Posted via DraftCraft app
Saturday, 27 December 2014
Saturday, 20 December 2014
ತೇಂಗೊಳಲ ಮಾಲೆ
ಅಕಸ್ಮಾತ್ ತಿಂಡಿಗಳು ಅಡುಗೆಯ ಪ್ರಯೋಗಾಲಯದಲ್ಲಿ ಎದ್ದು ಬರುವುದಿದೆ. ಈ ತೇಂಗೊಳಲ್ ಹಾಗೇ ಆದದ್ದು. ಆ ದಿನ ಹಬ್ಬದ ಅಡುಗೆ, ದೇವರಿಗೆ ಏನೇನೆಲ್ಲ ಪ್ರಸಾದಗಳನ್ನು ಅರ್ಪಿಸಿ ಕೊನೆಗೆ ನಾವು ತಿನ್ನುವ ಸಂಭ್ರಮ. ಮಕ್ಕಳಿಬ್ಬರೂ ಮನೆಗೆ ಬಂದಿದ್ದರು, ಕಟ್ಟಪ್ಪಣೆ ಬೇರೆ, " ಅಮ್ಮಾ, ಅಜ್ಜ ಇದ್ದಾಗ ಮಾಡ್ತಾ ಇದ್ದಂತಹ ತಿಂಡಿಗಳೆಲ್ಲ ಇರಬೇಕು "
ಆಯ್ತೂಂತ ಅಡುಗೆಮನೆಯ ಬಿಡುವಿರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾಯಿತು. ಪಂಚಕಜ್ಜಾಯ, ನೆಯ್ಯಪ್ಪಂ, ಮೋದಕ, ಕಲಸವಲಕ್ಕಿ, ಹೆಸ್ರು ಪಾಯಸ, ಇತ್ಯಾದಿ ಸಿಹಿಗಳೊಂದಿಗೆ ಘಮಘಮಿಸುವ ಸಣ್ಣಕ್ಕಿ ಅನ್ನ, ಸಾರು, ಪಲ್ಯ.... ಹಪ್ಪಳ ಇರಬೇಕಿತ್ತು, ಸಾಮಾನು ಪಟ್ಟಿಯಲ್ಲಿ ನಾನು ಬರೆದು ಕೊಟ್ಟಿದ್ದನ್ನು ಮಾತ್ರ ತರೋರು ನಮ್ಮೆಜಮಾನ್ರು.
" ಏನ್ಮಾಡೋದೇ, ಹಪ್ಪಳ ಇಲ್ವಲ್ಲ ..."
" ನಂಗೆ ಹಪ್ಪಳ ಬೇಕೇ ಬೇಕು " ಎಂದಳು ಮಗಳು.
" ನೋಡೋಣ, ಬೇರೇನಾದ್ರೂ ಸಿಗುತ್ತಾ ಅಂತ " ಡಬ್ಬಗಳನ್ನು ಜಾಲಾಡಿದಾಗ ಕಡ್ಲೆ ಹುಡಿ ಇದೆ.
" ಖಾರದ ಕಡ್ಡಿ ಆದೀತಾ "
" ಹ್ಞೂ ಆದೀತು "
ಆದೀತಂದ್ರೂ ಗಡಿಬಿಡಿಯ ಹೊತ್ತಿನಲ್ಲಿ ಮಾಡಿದ್ದು ಸರಿ ಬರುತ್ತೋ ಇಲ್ವೋ, ಇಲ್ಲೊಂದು ಅಕ್ಕಿಹುಡಿಯ ಪ್ಯಾಕೆಟ್ಟೂ ಇದೆ. ಐಡಿಯಾ ಹೊಳೆಯಿತು.
3 ಕಪ್ ಅಕ್ಕಿಹುಡಿ
1 ಕಪ್ ಕಡ್ಲೇ ಹುಡಿ
2 ಚಮಚ ಖಾರ ಪುಡಿ
ರುಚಿಗೆ ಉಪ್ಪು
ಎಲ್ಲವನ್ನೂ ತಪಲೆಗೆ ಹಾಕಿಕೊಂಡು ನೀರೆರೆದು ಚಪಾತಿ ಹಿಟ್ಟಿನ ಮುದ್ದೆಯಂತೆ ಕಲಸಿ ಇಟ್ಟಾಯಿತು.
ಚಕ್ಕುಲಿ ಮಟ್ಟು ಮೈ ಕೊಡವಿ ಸಿದ್ಧವಾಯಿತು. ಅದರೊಳಗೆ ಆರು ತೂತಿನ ಬಿಲ್ಲೆ ಹೊಗ್ಗಿಸಿ, ಹಿಟ್ಟನ್ನು ಉಂಡೆ ಮಾಡಿ ತುಂಬಿಸಿ, ಬಿಸಿ ಎಣ್ಣೆಗೆ ತೂತಿನಿಂದ ಹಿಟ್ಟು ಮಾಲೆಯಂತೆ ಇಳಿದು, ಹೊರಳಿ ಮೇಲೇರಿದಾಗ ತೇಂಗೊಳಲ ಮಾಲೆ ಪ್ರತ್ಯಕ್ಷವಾಯಿತಲ್ಲ, ನಮ್ಮ ದೇವರು ಸುಪ್ರೀತನಾದನೆಂದು ಬೇರೆ ಹೇಳಬೇಕಿಲ್ಲ.
ವಾರಕ್ಕೊಂದಾವರ್ತಿ ಮಗಳು ಮನೆಗೆ ಬರ್ತಿರ್ತಾಳಲ್ಲ, ಏನೋ ಒಂದು ಡಬ್ಬದಲ್ಲಿ ಇರಲೇಬೇಕು. " ಏನು ಮಾಡಲೀ ?"
" ಚೌತೀಗೆ ಮಾಡಿದ್ದು ಮಾಡಮ್ಮಾ "
" ಯಾವ್ದೂ, ಪಂಚಕಜ್ಜಾಯನಾ "
" ಅದೇ ಎಣ್ಣೆಯಲ್ಲಿ ಹುರಿದದ್ದೂ, ಖಾರದಕಡ್ಡೀ... " ರಾಗ ಎಳೆದಳು.
" ತೇಂಗೊಳಲ್ ಅನ್ನೂ "
"ಹ್ಞಾ, ಅದೇ ... ಮಾಡೂ "
" ಆವತ್ತು ಗಡಿಬಿಡಿಯಲ್ಲಿ ಮಾಡಿದ್ದಲ್ವಾ, ಈಗ ಕ್ರಮಪ್ರಕಾರವಾಗಿ ಮಾಡ್ತೇನೆ, ನೋಡ್ತಿರು "
" ಹಾಗಿದ್ರೆ ಸಂಪ್ರದಾಯದ ತೇಂಗೊಳಲ್ ಹೇಗೇ ಮಾಡ್ತೀರಾ ?" ಪ್ರಶ್ನೆ ಕೇಳಿಯೇ ಕೇಳ್ತೀರಾ. ಈಗ ಕಡ್ಲೇ ಹಿಟ್ಟು ಹಾಕಿದಲ್ಲಿ ಉದ್ದಿನ ಹಿಟ್ಟು ಹಾಕಿಕೊಂಡರಾಯಿತು. ಮಾರುಕಟ್ಟೆಯಲ್ಲಿ ಉದ್ದಿನಹುಡಿಯೂ ಸಿಗುತ್ತದೆ. ಅದಿಲ್ಲವಾದರೆ ಒಂದು ಕಪ್ ಉದ್ದು ನೆನೆ ಹಾಕಿಟ್ಟು ನುಣ್ಣಗೆ ಅರೆಯಿರಿ, ನೀರು ಜಾಸ್ತಿ ಹಾಕದಿರಿ. ಅರೆಯುವಾಗ ತುಸು ಜೀರಿಗೆ, ರುಚಿಗೆ ಉಪ್ಪು ಕೂಡಿಸಿ ಅರೆಯಿರಿ.
ಅರೆದಾಯಿತೇ, ತಪಲೆಗೆ ಹಾಕಿಕೊಳ್ಳಿ, 3 ಕಪ್ ಅಕ್ಕಿಹುಡಿ ಅಳೆದು ಹಾಕಿರಿ. ಗಟ್ಟಿಯಾಗಿ ಕಲಸಿಕೊಳ್ಳಿ. ನಂತರ ಈ ಹಿಂದೆ ಹೇಳಿದಂತೆ ಕರಿಯಿರಿ.
ಅಂತೂ ಮಾಡಿ ತಿಂದೆವು, ಚಕ್ಕುಲಿಗಿಂತ ಇದೇ ಮಾಡಿಟ್ಟುಕೊಳ್ಳಲು ಸುಲಭದ್ದು ಎಂದೂ ನನ್ನ ತಿಳುವಳಿಕೆಗೂ ಬಂದಿತು.
Posted via DraftCraft app
Saturday, 13 December 2014
ರವಾ ಇಡ್ಲಿ
ದಿನ ಬೆಳಗಾದರೆ ಅಕ್ಕಿಯಿಂದ ಮಾಡಿದ ತಿಂಡಿಗಳನ್ನೇ ತಿನ್ನಲು ಏನೂ ಸೊಗಸಿಲ್ಲ, ತಿನ್ನುವವರೂ ವೈವಿಧ್ಯತೆಯನ್ನು ಬಯಸುತ್ತಾರೆ. ದೇಹದ ಸರ್ವಾಂಗೀಣ ಬೆಳವಣಿಗೆಗೆ ಇದು ಪೂರಕವೂ ಹೌದು. ಈಗ ಇಲ್ಲಿ ಬಂದಿರುವ ರವಾ ಇಡ್ಲಿ ಮಾಡಲೂ ಸುಲಭ, ತಿನ್ನಲೂ ಸ್ವಾದಿಷ್ಟಕರ ತಿನಿಸು. ಉಪವಾಸ ವ್ರತಧಾರಿಗಳಿಗೂ ಆದೀತು, ಮಕ್ಕಳ ಟಿಫಿನ್ ಬಾಕ್ಸ್ ಒಳಗೆ ತುಂಬಿಸಲೂ ಯೋಗ್ಯ.
ಇದರ ತಯಾರಿಗೆ ಬೇಕಾದ ಸಿದ್ಧತೆ ಹೇಗೆ?
ಒಂದು ಕಪ್ ಉದ್ದಿನಬೇಳೆ
2 ಕಪ್ ಚಿರೋಟಿ ರವೆ ಅಥವಾ ಸಜ್ಜಿಗೆ
ರುಚಿಗೆ ಉಪ್ಪು
ಉದ್ದಿನಬೇಳೆಗೆ ನೀರು ಹಾಕಿ ಇಟ್ಟಿರಿ, ಅರ್ಧ ಘಂಟೆ ಬಿಟ್ಟು ಅರೆಯಿರಿ. ನುಣ್ಣಗಾದ ಹಿಟ್ಟಿಗೆ ಸಜ್ಜಿಗೆಯನ್ನು ಸುರಿದು ಸಾಕಷ್ಟು ನೀರು, ಒಂದ್ಲೋಟ ಆಗುವಷ್ಟು ಎರೆದು ಚೆನ್ನಾಗಿ ಕಲಸಿ ಉಪ್ಪು ಕೂಡಿಸಿ ಹುದುಗು ಬರಬೇಕಾಗಿದೆಯಲ್ಲ, ಎಂಟು ತಾಸು ಮುಚ್ಚಿ ಇಟ್ಟಿರಿ. ರಾತ್ರಿ ಇಡ್ಲಿ ಮಾಡಬೇಕಾಗಿದ್ದಲ್ಲಿ ಮುಂಜಾನೆ ಹೊತ್ತಿಗೆ ಈ ಕೆಲಸ ಆಗಿ ಬಿಡಬೇಕು.
ಸಜ್ಜಿಗೆಯಲ್ಲಿ ಕೂಡಾ ಬೇರೆ ಬೇರೆ ವಿಧಗಳಿವೆ. ಗೋಧಿ ಕಡಿ, ದೊಡ್ಡ ಸಜ್ಜಿಗೆ, ಮೀಡಿಯಂ ರವಾ ಸಜ್ಜೆಗೆ, ಬಾಂಬೇ ಸಜ್ಜಿಗೆ ಅಥವಾ ಚಿರೋಟಿ ರವೆ. ಉಳಿದೆಲ್ಲಾ ಸಜ್ಜಿಗೆಗಳನ್ನು ಹಾಗೇನೇ ಉದ್ದಿನ ಹಿಟ್ಟಿಗೆ ಬೆರೆಸಿಟ್ಟು ಕೊಳ್ಳತಕ್ಕದ್ದು. ನಾವೀಗ ಚಿರೋಟಿ ರವೆಯನ್ನು ಅಯ್ಕೆ ಮಾಡಿರುವುದರಿಂದ ಅದನ್ನು ಹುರಿದುಕೊಳ್ಳುವ ಅಗತ್ಯವಿದೆ.
ನಾನ್ ಸ್ಟಿಕ್ ತವಾದಲ್ಲಿ ಹಸಿವಾಸನೆ ತೊಲಗುವಂತೆ ಹುರಿಯಿರಿ. ಸೀದು ಹೋಗದಂತೆ ನೋಡಿಕೊಳ್ಳಿ. ಘಮಘಮಿಸುವ ಬಿಸಿ ಚಿರೋಟಿ ರವೆಯನ್ನು ಉದ್ದಿನಹಿಟ್ಟಿಗೆ ಹಾಕಿ ಕಲಸಿಟ್ಟು ಉಪ್ಪು ಕೂಡಿಸಿ ಮುಚ್ಚಿ ಇಟ್ಟಲ್ಲಿ ಮಾರನೇ ದಿನ ಚೆನ್ನಾಗಿ ಹುದುಗು ಬಂದಿರುತ್ತದೆ, ಸೋಡಪುಡಿ, ಬೇಕಿಂಗ್ ಪುಡಿ ಇಂತಹವುಗಳನ್ನು ಹಾಕದಿರಿ, ನಮ್ಮ ಸಾಂಪ್ರದಾಯಿಕ ಶೈಲಿಯ ಇಡ್ಲಿಗೆ ಇದ್ಯಾವುದೂ ಬೇಡ.
ಅಟ್ಟಿನಳಗೆ ಯಾ ಇಡ್ಲಿ ಪಾತ್ರೆಯಲ್ಲಿ ನೀರೆರೆದು, ನೀರು ಕುದಿದ ನಂತರ ತಟ್ಟೆಯಲ್ಲಿ ಹಿಟ್ಟು ತುಂಬಿಸಿ ಒಂದೊಂದಾಗಿ ಇಟ್ಟು ಬೇಯಿಸಿ. ನೀರಾವಿಯ ಶಾಖದಲ್ಲಿ ಬೇಯುವ ಇಡ್ಲಿ ಮಕ್ಕಳಿಗೂ ಇಷ್ಟ, ಹಿರಿಯರಿಗೂ ಹಿತ.
ಮೈಕ್ರೋವೇವ್ ಅವೆನ್ ಉಪಯೋಗಿಗಳು ಅದರಲ್ಲೇ ಹುರಿಯಬಹುದು. ಇನ್ನೂ ಸುಲಭ ವಿಧಾನ ಏನಪ್ಪಾಂದ್ರೆ ಉಗಿಯಲ್ಲಿ 10 ನಿಮಿಷ ಬೇಯಿಸುವುದಾಗಿದೆ, ನೀರಹನಿ ಬೀಳದಂತೆ ಜಾಗರೂಕತೆ ವಹಿಸುವ ಅಗತ್ಯ ಇಲ್ಲಿದೆ. ಒಟ್ಟಾರೆಯಾಗಿ ಚಿರೋಟಿ ರವೆ ಗರಿಗರಿಯಾಗಿದ್ದರಾಯಿತು. ಉಪ್ಪಿಟ್ಟು ಮಾಡಬೇಕಾದರೂ, ಶಿರಾ ಆಗಬೇಕಿದ್ದರೂ ಚಿರೋಟಿ ರವೆಯೊಂದಿಗೆ ಇಂತಹ ಹೊಂದಾಣಿಕೆ ಅನಿವಾರ್ಯ.
ರವಾ ಇಡ್ಲಿಯನ್ನು ತಿನ್ನಲು ಅಷ್ಟೇ ರುಚಿಕಟ್ಟಾದ ಚಟ್ನಿ ಇಲ್ಲವಾದರೆ ಹೇಗಾದೀತು?
ಚಟ್ನಿ ಹೀಗೆ ಮಾಡೋಣ:
ಕಾಯಿತುರಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಹಸಿಶುಂಠಿ, ರುಚಿಗೆ ತಕ್ಕಷ್ಟು ಉಪ್ಪು.
ನುಣ್ಣಗೆ ಅರೆಯಿರಿ.
ಅವಶ್ಯವಾದ ನೀರು ಕೂಡಿಸಿ, ಬೇವಿನೆಸಳಿನೊಂದಿಗೆ ಒಗ್ಗರಣೆ ಹಾಕಿರಿ.
Friday, 5 December 2014
ಲಿಂಬೇ ಸಾರು
ಹಿತ್ತಿಲಿನ ಗಜಲಿಂಬೆ ವಿಶಾಲವಾಗಿ ಬೆಳೆದಿದೆ. ಸುತ್ತಲೂ ಹಳೆಬೇರಿನಿಂದ ಮೇಲೆದ್ದ ಹೊಸ ಚಿಗುರು ಪಿಳ್ಳೇ ಸಸ್ಯಗಳು. ಈ ಲಿಂಬೆಯ ಪರಿವಾರ ಹೀಗೇ ಹಬ್ಬುತ್ತಾ ಬಂದಲ್ಲಿ ನಮ್ಮೆಜಮಾನ್ರ ಕತ್ತೀ ಸಂಹಾರಕ್ಕೆ ಬಲಿಯಾಗುವುದು ನಿಶ್ಚಿತ. ಕುಡಿ ಎಲೆಗಳನ್ನು ಸಾರು ಮಾಡೋಣ. ಒಂದೇ ಒಂದು ಕುಡಿ ಚಿವಟಿ ಅಡುಗೆಮನೆಗೆ ತರಲಾಯಿತು.
