ಮಳೆ ಬಿಟ್ಟು ಸೊಂಪಾದ ಬಿಸಿಲು ಬಂದಿದೆ, ಗೌರತ್ತೆ ಮುಂಜಾನೆ ಎದ್ದವರೇ ವಾಕಿಂಗ್ ಹೊರಡುವ ಸಿದ್ಧತೆಯಲ್ಲಿದ್ದರು, " ದೂರ ಹೋಗ್ಬೇಡಿ... ಹತ್ತೇ ನಿಮಿಷದಲ್ಲಿ ಮನೆಗೆ ಬನ್ನಿ. " ತಾಕೀತು ಮಾಡಿದ್ದಾಯ್ತು.
" ದೂರ ಯಾಕೆ ಹೋಗಲಿ, ಮಳೆ ಬಂದ್ರೆ ಕಷ್ಟ.. ಒಂದು ಮುರುಕು ಕೊಡೆಯೂ ಇಲ್ವಲ್ಲ... ಶ್ರೀದೇವಿಗೆ ಒಂದು ಪ್ರದಕ್ಷಿಣೆ, ನಾಗಬನಕ್ಕೆ ಒಂದು ಸುತ್ತು ಹಾಕಿ ದೇವಿಯ ತೀರ್ಥಕ್ಕೆ ತಲೆಯೊಡ್ಡಿ ಬರೂದು..."
"ಸರಿ ಹಾಗಿದ್ರೆ.. " ಚಟ್ನಿಗಾಗಿ ಕಾಯಿ ತುರಿಯಬೇಕಿದೆ.
ನನ್ನ ದೋಸೆ ಚಟ್ನಿಗಳು ಸಿದ್ಧವಾದವು.
ಗೌರತ್ತೆಯೂ ಬಂದ್ರು, " ನೋಡೇ ಹೂವುಗಳು! "
" ಅಹ.. ಹೂದಾನಿಯಲ್ಲಿ ಇಡಲಿಕ್ಕೆ ಲಾಯಕ್.."
" ಅಯ್ಯ.. ಚಂದ ನೋಡಿ ಮಾಡುದೆಂತದು, ಚಟ್ಣಿಗಾದೀತು."
ಗೌರತ್ತೆ ಚೀನಿಕಾಯಿ ಹೂಗಳನ್ನು ಕೊಯ್ದದ್ದು ಎಲ್ಲಿಂದಾ.. ಅಂತೀರಾ,
ಹಿರಣ್ಯ ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದ ಬ್ರಹ್ಮಕಲಶ ಆಗಿತ್ತಲ್ಲ, ಆವಾಗ ವಾರಪೂರ್ತಿ ಅನ್ನಸಂತರ್ಪಣೆ ಇದ್ದಿತು. ಮೇಲೋಗರಕ್ಕೆ ತರಕಾರಿಗಳ ರಾಶಿಯೇ ಬಂದಿತ್ತು. ದೊಡ ಮಟ್ಟದ ಅಡುಗೆಗೆ ಸಿಹಿಗುಂಬಳ ( ಚೀನಿಕಾಯಿ ) ಬಳಕೆ ಜಾಸ್ತಿ. ಅಂದಿನ ಅಡುಗೆಯ ಚೀನಿಕಾಯಿ ಬೀಜಗಳು ವರ್ಷಧಾರೆಗೆ ಸಿಕ್ಕಸಿಕ್ಕಲ್ಲಿ ಕುಡಿಯೊಡೆದು, ಬಳ್ಳಿ ಹಬ್ಬಿ ಈಗ ಹೂ ಬಿರಿದಿವೆ. ಫಲ ನೀಡದ ಹೂಗಳನ್ನು ಅಡುಗೆಯಲ್ಲಿ ಬಳಸಿ ಸವಿಯಬಹುದಾಗಿದೆ. ಚಟ್ಣಿ, ಪೋಡಿ, ಗೊಜ್ಜು, ಸಾರು, ಸಾಂಬಾರು, ಮೇಲಾರ... ಎಂದು ನಮ್ಮ ಕಲ್ಪನೆಗೆ ಹೊಳೆದಂತೆ ಸವಿರುಚಿಗಳನ್ನು ಮಾಡಬಹುದಾಗಿದೆ.
ಇದರಲ್ಲಿ ಪ್ರಸಿದ್ಧವಾದದ್ದು ಗೌರತ್ತೆ ಈಗಾಗಲೇ ಹಳಿದ ಚಟ್ಣಿ, ನಮ್ಮ ಕಾಸರಗೋಡು, ದ.ಕನ್ನಡದ ಆಡುಮಾತಿನಲ್ಲಿ ಚಟ್ಣಿ ಹಾಗೂ ಬಜ್ಜಿ ಒಂದೇ ಅರ್ಥದ ಪದಗಳು. ಈಗ ನಾವು ಚಟ್ಣಿ ಯಾ ಬಜ್ಜಿ ಮಾಡೋಣ.
ಹೂವುಗಳನ್ನು ಇದ್ದ ಹಾಗೇನೆ ಉಪಯೋಗಿಸುವಂತಿಲ್ಲ.
