ಕಾಗೆಯೂ ಗುಬ್ಬಿಯೂ ಪುರ್ರ್ ಪುರ್ರನೆ ಹಾರಾಡುತ್ತ ಇದ್ದಾಗ ಕಾಗೆಗೆ ಹಸಿವು ಆಯಿತು. “ ಗುಬ್ಬಕ್ಕ, ಇಲ್ಲೇ ಹತ್ತಿರ ಜಗ್ಗಣ್ಣನ ಅಂಗಡಿಯಿದೆ, ಅಲ್ಲಿ ಬಿಸ್ಕತ್ತು, ಚಾಕಲೇಟು ಸಿಗುತ್ತಾ ನೋಡುವ..” ಅಂದಿತು ಕಾಗೆ.
ಜಗ್ಗಣ್ಣನ ಅಂಗಡಿಗೆ ಬಂದಾಗ ಕಾಗೆಗೆ ತಿನ್ನಲು ಏನೂ ಸಿಗಲಿಲ್ಲ. ಗುಬ್ಬಿಯು ಅಂಗಳದಲ್ಲಿ ಅಲ್ಲಲ್ಲಿ ಬಿದ್ದಿದ್ದ ಅಕ್ಕಿ ಕಾಳು, ರಾಗಿ ಕಾಳು, ಜೋಳದ ಕಾಳು, ಗೋಧಿ ಕಡಿಗಳನ್ನು ಕೊಕ್ಕಿನಲ್ಲಿ ಕುಕ್ಕೀ ಕುಕ್ಕಿ, ಹೆಕ್ಕಿ ತಿಂದು ಹೊಟ್ಟೆ ತುಂಬಿಸಿ ಕೊಂಡಿತು. “ ಗುಬ್ಬೀ, ಕುಡಿಯಲು ನೀರು ಸಿಗುತ್ತಾ ನೋಡು.. “
“ ನೀರು ಈಗ ಪ್ಲಾಸ್ಟಿಕ್ ಬಾಟಲುಗಳಲ್ಲಿ ಹಾಕಿಡೂದು, ನಮಗೆ ತೋಡಿನ ನೀರೇ ಗತಿ… “ ಎಂದಿತು ಕೀವ್ ಕೀವ್ ಗುಬ್ಬಿ.
ಮಳೆಗಾಲ ಅಲ್ವೇ, ಹಿರಣ್ಯ ದೇಗುಲದ ತೀರ್ಥಧಾರೆ ಜಳಜಳನೆ ಹರಿದು ಬೀಳುವುದ ಕಂಡು ಹಕ್ಕಿಗಳೆರಡೂ ಪುರ್ ಪುರ್ರನೆ ರೆಕ್ಕೆ ಬಡಿಯುತ್ತ ಹಾರಿ ಬಂದುವು, ಅದೆಲ್ಲಿತ್ತೊ ದೇಗುಲದ ಕಾವಲು ನಾಯಿ ತುಂಟಿ, “ ಇದು ದೇವರ ನೀರು, ಮುಟ್ಟಬೇಡಿ.. “ ಎಂದು ಬೌ.. ಬೌ.. ಬೊಗಳಿತು.
“ಆಯ್ತಲ್ಲ, ಹಾಗಿದ್ರೆ ನಾವು ಎಲ್ಲಿಗೆ ಹೋಗೋಣಾ ಅಂತೀಯಾ? “ ಕೇಳಿತು ಕಾವ್ ಕಾವ್ ಕಾಗೆ.
“ ತೋಟದ ಬದಿಗೆ ತೋಡಿನಲ್ಲಿ ನೀರಿದೆ.. ಅದನ್ನು ಕುಡಿಯಿರಿ.. “ ಉತ್ತರಿಸಿದ ತುಂಟಿ ಹಸುಗಳನ್ನು ಅಟ್ಟಲು ಓಡಿತು.
ಕಾಗೆಯೂ ಗುಬ್ಬಿಯೂ ತೋಡಿನತ್ತ ಪುರ್ ಪುರ್ ಎಂದು ಹಾರಿದುವು.
ಅಲ್ಲಿ ನೋಡಿದ್ರೇ ಬೆಳ್ಳ… ಪ್ರವಾಹದಂತೆ ಕೆಂಪು ನೀರು ಹರಿದು ಹೋಗುತ್ತಲಿದೆ.
“ ಕಾಗಕ್ಕಾ, ಈ ನೀರು ಕುಡಿಯಲು ಇಳಿದರೆ ನಾನು ಬೆೊಳ್ಳದ ನೀರಿನಲ್ಲಿ ಕೊಚ್ಚಿ ಹೋಗಿ ಸಮುದ್ರ ಸೇರಿಯೇನು… “ ಎಂದಳು ಗುಬ್ಬಕ್ಕ.
