Pages

Ads 468x60px

Monday, 4 January 2016

ಚಟ್ಣಿಯ ಚಂದಿರಯಾನ









ಸಪ್ಟಂಬರ್ - ಅಕ್ಟೋಬರ್ ಬಂದಾಗ ಗೆಡ್ಡೆಗಳು ನೆಲದೊಳಗೆ ಅವಿತು ಬಿಡುತ್ತವೆ,  ಅಂದ್ರೆ ಮೇಲೆ ಕಾಣಿಸುವ ಸಸ್ಯದ ಕಾಂಡ ಒಣಗಿರುತ್ತದೆ.   ಗಮನಕ್ಕೆ ಬಾರದಿದ್ದರೆ ಗೆಡ್ಡೆಗಳು ನೆಲದೊಳಗೇ ಹುದುಗಿದ್ದು ಮುಂದಿನ ಮಳೆಗಾಲಕ್ಕೆ ಕೊಡೆ ಬಿಡಿಸಿದಂತೆ ಅರಳುತ್ತವೆ.   ಈ ಮಾಂಙನ್ನಾರೀ ಗೆಡ್ಡಯೂ ಹಾಗೇ ಆಯಿತು.   ಎರಡು ವರ್ಷಗಳಿಂದ  ಭೂಮಿಯಲ್ಲಿ ಅವಿತಿದ್ದ ಇದನ್ನು ಈ ಸರ್ತಿ ಬಿಡಬಾರದು ಎಂದು ಗೆಡ್ಡೆ ಎಲ್ಲಿದೆ ಎಂಬ ನೆನಪಿನಿಂದ ನೆಲ ಬಗೆದೆ.   ಅತ್ತಇತ್ತ ಹರಡಿದ ಮಲ್ಲಿಗೆ,  ಕಮಾನುಬಳ್ಳಿ,  ಬಿಸ್ಕೇಟ್ ಹೂಗಳೂ ಕತ್ತರಿಸಲ್ಪಟ್ಟಾಗ ಗೆಡ್ಡೆ ವಿಶಾಲ ಪರಿವಾರದೊಂದಿಗೆ ಗೋಚರಿಸಿತು.   ಎಲ್ಲ ಗೆಡ್ಡೆಗಳನ್ನೂ ತೆಗೆಯಬೇಕೆಂದೇನೂ ಇಲ್ಲ,   ಇವತ್ತಿನ ಮಟ್ಟಿಗೆ ಒಂದು ಚಟ್ಣಿ ಮಾಡಿಕೊಳ್ಳೋಣ.
ಚಟ್ಣಿ ಮಾಡೋ ಕ್ರಮ ಬರೆದು ಏನಾಗ್ಬೇಕು ?  ಎಲ್ಲರಿಗೂ ಗೊತ್ತು.   ಕಾಯಿತುರಿ,  ಹಸಿಮೆಣಸು,  ಒಂದಿಂಚು ಉದ್ದದ ಮಾವಿನಶುಂಠಿಯ ತುಂಡು,  ರುಚಿಗೆ ಉಪ್ಪು,  ಬೇಕಿದ್ದರೆ ಹುಳಿ ಇಷ್ಟನ್ನೂ ಅರೆದು ಒಂದು ಒಗ್ಗರಣೆ ಕರಿಬೇವಿನ ಘಂ ಘಮ ಪರಿಮಳದೊಂದಿಗೆ ಬಿದ್ದರೆ ಚಟ್ಣಿ ಆಗ್ಹೋಯ್ತು.   ಫೋಟೋ ತೆಗೆಯದಿದ್ದರೆ ಹೇಗೆ?  ಅದೂ ಆಯಿತು.   iPhone 6 ಬಂದ ಬೆನ್ನಿಗೇ ಹೊಚ್ಚಹೊಸದಾದ ಅಂದರೆ ಅಮೇರಿಕಾದಲ್ಲಿ ಆಪಲ್ ಕಂಪನಿ ಬಿಡುಗಡೆ ಮಾಡಿ ತಿಂಗಳಾಗುವಷ್ಟರಲ್ಲಿ iPadAir 2 ನಮ್ಮ ಮನೆಗೆ ತಲಪಿಯೇ ಬಿಟ್ಟಿದೆ.   ಅದುವರೆಗೆ ನನ್ನ ಕೈಯಲ್ಲಿದ್ದುದು ಐಪಾಡ್ ಪ್ರಥಮ ಆವೃತ್ತಿ,  ತುಂಬಾ ಹಳೆಯದು.   ಅದು ಬಂದ ಕಾಲದಲ್ಲಿ ನನ್ನ ಮಗಳು ಹೈಸ್ಕೂಲಲ್ಲಿದ್ದಳು.  ಅದರಲ್ಲಿ ಫೋಟೋಗ್ರಾಫಿಯ ಆಯ್ಕೆ ಇರಲಿಲ್ಲ.
ಹೊಸ ಐಪಾಡ್ ಫೋಟೋ ತೆಗೆಯಬಲ್ಲುದು.  ನನಗೆ ಬೇಕಾಗಿರುವ  ಎಲ್ಲ ಸಲಕರಣೆಗಳೂ ಇದೊಂದರಲ್ಲೇ ಇದೆ ಅಂದ ಹಾಗಾಯ್ತು.  
ಚಟ್ಣಿಯ ಫೋಟೋಗ್ರಾಫಿ ಸಾಮಾನ್ಯದ ಕೆಲಸ.  ಸಾದಾ ಚಿತ್ರವನ್ನು ಅಸಾಮಾನ್ಯವಾಗಿಸುವ ಪ್ರಾವೀಣ್ಯತೆಯನ್ನು  ಪರೀಕ್ಷಿಸ ಬೇಡವೇ,  ಅದಕ್ಕಾಗಿ ಒಂದು ಕಿರು ಪ್ರಯತ್ನ ನಡೆಯಿತು,  ಚಟ್ಣಿ ಚಂದಿರನೆಡೆಗೆ ನೆಗೆಯಿತು.





