Pages

Ads 468x60px

Monday 25 January 2021

ನಕ್ಷತ್ರ ಹಣ್ಣು



ವರ್ಷಗಳ ಹಿಂದೆ ಪಕ್ಕದಮನೆಯಿಂದ ನಕ್ಷತ್ರ ಹಣ್ಣುಗಳು ದೊರೆತಾಗ,  ಹಣ್ಣು ತಿನ್ನುವಾಗ ಒಳಗೆ ಸಿಕ್ಕ ಬೀಜಗಳನ್ನು ಜೋಪಾನವಾಗಿ ನೀರೆರೆದು ಸಲಹಿದಾಗ ಮೂರೇ ವರ್ಷದಲ್ಲಿ ನಕ್ಶತ್ರ ಹಣ್ಣುಗಳನ್ನು ನನ್ನದೇ ಗಿಡದಿಂದ ಕೊಯ್ಜು ತಿನ್ನುವ ಯೋಗ.


 ವರ್ಷ ಮಕ್ಕಳೆಲ್ಲರೂ ಮನೆಯಲ್ಲಿದ್ದಾಗ ಗಿಡ ತುಂಬ ಹಣ್ಣು ದೊರೆಯುವ ಅಂದಾಜಿನಲ್ಲಿದ್ದಾಗಲೇ ಮಗಳು ಅಳಿಯ ಬೆಂಗಳೂರಿಗೆ ತೆರಳಿಯಾಗಿತ್ತು.  


ಏನ್ಮಾಡಿದ್ರೀ..  "

ಮಾಡೂದೇನು ಹೇಳದೇ ಕೇಳದೇ ಭಾರೀ ಮಳೆ ಸುರಿಯಿತು ಬೆಳಗೆದ್ದು ನೋಡಿದ್ರೆ ಹೆಚ್ಚಿನ ಹಣ್ಣುಗಳು ನೆಲದಲ್ಲಿ ಹೊರಳುತ್ತಿವೆ ಮರದಲ್ಲಿ ಫಳಫಳನೆ ಮಿಂಚುತ್ತಿದ್ದ ಹಣ್ಣುಗಳ ಗತಿ ಕಂಡು ಬೇಜಾರಾಯ್ತು.   ಬಿದ್ದ ಹಣ್ಣುಗಳಲ್ಲಿ ಚೆನ್ನಾಗಿದ್ದುದನ್ನು ಆಯ್ದು ತಂದಾಗ ತಿನ್ನಲು ನಮ್ಮೆಜಮಾನ್ರು ಹಾಜರಾದರು.

ಹಣ್ಣು ಭಲೇ ಸಿಹಿ ಉಂಟಲ್ಲ... "

ತಿನ್ನಿ..  ಬಿದ್ದು ಹಾಳಾಗ್ತಾ ಉಂಟು. "


ಮಾರನೇ ಮುಂಜಾನೆ ನೋಡಿದಾಗ ಮರದಲ್ಲಿ ಅಳಿದುಳಿದ ಹಣ್ಣುಗಳು ಗಾತ್ರದಲ್ಲಿ ದೊಡ್ಡಾಗಿವೆ ಒಂದು ಮಳೆಯ ಪ್ರಭಾವವೇ ಅಂತಹುದು.   ನಾವು ಕೊಡಗಟ್ಟಲೆ ನೀರು ಹುಯ್ದರೂ ಮರ ಸ್ವೀಕರಿಸದು ವರ್ಷಧಾರೆಯ ಹನಿ ಸಿಕ್ಕರೂ ಸಾಕುಸಸ್ಯಗಳು ಧನ್ಯತೆಯಿಂದ ತಲೆದೂಗದಿರದೇ..





ಹಣ್ಣುಗಳೆಲ್ಲ ನನ್ನ ಬುಟ್ಟಿಯೊಳಗೆ ಸೇರಿದುವು.

ಇದನ್ನೆಲ್ಲ ಏನ್ಮಾಡ್ಲಿ?

ಉತ್ತರ ಸಿಕ್ಕಿಯೇ ಬಿಟ್ಟಿತು ಉಪ್ಪಿನಕಾಯಿ ಹಾಕುವುದು ಒಂದೆರಡು ವಾರದ ಖರ್ಚಿಗೆ ಸಾಕು ಮಧು ಬೆಂಗಳೂರಿಗೆ ಹೋಗುವಾಗ ಇದ್ದರೆ ಜಾಡಿಯಲ್ಲಿ ತುಂಬಿಸಿ ಕೊಡಬಹುದು.