ಒಂದು ಹಿಡಿ ತೊಗರಿಬೇಳೆ ಕುಕ್ಕರ್ ನಲ್ಲಿ ಎರಡು ಶೀಟಿ ಕೇಳಿದಾಗ ಬೆಂದೆನೆಂದಿತು.
ಒಂದು ಹಿಡಿ ಕಾಯಿತುರಿ, ಒಂದು ಹಸಿಮೆಣಸು, ಎರಡು ಬೀಂಬುಳಿಗಳೊಂದಿಗೆ ಅರೆಯಲ್ಪಟ್ಟಿತು.
ಅರೆದ ಅರಪ್ಪು, ಬೆಂದ ಬೇಳೆಯೊಂದಿಗೆ ಕೂಡಿತು.
ಉಪ್ಪು ಬೆರೆಯಿತು.
ನೀರು ಸೇರಿತು.
ಒಲೆಯ ಮೇಲೆ ಕುದಿಯಲು ಕುಳಿತಿತು.
ಲಿಂಬೆಯ ಕುಡಿ, " ನನಗೇನು ಗತಿಯಕ್ಕಾ ?" ಅಂದಿತು.
" ನೋಡ್ತಾ ಇರು ..." ಕುದಿಯುತ್ತಿರುವ ಸಾರಿಗೆ ಲಿಂಬೆಯ ಕುಡಿ ಬಿದ್ದೇ ಬಿಟ್ಟಿತು.
ತುಪ್ಪದ ಒಗ್ಗರಣೆ, ಇಂಗು, ಬೇವಿನೆಲೆ ಸಹಿತವಾಗಿ ಇಳಿಯಿತು.
ಲಿಂಬೆ ಸಾರು ಸಿದ್ಧವಾಗಿದೆ.
" ಹೇಗಾಗಿದೇರೀ ಸಾರೂ ..."
" ರುಚಿ ಫಸ್ಟಾಗಿದೆ, ಲೆಮೆನ್ ಗ್ರಾಸ್ ಹಾಕಿದ ಥರಾ... ನಾಳೆ ಮಾದಲ ಹುಳೀದು ಸೊಪ್ಪು ಹಾಕಿ ಮಾಡು .."
" ಹೌದಾ... ಆಯ್ತು, ಹೆಹೆ... ನಾಳೆ ಮಾದಲ ಸೊಪ್ಪಿನ ಟೇಸ್ಟು ನೋಡಿ ..."
" ನಾಳೆ ಉಪ್ಪು ಕಡಿಮೆ ಹಾಕು ತಿಳೀತಾ..."
" ಮಾದಲ ಹುಳಿ ಯಾವುದದೂ ..." ಕೇಳಿಯೇ ಕೇಳ್ತೀರಾ.
Citrus medica ಎಂಬ ಸಸ್ಯಶಾಸ್ತ್ರೀಯ ನಾಮಕರಣದ ಮಾದಲ ಹುಳಿ citrus ಕುಟುಂಬದಲ್ಲಿ ಬೃಹತ್ ಹಣ್ಣು. ಭಾರತವೇ ಇದರ ತವರು ನೆಲೆ. ಆಂಗ್ಲ ಭಾಷೆಯಲ್ಲಿ citron ಅನ್ನಲಾಗುತ್ತದೆ.
ಗಜಲಿಂಬೆ, ಬೀಂಬುಳಿ ಕುರಿತಾಗಿ ಬ್ಲಾಗ್ ಬರಹಗಳೇ ಇವೆ.
Saturday, 29 November 2014
ಬೆಳೆ ಹೇರಳ, ಇದು ಪೇರಳೆ...
ಪೇರಳೆ ಮರ ಅಡಿಕೆ ತೋಟದೊಳಗೆ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಅದೇನೂ ನಾವು ಬಿತ್ತಿ ನೆಟ್ಟಿದ್ದೂ ಅಲ್ಲ. ಹಕ್ಕಿಪಕ್ಷಿಗಳು ಎಲ್ಲಿಂದಲೋ ಹೊತ್ತು ತರುತ್ತವೆ. ಯಾವಾಗಲೂ ತೇವಾಂಶವಿರುವ ತೋಟದಲ್ಲಿ ಬೀಜ ಮೊಳೆತು ಸಸಿಯಾಗಲು ತಡವಿಲ್ಲ. ಹಾಗೇ ಸುಮ್ಮನೆ ಮೇಲೆದ್ದು ಮರವಾದ ಈ ಪೇರಳೆಯಲ್ಲಿ ಜಾತಿಗಳೆಷ್ಟು, ಬಣ್ಣಗಳ ಸೊಗಸೇನು, ರುಚಿಯಲ್ಲಿರುವ ಭಿನ್ನತೆ ಇವುಗಳನ್ನೆಲ್ಲ ತಿಳಿಯಬೇಕಾದರೆ ತೋಟದ ಸುತ್ತ ತಿರುಗಾಡಿ, ಕಂಡ ಪೇರಳೆಗಳನ್ನು ಕೊಯ್ದು, ಅಲ್ಲೇ ಕಚ್ಚಿ ತಿಂದು ಸವಿದರೇನೇ ತಿಳಿದೀತು.
ಕೃಷಿಕರ ಬದುಕಿಗೆ ಸಮೀಪವರ್ತಿ ಸಸ್ಯ ಇದು. ಬೆಳೆಸಲು ಕಷ್ಟವಿಲ್ಲ, ರೆಂಬೆಕೊಂಬೆಗಳು ಬಲು ಗಟ್ಟಿಯಾಗಿರುವ ಪೇರಳೆ ಮರಕ್ಕೆ ರೋಗಬಾಧೆಯಿಲ್ಲ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಹಾಗೂ ಬೇಡಿಕೆ ಇರುವ ಪೇರಳೆ ಹಣ್ಣಿನ ಕೃಷಿಯಲ್ಲಿ ನಮ್ಮ ಕೃಷಿಕರು ಆಸಕ್ತಿ ವಹಿಸಿದಂತಿಲ್ಲ. ಸದಾ ಕಾಲವೂ ಹಸಿರೆಲೆಗಳಿಂದ ನಳನಳಿಸುತ್ತಿರುತ್ತದೆ ಪೇರಳೆ ಮರ.
ಬೇರು ಕಸಿಯಿಂದ ಪೇರಳೆ ಗಿಡಗಳನ್ನು ಅಭಿವೃದ್ಧಿ ಪಡಿಸಬಹುದು. ಇದು ನನಗೆ ತಾನಾಗಿಯೇ ತಿಳಿಯಿತು. ಹೇಗೇ ಅಂತೀರಾ?
ವರ್ಷಗಳ ಹಿಂದೆ ತೋಟದೊಳಗೆ ಇದ್ದ ಕೆಂಪು ಪೇರಳೆ ಮರವನ್ನು ಕಾರ್ಮಿಕರ ಕೊಡಲಿಯೇಟಿನಿಂದ ಸಂಹರಿಸಲಾಯಿತು. ಮನೆಯ ಹಿಂಭಾಗದಲ್ಲಿ ಏನೇನೋ ಕೃಷಿ ಸಲಕರಣೆಗಳನ್ನು ಇಟ್ಟುಕೊಳ್ಳುವುದಿದೆ. ಮಳೆಗಾಲದಲ್ಲಿ ಅದಕ್ಕೂ ರಕ್ಷಣೆ ಬೇಕಲ್ಲ, ಒಂದು ಗೂಡಿನಂತಹ ಮನೆ ಪೇರಳೆಯ ಮರದ ಕತ್ತರಿಸಲ್ಪಟ್ಟ ಕಾಂಡದಿಂದಲೇ ಸಿದ್ಧವಾಯಿತು. ಅಡಿಕೆ ಮರದ ಕಾಂಡ ಸಾಮಾನ್ಯವಾಗಿ ಎಲ್ಲರೂ ಉಪಯೋಗಿಸುತ್ತಾರೆ, ಆದರೆ ಅದನ್ನು ಪ್ರತಿವರ್ಷವೂ ಬದಲಿಸಬೇಕಾಗುತ್ತದೆ. ಗಟ್ಟಿಮುಟ್ಟಾದ ಪೇರಳೆಯ ಕಾಂಡಕ್ಕೆ ಆ ಸಮಸ್ಯೆಯಿಲ್ಲ.
ಕೆಂಪು ತಿರುಳಿನ ಪೇರಳೆ ಹಣ್ಣುಗಳು ತಿನ್ನಲು ಸಿಗುತ್ತಿರಲಿಲ್ಲ, ಕಾರಣ ಮರವೂ ಅಡಿಕೆ ಮರಕ್ಕೆ ಸವಾಲೊಡ್ಡುವಂತೆ ಎತ್ತರ ಬೆಳೆದಿತ್ತು. ಮರ ಹೋದರೇನಂತೆ, ತೋಟದೊಳಗಿನ ತೇವಾಂಶದಿಂದಲೇ ಬೇರಿನಿಂದ ಅಸಂಖ್ಯ ಗಿಡಗಳು ಮೇಲೆದ್ದಿವೆ. ಎಲ್ಲವೂ ಇರಲಿ.
ತುಸು ಗಟ್ಟಿಯಾಗಿರುವ ಕಾಯಿಯನ್ನೇ ಮಕ್ಕಳು ಇಷ್ಟ ಪಟ್ಟು ತಿನ್ನುವಂತಹುದು. ಅದಕ್ಕೆ ಉಪ್ಪಿನ ಹುಡಿ ಉದುರಿಸಿ ತಿಂದಾಗ ಸ್ವರ್ಗಕ್ಕೆ ಮೂರೇ ಗೇಣು! ಹಣ್ಣಾದಾಗ ಹಸಿರಿನಿಂದ ಹಳದಿ ಬಣ್ಣಕ್ಕೆ ತಿರುಗುವ ಪೇರಳೆ ಮೆತ್ತಗಾಗಿ ಬಿಡುತ್ತದೆ. ಸಿಹಿ ರುಚಿಯೂ, ಸುವಾಸನೆಯೂ ಈ ಹಂತದಲ್ಲಿ ಅಧಿಕ. ಹಣ್ಣಿನ ಜ್ಯೂಸ್, ಮಿಲ್ಕ್ ಶೇಕ್, ಜಾಮ್ ಹೀಗೆ ಏನೇನೋ ಮಾಡಿ ಸವಿಯಬಹುದು. ಐಸ್ ಕ್ರೀಂ, ಫ್ರುಟ್ ಸಲಾಡ್ ಗಳಿಗೂ ಪೇರಳೆ ಹಣ್ಣು ಉಪಯುಕ್ತ. ಸಂಸ್ಕರಿಸಿ ಒಣಗಿಸಲಾದ ಪೇರಳೆ ಹಣ್ಣಿನ ಹುಡಿಯನ್ನು ಐಸ್ ಕ್ರೀಂ ಉದ್ಯಮದಲ್ಲಿ ಬಳಸಲಾಗುತ್ತಿದೆ. ಈ ಐಸ್ ಕ್ರೀಂ ಸ್ವಾದಭರಿತವೂ ಸುವಾಸನಾಯುಕ್ತವೂ ಆಗಿರುತ್ತದೆ. ಏನೇ ಮಾಡುವುದಿದ್ದರೂ ಬೀಜಗಳನ್ನೂ, ಸಿಪ್ಪೆಯನ್ನೂ ತೆಗೆಯುವ ಅವಶ್ಯಕತೆ ಇದೆ.
ಚಿಗುರೆಲೆಗಳ ಕಷಾಯ ಶರೀರದ ನಿತ್ರಾಣವನ್ನು ತೊಲಗಿಸುವುದು. ಮಹಿಳೆಯರ ಮಾಸಿಕ ರಜಸ್ರಾವದ ಏರುಪೇರುಗಳನ್ನು ಸುಸ್ಥಿತಿಗೆ ತರುವುದು. ಪ್ರಸವಾನಂತರ ಶರೀರ ಸುಸ್ಥಿತಿಗೆ ಮರಳಲು ಸಹಾಯಕ, ಇದನ್ನು ಹಿಂದಿನ ಕಾಲದ ಸೊಲಗಿತ್ತಿಯರು ಅರಿತಿದ್ದರು.
ಅತಿಸಾರದಿಂದ ಬಳಲುತ್ತಿದ್ದರೂ ಈ ಕಷಾಯದಿಂದ ಪರಿಹಾರ. ಕಾಲೆರಾ ಎಂಬಂತಹ ವಾಂತಿಭೇದಿ ಖಾಯಿಲೆ ಇದೆಯಲ್ಲ, ಪೇರಳೆ ಕಷಾಯದಿಂದಲೇ ನಿಯಂತ್ರಣ ಸಾಧ್ಯವಿದೆ. ಚಿಗುರೆಲೆಗಳನ್ನು ಅಗಿಯುವುದರಿಂದ ಗಂಟಲ ಕಿರಿಕಿರಿ, ಬಾಯಿಯ ದುರ್ವಾಸನೆಯನ್ನೂ ಹೋಗಲಾಡಿಸಬಹುದಲ್ಲದೆ, ಹಲ್ಲಿನ ವಸಡುಗಳ ರಕ್ತಸ್ರಾವ, ಬಾಯಿಹುಣ್ಣು ಇತ್ಯಾದಿಗಳನ್ನೂ ಸಮರ್ಥವಾಗಿ ತಡೆಗಟ್ಟಬಹುದಾಗಿದೆ. ಎಲೆಗಳನ್ನು ಹಾಕಿ ಕುದಿಸಿದ ನೀರಿನಲ್ಲಿ ಬಾಯಿ ಮುಕ್ಕುಳಿಸುತ್ತಿದ್ದರೂ ನಡೆದೀತು.
ಕಷಾಯ ಹೇಗೆ ಮಾಡ್ತೀರಾ ?
ಪೇರಳೆಯ ಚಿಗುರೆಲೆಗಳನ್ನು ಕಾಂಡ ಸಹಿತವಾಗಿ ಚಿವುಟಿ ತಂದಿರಾ ?
ತಪಲೆಗೆ 3 ಲೋಟ ನೀರೆರೆದು ಸೊಪ್ಪುಗಳನ್ನು ಕುದಿಸಿ, ಕಾಂಡದ ಭಾಗವನ್ನು ಗುಂಡುಕಲ್ಲಿನಲ್ಲಿ ಜಜ್ಜಿದರೆ ಉತ್ತಮ. ಕುದಿದ ನೀರು ಆರುತ್ತಾ ಬರುವಾಗ ನಾಲ್ಕು ಕಾಳು ಜೀರಿಗೆ , ರುಚಿಗೆ ಬೆಲ್ಲ ಹಾಕಿಕೊಳ್ಳಿ. ಸಕ್ಕರೆ ಬೇಡ. ಬತ್ತಿದ ನೀರು ಒಂದು ಲೋಟದಷ್ಟು ಆದಾಗ ಕಷಾಯ ಕುಡಿಯಲು ಹಿತವಾಗುವಂತೆ ಹಾಲು ಎರೆದು ಇನ್ನೊಂದು ಕುದಿ ಬಂದಾಗ ಕೆಳಗಿಳಿಸಿ. ಜಾಲರಿ ಸೌಟಿನಲ್ಲಿ ಕಷಾಯ ಶೋಧಿಸಿ ಕುಡಿಯಬೇಕಾದವರಿಗೆ ಕೊಡಿ.
ತಂಬುಳಿ:
ಬೇಯಿಸಿದ ಚಿಗುರೆಲೆ, ಚಿಕ್ಕದಾಗಿ ಕತ್ತರಿಸಿ ತುಪ್ಪದಲ್ಲಿ ಬಾಡಿಸಿದರೂ ಆದೀತು. ತೆಂಗಿನ ತುರಿ, ಸಿಹಿ ಮಜ್ಜಿಗೆ, ತುಸು ಜೀರಿಗೆ, ರುಚಿಗೆ ಉಪ್ಪು, ಬೆಲ್ಲ ಕೂಡಿಸಿ ನುಣ್ಣಗೆ ಅರೆಯಿರಿ. ಸಾಕಷ್ಟು ತೆಳ್ಳಗಾಗಿಸಿ ಅನ್ನದೊಂದಿಗೆ ಸವಿಯಿರಿ.
ಈ ಪೇರಳೆಯು ಸಸ್ಯಶಾಸ್ತ್ರೀಯವಾಗಿ Psidium guajava ಅನ್ನಿಸಿಕೊಂಡಿದೆ. Myrtaceae ಕುಟುಂಬವಾಸಿ ಸಸ್ಯ. ದಕ್ಷಿಣ ಅಮೆರಿಕಾ ಮೂಲದ ಉಷ್ಣ ವಲಯದ ಬೆಳೆಯಾಗಿರುವ ಪೇರಳೆ ನಮ್ಮ ದೇಶದ ಹವಾಮಾನಕ್ಕೆ ಸೂಕ್ತವಾಗಿಯೇ ಹೊಂದಿಕೊಂಡಿದೆ ಎಂದರೂ ತಪ್ಪಾಗಲಾರದು.
Friday, 21 November 2014
ದೋಸೆ ಎರೆಯೋಣ...
