ಬೆಳಗ್ಗೆ ತೆಂಗಿನಕಾಯಿ ಒಡೆದ ನೀರನ್ನು ಗ್ಲಾಸಿನಲ್ಲಿ ತೆಗೆದಿಟ್ಟು, ಅರ್ಧ ಚಮಚ ಸಕ್ಕರೆ ಬೆರೆಸಿ, ಸಂಜೆ ದೋಸೆಗೆ ಅರೆಯುವಾಗ ಸೇರಿಸತಕ್ಕದ್ದು. ಈ ಐಡಿಯಾವನ್ನು ಇಡ್ಲಿ, ಪಾಲಪ್ಪಂ, ಇತ್ಯಾದಿ ಹುಳಿ ಬರಬೇಕಾದ ಹಿಟ್ಟುಗಳಿಗೆ ಉಪಯೋಗಿಸಬಹುದು. ಚಳಿಗಾಲದಲ್ಲಿ ಉಪಯುಕ್ತ ಎಂದು ತಿಳಿಯಿರಿ.
ಇಂದಿನ ಕಾಯಿ ನೀರು ಮಾರನೇ ದಿನಕ್ಕೆ ಆಗದು, ಹುಳಿ ವಾಸನೆ ಬಂದೀತು.
ದೋಸೆಯ ಅಳತೆ
1 ಲೋಟ ಬೆಳ್ತಿಗೆ ಅಕ್ಕಿ
1 ಲೋಟ ಕುಚ್ಚುಲಕ್ಕಿ, ರಾಜಮುಡಿ ಅಕ್ಕಿ ಬೇಗನೆ ನುಣ್ಣಗೆ ಆಗುತ್ತದೆ. ರೇಶನ್ ಶಾಪಿನ ಬೆಳ್ತಿಗೆ ಅಕ್ಕಿಯೂ ಬೇಗನೆ ನುಣ್ಣಗೆಆಗುತ್ತದೆ, ಈ ಎರಡೂ ಪ್ರತಿ ಅಕ್ಕಿಗಳನ್ನು ಒಟ್ಟಿಗೇ ತೊಳೆದು ನೆನೆಯಲು ಹಾಕಿರಿಸಬಹುದು. ಈ ವಿಧಾನ ನಮ್ಮ ಪಾರಂಪರಿಕ ಕ್ರಮಎಂದು ತಿಳಿದಿರಲಿ. ಸಂಜೆ ರುಬ್ಬುವ ಕಲ್ಲಿನಲ್ಲಿ ಅರೆಯಬೇಕಾದರೆ ಮುಂಜಾನೆಯೇ ಕುಚ್ಚುಲಕ್ಕಿ ಬೆಳ್ತಿಗೆ ಅಕ್ಕಿಗಳನ್ನು ನೆನೆಯಲುಹಾಕಿ, ಕಲ್ಲು ಜಳ್ಳು ಸೋಸಿ ಇಡಬೇಕಾಗಿತ್ತು, ಈಗ ನಾವು ದಿಢೀರ್ ಯುಗದಲ್ಲಿದ್ದೇವೆ ಅಷ್ಟೇ.
ಬೇಳೆಕಾಳುಗಳು ಎಷ್ಟು?
ನಮ್ಮ ಉದ್ದೇಶ ಮೆಂತೆ ದೋಸೆಯ ತಯಾರಿಕೆ
2 ಚಮಚ ಮೆಂತೆ
3 ಚಮಚ ಉದ್ದಿನಬೇಳೆ
2 ಚಮಚ ಪಂಚರಂಗೀ ಬೇಳೆ
ಹೌದೂ, ಪಂಚರಂಗಿ ಬೇಳೆ ಅಂದ್ರೇನು?
ಐದು ವಿವಿಧ ಬೇಳೆಗಳ ಮಿಶ್ರಣ ಅಷ್ಟೇ.