ಬಾಟನಿ ಶಾಸ್ತ್ರ ರೀತ್ಯಾ ಪುಷ್ಪಪಾತ್ರೆ, ದಂಟು, ಹೂಕೇಸರ ನಮ್ಮ ಅಡುಗೆಗೆ ಆಗದು. ಕೇವಲ ಹೂವಿನ ಎಸಳು ಮಾತ್ರ ಬರುವಂತೆ ತೊಟ್ಟು ಬಿಡಿಸಿ, ಅಗಲವಾಗಿ ಬಿಡಿಸಿದ ಎಸಳುಗಳಲ್ಲಿ ಕ್ರಿಮಿಕೀಟಗಳ ವಾಸ್ತವ್ಯ ಇದೆಯೋ ಎಂದೂ ತಪಾಸಿಸಲೇಬೇಕು. ಇದೀಗ ಸಿದ್ಧತೆ ಆಯ್ತು.
10 - 12 ಹೂ ಎಸಳುಗಳು
ತೆಂಗಿನತುರಿ
ನಾಲ್ಕಾರು ಕುಮ್ಟೆ ಮೆಣಸು, ಒಂದೆರಡು ಚಮಚ ಕೊತ್ತಂಬರಿ, ಸ್ವಲ್ಪ ಜೀರಿಗೆ ತುಸು ಎಣ್ಣೆಪಸೆಯಲ್ಲಿ ಹುರಿದು, ಹೂವುಗಳನ್ನೂ ಹಾಕಿ ಬಾಡಿಸಿ,
ರುಚಿಗಗೆ ತಕ್ಕಷ್ಟು ಹುಣಸೆಹುಳಿ, ಉಪ್ಪು ಕೂಡಿ ತೆಂಗಿನತುರಿಯೊಂದಿಗೆ ಅರೆದು,
ಸಿಹಿ ಬೇಕಿದ್ದರೆ ಬೆಲ್ಲವನ್ನೂ ಹಾಕಿ ಅರೆಯಿರಿ, ನೀರು ನೀರಾಗಬಾರದು,
ಗಟ್ಟಿ ಮುದ್ದೆಯಂತಿರಲಿ,
ಒಗ್ಗರಣೆಯಿಂದ ಅಲಂಕರಿಸಿ.
ಚಟ್ಣಿ ಸಿದ್ದ.
ಇದು ಊಟದ ಬಟ್ಟಲಲ್ಲಿ ಒಂದು ಸಹವ್ಯಂಜನ.
ಟೊಮ್ಯಾಟೋ ಸಾರು ಕುದಿಸುವಾಗ ಹೂವುಗಳನ್ನು ಹೆಚ್ಚಿ ಹಾಕಿ, ಸಾಂಬಾರು, ಪಲ್ಯಗಳಿಗೂ ಹಾಕಬಹುದು.
ಹೂವುಗಳನ್ನು ತುಪ್ಪದಲ್ಲಿ ಹುರಿದು ಯಾ ತುಸು ನೀರಿನಲ್ಲಿ ಬೇಯಿಸಿ ಮೊಸರು ಎರೆಯಿರಿ, ಶುಂಠಿ, ಹಸಿಮೆಣಸು ಹೆಚ್ಚಿ ಹಾಕಿ ಮೊಸರುಗೊಜ್ಜು ಅನ್ನಿ.
ನೀರು ದೋಸೆಯ ಅಕ್ಕಿ ಹಿಟ್ಟು ಉಳಿದಿದೆ. ದಪ್ಪ ಆಗುವಷ್ಟು ಕಡ್ಲೆ ಹಿಟ್ಟು ಬೆರೆಸಿ.
ಉಪ್ಪು, ಸಾರಿನಹುಡಿ, ಮೆಣಸಿನಹುಡಿ, ಇಂಗು ಇತ್ಯಾದಿಗಳನ್ನು ಸೂಕ್ತ ಪ್ರಮಾಣದಲ್ಲಿ ಸೇರಿಸಿ.
ಹೂವಿನ ಎಸಳುಗಳನ್ನು ಈ ಹಿಟ್ಟಿನಲ್ಲಿ ಅದ್ದಿ,
ಬಿಸಿಯೇರಿದ ದೋಸೆಕಾವಲಿಗೆ ಎಣ್ಣೆ ಸವರಿ ಬೇಯಿಸಿ.
ದೋಸೆಯಂತೆ ಕವುಚಿ ಹಾಕಿ ತೆಗೆಯಿರಿ.
ಸಂಜೆಯ ಚಹಾದೊಂದಿಗೆ ಯೋಗ್ಯ ತಿನಿಸು.
ಕೋಮಲವಾದ ಈ ಹೂವುಗಳನ್ನು ಇನ್ನಿತರ ಬಜ್ಜಿ ಪಕೋಡಗಳಂತೆ ನೇರವಾಗಿ ಎಣ್ಣೆಯಲ್ಲಿ ಕರಿಯುವುದಕ್ಕಿಲ್ಲ, ದೋಸೆ ಕಾವಲಿಯೇ ಸಾಕು.