ಉಪ್ಪಿನಕಾಯಿ ಹಾಕಲು ಬೇಕಾದ ಸಾಮಗ್ರಿಗಳೆಲ್ಲ ಇವೆ.

ಉಪ್ಪು ಮೆಣಸು ಸಾಸಿವೆ ಮೆಂತೆ ಇತ್ಯಾದಿ ರೇಷನ್ ಸಾಮಗ್ರಿಗಳ ವ್ಯಾಪ್ತಿಯಲ್ಲಿ ಸಿಗುತ್ತಲಿರುವಾಗ,

ಹಿತ್ತಲಲ್ಲಿ ಬೆಳೆದ ಮಾವಿನಶುಂಠಿಯೂ ಹಸಿ ಅರಸಿಣವೂ ಗೋಣಿಚೀಲದಲ್ಲಿರುವಾಗ..


ನಕ್ಷತ್ರಹಣ್ಣುಗಳ ಬೀಜ ಬೇರ್ಪಡಿಸಿ ಹೋಳು ಮಾಡಲಾಯಿತು ಹದಿನೈದರಿಂದ ಇಪ್ಪತ್ತು ಹಣ್ಣು ಸಾಕು.

ಸೂಕ್ತವಾಗುವಷ್ಟು ಮಾಂಙನಾರಿ ಚೂರು ಚೂರಾಯಿತು.

ತುಸು ಪುಡಿಯುಪ್ಪು  ಬೆರೆಸಿ ಒಲೆಯ ಮೇಲಿಟ್ಟು ಬೆಚ್ಚಗೆ ಮಾಡುವುದು ಬೇಯುವುದೇನೂ ಬೇಡ ನೀರು ತಾಕಿಸಲೇ ಬಾರದು ಬೀಂಬುಳಿ ದಾರೆಹುಳಿಗಳಂತೆ ಶೇಕಡಾ 80ಕ್ಕೂ ಮೇಲ್ಪಟ್ಟು ನೀರು  ಹುಳಿ ಹಾಗೂ ಸಿಹಿ ಮಿಶ್ರಿತ ಹಣ್ಣಿನಲ್ಲಿರುವಾಗ ನೀರಿನ ಹಂಗು ಇದಕ್ಕಿಲ್ಲ.


ಮಸಾಲೆ ಏನೇನು ಹಾಕೋಣ?

ಕಡಲೆ ಗಾತ್ರದ ಇಂಗು ಪುಟ್ಟ ಚಮಚ ಮೆಂತೆ ಬಾಣಲೆಗೆ ಬಿತ್ತು.   ನಾನ್ ಸ್ಟಿಕ್ ಕಡಾಯಿ ಎಣ್ಣೆ ಬಯಸದು.

ಒಂದೂವರೆ ಚಮಚ ಸಾಸಿವೆ ಸೌಟಾಡಿಸುತ್ತ ಸಾಸಿವೆ ಸಿಡಿಯುವುದನ್ನು ಗಮನಿಸುತ್ತಿದ್ದಂತೆ,

ಒಂದೂವರೆ ಚಮಚ ಮೆಣಸಿನ ಹುಡಿ ಬೀಳಿಸಿ,

ಒಂದೆಸಳು ಕರಿಬೇವು ಉದುರುವಲ್ಲಿಗೆ ಸ್ಟವ್ ಆರಿಸಿ.


ಆರಿದ ನಂತರ  ಶುದ್ಧೀಕರಿಸಲ್ಪಟ್ಟ ಮಿಕ್ಸಿಯಲ್ಲಿ ಹುಡಿ ಮಾಡುವುದು.

ಹುಡಿ ಮಾಡುವಾಗಲೇ ಪುಡಿಯುಪ್ಪು ಸೇರಿಸುವುದು ಸೂಕ್ತ.   ಕೈಯಲ್ಲಿ ಬೆರೆಸಬೇಕಿಲ್ಲ.

ಹಸಿ ಅರಸಿಣ ಇತ್ತಲ್ಲ ಆದನ್ನೇ ನಾಲ್ಕು ಚೂರು ಮಿಕ್ಸಿಗೆ ಹಾಕಲಾಯಿತು.

ನಂತರ  ತಾಜಾ ಮಸಾಲೆಯನ್ನು ನಕ್ಷತ್ರ ಹಾಗೂ ಮಾವಿನಶುಂಠಿ ಮಿಶ್ರಣಕ್ಕೆ ಬೆರೆಸಿ ಮುಚ್ಚಿ ಇಡುವುದು.