ಮಗಳು ಮನೆಯಲ್ಲಿದ್ದಳು. ಅವಳಿಗೆ ಹಿತವಾಗುವಂತಹ ಅಡುಗೆಯನ್ನೇ ಮಾಡಿ, ಬಿಡುವಾದಾಗ ಇಂಟರ್ನೆಟ್ ವ್ಯವಹಾರಗಳು, ನನಗೆ ತಿಳಿಯಬೇಕಾಗಿರುವುದನ್ನು ಅಂಗಲಾಚಿ ಕಲಿಯುವ ವಿಧಿ ನನ್ನದು. ಹಾಗೇ ಸಂಜೆಯಾಗುತ್ತಾ ಬಂದಿತ್ತು. ನಾಳೆಯೂ ಮನೆಯಲ್ಲಿರ್ತಾಳೆ ಅಂದ್ಕೊಂಡಿದ್ದೆ, ಬೆಳ್ಳಂಬೆಳಗ್ಗೆ ಹೊರಡುವವಳು ಎಂದು ತಿಳಿದಾಗ ಬೇಗನೇ ಅಡುಗೆಕೋಣೆಗೆ ದೌಡಾಯಿಸಿ ದೋಸೆಗೆ ಅಕ್ಕಿ, ಉದ್ದು ನೆನೆ ಹಾಕಿದೆನಾ... ಬಿಡುವಿಲ್ಲದ ಕೆಲಸ ಅಡುಗೆಮನೆಯಲ್ಲಿ ಕಾದಿತ್ತು. ಅತ್ತಇತ್ತ ಚದುರಿದ್ದ ಪಾತ್ರೆಪರಿಕರಗಳು, ತೊಳೆಯದಿದ್ದ ಚಹಾ ಬಟ್ಟಲುಗಳು ಒಂದೇ ಎರಡೇ, ಅಂತೂ ಇವನ್ನೆಲ್ಲ ಸುಧರಿಸಿ, ಊಟದ ತಯ್ಯಾರಿಯೂ, ರಾತ್ರಿ ಪಾಳಿಯ ಸ್ನಾನವೂ, ದೇವರಮನೆಯಲ್ಲಿ ಜ್ಯೋತಿ ಬೆಳಗಿ, ಉಂಡು ಎದ್ದು ದೋಸೆಗೆ ಅರೆಯಲು ಹೊರಟಾಗ ಕಂಡಿದ್ದೇನು ?
ನೆನೆ ಹಾಕಿದ ಒಂದು ಕಪ್ ಉದ್ದು, ಮೆಂತೆ. ಹ್ಞೂ, ಚೆನ್ನಾಗಿ ನೆನೆದಿದೆ. 2 ಕಪ್ ಬೆಳ್ತಿಗೆ ಅಕ್ಕಿ , ಇದೂ ನೆನೆದಿದೆ, ಆದ್ರೆ ಒಂದು ಕಪ್ ಕುಚ್ಚುಲಕ್ಕಿ, " ನೀರು ಬಿದ್ದೇ ಇಲ್ಲ ನನ್ಮೇಲೆ " ಎಂದು ಅಣಕಿಸಿತು. ಅದೂ ರೇಷನ್ ಅಕ್ಕಿ, ಓಣಂ ಬಾಬ್ತು ಬಂದಿತ್ತು. ದೋಸೆ ಚೆನ್ನಾಗಿ ಬರಲಿ ಅಂತ ನಾನಿದ್ರೆ ಈಗ ಏನು ಮಾಡಲಿ ? ಇಡ್ಲಿ ಮಾಡಬಹುದಿತ್ತು, ಬೇಗ ಹೋಗಬೇಕಾದವಳಿಗೆ ದೋಸೆಯೇ ಚೆನ್ನ ಎಂಬ ನಿರ್ಧಾರಕ್ಕೆ ಬಂದು ದೋಸೆ ಹಿಟ್ಟು ತಯಾರಾಯಿತು.
ಅರೆದ ಹಿಟ್ಟು ಎಲ್ಲರಿಗೂ ಸಾಕಾಗುವಂತಿಲ್ಲ, ಮೈದಾ ಸೇರಿಸುವಂತಿಲ್ಲ, ಮಗಳಿಗಾಗದು ಮೈದಾ. ರಾಗೀ ಹುಡಿ, ಅದೂ ಮುಗಿದಿದೆ. ಉಸ್ಸಪ್ಪ ... ಇಲ್ಲೊಂದು ಸಜ್ಜಿಗೆಯ ಪ್ಯಾಕ್ ಇದೆ. ಅಳೆದು ನೋಡೂದೇನೂ ಬೇಡ, ಒಂದು ಕಪ್ ಇದ್ದೀತು. ಸಜ್ಜಿಗೆಯನ್ನು ತಪಲೆಗೆ ಸುರಿದು ನೆನೆಯುವಂತೆ ನೀರೆರೆದು ಇಟ್ಟಾಯ್ತು.
ಬೆಳ್ಳಂಜಾವ ಎಬ್ಬಿಸಿದ್ದು ಮಗಳು. ದೋಸೆಗೊಂದು ಚಟ್ನಿ, ತೆಂಗಿನತುರಿಯಿಂದ ಸಿದ್ಧವಾಯಿತು. ದೋಸೆ ಹಿಟ್ಟಿಗೆ ನೆನೆದ ಸಜ್ಜೆಗೆಯೂ ಬೆರೆಯಿತು. ಗರಿಗರಿ ದೋಸೆ ಎದ್ದು ಬಂದಿತು. ಮುಂಜಾನೆಗೊಂದು ತಿಂಡಿ ತಿಂದು ಮಗಳು ಹೊರಟಳು, ಮೂಡಬಿದ್ರೆ ತಲಪಲು ಮೂರು ಬಸ್ ಬದಲಿಸಬೇಕಾಗಿದೆ. ಏನೇ ಆದ್ರೂ ಬೆಳಗಿನ ಆಹಾರ ಲಘುವಾಗಿರಕೂಡದು, ಪುಷ್ಟಿದಾಯಕವಾಗಿರಬೇಕು.
ಆಯಾಸವಾಗಿದೆ, ಆದರೂ ನಾಳೆಗೊಂದು ತಿಂಡಿಯ ವ್ಯವಸ್ಥೆ ಆಗಲೇಬೇಕಾಗಿದೆ. ದೋಸೆಯನ್ನೇ ಬಯಸುವವರಿಗೆ ಹೀಗೊಂದು ಪೇಪರ್ ದೋಸೆ ತಯಾರಿಸೋಣ.
ಒಂದೂವರೆ ಕಪ್ ಬೆಳ್ತಿಗೆ ಅಕ್ಕಿ
ಒಂದು ಕಪ್ ಚಿರೋಟಿ ರವೆ ( ಬಾಂಬೇ ಸಜ್ಜಿಗೆ )
ಒದು ಕಪ್ ಅವಲಕ್ಕಿ
ಒಂದು ಲೋಟ ಸಿಹಿ ಮಜ್ಜಿಗೆ
ರುಚಿಗೆ ಉಪ್ಪು
ಎಲ್ಲವನ್ನೂ ಪ್ರತ್ಯಪ್ರತೇಕವಾಗಿ ನೀರಿನಲ್ಲಿ ನೆನೆಸಿಡಿ.
ಸಂಜೆಯಾಗುತ್ತಲೇ ಅಕ್ಕಿಯನ್ನು ಚೆನ್ನಾಗಿ ತೊಳೆದು ಮಜ್ಜಿಗೆ ಎರೆದು ಅರೆಯಿರಿ.
ನೆನೆದ ಚಿರೋಟಿರವೆಯನ್ನು ಪುನಃ ಅರೆಯುವ ಅವಶ್ಯಕತೆಯಿಲ್ಲ, ನೆನೆದ ಅವಲಕ್ಕಿಯನ್ನು ನುಣ್ಣಗಾದ ಅಕ್ಕಿ ಹಿಟ್ಟಿಗೆ ಸೇರಿಸಿ ಇನ್ನೊಮ್ಮೆ ಅರೆದು ತೆಗೆಯಿರಿ. ಹಿಟ್ಟುಗಳನ್ನು ಒಟ್ಟಿಗೆ ಕೂಡಿಸಿ ಉಪ್ಪು ಬೆರೆಸಿ ಮುಚ್ಚಿಡಿ, ಮುಂಜಾನೆ ದೋಸೆ ಹೀಗೆ ಎರೆಯಿರಿ, " ವಾರೆವ್ಹಾ.... ಮಸಾಲೆ ದೋಸೆ ನಾಚಿ ಓಡಿತು " ಅನ್ನಿರಿ.
ಚಳಿಹವೆ ಇದ್ದಾಗ ಇಂತಹ ದೋಸೆ ಮಾಡಬಹುದು. ಸೆಕೆ ಸಮಯದಲ್ಲಿ ಮಜ್ಜಿಗೆ ಎರೆದ ಹಿಟ್ಟು ಹುಳಿಹುಳಿಯಾಗಿ ತಿನ್ನಲು ಪ್ರಯಾಸ ಪಡಬೇಕಾದೀತು. ಹವಾಮಾನ, ಸಮಯದ ಹೊಂದಾಣಿಕೆ ತಿಳಿದಿದ್ದರೆ ಮಾತ್ರ ಇಂತಹ ದೋಸೆ ತಯಾರಿಸಲು ಸಾಧ್ಯ. ಮನೆಯ ದೋಸೆ ತಿನ್ನಬೇಕೆಂಬ ಆಸೆಯಾದಾಗ ಬ್ರಹ್ಮಚಾರಿಗಳ ಬಿಡಾರದಲ್ಲೂ ಈ ದೋಸೆ ಮಾಡಿಕೊಳ್ಳಲು ಸಾಧ್ಯವಿದೆ, ಅಕ್ಕಿ ಅರೆಯುವ ಯಂತ್ರ ಇಲ್ವೇ, ಅಕ್ಕಿಹುಡಿ ತನ್ನಿ, ಮಾಡಿಕೊಂಡು ತಿನ್ನಿ.
ನಿಮ್ಮ ಮಜ್ಜಿಗೆ ಫ್ರಿಜ್ ಎಂಬ ಶೀತಲಪೆಟ್ಟಿಗೆಯಲ್ಲಿರುವಂತಾದ್ದೇ ಆಗಿದ್ದರೆ ದೋಸೆಗೆ ಬಳಸುವ ಮೊದಲು ಕೋಣೆಯ ತಾಪಮಾನಕ್ಕೆ (room temperature ) ಬಂದಿಳಿದಿರಬೇಕು. ಇಲ್ಲದಿದ್ದರೆ ಮಜ್ಜಿಗೆ ಬಳಸಿ ಮಾಡುವ ತಿಂಡಿಗಳು ಚೆನ್ನಾಗಿ ಬರುವ ಸಾಧ್ಯತೆ ಕಡಿಮೆ.
Thursday, 13 November 2014
ಮುದ್ದಿನ ಕಂದ
ಅಜ್ಜ ಅಜ್ಜಿಯ ಮುದ್ದಿನ ಕಂದ
ಪುಟ್ಟನಿಗೆಂದು
ಕಾಶೀಯಾತ್ರೆಗೆ ಹೋಗಿ ತಂದ
ಬಣ್ಣ ಬಣ್ಣದ ಜೋಕಾಲಿ|
" ಏನೋ ಪುಟ್ಟಾ,
ಇದೇನು ನಿನ್ನ ಉಚ್ಚಾಲು ?"|
" ಹೋಗೇ ಅತ್ತೇ,
ಇದು ಉಚ್ಚಾಲು ಅಲ್ಲ
ಅನ್ನೀ ಜೋಕಾಲಿ "|
" ಉಯ್ಯಾಲೆ ಆಡೋಣ ಬನ್ನಿ
ತೂಗು ತೊಟ್ಟಿಲ ಅನ್ನಿ "|
Posted via DraftCraft app
Saturday, 8 November 2014
ಒಡೆದ ಹಾಲು
ಹಾಲು ಕಾಯಿಸಲಿಟ್ಟು, ಅಡುಗೆಮನೆಯ ಒಳಗೆ ಅತ್ತಿತ್ತ ಹರಡಿದ್ದ ಪಾತ್ರೆಪರಡಿಗಳನ್ನು ಯಥಾಸ್ಥಾನದಲ್ಲಿಟ್ಟು, ತೊಳೆಯಬೇಕಾಗಿದ್ದ ಲೋಟ, ತಟ್ಟೆಗಳನ್ನು ಸಿಂಕಿಗೆ ಹಾಕಿ, ಒದ್ದೆಬಟ್ಟೆಯಲ್ಲಿ ಚೆಲ್ಲಿದ್ದ ನೀರು, ಇನ್ನೂ ಏನೇನೋ ಇರ್ತವೆ, ಎಲ್ಲವನ್ನೂ ಒರೆಸುತ್ತಾ ಬಂದಂತೆ ಹಾಲು ಕುದಿಯಲಾರಂಭಿಸಿತು. ಎಷ್ಟಾದ್ರೂ ಪ್ಯಾಕೆಟ್ ಹಾಲು, ತಂದ ಕೂಡಲೇ ಕಾಯಿಸಿ ಇಡುವ ಪದ್ಧತಿ. ಹಾಲನ್ನು ಒಲೆ ಮೇಲೆ ಇಟ್ಟು ಅತ್ತಿತ್ತ ಹೋಗೋ ಹಾಗಿಲ್ಲ. ಟೀವಿ ನೋಡ್ತಾ ಕೂತ್ಬಿಟ್ರೆ ಮುಗೀತು, ಮತ್ತೆ ಇಹಲೋಕದ ಪರಿವೆಯೇ ಇಲ್ಲ, ಅಲ್ಲಿಂದ ಹಾಲು ಸೀದ ವಾಸನೆ ಬಂದಾಗಲೇ ಭೂಮಿಗಿಳಿದು ಬರ್ತೀವಿ, ಏನು ಮಡೋದು, ನಮ್ಮ ಜೀವನಶೈಲಿಯೇ ಹಾಗಾಗಿದೆ.
" ಹ್ಞಾ, ಹಾಲು ಕುದಿ ಬಂದಿದೆ, ಚಿಕ್ಕ ಉರಿಯಲ್ಲಿರಲಿ. ದಪ್ಪ ಕೆನೆಕಟ್ಟದಿದ್ದರೆ ಬೆಣ್ಣೆ ಬರಬೇಕಲ್ಲ " ಅಂದುಕೊಳ್ಳುತ್ತ ತಟ್ಟೆ ಲೋಟಗಳನ್ನು ತೊಳೆದಿರಿಸಿ ಆಯ್ತು. ಇನ್ನು ಅನ್ನ ಬಿಸಿ ಮಾಡಿಕೊಳ್ಳೋಣ ಅಂತ ನೋಡಿದ್ರೆ ಒಲೆಯಲ್ಲಿದ್ದ ಹಾಲು ಒಡೆದು ಹೋಗಿದೆ. ಭರ್ತಿ ಒಂದು ಲೀಟರಿತ್ತು. ನಾಳೆ ರಜಾದಿನ, ಮಕ್ಕಳಿಬ್ಬರೂ ಮನೆಯಲ್ಲಿರ್ತಾರೆ ಅಂತಿದ್ರೆ ಕಾಫಿಗೇನ್ಮಾಡ್ಲಿ, ಮೊಸರಿನ ಕಥೆಯೇನು ಚಿಂತೆ ಒಂದೆಡೆಯಾದರೆ, ಈ ಒಡೆದ ಹಾಲನ್ನೇನ್ಮಾಡ್ಲಿ ಎಂಬ ಚಿಂತೆ ಇನ್ನೊಂದೆಡೆ.
" ಪ್ಯಾಕೆಟ್ ಬಿಚ್ಚೋ ಮೊದಲು ನೋಡ್ಬೇಕಾಗಿತ್ತು... ವಾಪಸ್ ಮಾಡಿ ಬೇರೆ ತರ್ತಿದ್ದೆ, ಈಗ ರಾತ್ರಿ ಪುನಃ ಹೋಗಿ ಬೇರೆ ಹಾಲು ತರಲು ನನ್ನಿಂದಾಗದು "
" ಹಾಗಿದ್ರೆ ಈ ಹಾಲನ್ನೇ ಕುಡಿಯೋಣ ಅಂತೀರಾ "
" ನಂಗೆ ಬೇಡ, ನೀನೇ ಕುಡಿ "
ನಾವು ಚಿಕ್ಕವರಿದ್ದಾಗ ಯಾರಿಗೆ ಏನೇ ಕಾಯಿಲೆಕಸಾಲೆ ಬರಲಿ, ನನ್ನಮ್ಮ ಹಾಲನ್ನು ಹಾಗೇ ಕುಡಿಯಲು ಕೊಡ್ತಿರಲಿಲ್ಲ. ಬಿಸಿಹಾಲಿಗೆ ಲಿಂಬೆರಸ ಹಿಂಡಿ ಅದರ ತಿಳಿನೀರಿಗೆ ಗ್ಲುಕೋಸ್ ಹಾಕಿ ಕೊಡ್ತಾ ಇದ್ದರು, ಹಾಲಿನ ಕಣಗಳು ಲ್ಯಾಕ್ಟೋಸ್ ಆಗಿ ಪರಿವರ್ತಿತವಾಗುವುದರಿಂದ ಜೀರ್ಣ ಆಗಲು ಸುಲಭ ವಿಧಾನ. ಇದೂ ಈಗ ಹಾಗೇನೇ ಅಲ್ವೇ, ಲಿಂಬೆರಸ ಹಾಕದೇ ಹಾಲು ಒಡೆದಿದೆ ಅಷ್ಟೇ ಅಂದ್ಕೊಂಡು ನಾನೇ ವೇ ನೀರು ( whey water ) ಕುಡಿದಾಯ್ತು. ಎಲ್ಲವನ್ನೂ ಗುಳುಂಕರಿಸಲು ಸಾಧ್ಯವಿಲ್ಲ, ಉಳಿದ ವೇ ನೀರು ಒಂದು ಬಾಟ್ಲಿಯೊಳಗೆ ಭದ್ರವಾಯಿತು. ನಾಳೆ ಕಾಫಿ, ಚಹಾ ಬದಲಾಗಿ ವೇ ನೀರನ್ನೇ ಕುಡಿದರಾಯಿತು. ಬೇಕಿದ್ರೆ ಸಕ್ರೆ ಹಾಕೋಣಾ...
