Posted via DraftCraft app
Saturday, 27 December 2014
Saturday, 20 December 2014
ತೇಂಗೊಳಲ ಮಾಲೆ
ಅಕಸ್ಮಾತ್ ತಿಂಡಿಗಳು ಅಡುಗೆಯ ಪ್ರಯೋಗಾಲಯದಲ್ಲಿ ಎದ್ದು ಬರುವುದಿದೆ. ಈ ತೇಂಗೊಳಲ್ ಹಾಗೇ ಆದದ್ದು. ಆ ದಿನ ಹಬ್ಬದ ಅಡುಗೆ, ದೇವರಿಗೆ ಏನೇನೆಲ್ಲ ಪ್ರಸಾದಗಳನ್ನು ಅರ್ಪಿಸಿ ಕೊನೆಗೆ ನಾವು ತಿನ್ನುವ ಸಂಭ್ರಮ. ಮಕ್ಕಳಿಬ್ಬರೂ ಮನೆಗೆ ಬಂದಿದ್ದರು, ಕಟ್ಟಪ್ಪಣೆ ಬೇರೆ, " ಅಮ್ಮಾ, ಅಜ್ಜ ಇದ್ದಾಗ ಮಾಡ್ತಾ ಇದ್ದಂತಹ ತಿಂಡಿಗಳೆಲ್ಲ ಇರಬೇಕು "
ಆಯ್ತೂಂತ ಅಡುಗೆಮನೆಯ ಬಿಡುವಿರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾಯಿತು. ಪಂಚಕಜ್ಜಾಯ, ನೆಯ್ಯಪ್ಪಂ, ಮೋದಕ, ಕಲಸವಲಕ್ಕಿ, ಹೆಸ್ರು ಪಾಯಸ, ಇತ್ಯಾದಿ ಸಿಹಿಗಳೊಂದಿಗೆ ಘಮಘಮಿಸುವ ಸಣ್ಣಕ್ಕಿ ಅನ್ನ, ಸಾರು, ಪಲ್ಯ.... ಹಪ್ಪಳ ಇರಬೇಕಿತ್ತು, ಸಾಮಾನು ಪಟ್ಟಿಯಲ್ಲಿ ನಾನು ಬರೆದು ಕೊಟ್ಟಿದ್ದನ್ನು ಮಾತ್ರ ತರೋರು ನಮ್ಮೆಜಮಾನ್ರು.
" ಏನ್ಮಾಡೋದೇ, ಹಪ್ಪಳ ಇಲ್ವಲ್ಲ ..."
" ನಂಗೆ ಹಪ್ಪಳ ಬೇಕೇ ಬೇಕು " ಎಂದಳು ಮಗಳು.
" ನೋಡೋಣ, ಬೇರೇನಾದ್ರೂ ಸಿಗುತ್ತಾ ಅಂತ " ಡಬ್ಬಗಳನ್ನು ಜಾಲಾಡಿದಾಗ ಕಡ್ಲೆ ಹುಡಿ ಇದೆ.
" ಖಾರದ ಕಡ್ಡಿ ಆದೀತಾ "
" ಹ್ಞೂ ಆದೀತು "
ಆದೀತಂದ್ರೂ ಗಡಿಬಿಡಿಯ ಹೊತ್ತಿನಲ್ಲಿ ಮಾಡಿದ್ದು ಸರಿ ಬರುತ್ತೋ ಇಲ್ವೋ, ಇಲ್ಲೊಂದು ಅಕ್ಕಿಹುಡಿಯ ಪ್ಯಾಕೆಟ್ಟೂ ಇದೆ. ಐಡಿಯಾ ಹೊಳೆಯಿತು.
3 ಕಪ್ ಅಕ್ಕಿಹುಡಿ
1 ಕಪ್ ಕಡ್ಲೇ ಹುಡಿ
2 ಚಮಚ ಖಾರ ಪುಡಿ
ರುಚಿಗೆ ಉಪ್ಪು
ಎಲ್ಲವನ್ನೂ ತಪಲೆಗೆ ಹಾಕಿಕೊಂಡು ನೀರೆರೆದು ಚಪಾತಿ ಹಿಟ್ಟಿನ ಮುದ್ದೆಯಂತೆ ಕಲಸಿ ಇಟ್ಟಾಯಿತು.
