Pages

Ads 468x60px

Sunday 31 January 2021

ನುಗ್ಗೆ ಸೊಪ್ಪಿನ ತಂಬುಳಿ


 


ಮನೆ ಹಿತ್ತಲಲ್ಲಿ ಅಲ್ಲೊಂದು ಇಲ್ಲೊಂದು ಎಂಬಂತೆ ನುಗ್ಗೆ ಮರಗಳಿದ್ದರೂ ನುಗ್ಗೇಕಾಯಿ ಕೊಯ್ಯಲು ಸಿಗದ ಕಾರಣವೂ,   ಮಳೆಗಾಲದಲ್ಲಿ ಕೊಂಬೆ ಮುರಿದು ಬೀಳುವ ಕಾರಣವೂ ಸೇರಿ ನುಗ್ಗೆ ಮರ ಕಡಿದು ಹಾಕಲ್ಪಟ್ಟಿತು ಆದರೇನಂತೆ,  ಬುಡದಿಂದ ಪುನಃ ಚಿಗುರು ಮೇಲೆದ್ದು ಹೊಸ ಮರವಾಗಿ ನಿಂತ ನುಗ್ಗೆಯ ಮರದ ಎಲೆಗಳನ್ನು ಬೇಕೆನಿಸಿದಾಗ ಕೊಯ್ದು ಅಡುಗೆಯ ತಪಲೆಗೆ ಹಾಕಿ ಸಾಂಬಾರು ಆಯ್ತು ಅನ್ನದಿದ್ದರೆ ಹೇಗೆ?


ನುಗ್ಗೆಕಾಯಿಯ ಪರಿಮಳ ಬರದಿದ್ದರೇನಂತೆ ನುಗ್ಗೆಸೊಪ್ಪು ಜೀವಸತ್ವಗಳ ಆಗರ ತಾಜಾ ಸೊಪ್ಪಿನ ಅಡುಗೆ ಎಲ್ಲರಿಗೂ ಸಿಗದು ತರಕಾರಿ ಮಾರುಕಟ್ಟೆಯಿಂದ ತಂದು ತೊಳೆದುತಂಪು ಪೆಟ್ಟಿಗೆಯಲ್ಲಿ ತುಂಬಿಟ್ಟು ಅಡುಗೆಯ ಅಂಗಣಕ್ಕೆ ಪೆಟ್ಟಿಗೆಯಿಂದ ಹೊರಬರುವಾಗ ಅದರಲ್ಲಿರುವ ಜೀವಾಂಶಗಳೆಲ್ಲ ನಿಜ ಅರ್ಥದಲ್ಲಿ ಸತ್ತಿರುತ್ತವೆ.  


ಇರಲಿ ನಾವು ಇವತ್ತು ನುಗ್ಗೆಸೊಪ್ನಿನ ತಂಬುಳಿ ಮಾಡಲಿದ್ದೇವೆ ಹಿತ್ತಲ ಗಿಡದಿಂದ ಚಿಗುರೆಲೆಗಳು ತುಂಬಿದ ಟೊಂಗೆಯನ್ನು ಮುರಿದು ತರುವುದು.

ಚಿಗುರೆಲೆಗಳನ್ನು ಆಯ್ದು ತುಸು ನೀರೆರೆದು ಕುದಿಸಿದ ಶಾಸ್ತ್ರ ಮಾಡಿ ಕೆಳಗಿಳಿಸಿ.

ತೆಂಗಿನಕಾಯಿ ತುರಿಯಿರಿ,  

ಎಷ್ಟೂ?

ಅರ್ಧ ಕಾಯಿಯ ಅರ್ಧದಷ್ಟು ಕಾಯಿತುರಿ ಸಾಕು.

ತಾಜಾ ಸಿಹಿ ಮಜ್ಜಿಗೆ ಇರಬೇಕು.

ಇಲ್ವೇ..

ತಂಪು ಪೆಟ್ಟಿಗೆಯೊಳಗೆ ನಿನ್ನೆಯ ಮೊಸರು ಇಟ್ಕೊಂಡಿದ್ದರೆ ಅದೇ ಸಾಕು.

ಹೆಚ್ಚೇನೂ ಬೇಡ ಅರ್ಧ ಸೌಟು ಮೊಸರು ಇದ್ದರಾಯಿತು.

ಅರೆಯಲಿಕ್ಕೆ ಇನ್ನೂ ಏನಿರಬೇಕು?

ಏಳೆಂಟು ಮೆಣಸಿನ ಕಾಳು ಅಂದರೆ ಕಾಳುಮೆಣಸು.   ಹಸಿಮೆಣಸು ಬೇಡ.

ಅರ್ಧ ಚಮಚ ಜೀರಿಗೆ.

ರುಚಿಗೆ ತಕ್ಕಷ್ಟು ಉಪ್ಪು.

ಅರೆಯಲಿಕ್ಕೆ ತುಸು ನೀರು ಒಂದು ಲೋಟ ಇಟ್ಕೊಳ್ಳಿ.