ಮಾವಿನಶುಂಠಿಯಿಂದ ತೊವ್ವೆ ಸಿದ್ಧ ಪಡಿಸೋಣ.   ತೊವ್ವೆಗೆ ತೊಗರಿಬೇಳೆ ಯಾ ಹೆಸ್ರುಬೇಳೆ ಬೇಕಾಗುವಂತದ್ದು.   ಹೆಸ್ರುಬೇಳೆ ತುಸು ಹುರಿದರೆ ಉತ್ತಮ.  ಆಯ್ತು,   ಒಂದು ಹಿಡಿ ಬೇಳೆ ಬೇಯಿಸಿದ್ದಾಯಿತೇ.
ಕಾಯಿತುರಿ,  ಹಸಿಮೆಣಸು,  ಮಾಂಙನ್ನಾರಿಗಳನ್ನು  ಅರೆದಾಯಿತೇ,   ಬೆಂದ ಬೇಳೆಗೆ ಕೂಡಿಸಿ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ, ನೀರಿನ ಹದ ಹಾಳಿತ ತೊವ್ವೆಗೆ ತಕ್ಕಂತೆ ಮಾಡಿಟ್ಟು ಕುದಿಸಿದ್ದಾಯಿತೇ.  ಕೊನೆಯಲ್ಲಿ ಘಮಘಮಿಸುವ ತುಪ್ಪದಲ್ಲಿ ಒಗ್ಗರಣೆ ಕೊಡದಿದ್ದರಾದೀತೇ,  ಕರಿಬೇವು,  ಚಿಟಿಕೆ ಅರಸಿಣ ಹಾಕದಿದ್ದರಾದೀತೇ....




ಮರಿಯಮ್ಮನ ಹಾಲು ಬಂದಿತ್ತು,  ಜೊತೆಯಲ್ಲಿ ಒಂದು ಪ್ಲಾಸ್ಟಿಕ್ ಪೊಟ್ಟಣ.   ಬಿಡಿಸಿ ನೋಡಲಾಗಿ ಬಸಳೇ ಸೊಪ್ಪು ಹೊರ ಬಂದಿತು.   ಅವಳಿಗೆ ತಿಂದೂ ತಿಂದೂ ಸಾಕಾಗ್ಬಿಟ್ಟಿದೆ,   ನನಗೂ ಕಳ್ಸಿದಾಳೆ...  ನಾರು ಅಧಿಕವಾಗಿರುವ ಹಸಿರು ತರಕಾರಿ ಬಸಳೆ ಬಹಳ ಒಳ್ಳೆಯದು.   ಇವತ್ತು ಒಂದು ಮಜ್ಜಿಗೆಹುಳಿ ಮಾಡೋಣ. 

" ಏನೂ,  ಬಸಳೇದು  ಮಜ್ಜಿಗೆಹುಳಿಯಾ ?  " ಚೆನ್ನಾಗಿರುತ್ತಾ..."