ಚಕ್ಕುಲಿ ಮಟ್ಟು ಮೈ ಕೊಡವಿ ಸಿದ್ಧವಾಯಿತು. ಅದರೊಳಗೆ ಆರು ತೂತಿನ ಬಿಲ್ಲೆ ಹೊಗ್ಗಿಸಿ, ಹಿಟ್ಟನ್ನು ಉಂಡೆ ಮಾಡಿ ತುಂಬಿಸಿ, ಬಿಸಿ ಎಣ್ಣೆಗೆ ತೂತಿನಿಂದ ಹಿಟ್ಟು ಮಾಲೆಯಂತೆ ಇಳಿದು, ಹೊರಳಿ ಮೇಲೇರಿದಾಗ ತೇಂಗೊಳಲ ಮಾಲೆ ಪ್ರತ್ಯಕ್ಷವಾಯಿತಲ್ಲ, ನಮ್ಮ ದೇವರು ಸುಪ್ರೀತನಾದನೆಂದು ಬೇರೆ ಹೇಳಬೇಕಿಲ್ಲ.
ವಾರಕ್ಕೊಂದಾವರ್ತಿ ಮಗಳು ಮನೆಗೆ ಬರ್ತಿರ್ತಾಳಲ್ಲ, ಏನೋ ಒಂದು ಡಬ್ಬದಲ್ಲಿ ಇರಲೇಬೇಕು. " ಏನು ಮಾಡಲೀ ?"
" ಚೌತೀಗೆ ಮಾಡಿದ್ದು ಮಾಡಮ್ಮಾ "
" ಯಾವ್ದೂ, ಪಂಚಕಜ್ಜಾಯನಾ "
" ಅದೇ ಎಣ್ಣೆಯಲ್ಲಿ ಹುರಿದದ್ದೂ, ಖಾರದಕಡ್ಡೀ... " ರಾಗ ಎಳೆದಳು.
" ತೇಂಗೊಳಲ್ ಅನ್ನೂ "
"ಹ್ಞಾ, ಅದೇ ... ಮಾಡೂ "
" ಆವತ್ತು ಗಡಿಬಿಡಿಯಲ್ಲಿ ಮಾಡಿದ್ದಲ್ವಾ, ಈಗ ಕ್ರಮಪ್ರಕಾರವಾಗಿ ಮಾಡ್ತೇನೆ, ನೋಡ್ತಿರು "
" ಹಾಗಿದ್ರೆ ಸಂಪ್ರದಾಯದ ತೇಂಗೊಳಲ್ ಹೇಗೇ ಮಾಡ್ತೀರಾ ?" ಪ್ರಶ್ನೆ ಕೇಳಿಯೇ ಕೇಳ್ತೀರಾ. ಈಗ ಕಡ್ಲೇ ಹಿಟ್ಟು ಹಾಕಿದಲ್ಲಿ ಉದ್ದಿನ ಹಿಟ್ಟು ಹಾಕಿಕೊಂಡರಾಯಿತು. ಮಾರುಕಟ್ಟೆಯಲ್ಲಿ ಉದ್ದಿನಹುಡಿಯೂ ಸಿಗುತ್ತದೆ. ಅದಿಲ್ಲವಾದರೆ ಒಂದು ಕಪ್ ಉದ್ದು ನೆನೆ ಹಾಕಿಟ್ಟು ನುಣ್ಣಗೆ ಅರೆಯಿರಿ, ನೀರು ಜಾಸ್ತಿ ಹಾಕದಿರಿ. ಅರೆಯುವಾಗ ತುಸು ಜೀರಿಗೆ, ರುಚಿಗೆ ಉಪ್ಪು ಕೂಡಿಸಿ ಅರೆಯಿರಿ.
ಅರೆದಾಯಿತೇ, ತಪಲೆಗೆ ಹಾಕಿಕೊಳ್ಳಿ, 3 ಕಪ್ ಅಕ್ಕಿಹುಡಿ ಅಳೆದು ಹಾಕಿರಿ. ಗಟ್ಟಿಯಾಗಿ ಕಲಸಿಕೊಳ್ಳಿ. ನಂತರ ಈ ಹಿಂದೆ ಹೇಳಿದಂತೆ ಕರಿಯಿರಿ.
ಅಂತೂ ಮಾಡಿ ತಿಂದೆವು, ಚಕ್ಕುಲಿಗಿಂತ ಇದೇ ಮಾಡಿಟ್ಟುಕೊಳ್ಳಲು ಸುಲಭದ್ದು ಎಂದೂ ನನ್ನ ತಿಳುವಳಿಕೆಗೂ ಬಂದಿತು.
