" ಅಂಗಡಿ ಪಟ್ಟಿ ಮೈಲುದ್ದ ಬರೆಯಬೇಡ, ತಂದ ಹಾಲನ್ನು ಮಜ್ಜಿಗೆ ಮಾಡಿ ಹಾಳು ಮಾಡಬೇಡ..."
" ಆಯಿತು, ಅಗತ್ಯದ ಅಕ್ಕಿ, ಅವಲಕ್ಕಿ ತನ್ನಿ.. ನಾಯಿಗೆ ಹಾಕಲಿಕ್ಕೆ ಸ್ವಲ್ಪ ಜಾಸ್ತಿ ಅವಲಕ್ಕಿ ತನ್ನಿ... "
ಜೀನಸು ಅಂಗಡಿಯಿಂದ ಅವಶ್ಯವಿದ್ದ ಮಾಲುಗಳೆಲ್ಲ ಬಂದವು. ಇನ್ನು ಚಿಂತೆಯಿಲ್ಲ. ತರಕಾರಿ ಮುಗಿದ್ರೆ ತರಲಿಕ್ಕೆ ಹೇಳುವ ಹಾಗೂ ಇಲ್ಲ. ತೆಂಗಿನಕಾಯಿ ಅರೆದು ತಂಬ್ಳಿ ಮಾಡಿಟ್ಟರೂ ನಡೀತದೆ.
ಅಡುಗೆಯ ಸಮಯ, ಸಾಂಬಾರ್ ಮಾಡಲಿಕ್ಕೆ ಮೆಣಸು ಕೊತ್ತಂಬರಿ ಹುರಿಯಬೇಕಾಗಿದೆ. ತಲೆಯೊಳಗೆ ದೊಡ್ಡ ಲೈಟ್ ಮಿಂಚಿತು, ಎರಡು ದಿನಕ್ಕಾಗುವಷ್ಟು ಹುರಿದು ಪುಡಿ ಮಾಡಿಟ್ಕೊಳ್ಳೋಣ.
ಹೇಗೆ?
2 ಒಣ ಮೆಣಸು ಹಾಕ್ತೀರ, 4 ಮೆಣಸು ಹಾಕ್ಕೊಳ್ಳಿ.
1 ಚಮಚ ಉದ್ದಿನಬೇಳೆ ಬದಲಾಗಿ 2 ಚಮಚ.
ಒಂದೂವರೆ ಚಮಚ ಕೊತ್ತಂಬರಿಯಾಗಿದ್ರೆ 3 ಚಮಚ.
ಇದೇ ಮಾದರಿಯಲ್ಲಿ ಜೀರಿಗೆ, ಮೆಂತೆ, ಇಂಗು..
2 ಎಸಳು ಕರಬೇವು ಹಾಕ್ಕೂಂಡು,
ಎಣ್ಣೆಪಸೆಯಲ್ಲಿ ಘಂ ಎಂಬಂತೆ ಹುರಿಯಿರಿ.
ಚೆನ್ನಾಗಿ ಆರಿದ ನಂತರ ಮಿಕ್ಸಿಯಲ್ಲಿ ಗುದ್ದಿರಿ.
ನಂತರ ಎಷ್ಟು ಚಮಚ ಹುಡಿ ದೊರೆಯಿತು? ಅಳೆಯಿರಿ.
8 ಚಮಚ ಸಾಂಬಾರ್ ಹುಡಿ ಸಿಕ್ತು ಕಣ್ರೀ..
ಸರಿ, ಮುಂದಿನ ಅಡುಗೆಗೆ ನಾಲ್ಕು ಚಮಚ ಹುಡಿ ತೆಗೆದಿರಿಸುವುದು. ಅಂಗಡಿಯಿಂದ ಸಾಂಬಾರಿನ ಹುಡಿ ಇನ್ನು ಮುಂದೆ ತರಬೇಕಾಗಿಯೇ ಇಲ್ಲ ಅನ್ಮಿ.
ನಾನು ನುಣುಪಾದ ಹುಡಿ ಮಾಡಿಲ್ಲ, ಏನೇ ಸಾಂಬಾರು ಮಾಡುವುದಿದ್ದರೂ ತೆಂಗಿನತುರಿ ಅರೆದೇ ಸಿದ್ಧ ಅನ್ನುವ ಮಂದಿ ನಮ್ಮ ಕರಾವಳಿ ರಾಜ್ಯದಲ್ಲಿ ಇರುವಾಗ ನಾನೂ ಅದಕ್ಕೆ ಹೊರತಲ್ಲ. ಹೇಗೂ ಇನ್ನೊಮ್ಮೆ ತೆಂಗಿನೊಂದಿಗೆ ಅರೆಯುವುದಿದೆ. ನಮ್ಮ ಅಡುಗೆ ಗಣಪಣ್ಣನೂ ವಿಶೇಷ ಅಡುಗೆಗೆ ಬಂದಾಗ ಹೀಗೇ ಮಸಾಲೆ ಮಾಡಿ ಇಟ್ಟಿರ್ತಾನೆ.