ಅರೆಯುವ ಕಲ್ಲು ಇದ್ದರೆ ಅದೇ ಉತ್ತಮ ತಂಬುಳಿಯು ಬೆಣ್ಣೆಯಂತೆ ನುಣ್ಣಗಾಗೋದು ಬೇಡ್ವೇ,

 ಮಿಕ್ಸಿ ಸಾಕು ಅಂತೀರಾ

ಮಿಕ್ಸಿಯಲ್ಲಿ ಎಲ್ಲವನ್ನೂ ಮೊಸರು ಕೂಡಾ ಹಾಕಿಕೊಳ್ಳಿ ಮೊದಲಾಗಿ ನೀರು ಎರೆಯದಿರಿ... ಏನೋ ಆಗಿ ಹೋದೀತು.

ಮಿಕ್ಸಿಗೆ ನಾವು ತುಂಬಿದಂತಹ ಸಾಮಗ್ರಿಗಳು ಸುಸೂತ್ರವಾಗಿ ತಿರುಗಲು ಬೇಕಾದಷ್ಟೇ ನೀರೆರೆದು ನುಣ್ಣಗೆ ಅರೆಯಿರಿ.

ನುಣ್ಣಗಾಯ್ತು ತಪಲೆಗೆ ಹಾಕಿಕೊಳ್ಳಿ ತಂಬುಳಿಯು ತೆಳ್ಳಗೆ ಕುಡಿಯಲು ಯೋಗ್ಯವಾಗುವಷ್ಟು ನೀರು ಎರೆದುತುಪ್ಪದಲ್ಲಿ ಒಗ್ಗರಣೆ ಕೊಡುವಲ್ಲಿಗೆ ತಂಪು ತಂಪಾದ ತಂಬುಳಿ ನಮ್ಮದಾಯಿತು ಇದನ್ನು ಕುದಿಸುವ ಕ್ರಮ ಇಲ್ಲ.

ಎಲ್ಲರ ಊಟದ ತರುವಾಯ ಇನ್ನೂ ಮಿಕ್ಕಿದ್ದರೆ  ತಂಬುಳಿಯನ್ನು ಅಡುಗೆಮನೆಯ  ಸೂತ್ರಧಾರರು ಗಟಗಟನೆ ಕುಡಿಯತಕ್ಕದ್ದು.





ಕ್ಯಾಲ್ಸಿಯಂ,ವಿಟಮಿನ್ ಸಿವಿಟಮಿನ್ ಮೆಗ್ನೀಶಿಯಂಪ್ರೊಟೀನ್ ಹೊಂದಿರುವ ನುಗ್ಗೆಯ ಎಲೆಗಳು ದೈಹಿಕ ಬಲವನ್ನು ಹೆಚ್ಚಿಸುವುದರಲ್ಲಿ ಅನುಮಾನ ಬೇಡ.

ಇದರಲ್ಲಿರುವ ಕಬ್ಬಿಣದ ಧಾತು ರಕ್ತಹೀನತೆ ಯಾ ಅನೀಮಿಯಾ ನಿವಾರಕ ಮಹಿಳೆಯರಿಗೆ ಅದರಲ್ಲೂ ಬಸುರಿ ಬಾಣಂತಿಯರಿಗೆ ಅತ್ಯುತ್ತಮ ಪೋಷಕ ಆಹಾರ.  ಮಾಸಿಕ ಋತುಸ್ರಾವದಿಂದ ಬಳಲುವ ಸ್ತ್ರೀ ಜೀವಕ್ಕೆ ನುಗ್ಗೆ ಸೊಪ್ಪು ಪ್ರಕೃತಿಯ ವರದಾನ ಎಂದೇ ತಿಳಿಯಿರಿ.


ಗಂಟುನೋವುನರಗಳ ದುರ್ಬಲತೆ ವಯಸ್ಸಾದವರಲ್ಲಿ ಸಾಮಾನ್ಯ ಬಾಧೆ ನುಗ್ಗೆ ಸೊಪ್ಪು ಸೇವಿಸಿ ನುಗ್ಗೆಯಲ್ಲಿ ಹೇರಳವಾಗಿರುವ ಕ್ಯಾಲ್ಸಿಯಂ ನೋವು ನಿವಾರಕ ಶಕ್ತಿ ಹೊಂದಿದೆ.


ನುಗ್ಗೆ ಸೊಪ್ಪಿನ ದೋಸೆಪತ್ರೊಡೆರೊಟ್ಟಿಬೋಂಡಾಚಟ್ನಿಪುಡಿರಸಂ ಇತ್ಯಾದಿ ಅಡುಗೆಯಲ್ಲಿ ಮಾಡಿ ಸವಿಯಿರಿ


ಇದಲ್ಲದೆ ನುಗ್ಗೆಯ ಬೇರುತೊಗಟೆಹೂಬೀಜ ಇತ್ಯಾದಿ  ಔಷಧೀಯ ಗುಣಧರ್ಮ ಹೊಂದಿದ್ದು ಪರಿಣತ ವೈದ್ಯರ ಮಾರ್ಗದರ್ಶನ ಅವಶ್ಯವಿದೆ.


ಸಸ್ಯಶಾಸ್ತ್ರೀಯವಾಗಿ moringa oleifera ಎಂದಿದ್ದರೂ ಆಂಗ್ಲಭಾಷೆಯು ಇದನ್ನು drumstick tree ಎಂದಿದೆ.

ಅಪ್ಪಟ ಭಾರತದ ಸಸ್ಯವಾಗಿರುವ ನುಗ್ಗೆಯು ಆಯುರ್ವೇದ ಶಾಸ್ತ್ರದಲ್ಲೂ ಸ್ಥಾನ ಪಡೆದಿದೆ.






  

0 comments:

Post a Comment