ಒಂದು ಶುಭ್ರವಾದ ಬಟ್ಟೆಯಲ್ಲಿ ಒಡೆದ ಹಾಲನ್ನು ಸೋಸಿ, ವೇ ನೀರು ತೆಗೆದಿರಿಸಿ, ಬಟ್ಟೆಯನ್ನು ಗಂಟು ಕಟ್ಟಿ ನೇತಾಡಿಸಿ, " ಉಸ್ಸಪ್ಪಾ... ಒಂದ್ಕೆಲ್ಸ ಮುಗೀತು, ನಾಳೆ ಶ್ರೀಖಂಡ ಮಾಡಿ ದೋಸೆ ಜೊತೆ ತಿನ್ನೂದು...."
ಬೆಳಗ್ಗೆ ದೋಸೆ ಎರೆಯುವ ಮೊದಲೇ ಗಂಟು ಬಿಡಿಸಿದಾಗ, ಪನೀರ್ ಸಿದ್ಧವಾಗಿತ್ತು. ತೆಗೆದು ಒಂದು ತಟ್ಟೆಗೆ ಹಾಕಿ ಆಯ್ತು. ಅದಕ್ಕೆ ರುಚಿಗೆ ಬೇಕಾದ ಸಕ್ಕರೆಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿ, ಪರಿಮಳ ಹಾಗೂ ಬಣ್ಣ ಬರಲು ಬಾದಾಮ್ ಮಾಲ್ಟ್ ಕೂಡಿಸಿ, ಚೆನ್ನಾಗಿ ಚಮಚಾದಲ್ಲಿ ಕಲಸಿ....." ವ್ಹಾವ್, ವ್ಹಾವ್ ದೋಸೆ ಜೊತೆ ನಾನೂ ರೆಡಿ " ಅನ್ನೋದೇ ಈ ಶ್ರೀಖಂಡ!
ಪನೀರ್ ಬಳಸಿಕೊಂಡು ರಸಗುಲ್ಲಾ, ಜಾಮೂನ್, ಜಿಲೇಬಿಗಳನ್ನೂ ಮಾಡಬಹುದಾಗಿದೆ. ಜಿಲೇಬಿಯನ್ನು ಹಿಂದೊಮ್ಮೆ ಟೀವಿ ಮಾಧ್ಯಮದಲ್ಲಿ ನೋಡಿಕೊಂಡು ಮಾಡಿದ್ದು, ಚೆನ್ನಾಗಿಯೇ ಬಂದಿತ್ತು. ಇನ್ನೂ ಏನೇನೋ ತಿಂಡಿಗಳನ್ನು ಮಾಡಬಹುದು. ಉತ್ತರ ಭಾರತೀಯರು ಪನೀರ್ ಖಾದ್ಯ ತಯಾರಿಯಲ್ಲಿ ಪ್ರವೀಣರು.
ಸೂಚನೆ: ಒಡೆದ ಹಾಲು ಕೆಟ್ಟ ವಾಸನೆ ಬರುತ್ತಿದೆಯಾದರೆ ಯಾವ ಸಿಹಿಯನ್ನೂ ಮಾಡಲಾಗದು. ಚೆಲ್ಲುವುದೊಂದೇ ದಾರಿ.
Posted via DraftCraft app
Friday, 31 October 2014
ಕನ್ನಡಕ್ಕೆ ಕೊಡುಗೆ - iPhone 6
" ಅಮ್ಮಾ, ಐಫೋನ್6 ಬೇಗ ಬರುತ್ತೇ..."
" ಬರೂದೆಲ್ಲ ಬರಲೀ, ಐಪಾಡ್ ಇದೆಯಲ್ಲ, ಅದೇ ಸಾಕೂ ನಂಗೇ..."
" ಅಯ್ಯೋ, ಅದು ಹಳೇದಾಯ್ತು, ಈಗ ನೀನು ಏನ್ಮಾಡ್ಬೇಕೂ ಗೊತ್ತಾ.. "
" ಏನೂ "
" ಐಫೋನ್6 ಬಂದ ಕೊಡಲೇ ಅದನ್ನೇ ಉಪಯೋಗಿಸು "
" ಆಯ್ತಪ್ಪಾ ಆಯ್ತು, ನನ್ನ ಕನ್ನಡ ಅದ್ರಲ್ಲಿ ಹೇಗೋ ಏನು ಕಥೆಯೋ..."
" ಎಲ್ಲ ಆಗುತ್ತೇ, ಇದು ಮಾಮೂಲಿ ಫೋನ್ ಗಿಂತ ದೊಡ್ಡದು ತಿಳೀತಾ... ನಿನ್ನ ಬ್ಲಾಗಿಂಗ್ ಇನ್ನೂ ಚೆನ್ನಾಗಿ ಮಾಡ್ತೀಯ "
" ಹೌದ! ನೋಡುವಾ ಮೊದಲು ಬರಲೀ "
ನಮ್ಮ ಮೆಸೆಂಜರ್ ಸಂಭಾಷಣೆ ನಡೆದು ವಾರವಾಗುವಷ್ಟರಲ್ಲಿ ಐಫೋನ್6 ಮನೆಗೆ ಬಂದೂ ಆಯಿತು.
ಏನೇ ಬರೆಯಬೇಕಿದ್ದರೂ ಸುಂದರವಾದ ಚಿತ್ರಗಳೇ ನನ್ನ ಸ್ಪೂರ್ತಿ. ನಾಲ್ಕಾರು ಹೂಗಳ ಚಿತ್ರಗಳನ್ನು ಕ್ಲಿಕ್ಕಿಸಿ ಅದರ ಸೊಗಸನ್ನು ಸವಿಯುತ್ತಾ ನನಗೆ ಬೇಕಾಗಿದ್ದ ಫೊಟೋ ಎಡಿಟಿಂಗ್ apps ಗಳನ್ನೂ install ಮಾಡಿಟ್ಟು, ಒಂದೆರಡು ಫೊಟೋಗಳನ್ನು ಫೇಸ್ ಬುಕ್ಕಲ್ಲಿ ತೋರಿಸಿ ಸಂಭ್ರಮಿಸಿದ್ದೂ ಆಯಿತು.
ಬೆಳಗಾಗುತ್ಲೂ ನಮ್ಮಜಮಾನ್ರು " ನೋಡೇ ನಿನ್ ಕನ್ನಡ, ಎಲ್ಲಿ ಬೇಕಾದ್ರೂ ಬರೆಯಬಹುದು " ಅನ್ನೋದೇ. ನನಗೋ ಮುಂಜಾನೆಯ ಮನೆಗೆಲಸದ ಒತ್ತಡ. ಒಂದು ಹಂತದ ವಿರಾಮದ ವೇಳೆಯಲ್ಲಿ ಐಫೋನ್ ಹಿಡಿದು ಪರಿಶೀಲಿಸ ಹೊರಟರೆ ......
ಅರೆ ಇದೇನಚ್ಚರಿ
ಕೇಳೇ ನೀಳವೇಣೀ
ಕುಣಿದು ಕುಣಿದು ಬಾರೆ
ನಲಿದೂ ನಲಿದು ಬಾರೆ
ಬಂತೂ ಕನ್ನಡ ಅಕ್ಷರಮಾಲೆ
ಅನ್ನುವಂದದಿ
ಕಮೆಂಟು ಬರೆದೆ
ಕಾಪೀ ಪೇಸ್ಟೂ ಕಿರಿಕಿರಿ ಇಲ್ಲದೆ.
ಫೇಸ್ ಬುಕ್ ಕಮೆಂಟು ಛಾಪಿಸಲು ಕನ್ನಡ ಕೀ ಬೋರ್ಡ್ ಎದುರು ಬಂದು ಕುಣಿಯಿತು.
ಟ್ವೀಟ್ ಹಕ್ಕಿ ಕನ್ನಡದ ಗರಿ ಬಿಡಿಸಿ ಬರೆಯಿತು.
ನೋಟ್ ಪ್ಯಾಡ್ ಬಿಡಿಸಿದೆನಾ, ಇಲ್ಲೂ ಕನ್ನಡ ಡಿಂಢಿಮ.
ಪೊಟೋ ಎಡಿಟಿಂಗ್ ಕಡೆ ತಿರುಗಿದೆನಾ, " ಬಂದೇ ಅಕ್ಕಾ, ಕನ್ನಡದ ಕುಂಚ ಹಿಡಿದು ನಿಂದೇ " ಅಂದಿತು ಕನ್ನಡ ಕೀಲಿ ಮಣೆ.
ಈ ಕೀ ಬೋರ್ಡ್ ನನಗೆ ಹೊಸತಲ್ಲ, ಹಿಂದೆಯೂ ಬಳಸುತ್ತಾ ಇದ್ದ ಐಪಾಡ್ ಕೀ ಬೋರ್ಡ್ ಇದೇ ಆಗಿತ್ತು. ಅದನ್ನು install ಅಂದರೆ ಸ್ಥಾಪಿಸಿಕೊಳ್ಳಲು ಶುಲ್ಕ ಕಟ್ಟಬೇಕಾಗಿತ್ತು. ಇಲ್ಲಿ ಆ ತೊಂದರೆಯಿಲ್ಲ. ಇದು ಸಂಪೂರ್ಣ ಉಚಿತ ಕೊಡುಗೆ. ಇದೊಂದೇ ಕೀ ಬೋರ್ಡ್ ಮಾತ್ರವಲ್ಲ, ಬೇರೆ ಬೇರೆ ವಿನ್ಯಾಸದ ಕನ್ನಡ ಕೀಲಿಮಣೆಗಳು ಸಂಪೂರ್ಣ ಉಚಿತವಾಗಿ apps store ನಲ್ಲಿ ಲಭ್ಯವಿವೆ. ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ ... ಎಂದುಲಿಯಿತು ಮನ. ಇದುವರೆಗೆ ಐಪಾಡ್ ಗೆ ಅಲಭ್ಯವಾಗಿದ್ದ ಕನ್ನಡಕ್ಕೆ ಸಂಬಂಧಿಸಿದ ಅದೆಷ್ಟೋ apps ಇಲ್ಲಿ ಉಚಿತವಾಗಿ ಲಭ್ಯವಿವೆ. ಕನ್ನಡದ ಪುಸ್ತಕಗಳನ್ನೂ ಓದಬಹುದು. ಅವಶ್ಯವೆನಿಸಿದಲ್ಲಿ ಇಂಗ್ಲೀಷ್ ಕೂಡಾ ಛಾಪಿಸಿಕೊಳ್ಳಲೂ ಅಡ್ಡಿಯಿಲ್ಲ. ಕನ್ನಡ ಮಾತ್ರವಲ್ಲ ಹತ್ತುಹಲವು ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ ಈ ಕೀ ಬೋರ್ಡ್.
ಆಸಕ್ತರಿಗೆ ಕನ್ನಡ ಬರಹದ apps ಹೀಗೆ ಪಡೆಯಬಹುದು
http://appshopper.com/utilities/kannada-keyboard
Posted via DraftCraft app
Saturday, 25 October 2014
ನಮ್ಮೂರ ಕೋಡುಬಳೆ
ಮಗಳು ಪ್ರೈಮರಿ ಶಾಲೆಯಿಂದ ಹೈಸ್ಕೂಲಿಗೆ ಹೋಗಲು ಅಣಿಯಾಗಿದ್ದಳು. ಅವಳಣ್ಣನ ಹುಕುಂ ಪ್ರಕಾರ ಇಂಗ್ಲೀಷ್ ಮೀಡಿಯಂ ಹೈಸ್ಕೂಲಿಗೇ ಸೇರಿಯಾಗಿತ್ತು, ಅದೂ ವಿಟ್ಲದಲ್ಲಿತ್ತು. ಅವಳಣ್ಣ ಕನ್ನಡ ಶಾಲೆಯಲ್ಲಿ ಓದಿ, ಕಾಲೇಜಿಗೆ ಸೇರಿದ ತಕ್ಷಣ ಹೇಳಿದ್ದು, " ಇಂಗ್ಲೀಷಿನಲ್ಲಿ ಹೇಳುವ ಪಾಠಗಳು ಅರ್ಥವಾಗುವುದಿಲ್ಲ ". ನಾವೂ ಕನ್ನಡವನ್ನೇ ಕಲಿತು ಕಾಲೇಜಿಗೆ ಹೋದವರಲ್ವೇ, ಸಮಸ್ಯೆ ಅರ್ಥ ಮಾಡಿಕೊಂಡು ಪಾಠಪ್ರವಚನಗಳನ್ನು ಹೇಳಿಕೊಡಲು ನಾನೇ ಸಿದ್ಧಳಾಗಬೇಕಾಯಿತು. ಯಾವಾಗ ಅಮ್ಮನೇ ಪಾಠ ಹೇಳಿಕೊಡಲು ಬಂದಳೋ, ಅವನ ಹಿಂಜರಿಕೆ ತೊಲಗಿತು.
ತನಗಾದ ಕಷ್ಟ ತಂಗಿಗಾಗಬಾರದು ಎಂದೇ ಅವಳಣ್ಣ ಈ ಥರ ಅಪ್ಪಣೆ ಕೊಡಿಸಿದ್ದು. ಅವಳೇನೋ ಹೈಸ್ಕೂಲ್ ಸೇರಿದಳು. ದಿನ ಬೆಳಗಾದರೆ ಏಳು ಗಂಟೆಯ ಬಸ್ ಹಿಡಿದು ವಿಟ್ಲದ ಶಾಲೆ ತಲಪಬೇಕಿತ್ತು. ಇದುವರೆಗೆ ಹೋಗುತ್ತಿದ್ದ ಮುಳಿಗದ್ದೆಯ ಹೆದ್ದಾರಿ ಶಾಲೆ ಮನೆಯಿಂದ ಕೂಗಳತೆ ದೂರದಲ್ಲಿದ್ದಿತು, ಸಾವಕಾಶದಿಂದ ಒಂಭತ್ತು ಗಂಟೆಯ ನಂತರ ಮನೆ ಬಿಟ್ಟರೂ ಸಾಕಾಗುತ್ತಿತ್ತು.
ಏಳು ಗಂಟೆಗೆ ಹೊರಡಬೇಕಾಗಿದ್ದರೆ ನಾನು ಐದು ಗಂಟೆಗೂ ಮುಂಚಿತವಾಗಿ ಎದ್ದು ತಿಂಡಿ ತಯಾರಿ, ಟಿಫಿನ್ ಬಾಕ್ಸ್, ಸ್ನಾನದ ವ್ಯವಸ್ಥೆ, ಯೂನಿಫಾರ್ಮ್, ಓರಣವಾಗಿ ತಲೆ ಕೂದಲಿನ ಶೃಂಗಾರ.... ಒಂದೇ ಎರಡೇ ? ಈ ಮಾದರಿಯ ಪಡಿಪಾಟಲು ಎಲ್ಲರ ಮನೇಲೂ ಇದ್ದಿದ್ದೇ ಅನ್ನಿ, ಆಯ್ತು ಅಂತಾ ಉಸ್ಸೆಂದು ಕುಳಿತು ಗಂಟೆ ನೋಡಿದ್ರೆ ಇನ್ನೂ ಆರೂ ಮುಕ್ಕಾಲು. ಏನಾಯ್ತೀಗ, ಒಂದು ಹಂತದ ಮನೆಕೆಲಸವೆಲ್ಲ ಇವಳನ್ನು ಸ್ಕೂಲಿಗೆ ಕಳಿಸೋ ಹೊತ್ತಿಗೆ ಮುಕ್ತಾಯ. ಟೀವಿ ನೋಡಲಡ್ಡಿಯಿಲ್ಲ, ಮಗಳು ತಮಿಳುಪ್ರಿಯೆ. ಕಲೈನಾರ್ ಚಾನಲ್ ಏನನ್ನೋ ಬೊಬ್ಬಿರಿಯುತ್ತಿತ್ತು. ನಾನೂ ವಾಹಿನಿ ಬದಲಾಯಿಸದೆ ಹಾಗೇ ಕೂತಿದ್ದೆನಾ...
" ವಣಕ್ಕಂ " ಅನ್ನುತ್ತಾ ಒಬ್ಬ ಮಧ್ಯವಯಸ್ಕ ಮಹಿಳೆ ಬಂದಳು. " ಮಂಗಳ ಉಲಗಂ.... ಇದು ಮಂಗಳ ಉಲಗಂ.... " ಎಂದು ರಾಗ ಪ್ರಾರಂಭವಾಯಿತೇ, ಏನೋ ಕುತೂಹಲ, ಅಡುಗೆ ಮನೆಯೂ ಎದುರಾಯಿತು. ಅಡುಗೆ ಕಾರ್ಯಕ್ರಮ ನೋಡದಿದ್ದರೆ ಹೇಗೆ ? ಅಡುಗೆ ಮಾಡಲು ತಲೆ ಹಣ್ಣಾದ ಇನ್ನೊಬ್ಬ ಮಹಿಳೆ ಬಂದು ನಿಂತರು. ಆಕೆ ತಮಿಳಿನಲ್ಲೇ ವಾಗ್ದಾಳಿ ಮುಂದುವರಿಸಿದರೂ ನಮ್ಮ ದಕ್ಷಿಣ ಕನ್ನಡಿತಿ ಈಕೆ ಎಂದೇ ಮನ ತೀರ್ಪು ಕೊಟ್ಟಿತು.