ಇದು ನಮ್ಮ ಗೌರತ್ತೆ ಹೇಳ್ಕೊಟ್ಟಿದ್ದು.    " ಚಪ್ಪರದಿಂದ ಬಸಳೆ ತಂದು ಎಷ್ಟೂಂತ ದಿನಾ ಕೊದ್ದೆಲ್ ಮಾಡ್ತೀಯ,  ಮೇಲಾರವೂ ಆಗ್ತದೆ "
" ಹೌದಾ.."  ನಂಗೂ ಆಶ್ಚರ್ಯ.
" ಹೂಂ ಮತ್ತೆ, ತೊಗರಿಬೇಳೆಯೂ ಹಾಕ್ಬೇಕು ಇದಕ್ಕೆ.  ತೆಂಗಿನಕಾೖ ಅರೆಯುವಾಗ ಎರಡು ಹಸಿಮೆಣಸೂ ಹಾಕ್ಬೇಕು "
" ಓಹೋ ಹೀಗೆಲ್ಲ ಉಂಟಲ್ಲ " ಅನ್ನುತ್ತಾ ಬಸಳೆ ಸೊಪ್ಪಿನ ಮಜ್ಜಿಗೆಹುಳಿ ಮಾಡಿ ತಿಂದಾಗಿತ್ತು.

ಈ ಬಾರಿ ನಮ್ಮ ಹಿತ್ತಿಲಲ್ಲಿ ಬಸಳೆ ಚಪ್ಪರ ಇಲ್ಲದಿರುವುದರಿಂದ ಮರಿಯಮ್ಮ ಬಸಳೆ ಸೊಪ್ಪು ಕಳಿಸಿದ್ದಾಳೆ,  ಇರಲಿ.   ಈಗ ಮಜ್ಜಿಗೆಹುಳಿ ತುಸು ಭಿನ್ನವಾಗಿ ಮಾಡೋಣ.

ಮಾವಿನಶುಂಠಿ ಇದೆಯಲ್ಲ,  ಇದು ಅರಸಿಣದ ಜಾತಿಗೆ ಸೇರಿದ್ದು,  ಹೆಸರಿಗೆ ಮಾತ್ರ ಶುಂಠಿ ಅಷ್ಟೇ.  ಯಾವುದೇ ಅಡುಗೆಯಿರಲಿ,  ಚಿಟಿಕೆ ಅರಸಿಣ ಹಾಕದೇ ಬಿಡುವವರಲ್ಲ ನಾವು.   ಮಜ್ಜಿಗೆಹುಳಿಯಿರಲಿ, ಉಪ್ಪಿನಕಾಯಿಯೇ ಆಗಲಿ ಅರಸಿಣ ಕಡ್ಡಾಯ.   ಈಗ ನಾವು  ಬಸಳೆ ಸೊಪ್ಪಿನ ಮಜ್ಜಿಗೆಹುಳಿಯನ್ನು ಮಾವಿನಶುಂಠಿಯಿಂದ ವಿಶಿಷ್ಟವಾಗಿ ತಯಾರಿಸೋಣ.

ಒಂದು ಹಿಡಿ ತೊಗರಿಬೇಳೆ ಬೇಯಿಸಿದ್ದಾಯಿತು.  ಬಸಳೆ ಸೊಪ್ಪನ್ನೂ ಆಯ್ದು ಇಟ್ಟಾಗಿದೆ,  ದಂಟು ಬೇಡ, ಸೊಪ್ಪು ಸಾಕಷ್ಟಿದೆ.   ಬಸಳೆಯೂ ರುಚಿಗೆ ಉಪ್ಪು ಕೂಡಿಕೊಂಡು ಬೇಯಲಿ.
ಅರ್ಧ ತೆಂಗಿನಹೋಳು,  ತುರಿ ಮಾಡಿದ್ರಾ,  ಯಾವಾಗಲೂ ಮಜ್ಜಿಗೆಹುಳಿಗೆ ಹಸಿ ಕಾಯಿಯನ್ನೇ ಬಳಸಿರಿ.
ಒಂದು ದೊಡ್ಡ ತುಂಡು ಅಂದ್ರೆ ಹೆಬ್ಬೆರಳ ಗಾತ್ರದ ಮಾವಿನಶುಂಠಿಯೊಂದಿಗೆ ನುಣ್ಣಗೆ ಅರೆದು ತೆಗೆಯಿರಿ.
ಬೆಂದ ಬೇಳೆ ಹಾಗೂ ಬೆಂದ ಬಸಳೆಗೆ ಸಿಹಿ ಮಜ್ಜಿಗೆ ಕೂಡಿಸಿ ಆಯ್ತೇ, 
ಈಗ ಅರೆದಿಟ್ಟ ತೆಂಗಿನ ಅರಪ್ಪು ಕೂಡಿಸಿ.
ಮಜ್ಜಿಗೆಹುಳಿ ಸಾರಿನಂತೆ ತೆಳ್ಳಗಾಗಕೂಡದು,  ಕುದಿಸಿರಿ.
ಕುದಿಯುವಾಗಲೂ ಅಷ್ಟೇ,  ಹಾಲು ಉಕ್ಕಿ ಬಂದಂತೆ ಉಕ್ಕಿ ಬರುವಾಗ ಕೆಳಗಿಳಿಸಿ,  ಗಳಗಳನೆ ಕುದಿಯಬಾರದು.
ಒಗ್ಗರಣೆ ಕೊಡದಿರಬಾರದು.

