Pages

Ads 468x60px

Sunday 4 September 2022

ಹಾಲು ದೋಸೆ


 

ಮಧ್ಯಾಹ್ನ ಊಟಕ್ಕೆ ನಾನಿಲ್ಲ,  ಹೋಗುವುದಿದೆ..."  ಹತ್ತು ಗಂಟೆಯ ಚಹಾ ಕುಡಿದು,  ಮನೆ ಯಜಮಾನರು ಕಾರು ಹತ್ತಿ ಹೋದರು.   ಮೊಬೈಲಲ್ಲಿ ಸುಡೊಕು ಅಂಕಿಯಾಟದಲ್ಲಿ ಹೊತ್ತು ಹೋದದ್ದು ತಿಳಿಯಲೂ ಇಲ್ಲ.   


ಓಹ್...  ಗಂಟೆ ಹನ್ನೊಂದಾಯ್ತು...  ಇನ್ನು ಕುಚ್ಚುಲಕ್ಕಿ ಅನ್ನ ಬೇಯುವುದೆಷ್ಟು ಹೊತ್ತಿಗೆ? "  ಅಂದುಕೊಳ್ಳುತ್ತ ಊಟದ ಬೆಳ್ತಿಗೆ ಅಕ್ಕಿಯನ್ನು ಡಬ್ಬದಿಂದ ಹೊರ ತೆಗೆದು ಒಂದು ಪಾವಕ್ಕಿ ಅನ್ನ ಮಾಡಿದ್ದಾಯ್ತು.   ಮುಂಜಾನೆ ಇಡ್ಲಿಗಾಗಿ ಮಾಡಿದಂತಹ ತೆಂಗಿನಕಾಯಿ ಚಟ್ಣಿ ಉಳಿದಿತ್ತು.    ಚಟ್ಣಿ ಸಾಕು..  ಮೊಸರು ಉಪ್ಪಿನಕಾಯಿ ಇದೆ "

ರಾತ್ರಿಗೆ ತಪಲೆಯಲ್ಲಿ ಏನೂ ಇಲ್ಲ ಎಂದಾಗಬಾರದು ಕೆಸುವಿನ ದಂಟಿನ ಸಾರು ಸಿದ್ಧವಾಯಿತು.


ಪಾಯಸದೂಟ ಉಂಡು ನಮ್ಮವರು ಮನೆಗೆ ಬಂದರು.   ಅನ್ನ ರಾತ್ರಿಗೆ ಮುಗಿಯಲಾರದು ಎಂದು ತಲೆಗೆ ಹೊಳೆದ ಕೂಡಲೇ ಉಳಿದ ಅನ್ನದಿಂದ ದೋಸೆ ಎಂದು ತೀರ್ಮಾನಿಸಿ ಎರಡು ಲೋಟ ಅಕ್ಕಿ ನೆನೆ ಹಾಕಿದ್ದಾಯ್ತು.


ರಾತ್ರಿ ನನ್ನದು ಫಲಾಹಾರ ಅಂದ್ರೆ ಮೂರು ಚಪಾತಿ ತಿಂದ್ಬಿಟ್ಟು ಒಂದು ಲೋಟ ಹಾಲು ಇದ್ದರೆ ಒಂದು ಕದಳಿ ಬಾಳೆ ಹಣ್ಣು.   ಹಾಗಾಗಿ ಅನ್ನ ಸಾಕಷ್ಟು ಉಳಿದಿದೆ ತುಂಟಿ ನಾಯಿಗೂ ಚಪಾತಿಯ ಬದಲು ಅನ್ನ ಮೊಸರು ಹಾಕಲಾಯಿತು ಆದರೂ ಅನ್ನ ಉಳಿಯಿತು.


ಆಗ್ಗಿಂದಾಗ್ಗೆ ಚಹಾಕಾಫಿಹಾಲು  ಕುಡಿಯುವವರೂ ಮನೆಯಲ್ಲಿ ಇಲ್ಲವಾಗಿ ಹಾಲಿನ ತಪಲೆ ತುಂಬಿಕೊಂಡಿದೆ "ಚಿಂತೆಯಿಲ್ಲದೋಸೆ ಅರೆಯುವಾಗ ನೀರು ಹಾಕದಿದ್ದರಾಯಿತು ಹಾಲನ್ನೇ ಎರೆಯೋಣ.."   ಇಂತಹ ಘನ ವಿಚಾರ ಹೊಕ್ಕಿದ್ದೇ ತಡ ಒಂದು ದೊಡ್ಡ ಲೋಟ ಹಾಲು ದೋಸೆ ಹಿಟ್ಟಿಗೆ ಸೇರಿಕೊಂಡಿತು.


ಮಾರನೇ ಮುಂಜಾನೆ ದೋಸೆ ತಿನ್ನುತ್ತ ನಮ್ಮ ಯಜಮಾನರು "ಹೌದೂ ಬನ್ನಂಗಾಯಿ ದೋಸೆ ಹ್ಯಾಗೇ ಮಾಡಿದ್ದೂ...  ಎಲ್ಲಿತ್ತು ತೆಂಗಿನಕಾಯಿಎಂದು ಕೇಳಿಯೇ ಬಿಟ್ಟರು.

ಅಹಹ... ಇದಪ್ಪ ಪ್ರಶ್ನೆ.. " ಮಾಡಿದ್ದು ಹೇಗೇಂತ ಪುನಃ ಹೇಳಲಾಯಿತು ಅಂತೂ ಹಾಲೂ + ಅನ್ನ ದೋಸೆ ಗೆದ್ದಿತು.


ಎರಡು ಲೋಟ ಅಕ್ಕಿಗೆ  ಅಷ್ಟೇ ಅನ್ನ ಸೇರಿಸಿದರೆ ಸಾಕು ಇದೆಯೆಂದು ಹೆಚ್ಚು ಹಾಕದಿರಿ ದೋಸೆ ಮೆತ್ತಗಾಗಿ ಕಾವಲಿಯಿಂದ ಏಳಲಾರದು.


ಮಿಕ್ಸಿ ಯಂತ್ರದಲ್ಲಿ ಎಲ್ಲವನ್ನೂ ಒಂದೇ ಬಾರಿ ಅರೆಯಲಾಗದು ಅವಶ್ಯವಿದ್ದಷ್ಟೇ ನೀರು ಎರೆದು ಅಕ್ಕಿಯನ್ನು ನುಣ್ಣಗೆ ಅರೆದು ತೆಗೆಯಿರಿ.

ಹಾಲು ಹಾಗೂ ಅನ್ನವನ್ನು ಒಟ್ಟಿಗೆ ಅರೆದು ಅಕ್ಕಿ ಹಿಟ್ಟಿಗೆ ಕೂಡಿಸಿ ರುಚಿಗೆ ಉಪ್ಪು ಬೆರೆಸಿ...

ಹಿಟ್ಟು ಹುಳಿ ಬರಬೇಕೆಂದೇನೂ ಇಲ್ಲ.



0 comments:

Post a Comment