" ಕೋಡುಬಳೆಯನ್ನು ಮಾಡುವ ವಿಧಾನ ತೋರಿಸಲಿದ್ದೇನೆ " ಅನ್ನುತ್ತಾ, " ಕೋಡುಬಳೆ ಶಬ್ದ ಮೂಲತಃ ಕನ್ನಡದ್ದು ಹಾಗೂ ಇದು ಕರ್ನಾಟಕದ ತಿಂಡಿ " ಅಂದು ಉದ್ದವಾಗಿ ಬತ್ತಿಯಂತೆ ಹೊಸೆದ ಹಿಟ್ಟಿನ ಎರಡು ತುದಿಗಳನ್ನು ಜೋಡಿಸಿ ಬಳೆಯ ಆಕಾರ ನೀಡುವಲ್ಲಿಗೆ " ಇದು ಕೋಡುಬಳೆ " ಅಂದರು.
ಓ, ಕೋಡುಬಳೆಯ ವ್ಯುತ್ಪತ್ತಿ ತಿಳಿದಂಗಾಯ್ತು. ಆಕಾಶದಲ್ಲಿ ಕಾಮನಬಿಲ್ಲು ಮೂಡಿದಾಗ ನಾವೂ ಅನ್ನುವುದಿದೆ, " ಆ ಕೋಡಿಯಿಂದ ಈ ಕೋಡಿವರೆಗೆ ಕಾಮನಬಿಲ್ಲು ಹೊಳೆಯುತ್ತಿತ್ತು ". ನರೇಂದ್ರ ಮೋದಿ ನಮ್ಮೂರಿಗೆ ಬಂದ್ರು ಅಂತಿಟ್ಕೊಳ್ಳಿ, ಇತರರೊಂದಿಗೆ ಈ ಸುದ್ದಿ ಹಂಚಿಕೊಳ್ಳುವಾಗ " ರಸ್ತೆಯಲ್ಲಿ ಏನು ಜನಾ, ಆ ಕೋಡಿಂದ ಈ ಕೋಡಿವರೆಗೆ ವಾಹನಗಳ ಸಾಲು ಸಾಲು ". ಈಗೀಗ ಹಳೇ ಧಾಟಿಯಲ್ಲಿ ಕನ್ನಡ ಮಾತು ಕೇಳುವುದೇ ದುರ್ಲಭ, ಈಗಿನ ಮಕ್ಕಳಂತೂ ಭಾಷೆಯ ಹಂಗಿಲ್ಲದೆ ವ್ಯವಹರಿಸುವವರು.
ಆಕೆ ಕೇವಲ ಐದು ನಿಮಿಷದಲ್ಲಿ ಕೋಡುಬಳೆ ಮಾಡಿಟ್ಟು ಹೋದರು. ನನಗೂ ಪ್ರತಿದಿನದ ವೀಕ್ಷಣೆಗೆ ಪುಟ್ಟ ಕಾರ್ಯಕ್ರಮವೂ ಸಿಕ್ಕಿತು. ಆಗ ನಾನೇನೂ ಇಂಟರ್ನೆಟ್ ಹವ್ಯಾಸಿಯಾಗಿರಲಿಲ್ಲ. ಕಂಪ್ಯೂಟರ್ ಇದ್ದ ಕಡೆ ತಲೆ ಹಾಕ್ತಾನೇ ಇರಲಿಲ್ಲ. ಮಕ್ಕಳು ದಿನವಿಡೀ ವೀಡಿಯೋ ಗೇಮ್ಸ್ ಗಳಲ್ಲೇ ಮಗ್ನರಾಗಿರುತ್ತಿದುದರಿಂದ ಇದೂ ಒಂದು ಮಕ್ಕಳಾಟಿಕೆಯ ಸಾಧನ ಎಂದೇ ನನ್ನ ತೀರ್ಮಾನವಾಗಿತ್ತು.
ಈಗ ನಾವೂ ಸಂಪ್ರದಾಯಬದ್ಧವಾದ ಕೋಡುಬಳೆ ತಯಾರಿಸೋಣ.
ಅಕ್ಕಿ ಹುಡಿ 3 ಕಪ್.
ಹಸಿ ತೆಂಗಿನ ತುರಿ ಒಂದು ಕಪ್, ಒಣಕಲು ಕೊಬ್ಬರಿ ಆಗದು.
ತುಸು ಜೀರಿಗೆ, ಸುವಾಸನೆಗೆ ತಕ್ಕಷ್ಟು.
2-3 ಹಸಿಮೆಣಸು, ಗಾಂಧಾರಿ ಮೆಣಸು ಕೂಡಾ ಆದೀತು.
ರುಚಿಗೆ ಉಪ್ಪು.
ಕರಿಯಲು ತೆಂಗಿನೆಣ್ಣೆ ಯಾ ಅಡುಗೆ ಎಣ್ಣೆ, ತೆಂಗಿನೆಣ್ಣೆ ಅತ್ಯುತ್ತಮ.
ಇನ್ನೇನು ಮಾಡಬೇಕು ?
ತೆಂಗಿನತುರಿ, ಜೀರಿಗೆ, ಮೆಣಸು, ಉಪ್ಪು ಇಷ್ಟನ್ನೂ ನೀರು ಹಾಕದೆ ಅರೆಯಿರಿ, ಅರೆದ ಅರಪ್ಪನ್ನು ಅಕ್ಕಿಹುಡಿಯೊಂದಿಗೆ ಕಲಸಿರಿ. ಅವಶ್ಯವಿದ್ದಷ್ಟೇ ನೀರು ಕೂಡಿಸಿ ಚಪಾತಿ ಹಿಟ್ಟಿನ ಥರ ಮಾಡಿಟ್ಟು ಅರ್ಧ ಘಂಟೆ ಮುಚ್ಚಿಡಿ.
ನೆಲ್ಲಿ ಗಾತ್ರದ ಹಿಟ್ಟನ್ನು ಅಂಗೈಯಲ್ಲಿ ತೆಗೆದು ಬತ್ತಿಯಂತೆ ಹೊಸೆಯಿರಿ. ಅಂಗೈಯಿಂದ ತುಂಡಾಗಿ ಬೀಳದಿದ್ದಲ್ಲಿ ಕಲಸಿದ ಪ್ರಮಾಣ ಸರಿಯಾಗಿದೆ ಎಂದೇ ತಿಳಿಯಿರಿ. ತುಂಡಾಗುತ್ತಿದೆಯಾದಲ್ಲಿ ಸ್ವಲ್ಪ ಅಕ್ಕಿಹುಡಿ ಸೇರಿಸಿ ಪುನಃ ಕಲಸಿ, ಗೋಧಿಹುಡಿ ಒಂದೆರಡು ಚಮಚ ಸೇರಿಸಿದರೂ ಆದೀತು.
ಉರುಟಾಗಿ ಬಳೆಗಳಂತೆ ಜೋಡಿಸಿ ಇಟ್ಕೊಂಡಿರಾ, ಈಗ ಬಾಣಲೆ ಒಲೆಗೇರಿಸಿ.
ಎಣ್ಣೆ ಬಿಸಿಯಾಯಿತೇ, ಮಾಡಿಟ್ಟ ಕೋಡುಬಳೆಗಳು ಎಣ್ಣೆಗಿಳಿಯಲಿ.
ಎಣ್ಣೆಯಲ್ಲಿ ಹಿಡಿಸುವಷ್ಟು ಹಾಕಿ, ಹೊಂಬಣ್ಣ ಬಂದಾಗ ತೆಗೆಯಿರಿ.
ಬಿಸಿಯಾರಿತೇ, ತಟ್ಟೆಯಲ್ಲಿ ಹಾಕಿಟ್ಟು ಬಿಸಿ ಚಹಾದೊಂದಿಗೆ ತಿನ್ನಿ.
ಉಳಿದುದನ್ನು ಜಾಡಿಯಲ್ಲಿ ತುಂಬಿಸಿ, ನಾಳೆ ತಿನ್ನಬಹುದು.
ಸಾಧ್ಯವಿದ್ದರೆ ವಾರಕ್ಕಾಗುವಷ್ಟು ಮಾಡಿಟ್ಕೊಳ್ಳಿ, ಕೆಡುವುದಿಲ್ಲ.
Posted via DraftCraft app
Saturday, 18 October 2014
ಕೊಂಡಾಟದ ಅಡುಗೆ
ಸೌತೆ, ಕುಂಬಳ, ಸಿಹಿಗುಂಬಳದಂತಹ ತರಕಾರಿಗಳನ್ನು ಹೋಳು ಮಾಡುವಾಗ ತಿರುಳಿನಂಶ ತಗೆದು ಅಡುಗೆ ಮಾಡಿ ಆಯ್ತೇ, ತಿರುಳಿನಿಂದಲೂ ತೆಂಗಿನ ತುರಿ, ಸಾಸಿವೆ, ಹಸಿಮೆಣಸಿನೊಂದಿಗೆ ಅರೆದು ಕಡೆದ ಮಜ್ಜಿಗೆ ಎರೆದು ಇಂತಹ ಸಹವ್ಯಂಜನ ತಯಾರಿಸಿ. ಮುಳ್ಳುಸೌತೆ ತಿರುಳಿನಿಂದ ತಯಾರಿಸಿದ್ದು ಕೊಂಡಾಟ ಎಂಬ ಹೆಸರನ್ನು ಪಡೆದಿದೆ. ಇನ್ನಿತರ ತರಕಾರೀ ತಿರುಳುಗಳಿಗೆ ಈ ಭಾಗ್ಯವಿಲ್ಲ, ಸಾಸಿವೆ ಅಂದ್ಬಿಟ್ರಾಯ್ತು.
ಗೆಡ್ಡೆ ತರಕಾರಿ ಸ್ವಲ್ಪ ಇದೆ, ಪಲ್ಯ ಯಾ ರಸಂಗೆ ಸಾಲದು, ಏನು ಮಾಡೋಣ?
ಹಳ್ಳಿಗಳಲ್ಲಿ ಮುಂಡಿಗೆಡ್ಡೆ ಏನೇನೋ ಅಡುಗೆ ಮಾಡಿದರೂ ತುಸು ಉಳಿಯುವಂತಹುದು. ಈ ಚಿಕ್ಕ ತುಂಡನ್ನು ಇನ್ನಷ್ಟು ಚಿಕ್ಕದಾಗಿ ಕತ್ತರಿಸಿ, ಮೇಲೆ ಹೇಳಿದ ಸಾಮಗ್ರಿಗಳೊಂದಿಗೆ ಅರೆದು ಮಜ್ಜಿಗೆ ಎರೆದು ಅನ್ನದೊಂದಿಗೆ ಸವಿಯಿರಿ. ಕ್ಯಾರೆಟ್, ಬೀಟ್ರೂಟುಗಳೂ ಆದೀತು.
ಕೇವಲ ಒಂದೇ ಒಂದು ಬೆಂಡೆಕಾಯಿ ಇದೆ. ಏನು ಮಾಡೋಣ?
ತೆಳ್ಳಗೆ ಕತ್ತರಿಸಿ, ಜಿಡ್ಡು ಸವರಿದ ಬಾಣಲೆಯಲ್ಲಿ ಹುರಿದುಕೊಳ್ಳಿ, ಹಸಿವಾಸನೆ ಹೋಗಿ ಗರಿಗರಿ ಆಯ್ತೇ, ಕೆಳಗಿಡಿ. ತೆಂಗಿನ ತುರಿ, ಸಾಸಿವೆ ಮಜ್ಜಿಗೆಯಲ್ಲಿ ಅರೆದು ಸೇರಿಸಿ. ರುಚಿಗೆ ಉಪ್ಪು, ಬೆಲ್ಲವನ್ನೂ ಬೇಕಿದ್ದರೆ ಹಾಕಬಹುದು. ಇದು ಬೆಂಡೆ ಸಾಸಿವೆ. ಇದ್ಯಾವುದನ್ನೂ ಕುದಿಸಲಿಕ್ಕಿಲ್ಲ.
ಕಿತ್ತಳೆ ಹಣ್ಣು ತಿಂದಾಯ್ತು. ಸಿಪ್ಪೆಯಿಂದ ಅಚ್ಚುಕಟ್ಟಾದ ಗೊಜ್ಜು ಮಾಡೋಣ.
ಹಣ್ಣಾದ ಸಿಪ್ಪೆ ತುಂಡನ್ನು ಚಿಕ್ಕದಾಗಿ ಕತ್ತರಿಸಿ, ಮಿಕ್ಸೀಗೆ ಹಾಕಿದ್ರೂ ಆದೀತು.
ಒಂದು ಲೋಟ ನೀರು
ರುಚಿಗೆ ತಕ್ಕಂತೆ ಉಪ್ಪು, ಹುಳಿ, ಬೆಲ್ಲ.
ಹುಳಿಗೆ ಬೀಂಬುಳಿಯೂ ಆದೀತು.
ಒಂದು ತಪಲೆಗೆ ಎಲ್ಲವನ್ನೂ ಹಾಕಿಕೊಳ್ಳಿ, ಕುದಿಸಿ, ಒಗ್ಗರಣೆ ಕೊಡಿ.
ಹೀರೇಕಾಯಿ ಸಿಪ್ಪೆ, ನಾರು ತೆಗೆದು ಪಲ್ಯವೋ ಸಾಂಬಾರೋ ಮಾಡಿ ತಿನ್ನುವುದು ಇದ್ದೇ ಇದೆ. ಉಳಿಕೆಯಾದ ನಾರು ಸಿಪ್ಪೆಗಳನ್ನು ತಿಪ್ಪೆಗೆಸೆಯಬೇಕಾಗಿಲ್ಲ. ಇವನ್ನು ಪುನಃ ಕತ್ತರಿಸಿ ಒಂದಿಷ್ಟು ನೀರೆರೆದು ಬೇಯಿಸಿ. ಬೇಯುವಾಗ ಒಂದು ಹಸಿಮೆಣಸು ಅಥವಾ ಒಣಮೆಣಸೂ ಬೇಯಲಿ, ಎರಡೆಸಳು ಬೆಳ್ಳುಳ್ಳಿ ಹಾಕಿಕೊಳ್ಳಿ. ಬೆಂದ ಸಾಮಗ್ರಿಗಳನ್ನು ನೀರಿನಿಂದ ತೆಗೆಯಿರಿ. ಒಂದು ಹಿಡಿ ಕಾಯಿತುರಿ, ಉಪ್ಪು, ಹುಳಿ, ( ಇದ್ದರೆ ಒಂದು ಬೀಂಬುಳಿ ) ಗಳೊಂದಿಗೆ ಅರೆದು ತೆಗೆಯಿರಿ. ಪಚ್ಚಡಿ ಎಂದು ಕರೆಯಿರಿ.
ಒಂದೇ ಬಟಾಟೆ ಇದೆ. ಏನು ಮಾಡೋಣ?
ಬಟಾಟೆಯನ್ನು ಮೆತ್ತಗೆ ಬೇಯಿಸಿ ತಣಿದ ಮೇಲೆ ಸಿಪ್ಪೆ ತೆಗೆದು ಚೆನ್ನಾಗಿ ನುರಿದು ಇಡಿ.
2 ಪುನರ್ಪುಳಿ ಹಣ್ಣಿನ ಒಣ ಸಿಪ್ಪೆ
ಚಿಕ್ಕ ತುಂಡು ಶುಂಠಿ
ಒಂದು ಹಸಿಮೆಣಸು
ನೀರು ಹಾಗೂ ಉಪ್ಪು, ಬೆಲ್ಲ ಹಾಕಿ ಕುದಿಸಿ ಮುಚ್ಚಿ ಇಡಿ.
ತಣಿದ ನಂತರ ಮಿಕ್ಸಿಗೆ ಹಾಕಿ ತಿರುಗಿಸಿ ಬಟಾಟೆ ಪುಡಿಯೊಂದಿಗೆ ಸೇರಿಸಿ ಕೋಕಂ ಬಟಾಟೆ ಬಜ್ಜಿ ಅಂದು ಬಿಡಿ. ಒಗ್ಗರಣೆ ಕೊಟ್ಟು ಬಿಡಿ.
ಮೊಳಕೆ ಕಾಳು ಬೇಯಿಸಿಟ್ಟಿದ್ದು ಸ್ವಲ್ಪ ಮಿಕ್ಕಿದೆ, ಏನು ಮಾಡೋಣ?
ಒಂದು ಚಿಕ್ಕ ಬೀಟ್ ರೂಟ್. ತುಂಡು ಮಾಡಿ,
2 ಪುನರ್ಪುಳಿ ಹಣ್ಣಿನ ಒಣ ಸಿಪ್ಪೆ
ಚಿಕ್ಕ ತುಂಡು ಶುಂಠಿ
ಒಂದು ಹಸಿಮೆಣಸು
ನೀರು ಹಾಗೂ ಉಪ್ಪು ಹಾಕಿ ಬೇಯಿಸಿ.
ಬೇಯಿಸಿಟ್ಟ ಮೊಳಕೆ ಕಾಳು ಸ್ವಲ್ಪ ( ಬೇಳೆಕಾಳು ಯಾವುದೂ ಆದೀತು, ಹಲಸಿನ ಬೇಳೆಯೂ ಅಡ್ಡಿಯಿಲ್ಲ )
ತಣಿದ ನಂತರ ಮಿಕ್ಸಿಗೆ ಹಾಕಿ ತಿರುಗಿಸಿ, ಒಗ್ಗರಣೆ ಕೊಡಿ.
ಸಿಹಿ ಬೇಕಿದ್ರೆ ಸಕ್ಕರೆ ಅಥವಾ ಬೆಲ್ಲ ಹಾಕಿಕೊಳ್ಳಿ.