ಬಸಳೇ ಸೊಪ್ಪು ಹಾಗೂ ಮಜ್ಜಿಗೆ ಶೀತಕಾರಕ ಅಂತ ತಿನ್ನದೇ ಇರುವವರಿಗೂ ಈ ಮಾಂಙನ್ನಾರಿ ಮಜ್ಜಿಗೆ ಹುಳಿಯಿಂದ ಬಾಧಕವೇನೂ ಆಗದು.





ಹುಳಿಮೆಣಸು ಎಂಬಂತಹ ಈ ವ್ಯಂಜನ,  ನಮ್ಮ ಕರಾವಳಿಯ ಗ್ರಾಮೀಣ ಜನತೆಗೆ ಚಿರಪರಿಚಿತ.   ಹೆಚ್ಚಿನ ಮಸಾಲಾ ಸಾಮಗ್ರಿಗಳನ್ನೇನೂ ಇದು ಬಯಸದು.   ತೊಂಡೆ ಚಪ್ಪರ ಮನೆ ಹಿತ್ತಲಲ್ಲಿ ಇದ್ದೇ ಇರುತ್ತದೆ. ತೊಂಡೆಕಾಯಿಗಳು ಇರುವಾಗ ಹುಳಿಮೆಣಸು ಮಾಡದಿದ್ದರಾದೀತೇ,  ತೆಂಗಿನಕಾಯಿಗೂ ಕೊರತೆಯಿಲ್ಲ.  ಅರ್ಧ ಕಡಿ ಕಾಯಿತುರಿ ಇರಲೇಬೇಕು.
4-6 ಒಣಮೆಣಸು ಕುದಿನೀರಿನಲ್ಲಿ ಹಾಕಿಟ್ಟಿರಿ,   ಹುರಿಯುವ ಅಗತ್ಯವಿಲ್ಲ.
ತೊಂಡೆಕಾಯಿಗಳನ್ನು ಹೋಳು ಮಾಡಲಿಕ್ಕಿಲ್ಲ,  ಚೂರಿಯಲ್ಲಿ ಗೀರು ಹಾಕಿದ್ರೆ ಸಾಕು,  ಜಜ್ಜಿಕೊಂಡರೂ ನಡೆದೀತು.   ಉಪ್ಪು ಕೂಡಿಸಿ ಬೇಯಿಸಿಟ್ಕೊಳ್ಳಿ.
ಕಾಯಿತುರಿ ಅರೆಯುವಾಗ ಚಿಕ್ಕ ಅರಸಿಣ ಗೆಡ್ಡೆಯನ್ನೂ ಹಾಕುವುದಿದೆ,  ನಾವು ಈಗ ಮಾಂಙನ್ನಾರಿ ಹಾಕೋಣ.
ತೆಂಗಿನತುರಿ,  ಒದ್ದೆ ಮಾಡಿಟ್ಟ ಒಣಮೆಣಸು, ಒಂದೆರಡು ಇಂಚು ಉದ್ದದ ಮಾವಿನಶುಂಠಿ ಅರೆಯಿರಿ.  ಹುಳಿಯನ್ನೂ ಅರೆಯುವಾಗಲೇ ಹಾಕುವ ರೂಢಿ.  ಅರೆದ ತೆಂಗಿನ ಅರಪ್ಪನ್ನು ಬೇಯಿಸಿದ ತರಕಾರಿಗೆ ಕೂಡಿಸಿ.  ಸಾರಿನಂತೆ ತುಸು ತೆಳ್ಳಗೆ ಮಾಡಿ,  ಉಪ್ಪು ಹುಳಿಯ ಹದಹಾಳಿತ ನೋಡಿಕೊಂಡು,  ಬೇಕಿದ್ದರೆ ಬೆಲ್ಲವನ್ನೂ ಹಾಕಿ ಕುದಿಸಿ.  ಬೆಳ್ಳುಳ್ಳಿ,  ಕರಿಬೇವಿನ ಒಗ್ಗರಣೆ ಕೊಡುವಲ್ಲಿಗೆ ಹುಳಿಮೆಣಸು ಸಿದ್ಧ.





