ಮಧು ಊರಿಗೆ ಬಂದಾಗ ನನಗಾಗಿ ತಂದಂತಹ ಅಡುಗೆಯ ವಿವಿಧ ವಸ್ತುಗಳಲ್ಲಿ ದೋಸೆ ಹಿಟ್ಟು ಕೂಡಾ ಇತ್ತು. ಯಾವುದೋ ಒಂದುಪ್ರತಿಷ್ಠಿತ ಬ್ರಾಂಡ್ ನೇಮ್ ಕೂಡಾ ಅದರದ್ದು. " ಅಮ್ಮ, ಈ ದ್ವಾಸೆ ಹಿಟ್ಟು ನಾವು ಹೋದ ನಂತರ ಉಪಯೋಗಿಸು.. ನನಗೆ ತಿನ್ನಲಿಕ್ಕೆ ನೀನೇ ಅರೆದು ಮಾಡ್ತೀಯಲ್ಲ ಅದನ್ನೇ ಮಾಡು.. "
"ಸರಿ ಬಿಡು.. "
ಅವನು ಹೋದ ನಂತರವೇ ನಾವು ಬೆಂಗಳೂರಿನ ದೋಸೆ ಹಿಟ್ಟಿನಿಂದ ದೋಸೆ ಎರೆದು ತಿಂದೆವೂ ಅನ್ನಿ. ಒಳ್ಳೆಯ ಬಣ್ಣವೂ, ತೆಳ್ಳಗೆ ಪೇಪರ್ ದೋಸೆಯೂ ಆಯ್ತು. ಆದರೆ ದೋಸೆ ಮಾತ್ರ ಹೊಟ್ಟೆ ತುಂಬಿದ ತೃಪ್ತಿ ಕೊಡದೇ ಮುಗಿಯಿತು.
ಇದೇನು ಹೀಗೆ ಎಂದು ಅವನನ್ನೇ ಕೇಳಬೇಕಾಯ್ತು.
" ಅದೂ ವಿಷಯ ಅನ್ನು.. ಅದಕ್ಕೆ ಆಲೂ ಮಸಾಲಾ, ಸಾಗೂ, ಕೋಕನಟ್ ಚಟ್ನಿ, ದಪ್ಪ ಮೊಸರು ಇದ್ರೇನೇ ಹೊಟ್ಟೆ ತುಂಬಿಸಿಕೊಡುತ್ತೆ.. " ಅಂದ ಮಗ.
" ದಿನಾ ಆಲೂ ಬಾಜಿ ಮಾಡಬೇಕೂ ಅನ್ನು, ನಮ್ಮ ಉದ್ದಿನ ದೋಸೆಗೆ ಈ ರಗಳೆಯಿಲ್ಲ. ಕಾಯಿ ಚಟ್ಣಿ, ಬೆಲ್ಲದ ಪಾಕ ಇದ್ರೆ ಧಾರಾಳ ಸಾಕು. "
“ ನಮ್ಮ ಸಿಂಪಲ್ ದೋಸೆ ಮಾಡೂದು ಹೇಗೆ? “
" ಇಬ್ಬರಿಗೆ ಒಂದು ಲೋಟ ಅಕ್ಕಿ ಸಾಕು. ಬೆಳ್ತಿಗೆ ಅಕ್ಕಿ ಆದರಾಯಿತು."
" ಉದ್ದು ಎಷ್ಟೂ? "
"ಅರ್ಧ ಲೋಟ ಇರಲಿ, ಹತ್ತು ಕಾಳು ಮೆಂತೆಯೂ ಇರಲಿ, ದೋಸೆಗೆ ಒಳ್ಳೆಯ ಕಲರ್ ಬರುತ್ತೆ. "
"ಅಮ್ಮ, ಈಗ ವಿಷಯ ಏನೂ ಅಂದರೆ ಇಲ್ಲಿ ವಿಪರೀತ ಚಳಿ, ದೋಸೆ ಹಿಟ್ಟು ಹುಳಿ ಬರುವ ಟೆಕ್ನಿಕ್ ಹೇಳಿ ಕೊಡು. "
" ಹಾಗಂತೀಯ, ಅಕ್ಕಿಗೆ ಕುದಿಯುವ ನೀರು ಎರೆದು ಮುಚ್ಚಿ ಇಡು. ಅರ್ಧ ಗಂಟೆ ಬಿಟ್ಟು ತಣ್ಣೀರಿನಲ್ಲಿ ಮೂರೂ ನಾಲಕ್ಕು ಬಾರಿ ತೊಳೆದು ಅರೆಯಲಿಕ್ಕೆ ಉಪಯೋಗಿಸು. "
“ಅಮ್ಮ, ನೀರು ಕುದೀತಾ ಇದೆ, ಅದಕ್ಕೇ ಅಕ್ಕಿ ಹಾಕಿ ಬಿಡ್ತೇನೆ.."