Posted via DraftCraft app
Saturday, 13 December 2014
ರವಾ ಇಡ್ಲಿ
ದಿನ ಬೆಳಗಾದರೆ ಅಕ್ಕಿಯಿಂದ ಮಾಡಿದ ತಿಂಡಿಗಳನ್ನೇ ತಿನ್ನಲು ಏನೂ ಸೊಗಸಿಲ್ಲ, ತಿನ್ನುವವರೂ ವೈವಿಧ್ಯತೆಯನ್ನು ಬಯಸುತ್ತಾರೆ. ದೇಹದ ಸರ್ವಾಂಗೀಣ ಬೆಳವಣಿಗೆಗೆ ಇದು ಪೂರಕವೂ ಹೌದು. ಈಗ ಇಲ್ಲಿ ಬಂದಿರುವ ರವಾ ಇಡ್ಲಿ ಮಾಡಲೂ ಸುಲಭ, ತಿನ್ನಲೂ ಸ್ವಾದಿಷ್ಟಕರ ತಿನಿಸು. ಉಪವಾಸ ವ್ರತಧಾರಿಗಳಿಗೂ ಆದೀತು, ಮಕ್ಕಳ ಟಿಫಿನ್ ಬಾಕ್ಸ್ ಒಳಗೆ ತುಂಬಿಸಲೂ ಯೋಗ್ಯ.
ಇದರ ತಯಾರಿಗೆ ಬೇಕಾದ ಸಿದ್ಧತೆ ಹೇಗೆ?
ಒಂದು ಕಪ್ ಉದ್ದಿನಬೇಳೆ
2 ಕಪ್ ಚಿರೋಟಿ ರವೆ ಅಥವಾ ಸಜ್ಜಿಗೆ
ರುಚಿಗೆ ಉಪ್ಪು
ಉದ್ದಿನಬೇಳೆಗೆ ನೀರು ಹಾಕಿ ಇಟ್ಟಿರಿ, ಅರ್ಧ ಘಂಟೆ ಬಿಟ್ಟು ಅರೆಯಿರಿ. ನುಣ್ಣಗಾದ ಹಿಟ್ಟಿಗೆ ಸಜ್ಜಿಗೆಯನ್ನು ಸುರಿದು ಸಾಕಷ್ಟು ನೀರು, ಒಂದ್ಲೋಟ ಆಗುವಷ್ಟು ಎರೆದು ಚೆನ್ನಾಗಿ ಕಲಸಿ ಉಪ್ಪು ಕೂಡಿಸಿ ಹುದುಗು ಬರಬೇಕಾಗಿದೆಯಲ್ಲ, ಎಂಟು ತಾಸು ಮುಚ್ಚಿ ಇಟ್ಟಿರಿ. ರಾತ್ರಿ ಇಡ್ಲಿ ಮಾಡಬೇಕಾಗಿದ್ದಲ್ಲಿ ಮುಂಜಾನೆ ಹೊತ್ತಿಗೆ ಈ ಕೆಲಸ ಆಗಿ ಬಿಡಬೇಕು.
ಸಜ್ಜಿಗೆಯಲ್ಲಿ ಕೂಡಾ ಬೇರೆ ಬೇರೆ ವಿಧಗಳಿವೆ. ಗೋಧಿ ಕಡಿ, ದೊಡ್ಡ ಸಜ್ಜಿಗೆ, ಮೀಡಿಯಂ ರವಾ ಸಜ್ಜೆಗೆ, ಬಾಂಬೇ ಸಜ್ಜಿಗೆ ಅಥವಾ ಚಿರೋಟಿ ರವೆ. ಉಳಿದೆಲ್ಲಾ ಸಜ್ಜಿಗೆಗಳನ್ನು ಹಾಗೇನೇ ಉದ್ದಿನ ಹಿಟ್ಟಿಗೆ ಬೆರೆಸಿಟ್ಟು ಕೊಳ್ಳತಕ್ಕದ್ದು. ನಾವೀಗ ಚಿರೋಟಿ ರವೆಯನ್ನು ಅಯ್ಕೆ ಮಾಡಿರುವುದರಿಂದ ಅದನ್ನು ಹುರಿದುಕೊಳ್ಳುವ ಅಗತ್ಯವಿದೆ.