ಪಳದ್ಯ

ಬೇಸಿಗೆ ಬಂದಾಗ ಊಟದ ವಿಧಾನವೂ ಬದಲಾಗಬೇಕು.  ಹೆಚ್ಚು ಮಸಾಲೆ ಹಾಕಿದ ಪದಾರ್ಥಗಳು ಹಿತವಾಗುವುದಿಲ್ಲ.   ಪಳದ್ಯವನ್ನು ಅತಿ ಕಡಿಮೆ ಪರಿಕರಗಳಿಂದ ಸಿದ್ಧಪಡಿಸಲಾಗುತ್ತದೆ.   ಇದನ್ನೂ ನಾವೀಗ ಮಾವಿನಶುಂಠಿಯಿಂದಲೇ ಸಿದ್ಧಪಡಿಸೋಣ.

ಹಿಡಿ ಕಾಯಿತುರಿಯೊಂದಿಗೆ ಒಂದು ಹಸಿಮೆಣಸು,  ತುಂಡು ಮಾಂಙನ್ನಾರಿ ಅರೆದಿಡಿ.   
ಒಂದು ಚಮಚ ಕಡ್ಲೆ ಹಿಟ್ಟನ್ನು ಒಂದು ಲೋಟ ನೀರಿನಲ್ಲಿ ಗಂಟುಗಳಿಲ್ಲದಂತೆ ಕದಡಿ ಇಡಿ.
ಕಡ್ಲೆ ಹಿಟ್ಟನ್ನು ಕುದಿಸಿ,   ಗಳಗಳನೆ ಕುದಿದು,  ಉಕ್ಕಿ ಬಂದಾಗ ಗಂಜಿನೀರಿನಂತೆ ಬೆಂದ ಹಿಟ್ಟು ಲಭ್ಯ.  ಇದಕ್ಕೆ ಅರೆದಿಟ್ಟ ಕಾಯಿ ಅರಪ್ಪು ಕೂಡಿಸಿ,  ರುಚಿಗೆ ಉಪ್ಪು, ಒಂದು ಲೋಟ ಸಿಹಿಮಜ್ಜಿಗೆ ಎರೆದು ಕುದಿಸಿ.  ಪುಟ್ಟದಾಗಿ ಒಗ್ಗರಣೆಯೂ ಬೀಳಲಿ.  ತಿಳಿಸಾರಿನ ಸಾಂದ್ರತೆಯ ಈ ಪಳದ್ಯ ಊಟದೊಂದಿಗೆ ರಚಿಕರ,  ಸೂಪ್ ಥರ ಕುಡಿಯಲೂ ಆದೀತು.

ಇದೇ ಪಳದ್ಯವನ್ನು ಸೂಪ್ ಆಗಿ ಪರಿವರ್ತಿಸಬಹುದು,  ಅರೆದಿಟ್ಟ ಕಾಯಿ ಮಸಾಲೆ ಇದೆಯಲ್ಲ,  ಇದನ್ನು ಶುದ್ಧವಾದ ಬಟ್ಟೆಯಲ್ಲಿ ಅಥವಾ ಜಾಲರಿತಟ್ಟೆಯಲ್ಲಿ ಶೋಧಿಸಿ ಕಾಯಿಹಾಲನ್ನು ಮಾತ್ರ ಉಪಯೋಗಿಸಿ.





ಮಾಂಙನ್ನಾರೀ, ಬೆಡಗಿನ ವೈಯ್ಯಾರಿ
ಇನ್ನಷ್ಟು ವಿಸ್ತರಿತ ಬರಹಕ್ಕಾಗಿ,  ಓದಿರಿ.  


  

0 comments:

Post a Comment