" ಹಾಗೆ ಮಾಡಬೇಡ, ಕುದಿಯುವ ನೀರನ್ನು ಅಕ್ಕಿಗೆ ಎರೆ.. "
" ಹಾಗಾದ್ರೆ ಉದ್ದು ಕೂಡಾ ಬಿಸಿ ನೀರಿಗೆ ಹಾಕ್ಲಾ? "
"ಬೇಡ, ಉದ್ದನ್ನು ತಣ್ಣೀರಿನಲ್ಲಿ ಒಂದೇ ಬಾರಿ ತೊಳೆದು ಪುನಃ ನೀರೆರೆದು ಇಡ್ತೀಯಲ್ಲ, ಆ ನೀರನ್ನು ಚೆಲ್ಲಬಾರದು. ಅರೆಯಲಿಕ್ಕೆ ಉದ್ದಿನ ನೀರು ಸಾಕು. ಉದ್ದು ಅರ್ಧ ಗಂಟೆ ನೆನೆದರೆ ಸಾಕು. "
" ಈಗಲೇ ಗಂಟೆ ಏಳು ಆಯ್ತು. ಇನ್ನು ಅಕ್ಕಿ ಉದ್ದು ... "
" ಚಿಂತೆಯಿಲ್ಲ. ನಾನು ಹೇಳಿದಷ್ಟು ಮಾಡಿ ಎಂಟು ಗಂಟೆಯೊಳಗೆ ಅರೆದಿಡು. ನುಣ್ಣಗೆ ಆಗಬೇಕು. ಉಪ್ಪು ಹಾಕಿ ಬೆಚ್ಚಗಿನ ಜಾಗದಲ್ಲಿ ಇಡು. ಫ್ರಿಜ್ ಒಳಗೆ ಇಡೂದಲ್ಲ ತಿಳೀತಾ. "
"ಸಂಜೆ ನಾಲ್ಕು ಗಂಟೆಗೇ ಅರೆದಿಟ್ಟರೆ ಉತ್ತಮ. ಹೇಗೂ ವರ್ಕ್ ಫ್ರಂ ಹೋಮ್ ಅಲ್ವೇ? "
" ಸರಿ, ಮುಂದಿನ ಸಾರಿ ಹಾಗೇ ಮಾಡ್ತೇನೆ. "
ಮಾರನೇ ದಿನ ಮಂಜಾನೆ ನಾನು ತಿಂಡಿ ತಿನ್ನುತ್ತಿರಬೇಕಾದರೆ ವಾಟ್ಸಪ್ ನಲ್ಲಿ ಮಧು ಮಾಡಿದಂತಹ ದೋಸೆಯ ಚಿತ್ರಗಳು ಬಂದುವು.
" ವಾ... ಆಲೂ ಬಾಜಿಯೂ ಮಾಡಿದ್ದೀ.."
" ಬಾಜಿ ಮೈತ್ರಿ ಮಾಡಿದ್ಳು.. ನಮ್ದು ಮಸಾಲೆ ದೋಸೆಯೇ ಆಗ್ಹೋಯ್ತು.. ಹಹ... ಸಂಜೆಗೂ ನಾಲ್ಕೈದು ದೋಸೆ ಆಗುವಷ್ಟು ಹಿಟ್ಟುಉಳಿದಿದೆ. "
0 comments:
Post a Comment