ತೆಂಗಿನ ತುರಿ ಬಳಸದೇ ಸಾಂಬಾರ್ ತಯಾರಕರು ನುಣ್ಣಗೆ ಪುಡಿ ಮಾಡಿಕೊಳ್ಳತಕ್ಕದ್ದು.
ನಾಳೆ ಮಜ್ಜಿಗೆ ಹುಳಿ ಮಾಡು.. ನಿನ್ನ ಹುಡಿ ಉಳಿತಾಯ... " ಗೌರತ್ತೆಯ ಸಲಹೆ ಸಿಕ್ಕಿತು. " ನಾಡಿದ್ದು ಹುಳಿಮೆಣಸು, ಅದಕ್ಕೂ ಸಾಂಬಾರ್ ಹುಡಿ ಬೇಡ... "
" ಅದರ ನಾಡಿದ್ದು ಸೋರೆಕಾಯಿ ಬೋಳುಹುಳಿ ಮಾಡಿದ್ರಾಯ್ತು ಅನ್ನಿ... "
" ಸಾರಿನ ಹುಡಿ ಮಾಡಿ ಇಟ್ಕೋ.. ದಿನಾ ಒಂದು ಸಾರು ಆಗಲೇ ಬೇಕಲ್ಲ... "
ಸರಿ, ಬಿಡುವಾದಾಗ ಸಾರಿನ ಹುಡಿ ತಯಾರಿ ಆಯ್ತು. ಇದನ್ನು ಒಂದು ವಾರಕ್ಕೆ ಆಗುವಷ್ಟು ಮಾಡಿ ಇಟ್ಕೊಳ್ಳಿ.
2 ಒಣಮೆಣಸು ಹಾಕುವಲ್ಲಿ 12 ಮೆಣಸು
1 ಚಮಚ ಕೊತ್ತಂಬರಿ ಬೇಕಾಗಿದ್ರೆ 6 ಚಮಚ
ಜೀರಿಗೆ ಮೆಂತೆ ಇಂಗು ಇದೇ ಅನುಪಾತದಲ್ಲಿ ಹಾಕಿ
ಸಾರಿನ ಹುಡಿ ಅಲ್ವೇ, ಸಾಸಿವೆ ಕೂಡಾ ಹಾಕ್ಬೇಕು, ಒಟ್ಟಿನಲ್ಲಿ ತುಸು ತುಸು ಹಾಕುವಂತಹ ಸಾಮಗ್ರಿಗಳು, ಒಂದು ಚಮಚ ಸಾಕು.
ಒಂದೆಸಳು ಕರಿಬೇವು ಇರಲಿ
ಎಣ್ಣೆಪಸೆಯಲ್ಲಿ ಹುರಿಯಿರಿ.
ಹುರಿದಾಯ್ತು ಅನ್ನುವ ಹಂತದಲ್ಲಿ ಕರಿಬೇವು ಬೀಳಲಿ.
ಕಾಳುಮೆಣಸು ಇದ್ದರೆ ಒಂದು ಚಮಚದಷ್ಟು ಸೇರಿಸಿ.
ಈಗಿನ ಕೊರೋನಾ ಹವಾಮಾನಕ್ಕೆ ಸೂಕ್ತ.
ಕೊನೆಗೆ ಅರ್ಧ ಚಮಚ ಅರಸಿಣ ಹುಡಿ ಬೆರೆಸಿ ಕೆಳಗಿಳಿಸಿ.
ಆರಿದ ನಂತರ ನುಣ್ಣಗೆ ಹುಡಿ ಮಾಡಿ , 6 ದಿನಕ್ಕೆ ಎಷ್ಟು ಚಮಚ ಹುಡಿ ಬೇಕಾದೀತೆಂದು ಅಳೆದು ಡಬ್ಬದಲ್ಲಿ ಚಮಚ ಲೆಕ್ಕಾಚಾರದೊಂದಿಗೆ ಶೇಖರಿಸಿ.
ತೊಗರಿಬೇಳೆ ಸಾರು ಯಾ ಇನ್ಯಾವುದೇ ತಿಳಿಸಾರು, ನೀರುಳ್ಳಿ ಸಾರು, ಬೆಳ್ಳುಳ್ಳಿ ಸಾರು, ಟೊಮ್ಯಾಟೋ ಸಾರು... ಘಮಘಮಿಸುವಂತಹ ಸಾರಿನ ಹುಡಿ ನಮ್ಮದಾಗಿದೆ.