ಬೀಟ್ ರೂಟ್ ಗೊಜ್ಜು ಅಂತ ಹೆಸರಿಟ್ಟು ಅನ್ನ, ಚಪಾತಿಗಳೊಂದಿಗೆ ಸವಿಯಿರಿ. ಕೆಂಪು ಕೆಂಪಾದ ಈ ಗೊಜ್ಜು ಮಕ್ಕಳಿಗೂ ಇಷ್ಟವಾದೀತು.
ಒಂದು ಬದನೆ ಇದೆ, ಏನು ಮಾಡೋಣಾ?
ಹಿಂದೆ ಅಡುಗೆಮನೆಯಲ್ಲಿ ಕಟ್ಟಿಗೆಯ ಒಲೆ ಇದ್ದ ಕಾಲದಲ್ಲಿ ಬದನೆಯನ್ನು ಒಲೆಯ ಬಿಸಿ ಕೆಂಡದಲ್ಲಿ ಸುಟ್ಟು ಬದನೆ ಗೊಜ್ಜು ಮಾಡ್ತಿದ್ದರು. ಈಗ ಕುಕ್ಕರ್ ಒಳಗಿಟ್ಟು ಬೇಯಿಸಿ ತೆಗೆಯಿರಿ. ಮೈಕ್ರೋವೇವ್ ಕೂಡಾ ಆದೀತು. ಆರಿದ ನಂತರ ಸಿಪ್ಪೆ ತೆಗೆದು ಗಿವುಚಿ ಇಡಿ. ಉಪ್ಪು, ಹುಳಿ, ಬೆಲ್ಲಗಳ ದ್ರಾವಣ ಮಾಡಿಟ್ಟು ಬದನೆಗೆ ಬೆರೆಸಿ, ಬೆಳ್ಳುಳ್ಳಿಯ ಒಗ್ಗರಣೆ ಕೊಡಿ.
ಲಿಂಬೆಹಣ್ಣಿನ ಶರಬತ್ತು ಮಾಡಿ ಉಳಿದ ಲಿಂಬೆ ಸಿಪ್ಪೆ ಇದೆಯಲ್ಲ, ಇದನ್ನೂ ಅಡುಗೆಯಲ್ಲಿ ಉಪಯೋಗಿಸೋಣ.
ನಾಲ್ಕು ಪುನರ್ಪುಳಿ ಹಣ್ಣಿನ ಒಣಸಿಪ್ಪೆ ಹಾಗೂ ಲಿಂಬೆ ಕಡಿಯನ್ನು ಬೇಯಿಸಿ.
2 ಒಣಮೆಣಸು,
1 ಚಮಚ ಕಡ್ಲೇ ಬೇಳೆ
2 ಚಮಚ ಕೊತ್ತಂಬರಿ
2 ಚಮಚ ಎಳ್ಳು
ತುಸು ಎಣ್ಣೆಪಸೆಯಲ್ಲಿ ಹುರಿಯಿರಿ.
ಬೇಯಿಸಿಟ್ಟ ಸಿಪ್ಪೆಗಳೊಂದಿಗೆ ನುಣ್ಣಗೆ ಅರೆಯಿರಿ.
ರುಚಿಗೆ ಉಪ್ಪು, ಬೆಲ್ಲ ಕೂಡಿಸಿ ಅವಶ್ಯವಿದ್ದ ಹಾಗೆ ನೀರೆರೆದು ಕುದಿಸಿ. ಒಗ್ಗರಣೆ ಬೇಡ, ಒಂದೆರಡು ಚಮಚ ತುಪ್ಪ ಎರೆದು ಬಿಡಿ. ಈ ಗೊಜ್ಜು ಅಥವಾ ಸೂಪ್ ಊಟದೊಂದಿಗೆ ಕುಡಿಯಿರಿ, ಅನ್ನದೊಂದಿಗೆ ಸುರಿಯಿರಿ.
ನೆಲಬಸಳೆ ಸಾಸಿವೆ
ನೆಲಬಸಳೆ ಕುಡಿಗಳನ್ನು ಕೈಯಲ್ಲಿ ಹಿಡಿಸುವಷ್ಟು ಚಿವುಟಿ ತನ್ನಿ. ಹೂವರಳಿದ ಗಿಡದಿಂದ ಬೇಡ, ಅದು ಬೆಳೆದಿರುತ್ತದೆ. ಚಿಕ್ಕದಾಗಿ ಕತ್ತರಿಸಿ ತುಸು ಉಪ್ಪು ಹಾಕಿ ಬೇಯಿಸಿ. ಮೈಕ್ರೋವೇವ್ ಉಪಯೋಗಿಸುವುದಾದರೆ ನೀರೆರೆಯುವುದೂ ಬೇಡ. ಒಂದು ಹಿಡಿ ಕಾಯಿತುರಿಗೆ ತುಸು ಸಾಸಿವೆ, ಒಂದೆರಡು ಗಾಂಧಾರಿ ಮೆಣಸು ಸೇರಿಸಿ ಅರೆಯಿರಿ. ಅರೆಯುವಾಗ ನೀರು ಬೇಡ, ಮಜ್ಜಿಗೆ ಹಾಕಿಕೊಳ್ಳಿ. ಅರೆದ ಮಿಶ್ರಣವನ್ನು ಬೆಂದ ಸೊಪ್ಪು ತರಕಾರಿಗೆ ಕೂಡಿಸಿ, ಕುದಿಸುವುದೂ ಬೇಡ, ಸಿಹಿಗೆ ಬೆಲ್ಲ ಇರಲಿ, ಒಗ್ಗರಣೆಯೇನೂ ಬೇಡ.
Posted via DraftCraft app
Saturday, 4 October 2014
ಮಜ್ಜಿಗೆಯಿರಬೇಕು ಮನೆಯೊಳಗೇ....
ಬೆಳಗಾಗುತ್ತಿದ್ದಂತೆ ಮೊಸರನ್ನು ಮಜ್ಜಿಗೆಯಾಗಿಸುವ ಕಾಯಕ ಆಯಿತೇ, ಒಂದು ಕಪ್ ಮಜ್ಜಿಗೆಯಲ್ಲಿ 3 ಚಮಚಾ ಮೆಂತ್ಯ ನೆನೆ ಹಾಕಿ ಇಟ್ಟುಕೊಳ್ಳಿ. ಮೆಂತ್ಯ ನೆನೆದಷ್ಟೂ ಉತ್ತಮ.
ಮದ್ಯಾಹ್ನ ಊಟವಾಯಿತೇ, 2 ಕಪ್ ಬೆಳ್ತಿಗೆ ಅಕ್ಕಿಯನ್ನು ನೀರು ಎರೆದಿಟ್ಟು ಬಿಡಿ.
ಮುಸ್ಸಂಜೆಯಾಯಿತೇ, ನೆನೆದ ಅಕ್ಕಿಯನ್ನು ಚೆನ್ನಾಗಿ ತೊಳೆಯಿರಿ.
ನೆನೆದ ಮೆಂತ್ಯವನ್ನು ಮಜ್ಜಿಗೆ ಸಹಿತವಾಗಿ ನುಣ್ಣಗೆ ಅರೆಯಿರಿ, ಬೇಕಿದ್ದರೆ ಸ್ವಲ್ಪ ಅಕ್ಕಿಯನ್ನೂ ಸೇರಿಸಿ ಅರೆಯಿರಿ.
ಮಿಕ್ಸೀಯಲ್ಲಿ ಅರೆಯಲು ಒಂದೇ ಬಾರಿ ಸಾಧ್ಯವಾಗುವುದಿಲ್ಲ, ಉಳಿದ ಅಕ್ಕಿಯನ್ನು ಇನ್ನೊಮ್ಮೆ ಅರೆದುಕೊಳ್ಳಿ, ಈವಾಗ ಒಂದು ಕಪ್ ನೆನೆದ ಅವಲಕ್ಕಿಯನ್ನೂ ಸೇರಿಸಿ ನುಣ್ಣಗಾಗಿಸಿ.
ಹಿಟ್ಟಿಗೆ ಉಪ್ಪು ಸೇರಿಸಿ ದೊಡ್ಡ ತಪಲೆಯಲ್ಲಿ ಮುಚ್ಚಿ 8 ಘಂಟೆಗಳ ಕಾಲ ಇರಿಸಿ.
ಮಾರನೇ ದಿನ ಹಿಟ್ಟು ಹುಳಿ ಬಂದಿರುತ್ತದೆ, ಒಂದು ಕಪ್ ಹಾಲು ಸೇರಿಸಿ, ಸೌಟಿನಲ್ಲಿ ಕಲಸಿ ದೋಸೆ ಎರೆಯಿರಿ
ಕಾಯಿ ಚಟ್ನಿಯೊಂದಿಗೆ ಸವಿಯಿರಿ.
ಉದ್ದು ಬೇಕಿದ್ದವರು ಸೇರಿಸಿಕೊಳ್ಳಬಹುದು, ಹೆಚ್ಚೇನೂ ಬೇಡ, ಒಂದು ಹಿಡಿ ಸಾಕು, ಮೆಂತ್ಯದೊಂದಿಗೆ ಅರೆಯಿರಿ. ಧಾನ್ಯಗಳು ನುಣ್ಣಗಾದ ನಂತರವೇ ಅಕ್ಕಿ ಅರೆಯುವುದು ಸರಿಯಾದ ವಿಧಾನ. ಎಲ್ಲವನ್ನೂ ಒಂದೇ ತಪಲೆಯಲ್ಲಿ ನೆನೆ ಹಾಕಿಟ್ಟು ಒಂದೇ ಬಾರಿ ಅರೆಯುವ ಯಂತ್ರದೊಳಗೆ ತುಂಬಿಸಬಾರದು.
" ನಾಳೆ ತಿಂಡಿಗೇನು ಮಾಡ್ತೀಯ "
" ಉದ್ದಿನ ದೋಸೆ ಆದೀತಲ್ಲ "
" ಇವತ್ತು ಉದ್ದು, ಮೆಂತೆ ಹಾಕಿದ್ದು ತಿಂದಾಯ್ತಲ್ಲ, ನಾಳೆಯೂ ಉದ್ದು ಹಾಕಿದ್ದು ಬೇಡ " ಗೌರತ್ತೆ ಅಂದಿದ್ದು.
" ಮತ್ತೇನು ಮಾಡ್ಲೀ "
" ನೋಡೂ ಇದು ಸುಲಭದ್ದು. ಉದ್ದು, ಮೆಂತೆ ಏನೂ ಬೇಡ, ಬರೇ ಅಕ್ಕಿ ಸಾಕು, ಮಜ್ಜಿಗೆ ಉಂಟಲ್ವ.."
" ಹ್ಞೂಂ ಇದೆ "
" ಈಗ ಮಾಡಿದ ಬೆಳ್ತಿಗೆ ಅನ್ನ ಇಲ್ವಾ, ಕುಚ್ಚುಲಕ್ಕಿ ಅನ್ನವೂ ಆದೀತು, ಅದನ್ನು ಎರಡು ಮುಷ್ಠಿ ತೆಗೆದಿಡು, ಅಕ್ಕಿ ನೆನೆ ಹಾಕಿಡು, 2 ಗ್ಲಾಸ್ ಅಕ್ಕಿ ಸಾಕು "
ಗೌರತ್ತೆ ಮುಂದುವರಿಸಿದರು, " ಅಕ್ಕಿ, ಮಜ್ಜಿಗೆ ಎರೆದು ಅರೆದಿಡೂದು, ಹಿಟ್ಟು ತೆಗೆಯುವ ಮೊದಲು ಅನ್ನ ಹಾಕಿ ಎರಡು ಸುತ್ತು ತಿರುಗಿಸಿ ತೆಗೆದಿಡೂದು, ಉಪ್ಪು ಹಾಕಿಟ್ಟಿರು. ಅಗಲ ಬಾಯಿಯ ತಪಲೆ ಆಗ್ಬೇಕು, ಇಲ್ಲಾಂದ್ರೆ ಹುಳಿ ಬಂದ ಹಿಟ್ಟು ಹೊರ ಚೆಲ್ಲೀತು "
" ನಾಳೆ ಬೆಳಗ್ಗೆ ದೋಸೆ ಎರೆಯುವ ಮೊದಲು ಒಂದ್ಲೋಟ ಹಾಲು ಎರೆದು ಸೌಟು ಹಾಕಿ ತಿರುಗಿಸಿ ದೋಸೆ ಎರೆದ್ರಾಯ್ತು, ಕವುಚಿ ಹಾಕೂದೇನೂ ಬೇಡ "
" ಸೌಟಿನಲ್ಲಿ ಹರಡೂದೂ ಬೇಡಾ, ಏನೂ ಬೇಡ... ಹಾಗೇ ಸುಮ್ಮನೆ ಎರೆದದ್ದು ದಪ್ಪ ಬ್ರೆಡ್ ಥರ ಆಗುತ್ತೆ ನೋಡು "
<><><><><><>
ಗೌರತ್ತೆ ಹೇಳಿದಂತಹ ಮಜ್ಜಿಗೆದೋಸೆ ತಿಂದಾಯ್ತಲ್ಲ, ಅಡುಗೆಮನೆಯ ಪ್ರಯೋಗಶಾಲೆಯಲ್ಲಿ ಈ ಮಜ್ಜಿಗೆದೋಸೆ ಇನ್ನೂಂದು ರೂಪಾಂತರ ಪಡೆಯಿತು. ಅದೇನಾಯ್ತೂಂದ್ರೆ ನಾವಿಬ್ಬರೇ ಮನೆಯಲ್ಲಿದ್ದುದರಿಂದ ಇಬ್ಬರಿಗೆ ಬೇಕಾದಷ್ಟೇ ಅಕ್ಕಿ ನೆನೆ ಹಾಕಿಟ್ಟು ಮಲಗುವ ಮುನ್ನ ಮಜ್ಜಿಗೆಯೊಂದಿಗೆ ಅರೆದಿಡೋಣ ಅಂತ ಇದ್ದ ಹಾಗೇ ಮಗಳು ಬಂದಳು.
ಇನ್ನೀಗ ದೋಸೆ ಹಿಟ್ಟು ಎರಡು ಸೌಟು ಜಾಸ್ತಿಯಾಗಬೇಕಿದೆ, ಏನು ಮಾಡೋಣ ? ನೆರವಿಗೆ ಬಂದಿದ್ದು ರಾಗಿ ಹುಡಿ.
ಸಾಮಗ್ರಿಗಳ ಅಳತೆ:
2 ಕಪ್ ಬೆಳ್ತಿಗೆ ಅಕ್ಕಿ
2 ಸೌಟು ಬೆಳ್ತಿಗೆ ಅನ್ನ
1 ಕಪ್ ರಾಗಿ ಹುಡಿ
1 ಕಪ್ ಮೊಸರು ಅಥವಾ ದಪ್ಪ ಮಜ್ಜಿಗೆ
1 ಕಪ್ ಹಾಲು
ರುಚಿಗೆ ಉಪ್ಪು.
ಅಂದ್ಕೊಂಡೇ ಇರಲಿಲ್ಲ ಕಣ್ರೀ, ಇಷ್ಟು ಚೆನ್ನಾಗಿ ದೋಸೆ ಬರುತ್ತೇಂತ.... ಮಗಳ ಶಿಫಾರಸ್ಸೂ ಸಿಕ್ತು.
ಟೀವಿಯಲ್ಲಿ ಅಡುಗೆ ಕಾರ್ಯಕ್ರಮಗಳನ್ನು ನೋಡ್ತಾ ಇದ್ದಾಗ ಕಲಿತ ತಿಂಡಿ ಇದು. ಚಪಾತಿ, ಪೂರಿ ಮಾತ್ರ ಲಟ್ಟಿಸಿ ಗೊತ್ತಿದ್ದ ನನಗೆ ನಾನ್ ಎಂಬ ಹೊಸರುಚಿ ಮಾಡಬೇಕೆಂಬ ಉಮೇದು ಹುಟ್ಟಿತು. ಮಗಳಿಗೆ ಮೈದಾ ಆಗದು, ದೋಸೆಗೆ ತುಸು ಸೇರಿಸಿದ್ರೂ ಗೊತ್ತಾಗಿ ಬಿಡ್ತದೆ. " ಮೈದಾ ಯಾಕೆ ಹಾಕಿದ್ದು ?" ಎಂದು ಸಿಡಿಸಿಡಿ ಮಾಡುವವಳು, ಇದನ್ನು ತಿಂದಾಳೇ....
" ಹೇಳದಿದ್ದರಾಯಿತು, ಗೊತ್ತಾದ ಮೇಲಲ್ವ...."
ಸರಿ, ಯೀಸ್ಟ್ ಬೇಕಾಗಿತ್ತು. ಅದನ್ನೂ ತರಿಸಿ 7-8 ಯೀಸ್ಟ್ ಹರಳುಗಳನ್ನು ಹಾಲಿನಲ್ಲಿ ಸಕ್ಕರೆಯೊಂದಿಗೆ ನೆನೆ ಹಾಕಿಟ್ಟು, 2 ಕಪ್ ಮೈದಾ ಹಾಕಿ ಪೂರಿ ಹಿಟ್ಟಿನಂತೆ ಕಲಸಿ, ಮಾರನೇ ದಿನ ಲಟ್ಟಿಸಿ ಚಪಾತಿ ಥರ ಬೇಯಿಸಿ ತಿಂದಾಯಿತು. ಇದನ್ನೇ ಎಣ್ಣೆಯಲ್ಲಿ ಕರಿದರೆ ಬಟೂರಾ ಎಂಬ ಇನ್ನೊಂದು ತಿಂಡಿಯೂ ಲಭ್ಯ. ನಾನು ಎಣ್ಣೆಯಲ್ಲಿ ಕರಿದಿಲ್ಲ.