ನಾನ್ ಸ್ಟಿಕ್ ತವಾದಲ್ಲಿ ಹಸಿವಾಸನೆ ತೊಲಗುವಂತೆ ಹುರಿಯಿರಿ. ಸೀದು ಹೋಗದಂತೆ ನೋಡಿಕೊಳ್ಳಿ. ಘಮಘಮಿಸುವ ಬಿಸಿ ಚಿರೋಟಿ ರವೆಯನ್ನು ಉದ್ದಿನಹಿಟ್ಟಿಗೆ ಹಾಕಿ ಕಲಸಿಟ್ಟು ಉಪ್ಪು ಕೂಡಿಸಿ ಮುಚ್ಚಿ ಇಟ್ಟಲ್ಲಿ ಮಾರನೇ ದಿನ ಚೆನ್ನಾಗಿ ಹುದುಗು ಬಂದಿರುತ್ತದೆ, ಸೋಡಪುಡಿ, ಬೇಕಿಂಗ್ ಪುಡಿ ಇಂತಹವುಗಳನ್ನು ಹಾಕದಿರಿ, ನಮ್ಮ ಸಾಂಪ್ರದಾಯಿಕ ಶೈಲಿಯ ಇಡ್ಲಿಗೆ ಇದ್ಯಾವುದೂ ಬೇಡ.
ಅಟ್ಟಿನಳಗೆ ಯಾ ಇಡ್ಲಿ ಪಾತ್ರೆಯಲ್ಲಿ ನೀರೆರೆದು, ನೀರು ಕುದಿದ ನಂತರ ತಟ್ಟೆಯಲ್ಲಿ ಹಿಟ್ಟು ತುಂಬಿಸಿ ಒಂದೊಂದಾಗಿ ಇಟ್ಟು ಬೇಯಿಸಿ. ನೀರಾವಿಯ ಶಾಖದಲ್ಲಿ ಬೇಯುವ ಇಡ್ಲಿ ಮಕ್ಕಳಿಗೂ ಇಷ್ಟ, ಹಿರಿಯರಿಗೂ ಹಿತ.
ಮೈಕ್ರೋವೇವ್ ಅವೆನ್ ಉಪಯೋಗಿಗಳು ಅದರಲ್ಲೇ ಹುರಿಯಬಹುದು. ಇನ್ನೂ ಸುಲಭ ವಿಧಾನ ಏನಪ್ಪಾಂದ್ರೆ ಉಗಿಯಲ್ಲಿ 10 ನಿಮಿಷ ಬೇಯಿಸುವುದಾಗಿದೆ, ನೀರಹನಿ ಬೀಳದಂತೆ ಜಾಗರೂಕತೆ ವಹಿಸುವ ಅಗತ್ಯ ಇಲ್ಲಿದೆ. ಒಟ್ಟಾರೆಯಾಗಿ ಚಿರೋಟಿ ರವೆ ಗರಿಗರಿಯಾಗಿದ್ದರಾಯಿತು. ಉಪ್ಪಿಟ್ಟು ಮಾಡಬೇಕಾದರೂ, ಶಿರಾ ಆಗಬೇಕಿದ್ದರೂ ಚಿರೋಟಿ ರವೆಯೊಂದಿಗೆ ಇಂತಹ ಹೊಂದಾಣಿಕೆ ಅನಿವಾರ್ಯ.
ರವಾ ಇಡ್ಲಿಯನ್ನು ತಿನ್ನಲು ಅಷ್ಟೇ ರುಚಿಕಟ್ಟಾದ ಚಟ್ನಿ ಇಲ್ಲವಾದರೆ ಹೇಗಾದೀತು?
ಚಟ್ನಿ ಹೀಗೆ ಮಾಡೋಣ:
ಕಾಯಿತುರಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಹಸಿಶುಂಠಿ, ರುಚಿಗೆ ತಕ್ಕಷ್ಟು ಉಪ್ಪು.
ನುಣ್ಣಗೆ ಅರೆಯಿರಿ.
ಅವಶ್ಯವಾದ ನೀರು ಕೂಡಿಸಿ, ಬೇವಿನೆಸಳಿನೊಂದಿಗೆ ಒಗ್ಗರಣೆ ಹಾಕಿರಿ.
