಕು "
ಅವನು ಕೇಳಿದ್ದು ಒಂದು ಒಗಟು ತಾನೇ...  ಉತ್ತರಿಸುವುದರಿಂದ ತೊಂದರೆಯಿಲ್ಲ ಅಂದ್ಕೊಂಡು  " ಇನ್ನೊಮ್ಮೆ ಹೇಳು ನಿನ್ನ ಪ್ರಶ್ನೆ " 
ಅವನೂ ಮರು ಉಚ್ಚರಿಸಿದ.
" ಉಪ್ಪು "
" ಕರೆಕ್ಟ್!  ಈ ಪಾತ್ರೆ ಎಲ್ಲ ತೆಕ್ಕೊಳ್ಳಿ... ಇದು ನಿಮ್ಮದೇ "
ಅಯ್ಯೋ  ನಂಗೇನೂ ಬೇಡಾ ಅಂದಿದ್ದೇನಲ್ಲ,  ನೀನೇ ಇಟ್ಕೋ "
" ಇಲ್ಲಮ್ಮ,  ಇದು ನಿಮ್ಮದೇ.. ನೀವು ಗೆದ್ದಿದ್ದೀರಿ...  ಅಮ್ಮ ಎಷ್ಟು ಕಲ್ತಿದ್ದೀರಿ ನೀವು... ಟೀಚರಾ ?"
" ಏನೂ ಅಲ್ಲ,  ಒಮ್ಮೆ ಇಲ್ಲಿಂದ ಪೆಟ್ಟಿಗೆ ಕಟ್ತೀಯಾ "
" ನಿಮ್ಮ ಹೆಸ್ರು,  ಮೊಬೈಲ್ ನಂಬ್ರ ಕೊಡಿ "
" ಯಾಕೇ ?"
ಅವನು ಒಂದು ರಸೀದಿ ಪುಸ್ತಕ ಹೊರ ತೆಗೆದ. 
ನೋಡೂ...  ಮೊಬೈಲ್ ಗಿಬೈಲ್ ಇಲ್ಲ "
" ಲ್ಯಾಂಡ್ ಫೋನ್ ನಂಬ್ರ ಕೊಡಿ "
ಬರೆದುಕೋ.....
ನಿಮಗೆ ಈ ನಾಲ್ಕು ಪಾತ್ರೆಯೂ ಸಿಕ್ಕಿತು,  ಇಟ್ಕೊಳ್ಳಿ.  ಒಂದು ಪಾತ್ರೆಯ ಕ್ರಯ ಕೊಟ್ಬಿಡಿ"
ಎಲ ಇವನ!  " ಹೋಗಪ್ಪಾ ಹೋಗು,  ದುಡ್ಡು ಏನೂ ಇಟ್ಕಂಡಿಲ್ಲ "
" ಏನಮ್ಮ ಹಿಂಗಂತೀರಿ,  ಮಹಾಲಕ್ಷ್ಮಿ ಹಾಗಿದ್ದೀರಿ ಕೊಡಿ "
" ಇಲ್ಲಾಂದ್ರೆ ತಿಳಿಯೂದಿಲ್ವ,  ಹೋಗು ಸುಮ್ಮನೆ "
" ನೋಡೀಮ್ಮಾ ನಾನು ರಸೀದಿ ಬರೆದು ಆಯ್ತು,  ನೀವು ದುಡ್ಡು ಕೊಡ್ಲಿಲ್ಲಾಂದ್ರೆ ನಾನು ಕಂಪೆನಿಗೆ ನಷ್ಟ ಭರ್ತಿ ಮಾಡ್ಬೇಕಾಗ್ತದೆ ...  ನೂರು ರೂಪಾಯಿ ನಾನು ಕೈಯಿಂದ ಕೊಡಬೇಕಲ್ಲ "
" ಆಗ್ಲೀ,  ನಾನೇನು ಬೇಕೂಂತ ಕೇಳಿದ್ನಾ ?  ಸುಮ್ನೇ ಹೋಗು "
" ಒಂದ್ಲೋಟ ನೀರು ಕೊಡಿ ಅಮ್ಮ "
ಮಟ ಬಿಸಿಲಿನ ಅಂಗಳಲ್ಲಿ ನಿಂತು ಲೆಕ್ಚರ್ ಬಿಗಿದು ಗಂಟಲೊಣಗಿರಬೇಕು.   ಅಲ್ಲೇ ಟೇಬಲ್ ಮೇಲಿದ್ದ ನೀರಿನ ಬಾಟಲ್  ಎದುರಿಗಿಟ್ಟು  " ನೀರು ಕುಡಿದ್ಬಿಟ್ಟು ಹೋಗು ತಿಳೀತಾ..."
" ಬರ್ತೇನಮ್ಮ "



0 comments:

Post a Comment