ಯೀಸ್ಟ್ ಅನ್ನು ನಿಯಮಿತವಾಗಿ ತಿಂಡಿತಿನಿಸುಗಳಲ್ಲಿ ಬಳಸುತ್ತಿದ್ದರೆ ಆದೀತು, ಉಪಯೋಗಿಸದೇ ಇಟ್ಟಲ್ಲಿ ಬೂಸ್ಟು ಹಿಡಿದು ಹಾಳಾಗುವಂಥದು. ಸುಮ್ಮಸುಮ್ಮನೇ ತಿಂಡಿಗಳಿಗೆ ಯಾಕಾದರೂ ಯೀಸ್ಟ್ ಹಾಕೋಣ ?
ಯೀಸ್ಟ್ ಹಾಕದೇ ನಾನ್ ಮಾಡೋಣ.
1 ಕಪ್ ಮೊಸರು ಅಥವಾ ದಪ್ಪ ಮಜ್ಜಿಗೆ, ಹುಳಿ ಇದ್ದರೆ ಅರ್ಧ ಕಪ್ ಹಾಲು ಸೇರಿಸಿ.
ರುಚಿಗೆ ಸಕ್ಕರೆ ಹಾಗೂ ಉಪ್ಪು.
ಲಿಂಬೆ ಗಾತ್ರದ ಬೆಣ್ಣೆ, ತುಪ್ಪವೂ ಆದೀತು, ಯಾವುದೂ ಇಲ್ಲವೇ, ಅಡುಗೆಗೆ ಬಳಸುವ ಎಣ್ಣೆಯನ್ನೇ ಅರ್ಧ ಸೌಟು ಎರೆದುಕೊಳ್ಳಿ.
3 ಕಪ್ ಮೈದಾದೊಂದಿಗೆ ಮೇಲಿನ ಸಾಮಗ್ರಿಗಳನ್ನು ಕೂಡಿಸಿ ಮುದ್ದೆಕಟ್ಟಿ ಮುಚ್ಚಿ ಇಟ್ಕೊಳ್ಳಿ.
ರಾತ್ರಿ ಕಲಸಿದ್ದೀರಾ, ಮುಂಜಾನೆಗೊಂದು ತಿಂಡಿ ಮಾಡಿಕೊಳ್ಳಬಹುದು.
ಬೆಳಗ್ಗೆ ಹಿಟ್ಟು ಕಲಸಿದ್ದೀರಾ, ಸಂಜೆಗೊಂದು ತಿನಿಸು ಬಂದಿತು.
ಬೇಳೆಕಾಳುಗಳ ಕೂಟು ಅಥವಾ ರಸಂ ಜೊತೆ ಸವಿಯಿರಿ.
ಗಟ್ಟಿ ಮೊಸರು, ಸಕ್ಕರೆ ಇದ್ದರೆ ಇನ್ನೂ ಚೆನ್ನ.
ಮಜ್ಜಿಗೆಯಿಂದ ಇಡ್ಲಿ ಮಾಡೋಣ.
2 ಕಪ್ ಸಜ್ಜಿಗೆ
1 ಕಪ್ ದಪ್ಪ ಮಜ್ಜಿಗೆ
ರುಚಿಗೆ ಉಪ್ಪು
ಒಗ್ಗರಣೆ ಸಾಹಿತ್ಯ: ಎಣ್ಣೆ, ಸಾಸಿವೆ, ಉದ್ದಿನೇಳೆ, ಕಡ್ಲೇಬೇಳೆ, ನೆಲಕಡಲೆ, ಗೋಡಂಬಿ, ದ್ರಾಕ್ಷಿ, ಒಣಮೆಣಸು, ಕರಿಬೇವು. ಇದೆಲ್ಲವನ್ನೂ ಹಾಕಬೇಕಾಗಿಲ್ಲ, ಅವಶ್ಯವಿರುವ 2-3 ಐಟಂ ಸಾಕು.
ಚಿರೋಟಿ ರವೆಯನ್ನು ಹುರಿದುಕೊಳ್ಳಬೇಕಾದ ಅಗತ್ಯವಿದೆ. ಮೈಕ್ರೋವೇವ್ ಇದ್ದವರು ಅದ್ರಲ್ಲೇ ಹುರಿದುಕೊಳ್ಳಿ.
ದಪ್ಪ ಸಜ್ಜಿಗೆಯನ್ನು ಹುರಿಯುವ ಅವಶ್ಯಕತೆಯಿಲ್ಲ.
ಮಜ್ಜಿಗೆಯನ್ನು ಒಂದು ತಪಲೆಗೆರೆದು ಉಪ್ಪು ಕೂಡಿಸಿ.
ಒಗ್ಗರಣೆ ಮಾಡಿ ಎರೆಯಿರಿ.
ಸಜ್ಜಿಗೆಯನ್ನೂ ಕೂಡಿಸಿ ಕಲಸಿಕೊಳ್ಳಿ.
ನೀರು ಕೂಡಿಸಿ ಇಡ್ಲಿ ಹಿಟ್ಟಿನ ಹದಕ್ಕೆ ತನ್ನಿ.
ಚಿಟಿಕೆ ಅಡುಗೆ ಸೋಡಾ ಹಾಕಬಹುದು, ಹಾಕದಿದ್ದರೂ ನಡೆಯುತ್ತದೆ.
ಇದು ದಿಢೀರ್ ಇಡ್ಲಿ, ನಾಳೆಯ ತನಕ ಕಾಯಬೇಕಾಗಿಲ್ಲ.
ಇಡ್ಲಿ ಬೇಯಿಸುವ ಪಾತ್ರೆಗೆ ನೀರೆರೆದು ಕುದಿಯಲಾರಂಭಿಸಿದ ನಂತರವೇ ತಟ್ಟೆಗಳಲ್ಲಿ ಹಿಟ್ಟು ತುಂಬಿಸಿ ಒಳಗಿಡಬೇಕು. ಸರಿಯಾಗಿ ಮುಚ್ಚಿ ಒಂದೇ ಹದನಾದ ಉರಿಯಲ್ಲಿ 7-8 ನಿಮಿಷ ಬೆಂದರೆ ಸಾಕು, ಇಡ್ಲಿ ಆಯಿತು. ನೀರಾವಿ ಹೊರ ಹೋಗುತ್ತಾ ಇರಬೇಕು, ಉರಿಯನ್ನು ಕಮ್ಮಿ ಮಾಡಲೂ ಬಾರದು.
Posted via DraftCraft app
Saturday, 27 September 2014
ಕಹಿ ಹಾಗಲದ ಸಿಹಿ!
" ನೋಡೂ, ಹಾಗಲ ಬಳ್ಳಿ ಪೇರಳೆ ಮರಕ್ಕೆ ಹಬ್ಬಿ ಹೋಗಿದ್ದರಲ್ಲಿ ಈ ಹಾಗಲಕಾಯಿ ಸಿಕ್ಕಿತು "
" ಹೌದಾ, ಎಷ್ಟ್ ಸಿಕ್ತು ?"
" ಒಂದೇ ಕೊಯ್ದಿದ್ದು, ಹೂ, ಕಾಯಿ, ನಿಣೆ ಎಲ್ಲಾ ಇದೆ. ವಾರಕ್ಕೊಂದು ಕೊಯ್ಬಹುದು " ಅಂದರು ಗೌರತ್ತೆ.
" ಅಲ್ಲ, ಈ ಒಂದರಲ್ಲಿ ಏನಡುಗೆ ಆಗ್ತದೆ ?'
" ಮಾಡು ಏನೋ ಒಂದು... ನೀ ಎಕ್ಸ್ಪರ್ಟ್ ಅಲ್ವೇ..."
" ಹಹ... ಈ ಕಹಿಯನ್ನು ನಾವಿಬ್ರೇ ತಿನ್ಬೇಕಷ್ಟೆ..."
ಗೌರತ್ತೆಗೆ ಉಚಿತವಾಗಿ ಲಭಿಸಿದ ಹಾಗಲದಿಂದ ಮದ್ಯಾಹ್ನದೂಟಕ್ಕೆ ಹೀಗೊಂದು ವ್ಯಂಜನ ಸಿದ್ಧವಾಯಿತು. ಇದನ್ನು ಹಾಗಲ ಕೋಸಂಬರಿ ಅಂದರಾಯಿತು.
ಹಾಗಲದ ಒಳಗಿನ ಬೀಜಗಳನ್ನೆಲ್ಲ ತೆಗೆದು ಚಿಕ್ಕದಾಗಿ ಕತ್ತರಿಸಿ, ಒಂದು ಚಮಚ ಉಪ್ಪು ಬೆರೆಸಿ ಇಡಬೇಕು.
ಒಂದು ದೊಡ್ಡ ನೀರುಳ್ಳಿ ಚೂರು ಮಾಡಿ ಇಡಬೇಕು.
ಒಂದು ಕಪ್ ತೆಂಗಿನ ತುರಿ ಇರಲೇ ಬೇಕು.
ಅರ್ಧ ಘಂಟೆ ಬಿಟ್ಟು ಹಾಗಲಕಾಯಿ ಚೂರುಗಳನ್ನು ಅಂಗೈಯಲ್ಲಿ ಚೆನ್ನಾಗಿ ಹಿಂಡಬೇಕು. ಉಪ್ಪು ಬೆರೆಸಿದ ಹಾಗಲದಿಂದ ನೀರು ಇಳಿಯಬೇಕು. ಉಪ್ಪಿನೊಂದಿಗೆ ಕಹಿಯೂ ಹೋಯಿತೆಂದು ತಿಳಿಯಿರಿ. ಈಗ ಅಡುಗೆಗೆ ಸಿದ್ಧವಾದ ಹಾಗಲ ದೊರೆಯಿತು.
ಬಾಣಲೆಗೆ ತುಪ್ಪದ ಪಸೆ ಮಾಡಿಟ್ಟು ಒಲೆಯ ಮೇಲಿಡಿ. ಹಾಗಲ ಕಾಯಿಯನ್ನು ಗರಿ ಗರಿಯಾಗುವಷ್ಟು ಹೊತ್ತು ಒಲೆಯ ಮೇಲಿಟ್ಟಿರಿ. ಇದು ನಿಧಾನಗತಿಯಲ್ಲಿ ಮಾಡಬೇಕಾಗುವಂತಹ ಕೆಲಸ. ಕರಟಿ ಹೋಗಲೂ ಬಾರದು. ಚಿಕ್ಕ ಉರಿಯಲ್ಲಿಟ್ಟು ಆಗಾಗ ಸೌಟಾಡಿಸುತ್ತಿರಿ.
ಊಟಕ್ಕೆ ಎಲ್ಲರೂ ಕುಳಿತರೇ, ಒಂದು ಬಟ್ಟಲಿಗೆ ಗರಿ ಗರಿ ಹಾಗಲ, ನೀರುಳ್ಳಿ, ತೆಂಗಿನ ತುರಿಗಳನ್ನು ಬೆರೆಸಿ, ಎಲ್ಲರ ಊಟದ ತಟ್ಟೆಗೆ ಬಡಿಸಿ...
" ಇನ್ನೂ ಸ್ವಲ್ಪ ಹಾಕು " ಒಕ್ಕೊರಲ ಕೋರಿಕೆ ಬಂದೇ ಬಂತು. ಗೌರತ್ತೆಯ ಮುಸಿನಗು. " ನಿಂಗೂ ಸ್ವಲ್ಪ ತೆಗೆದಿಟ್ಕೋ..."
ಹಾಗಲ ಪಲ್ಯ:
ಹಾಗಲವನ್ನು ಸಿದ್ಧಪಡಿಸಿದ್ದಾಯಿತೇ, ನೀರುಳ್ಳಿ, ಕಾಯಿತುರಿಗಳೂ ಬರಲಿ.
ಬಾಣಲೆಯಲ್ಲಿ ಒಗ್ಗರಣೆ ಸಿಡಿಯಿತೇ, ಬೇವಿನೆಸಳು ಬೀಳಲಿ.
ಹಾಗಲಕಾಯಿ ಹಾಕಿ ಬಾಡಿಸಿಕೊಳ್ಳಿ, ಚಿಕ್ಕ ಉರಿಯಲ್ಲಿ ಬೇಯಿಸಿ. ಉಪ್ಪು ಪುನಃ ಹಾಕದಿರಿ.
ನೀರುಳ್ಳಿ, ಕಾಯಿತುರಿಗಳಿಂದ ಅಲಂಕೃತವಾದ ಈ ಪಲ್ಯಕ್ಕೆ ಬೆಲ್ಲ ಹಾಕಲು ಮರೆಯದಿರಿ.
ಹಾಗಲ ಗೊಜ್ಜು:
ಮೇಲೆ ಹೇಳಿದ ಕ್ರಮದಲ್ಲೇ ಹಾಗಲ ಬೇಯಿಸಿ. ನೀರುಳ್ಳಿ ಹಾಕದೆಯೂ, ಹಾಕಿಯೂ ಮಾಡಬಹುದು.
ಹುಳಿ, ಬೆಲ್ಲಗಳ ದ್ರಾವಣ ಮಾಡಿಟ್ಕೊಂಡಿದೀರಾ, ಎರೆಯಿರಿ. ರುಚಿ ನೋಡಿ ಬೇಕಿದ್ದರೆ ಉಪ್ಪು ಹಾಕಿ.
ಹುಳಿಗೆ ಬದಲು ಟೊಮ್ಯಾಟೋ ಹಾಕಿದರೂ ಆದೀತು.
ಹಾಗಲ ಕಾಯಿ ಸಾಸಮೆ ಅಥವಾ ಸಾಸಿವೆ:
ಉಪ್ಪು ಬೆರೆಸಿ ಕಹಿ ತೆಗೆದ ಹಾಗಲವನ್ನು ಮೊದಲು ಹೇಳಿದ ಕ್ರಮದಲ್ಲೇ ಹುರಿಯಿರಿ. ಗರಿಗರಿಯಾಗಬೇಕೆಂದೇನೋ ಇಲ್ಲ. ಬೆಂದರಾಯಿತು. ಒಂದು ಕಪ್ ಕಾಯಿತುರಿಯನ್ನು ಸಾಸಿವೆ ಹಾಗೂ ಬೆಲ್ಲದೊಂದಿಗೆ ಅರೆಯಿರಿ. ಸಿಹಿ ಮಜ್ಜಿಗೆ ಕೂಡಿಸಿ. ಇದಕ್ಕೆ ಒಗ್ಗರಣೆ ಬೇಡ, ಕುದಿಸುವುದೂ ಬೇಡ.
ಷಡ್ರಸಗಳಲ್ಲಿ ಒಂದಾದ ಕಹಿಯೂ ನಮ್ಮ ಭೂರಿ ಭೋಜನದಲ್ಲಿ ಇರಲೇಬೇಕು. ಬಾಳೆಲೆಯ ಮೇಲೆ ಅದೇನೇ ಭಕ್ಷ್ಯಗಳಿದ್ದರೂ ಹಾಗಲದ ಮೆಣಸ್ಕಾಯಿ ಒಂದು ತುದಿಯಲ್ಲಿ ಬಡಿಸಿರುತ್ತಾರೆ. ಈ ಮೆಣಸ್ಕಾಯಿಯ ಸ್ವಾದವೇ ಬೇರೆ. ಊಟದ ತರುವಾಯ ಅಡುಗೆಯ ಮೇಲೊಂದಿಷ್ಟು ಕಮೆಂಟ್ಸ್ ಇದ್ದೇ ಇರುತ್ತದೆ.
" ಒಂದು ಮೆಣಸ್ಕಾಯಿ ಇತ್ತೂ... ನಾನು ಅದ್ರಲ್ಲೇ ಆಗಾಗ ಬಾಯಿ ಚಪ್ಪರಿಸಿದ್ದು ..."
" ಯಬ್ಬ, ಆ ಮೆಣಸ್ಕಾಯಿಯೋ, ಏನು ಅಡುಗೆಭಟರೋ..."
ಹೀಗೆ ಹೊಗಳಿಕೆ ಹಾಗೂ ತೆಗಳಿಕೆಗಳಿಗೆ ಇಂಬಾಗುವ ಹಾಗಲದ ಮೆಣಸ್ಕಾಯಿಯನ್ನು ನಾವೂ ಮಾಡಿಯೇ ಬಿಡೋಣ. ಒಂದು ಪುಟ್ಟ ಹಾಗಲಕಾಯಿ ಸಾಕು. ಕಹಿರಸವನ್ನು ತೆಗೆಯುವ ಮೊದಲ ಸಿದ್ಧತೆ ಮಾಡಿದ್ರಾ, ಒಂದು ಕಡಿ ತೆಂಗಿನ ತುರಿ ಆಯ್ತೇ, ಬೆಲ್ಲ ಡಬ್ಬದಲ್ಲಿ ಸಾಕಷ್ಟು ಇದೆಯಾ ನೋಡಿಕೊಳ್ಳಿ.
ಮಸಾಲೆಗೆ ಏನೇನಿರಬೇಕು?
3-4 ಒಣಮೆಣಸು
2 ಚಮಚ ಕೊತ್ತಂಬ್ರಿ
1 ಚಮಚ ಉದ್ದಿನಬೇಳೆ
3 ಚಮಚ ಎಳ್ಳು
ತುಸು ಎಣ್ಣೆಪಸೆಯಲ್ಲಿ ಹುರಿದಾಯಿತೇ, ತೆಂಗಿನ ತುರಿಯೊಂದಿಗೆ ಅರೆಯಿರಿ. ಮಸಾಲೆ ಅರೆಯುವಾಗ ಉಪ್ಪು, ಹುಳಿ ಹಾಕಿಯೇ ಅರೆದರೆ ಉತ್ತಮ.