ನಿಮ್ಮೂರಿನಲ್ಲಿ ಸಿಗುವುದಿಲ್ಲವೇ, ಅಡುಗೆಮನೆ ಡಬ್ಬದಲ್ಲಿ ಇರುವ ಬೇಳೆಗಳನ್ನೇ ಬಳಸಿದರಾಯ್ತು. ತೊಗರಿ, ಹೆಸ್ರು, ಹುರುಳಿ, ಕಡಲೆ ಇತ್ಯಾದಿ…
ಮಾಮೂಲಿಯಾಗಿ ನಾವು ಮೆಂತೆ ದೋಸೆಗೆ ತುಸು ತೆಂಗಿನತುರಿ ಹಾಕುವುದಿದೆ. ಇದಕ್ಕೂ ಹಾಕೋಣ.
ನೆನೆದ ಬೇಳೆಗಳನ್ನು ತೆಂಗಿನ ತುರಿ ಹಾಗೂ ತೆಂಗಿನನೀರು ಸೇರಿಸಿ ನುಣ್ಣಗೆ ಅರೆಯಿರಿ. ಮಜ್ಜಿಗೆಯ ಬದಲು ಕಾಯಿನೀರು ಎಂದುತಿಳಿಯಿರಿ. ಮಜ್ಜಿಗೆ ಕುಡಿದೇ ಮುಗಿಯುತ್ತೆ, ಇನ್ನು ದೋಸೆಗೆ ಎಲ್ಲಿಂದ ತರೋಣ?
ನಂತರ ಅಕ್ಕಿಯನ್ನೂ ಅರೆದು ಸೇರಿಸಿ. ಹಿಟ್ಟಿಗೆ ಉಪ್ಪು ಹಾಕಿ ಚೆನ್ನಾಗಿ ಬೆರೆಸಿ ಇಡತಕ್ಕದ್ದು. ಹುದುಗು ಬರಲು 8 ಗಂಟೆಯ ಅವಧಿಇರಲೇ ಬೇಕು. ಹಿಟ್ಟು ದೋಸೆ ಹಿಟ್ಟಿನ ಸಾಂದ್ರತೆಯಲ್ಲಿ ಇರತಕ್ಕದ್ದು.
ಮೂರು ನಾಲಕ್ಕು ಬಾರಿ ಮಾಡಿ ದೋಸೆ ಸವಿದಾಯ್ತು. ಮೊನ್ನೆ ಮಧು ಬಂದಿದ್ದಾಗ ಪುನಃ ಮಾಡಿ ಅವನಿಗೂ ರುಚಿ ಹಿಡಿಸಿದ್ದಾಯ್ತು.
ಈಗ ಬಿರು ಬೇಸಿಗೆಯ ಕಾಲ ಬಂದಿದೆ. ಅಡುಗೆಮನೆಯಲ್ಲಿ ರಾಗಿ ಹುರಿಟ್ಟು ತರಿಸಿ ಇಟ್ಟಿದ್ದೇನೆ. ಮುಂಜಾನೆ ಯಾವುದೇ ವಿಧಾನದ ದೋಸೆ ಮಾಡಿರಲಿ, ಸಂಜೆಯ ಹೊತ್ತು ಒಂದೆರಡು ಚಮಚ ರಾಗಿ ಹುರಿಟ್ಟು ಸೇರಿಸಿ ದೋಸೆ ಹೊಯ್ಯುವ ರೂಢಿ ನನ್ನದು. ನಮ್ಮವರೂ ಈ ಕ್ರಮದ ದೋಸೆಯನ್ನು ಇಷ್ಟ ಪಟ್ಟು ತಿನ್ನುವವರು. ಇನ್ನು ತುಂಟಿಯೂ ಕುಣಿದು ಕುಪ್ಪಳಿಸಿ ದೋಸೆ ನುಂಗುವವಳು… ಇದು ಬೇಸಿಗೆಯ ಮಜಾ ಅನ್ನಿ.
0 comments:
Post a Comment