“ ಹೌದಲ್ವೇ, ಈ ನೀರು ನಮಗೆ ಬೇಡ.. “ ಪುನಃ ರೆಕ್ಕೆ ಬಡಿದು ಪುರ್ ಎಂದು ಹಾರಲು ಹೊರಟ ಹಕ್ಕಿಗಳಿಗೆ ಅಲ್ಲೊಂದು ಬಾವಿ ಕಾಣಿಸಿತು. ಬಾವಿಕಟ್ಟೆ ಮೇಲೆ ಫಳಫಳಿಸುವ ಚೆಂಬು, ಚೆಂಬು ತುಂಬ ನೀರು. “ ಆಹ! ಇದಲ್ಲವೇ ನಮ್ಮ ಭಾಗ್ಯ.. “
ಆ ಸಮಯದಲ್ಲಿ ಅದೆಲ್ಲಿದ್ದಳೋ ನಮ್ಮ ಪುಟ್ಟಕ್ಕ, ಓಡಿ ಓಡಿ ಬಂದಳು. “ ಅಮ್ಮ ಬಾ, ಅಪ್ಪ ಬಾ.. ಕಾಗೆ ನಮ್ಮ ಬಾವಿ ನೀರು ಕುಡಿಯಲು ಬಂದಿದೆ… “
ಅಪ್ಪ ಅಮ್ಮ ಇಬ್ಬರೂ ಓಡೋಡಿ ಬಂದರು. “ ಪಾಪ.. ಕಾಗೆ ನೀರು ಕುಡಿಯಲಿ. “ ಎಂದನು ಅಪ್ಪ.
“ ಕಾಗೆ ನೀರು ಕುಡಿದ್ರೆ ಚೆಂಬು ಬಾವಿಯೊಳಗಿದ್ದೀತು, ಇದಾಗದು.. “ ಎಂದಳು ಅಮ್ಮ.
ಚೆಂಬನ್ನು ನೆಲದ ಮೇಲಿರಿಸಿದ ಅಪ್ಪ. ಹಕ್ಕಿಗಳೆರಡೂ ನೀರನ್ನು ಕುಡಿದು ಆನಂದದಿಂದ ಆಕಾಶದಲ್ಲಿ ಹಾರುತ್ತ ಮುಂದೆ ಸಾಗಿದುವು. ಪುಟ್ಟಕ್ಕ, ತನ್ನ ಅಪ್ಪ ಅಮ್ಮನ ಜೊತೆಗೂಡಿ ಮನೆಗೆ ತೆರಳಿದಳು.
ಕತೆ ಮುಗಿಯಿತು.
ಮನೆಗೊಂದು ಪುಟ್ಟ ಮಗು ಬಂದಿದೆ. ದಿನದ ಹೆಚ್ಚಿನ ಸಮಯವನ್ನು ನಿದ್ರೆಗೇ ಮೀಸಲಿಡುವ ಮಗು, ಎಚ್ಚರದಲ್ಲಿದ್ದಾಗ ಎಲ್ಲವನ್ನೂಗಮನಿಸಲಾರಂಭಿಸುತ್ತದೆ. ತನ್ನ ಸುತ್ತಮುತ್ತ, ಪ್ರೀತಿಪಾತ್ರರನ್ನು ಪಕ್ಕ ಸಳೆಯುತ್ತದೆ. ಈ ಸಮಯದಲ್ಲಿ ನಾವು ಮಗುವಿನೊಂದಿಗೆ ಸಂವಹನ ಪ್ರಾರಂಭಿಸಲೇ ಬೇಕು. ಹಾಗಂತ ನಾವು ವಾಚಾಳಿಗಳಲ್ಲ, ಅದಕ್ಕಾಗಿ ನಾನು ಆಯ್ದು ಕೊಂಡಿದ್ದು ಕತೆ ಹೇಳುವ ಸಲ್ಲಾಪ. ಸರಳ ಭಾಷೆಯಲ್ಲಿ, ಮಗುವಿನ ಬಾಲ ಭಾಷೆಯಲ್ಲಿ, ಕಣ್ಣರಳಿಸಿ, ಹಾವ ಭಾವಗಳೊಂದಿಗೆ, ಧ್ವನಿಯ ಏರಿಳಿತದೊಂದಿಗೆ ಹೇಳಬೇಕಾಗುತ್ತದೆ. ಪುಸ್ತಕ ಓದಿದಂತೆ ಹೇಳಿದರಾಗದು.
ನಮ್ಮ ಮಗುವಿಗೆ ಅರ್ಥವಾಗುವುದು ಮುಖ್ಯವಲ್ಲ. ನೀವು ನಂಬ್ತೀರೋ ಗೊತ್ತಿಲ್ಲ, ಕತೆ ಕೇಳುತ್ತ ಕೇಳುತ್ತ ಅದೂ ಒಂದು ದಿನ ನಾಲಿಗೆ ಹೊರಳಿಸಿ ಒಂದಕ್ಷರ ಉಚ್ಚರಿಸಿಯೇ ಬಿಟ್ಟಿತು! ಹಹ…
0 comments:
Post a Comment