 ಹೇಗಾಯ್ತೂ ಎಂದು ರುಚಿ ನೋಡದಿದ್ದರೆ ಹೇಗೆ?

 ಉಪ್ಪು ಕಡಿಮೆ ಎಂದೆನಿಸಿದರೆ ತುಸು ಉಪ್ಪು ಬೆರೆಸುವುದು ಅಷ್ಟೇ ಮೊದಲೇ ತುಂಬಾ ಉಪ್ಪು ಹಾಕಲೇ ಬಾರದು.

 ಉಪ್ಪಿನಕಾಯಿಯನ್ನು ಮಾಡಿದ ಕೂಡಲೇ ಉಪಯೋಗಿಸಬಹುದಾಗಿದೆ.


ನಂತರ ನಾಲ್ಕಾರು ದಿನಗಳಲ್ಲಿ ಮಕರಸಂಕ್ರಾಂತಿ ಬಂದಿದೆ.   ಹಿರಣ್ಯ ಶ್ರೀದೇವಿ ಕ್ಷೇತ್ರದಲ್ಲಿ ಭೋಜನದ ಉಸ್ತುವಾರಿ ನನ್ನದೇ ಆಗಿರುವಾಗ ನಕ್ಷತ್ರಹಣ್ಣಿನ ಉಪ್ಪಿನಕಾಯಿ ಎಲ್ಲರ ಬಾಯಿಚಪಲಕ್ಕೆ ತುತ್ತಾಗಿದ್ದು ಸುಳ್ಳಲ್ಲ ಕಣ್ರೀ...






ನಕ್ಷತ್ರ ಹಣ್ಣು ಎಂಬ ಮಧ್ಯಮ ಗಾತ್ರದ ಹಣ್ಣಿನ ಮರವು ಆಂಗ್ಲ ಭಾಷಾ ಶಾಸ್ತ್ರದ ರೀತ್ಯಾ ವಾಟರ್ ರೋಸ್ ಅ್ಯಪಲ್ ಆಗಿರುತ್ತದೆ ಜಾವಾ ಆ್ಯಪಲ್ ವ್ಯಾಕ್ಸ್ ಜಂಬೊ ಇನ್ನೂ ಹಲವು ನಾಮಕರಣಗಳು.   ಅಂಡಮಾನ್ ದ್ವೀಪ ಸಮೂಹದಲ್ಲಿ ನಕ್ಷತ್ರ ಹಣ್ಣಿನ ಬೆಳೆ ವಿಶೇಷವಾಗಿರುವುದರಿಂದಲೇ ಕೇರಳೀಯರು ನಕ್ಷತ್ರ ಹಣ್ಣು ಬೆಳೆಯುವಲ್ಲಿ ಮೊದಲಿಗರಾಗಿದ್ದಾರೆಕೇರಳದಲ್ಲಿ ನಕ್ಷತ್ರ ಹಣ್ಣನ್ನು ಚಂಬಕ್ಕ ಎನ್ನಲಾಗುತ್ತದೆ.  


ಸಸ್ಯವಿಜ್ಞಾನದಲ್ಲಿ ನಕ್ಷತ್ರ ಹಣ್ಣು syzygium samarangense.



ಮಧು ಹಾಗೂ ಮೈತ್ರಿ ಸಂಕ್ರಾಂತಿಯ ತರುವಾಯ ಬೆಂಗಳೂರಿಗೆ ಹೊರಡುವಾಗ ಉಪ್ಪಿನಕಾಯಿ ಮುಗಿದಿತ್ತು ಮರದಲ್ಲಿ ಉಳಿದ ಹಣ್ಣುಗಳು ಕಾರು ಸೇರಿದವು.   ನನಗೂ ಸಮಧಾನ ಆಯ್ತು ಅನ್ನಿ.


ಅಮ್ಮ ನಕ್ಷತ್ರ ಹಣ್ಣು ಬೆಂಗಳೂರು ಬರಬೇಕಾದ್ರೇ ತಿಂದು ಮುಗಿಯಿತು ಏನ್ ರುಚಿ ಗೊತ್ತಾ..   ಹಣ್ಣಿದ್ರೆ ಕುಡಿಯಲಿಕ್ಕೆ ನೀರೂ ಬೇಡ,   ಆಸರು ಆಗಲೇ ಇಲ್ಲ. " ಎಂದ ಮಧು.




0 comments:

Post a Comment