Friday, 5 December 2014
ಲಿಂಬೇ ಸಾರು
ಹಿತ್ತಿಲಿನ ಗಜಲಿಂಬೆ ವಿಶಾಲವಾಗಿ ಬೆಳೆದಿದೆ. ಸುತ್ತಲೂ ಹಳೆಬೇರಿನಿಂದ ಮೇಲೆದ್ದ ಹೊಸ ಚಿಗುರು ಪಿಳ್ಳೇ ಸಸ್ಯಗಳು. ಈ ಲಿಂಬೆಯ ಪರಿವಾರ ಹೀಗೇ ಹಬ್ಬುತ್ತಾ ಬಂದಲ್ಲಿ ನಮ್ಮೆಜಮಾನ್ರ ಕತ್ತೀ ಸಂಹಾರಕ್ಕೆ ಬಲಿಯಾಗುವುದು ನಿಶ್ಚಿತ. ಕುಡಿ ಎಲೆಗಳನ್ನು ಸಾರು ಮಾಡೋಣ. ಒಂದೇ ಒಂದು ಕುಡಿ ಚಿವಟಿ ಅಡುಗೆಮನೆಗೆ ತರಲಾಯಿತು.
ಒಂದು ಹಿಡಿ ತೊಗರಿಬೇಳೆ ಕುಕ್ಕರ್ ನಲ್ಲಿ ಎರಡು ಶೀಟಿ ಕೇಳಿದಾಗ ಬೆಂದೆನೆಂದಿತು.
ಒಂದು ಹಿಡಿ ಕಾಯಿತುರಿ, ಒಂದು ಹಸಿಮೆಣಸು, ಎರಡು ಬೀಂಬುಳಿಗಳೊಂದಿಗೆ ಅರೆಯಲ್ಪಟ್ಟಿತು.
ಅರೆದ ಅರಪ್ಪು, ಬೆಂದ ಬೇಳೆಯೊಂದಿಗೆ ಕೂಡಿತು.
ಉಪ್ಪು ಬೆರೆಯಿತು.
ನೀರು ಸೇರಿತು.
ಒಲೆಯ ಮೇಲೆ ಕುದಿಯಲು ಕುಳಿತಿತು.
ಲಿಂಬೆಯ ಕುಡಿ, " ನನಗೇನು ಗತಿಯಕ್ಕಾ ?" ಅಂದಿತು.
" ನೋಡ್ತಾ ಇರು ..." ಕುದಿಯುತ್ತಿರುವ ಸಾರಿಗೆ ಲಿಂಬೆಯ ಕುಡಿ ಬಿದ್ದೇ ಬಿಟ್ಟಿತು.
ತುಪ್ಪದ ಒಗ್ಗರಣೆ, ಇಂಗು, ಬೇವಿನೆಲೆ ಸಹಿತವಾಗಿ ಇಳಿಯಿತು.
ಲಿಂಬೆ ಸಾರು ಸಿದ್ಧವಾಗಿದೆ.
" ಹೇಗಾಗಿದೇರೀ ಸಾರೂ ..."
" ರುಚಿ ಫಸ್ಟಾಗಿದೆ, ಲೆಮೆನ್ ಗ್ರಾಸ್ ಹಾಕಿದ ಥರಾ... ನಾಳೆ ಮಾದಲ ಹುಳೀದು ಸೊಪ್ಪು ಹಾಕಿ ಮಾಡು .."
" ಹೌದಾ... ಆಯ್ತು, ಹೆಹೆ... ನಾಳೆ ಮಾದಲ ಸೊಪ್ಪಿನ ಟೇಸ್ಟು ನೋಡಿ ..."
" ನಾಳೆ ಉಪ್ಪು ಕಡಿಮೆ ಹಾಕು ತಿಳೀತಾ..."
" ಮಾದಲ ಹುಳಿ ಯಾವುದದೂ ..." ಕೇಳಿಯೇ ಕೇಳ್ತೀರಾ.
Citrus medica ಎಂಬ ಸಸ್ಯಶಾಸ್ತ್ರೀಯ ನಾಮಕರಣದ ಮಾದಲ ಹುಳಿ citrus ಕುಟುಂಬದಲ್ಲಿ ಬೃಹತ್ ಹಣ್ಣು. ಭಾರತವೇ ಇದರ ತವರು ನೆಲೆ. ಆಂಗ್ಲ ಭಾಷೆಯಲ್ಲಿ citron ಅನ್ನಲಾಗುತ್ತದೆ.
ಗಜಲಿಂಬೆ, ಬೀಂಬುಳಿ ಕುರಿತಾಗಿ ಬ್ಲಾಗ್ ಬರಹಗಳೇ ಇವೆ.
Subscribe to:
Posts (Atom)