ಹಾಗಲ ಬೇಯಿಸಿದ್ರಾ, ಬೆಲ್ಲ ಹಾಕಿದ್ರಾ, ಬೆಲ್ಲ ಕರಗಿತೇ, ಅರೆದ ಮಸಾಲೆ ಮಿಶ್ರಣ ಕೂಡಿಸಿ. ಅವಶ್ಯವಿದ್ದಷ್ಟೇ ನೀರು ಹಾಕಿ, ಸಾರಿನ ಹಾಗೆ ತೆಳ್ಳಗಾಗಬಾರದು, ಕುದಿಸಿ. ಬೇವಿನೆಸಳು ಹಾಕಿ ಒಗ್ಗರಣೆ ಕೊಡಿ.
ನೋಡುತ್ತಿದ್ದ ಹಾಗೇ ಹಾಗಲ ಬಳ್ಳಿ ತನ್ನ ಕೈಲಾದಷ್ಟು ಕಾಯಿಗಳನ್ನು ಕೊಟ್ಟು ಜೀವ ತೊರೆದು ಹೋಯಿತು. ಆದರೇನಂತೆ, ಎಲ್ಲರೂ ಹಾಗಲಪ್ರಿಯರಾಗಿದ್ದಾರಲ್ಲ, ಪೇಟೆಯಿಂದಲೇ ಹಾಗಲ ಬಂದಿತು. ಮನೆಯಂಗಳದಲ್ಲಿ ಸಿಗುತ್ತಿದ್ದ ಹಾಗಲ್ಲ, ನಮ್ಮೆಜಮಾನ್ರು ಒಂದು ಕಿಲೋ ಹಾಗಲಕಾಯಿ ತಂದ್ರು. ಚೀಲ ತುಂಬ ಬಂದ ಹಾಗಲಗಳನ್ನು ನೋಡಿ, " ಇದನ್ನೇನು ಮಾಡಲೀ..." ಅನ್ನುತ್ತಿದ್ದ ಹಾಗೆ ಗೌರತ್ತೆ ಐಡಿಯಾ ಹೇಳ್ಕೊಟ್ರು. " ಈಗ ಮಳೆ ಹೋಯ್ತಲ್ಲ, ಚೆನ್ನಾಗಿ ಬಿಸಿಲೂ ಇದೆ, ಬಾಳ್ಕ ಮಾಡಿ ಇಟ್ಕೊಳ್ಳೋಣ "
ಬಾಳ್ಕ ಅಂದ್ರೇನು ?
ಹಚ್ಚಿಟ್ಟ ತರಕಾರಿಗಳಿಗೆ ಉಪ್ಪು ಬೆರೆಸಿ, ಬಿಸಿಲಿನಲ್ಲಿ ಒಣಗಿಸಿಟ್ಟು, ಡಬ್ಬದಲ್ಲಿ ತುಂಬಿಸಿಟ್ಟು ಬೇಕಿದ್ದಾಗ ಅಡುಗೆಯಲ್ಲಿ ಉಪಯೋಗಿಸಲು ಸಿದ್ಧವಾಗಿ ದೊರೆಯುವ ಕಚ್ಛಾವಸ್ತು ಬಾಳ್ಕ. ಎಣ್ಣೆಯಲ್ಲಿ ಕರಿದೂ ತಿನ್ನಬಹುದು, ನೀರಿನಲ್ಲಿ ಹಾಕಿಟ್ಟು ತುಸು ಮೆತ್ತಗಾದ ಕೂಡಲೇ ಅಡುಗೆಗೆ ಸಿದ್ಧ ತರಕಾರಿಯೂ ದೊರೆಯಿತು. ಯಾವುದೇ ತರಕಾರಿಯನ್ನು ಹೀಗೆ ಒಣಗಿಸಿಟ್ಟುಕೊಳ್ಳಲ ಸಾಧ್ಯವಿದೆ.
ಹಾಗಲಕಾಯಿಗೆ ಕೇವಲ ಉಪ್ಪು ಬೆರೆಸಿದರೆ ಸಾಲದು, ಹೋಳುಗಳು ಮುಳುಗವಷ್ಟು ಮಜ್ಜಿಗೆ ಎರೆದು ಎಂಟು ಗಂಟೆ ಇರಲಿ.
ಮಜ್ಜಿಗೆ, ಉಪ್ಪು ಮಿಶ್ರಿತ ಹಾಗಲದ ಕಹಿಯನ್ನೆಲ್ಲ ಅಂಗೈಯಲ್ಲಿ ಚೆನ್ನಾಗಿ ಹಿಂಡಿ ತೆಗೆಯಿರಿ.
ಅಗಲವಾದ ತಟ್ಟೆಯಲ್ಲಿ ಹರಡಿ ಬಿಸಿಲಿನಲ್ಲಿ ಒಣಗಿಸಿ.
ಒಣಗಿದ ನಂತರ ಊಟದ ಹೊತ್ತಿಗೆ ಎಣ್ಣೆಯಲ್ಲಿ ಕರಿದು ತಿನ್ನಿರಿ.
ಹಾಗಲದ ಬಳ್ಳಿಯ ಎಳೆಯ ಕುಡಿಗಳಿಂದ ತಂಬುಳಿ ಮಾಡಲೂ ಸಾಧ್ಯವಿದೆ. ಕುಡಿಗಳನ್ನು ತುಪ್ಪದಲ್ಲಿ ಬಾಡಿಸಿ, ತುಸು ಜೀರಿಗೆ, ತೆಂಗಿನತುರಿಯೊಂದಿಗೆ ಅರೆದು ಮಜ್ಜಿಗೆ ಕೂಡಿಸಿ. ರುಚಿಗೆ ಉಪ್ಪು, ಸಿಹಿಗೆ ಬೆಲ್ಲವೂ ಇರಲಿ. ಹಾಗಲ ಬಳ್ಳಿಯಲ್ಲಿ ಮೊದಲು ಗಂಡು ಹೂಗಳು ಅರಳುತ್ತವೆ, ಈ ನಿರರ್ಥಕ ಹೂಗಳನ್ನೂ ತಂಬ್ಳಿ, ಸಲಾಡ್ ಗಳಿಗೆ ಬಳಸಬಹುದಾಗಿದೆ. ಅಂದ ಹಾಗೆ ಈ ಬಳ್ಳಿ ಸಸ್ಯ ಮೆಕ್ಸಿಕೋ ಇಲ್ಲವೇ ಆಫ್ರಿಕಾದಿಂದ ಭಾರತಕ್ಕೆ ಬಂದದ್ದಲ್ಲ, ನಮ್ಮ ದೇಶವೇ ಇದರ ತವರು ನೆಲೆ. Momordica charantia ಎಂದು ಸಸ್ಯಶಾಸ್ತ್ರಜ್ಞರು ಇದನ್ನು ಕರೆದಿದ್ದಾರೆ.
ಅತಿ ಕಡಿಮೆ ಕೆಲೊರಿ ಪ್ರಮಾಣ ಹಾಗಲಕಾಯಿಯಲ್ಲಿರುವುದಾದರೂ ಅತಿ ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ತರಕಾರಿ. ಬಿ ಜೀವಸತ್ವ, ಖನಿಜಾಂಶಗಳು ಹೇರಳವಾಗಿವೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರಿಗೆ ಇಲ್ಲಿದೆ ಸಿಹಿ ಸುದ್ದಿ. ನಿಯಮಿತವಾಗಿ ಹಾಗಲದ ರಸವನ್ನು ಜೇನು ಬೆರೆಸಿ ಕುಡಿಯಿರಿ.
ಹಾಗಲ ಸೊಪ್ಪಿನ ರಸ ಹಾಗೂ ನಿಂಬೆರಸ ಕೂಡಿಸಿ ಕುಡಿಯಿರಿ, ಚರ್ಮದ ತುರಿಕೆ, ಕಜ್ಜಿಗಳನ್ನು ತೊಲಗಿಸಿ.
ಮಧುಮೇಹಿಗಳಿಗೆ ಹಾಗಲದ ಕಹಿ ತಿಂದರೆ ಒಳ್ಳೆಯದು ಎಂದು ಸಾಮಾನ್ಯ ತಿಳುವಳಿಕೆಯಾಗಿದೆ. ರಕ್ತ ಮತ್ತು ಮೂತ್ರದಲ್ಲಿನ ಸಕ್ಕರೆಯ ಪ್ರಮಾಣ ಇಳಿಕೆಯಾಗುವುದೇನೋ ಹೌದೆಂದು ಪ್ರಯೋಗಗಳು ಧೃಢ ಪಡಿಸಿವೆ. ನೆನಪಿರಲಿ, ಇದು ಇನ್ಸುಲಿನ್ ಔಷಧಿಗೆ ಬದಲಿ ಪರಿಹಾರವಲ್ಲ. ಖಾಲಿ ಹೊಟ್ಟೆಯಲ್ಲಿ ತಿನ್ನದಿರಿ, ಒಳ್ಳೆಯದೆಂದು ಅತಿ ಸೇವನೆ ತರವಲ್ಲ. ಬಸುರಿ, ಬಾಣಂತಿಯರು ಹಾಗಲ ಖಾದ್ಯಗಳನ್ನು ಸೇವಿಸದಿರುವುದು ಉತ್ತಮ.
ಟಿಪ್ಪಣಿ: 21 /12 /2016, ಬರಹ ಮುಂದುವರಿದಿದೆ.
ಹಾಗಲಕಾಯಿ ಮಜ್ಜಿಗೆ ಹುಳಿ
ಈ ದಿನ ಯಾಕೋ ಏನೋ ಚೆನ್ನಪ್ಪ ಕೆಲಸಕ್ಕೆ ಬಂದಿಲ್ಲ, ಮಧ್ಯಾಹ್ನದೂಟಕ್ಕೆ ನಾವಿಬ್ಬರೇ, ಅತಿ ಸರಳವಾದ ಒಂದು ಮೇಲಾರ ಹಾಗೂ ಟೊಮ್ಯಾಟೋ ಸಾರು ಸಾಕು.
" ಮೇಲಾರ ಅಂದ್ರೇನೂ..."
" ಮಜ್ಜಿಗೆಹುಳಿ ಅಂತೀವಲ್ಲ, ಅದೇ ನಮ್ಮೂರಿನ ಆಡುಭಾಷೆಯಲ್ಲಿ ಮೇಲಾರ. ಬಹುಶಃ ಮೇಲೋಗರ ಎಂಬ ಪದವೇ ಮೇಲಾರದ ಹುಟ್ಟು.
ಅಡುಗೆಮನೆಯ ತರಕಾರಿ ಸಂಪತ್ತು ಏನಿದೆ? ಹಾಗಲಕಾಯಿ ಇದ್ದಿತ್ತು. ಆದೀತು, ಹೇಗೂ ಚೆನ್ನಪ್ಪನಿಲ್ಲ, ಖಾರದ ಕೂಟು ಆಗ್ಬೇಕಿಲ್ಲ.
ಒಂದು ಹಾಗಲಕಾಯಿ ಸಾಕು. ವೃತ್ತಾಕಾರದಲ್ಲಿ ಹಾಗಲದ ಹೋಳುಗಳನ್ನು ಮಾಡಿಟ್ಟಿರಿ. ಬೀಜಗಳನ್ನು ತೆಗೆಯುತ್ತಾ ಕತ್ತರಿಸಿಕೊಳ್ಳಿ.
ಒಂದು ಲೋಟ ನೀರು ಹಾಗೂ ಉಪ್ಪು ಹಾಕಿಟ್ಟು ಹಾಗಲ ಹೋಳುಗಳನ್ನು ಬೇಯಿಸಿ, ಹಾಗಲ ಬೇಗನೆ ಬೇಯುವ ವಸ್ತು, ಕುಕರ್ ಬೇಡ. ಬೆಂದಿತೇ, ನೀರು ಬಸಿಯಿರಿ, ಹಾಗಲದ ಕಹಿ ನೀರು ಹೋಯಿತೆಂದು ತಿಳಿಯಿರಿ.
ಒಂದು ಕಡಿ ತೆಂಗಿನ ತುರಿ, ಹಸಿ ತೆಂಗಿನಕಾಯಿ ಉತ್ತಮ.
2 ಹಸಿಮೆಣಸು.
ಒಂದು ಲೋಟ ದಪ್ಪ ಮಜ್ಜಿಗೆ.
ಮಜ್ಜಿಗೆಯೊಂದಿಗೆ ತೆಂಗಿನಕಾಯಿ, ಹಸಿಮೆಣಸು ಅರೆಯಿರಿ. ಮಜ್ಜಿಗೆಹುಳಿಯೆಂಬ ವ್ಯಂಜನ ಸಾರಿನಂತೆ ತೆಳ್ಳಗಾಗಕೂಡದು. ಆದುದರಿಂದಲೇ ತೆಂಗಿನಕಾಯಿ ಅರೆಯುವಾಗ ನೀರಿನ ಬದಲು ಮಜ್ಜಿಗೆ ಎರೆದರೆ ಉತ್ತಮ. ಈಗ ಯಂತ್ರಗಳ ಯುಗ ಅಲ್ವೇ, ಹಾಗೇ ಸುಮ್ಮನೆ ತೆಂಗಿನಕಾಯಿ ಅರೆದರೆ ನಮ್ಮ ಮಿಕ್ಸಿ ಬೆಣ್ಣೆಯಂತೆ ಅರೆದು ಕೊಡುವುದೂ ಇಲ್ಲ.
ಅರೆದ ಅರಪ್ಪನ್ನು ಹಾಗಲದ ಹೋಳುಗಳಿಗೆ ಕೂಡಿರಿ.
ರುಚಿಗೆ ಉಪ್ಪು, ಸಿಹಿಗೆ ತಕ್ಕಷ್ಟು ಬೆಲ್ಲ ಹಾಕಿರಿ.
ಸೌಟಿನಲ್ಲಿ ಕಲಕಿ, ನೀರು ಸಾಲದಿದ್ದರೆ ಅರ್ಧ ಲೋಟ ನೀರು ಎರೆಯಿರಿ.
ಮಂದ ಉರಿಯಲ್ಲಿ ಕುದಿಸಿ, ಹಾಲು ಕುದಿಸುವಾಗ ಹೇಗೆ ಕೆನೆ ಮೇಲೆದ್ದು ಬರುವುದೋ, ಅದೇ ಥರ ತೆಂಗು, ಮಜ್ಜಿಗೆಗಳ ಮಿಶ್ರಣ ಮೇಲೆದ್ದು ಬರುವಾಗ ಉರಿ ನಂದಿಸಿ.
ಕರಿಬೇವು, ಒಣಮೆಣಸು, ಸಾಸಿವೆ ಕೂಡಿದ ಒಗ್ಗರಣೆ ಬೀಳುವಲ್ಲಿಗೆ ಹಾಗಲಕಾಯಿ ಮಜ್ಜಿಗೆ ಹುಳಿ ಸಿದ್ಧವಾಗಿದೆ.
ಸೂಚನೆ: ಸೌತೆ, ತೊಂಡೆ, ಕುಂಬಳದಂತಹ ತರಕಾರಿಗಳು ಮಜ್ಜಿಗೆಹುಳಿಯೆಂಬ ಪದಾರ್ಥ ತಯಾರಿಯಲ್ಲಿ ಹೆಸರು ಪಡೆದವುಗಳು.
Saturday, 20 September 2014
ಮೊದಲ ಹನಿ ಮಳೆ, ದೊರೆತ ಹೊಸ ಬೆಳೆ
" ಎಲ್ಲಿಂದಲೋ ಗಾಳಿಗೆ ಹಾರಿ ಬಂದ ಬಿತ್ತು ಬಿದ್ದು ಇಲ್ಲೊಂದು ಹರಿವೆ ಸಸಿ ಆಗಿದೆ ನೋಡಿದ್ದೀಯಾ "
" ಇಲ್ಲವಲ್ಲ.." ಅನ್ನುತ್ತಾ ಗೌರತ್ತೆಯ ಕರೆಗೆ ಓಗೊಟ್ಟು ನಾನೂ ಕಣ್ಣು ಹಾಯಿಸದಿದ್ದರಾದೀತೇ, ಹಸಿರು ಬಣ್ಣದ ಹರಿವೇ ಗಿಡ ಒಂಟಿಯಾಗಿ ನಿಂತಿತ್ತು.
" ಇದು ಒಂದು ಗಿಡ ಸಾಕು, ಎಷ್ಟು ಬೇಕಾದ್ರೂ ಹರಿವೆ ಕೊಯ್ಯಬಹುದು "
" ಮುಂದಿನ ವರ್ಷಕ್ಕಲ್ಲವೇ, ಆಗಿನ ಕಥೆ ಹೇಗೋ "
" ಈ ವರ್ಷದ ಕಥೆ ನಾನು ಹೇಳಿದ್ದು, ಇದು ಸ್ವಲ್ಪ ದೊಡ್ಡದಾಗಲಿ, ದಂಟು ಕತ್ತರಿಸಿ ಸಾಸಮೆ ಮಾಡು, ಕತ್ತರಿಸಿದ ಗಂಟು ಚಿಗುರ್ತದೆ ಗೊತ್ತಾ.. ಚಿಗುರಿದ ಹಾಗೇ ತೆಗೆದು ಅಡಿಗೆ ಮಾಡಿದ್ರಾಯ್ತು "
ವರ್ಷಗಳ ಹಿಂದೆ ನನ್ನ ಹಾಗೂ ಗೌರತ್ತೆ ನಡುವಿನ ಸಂಭಾಷಣೆ ಇದು.
ಆ ಒಂದು ಗಿಡದಲ್ಲಿ ನಾನೇನೂ ಬೀಜಗಳನ್ನು ಆರಿಸಿ ಒಣಗಿಸಿ ತೆಗೆದಿಟ್ಟುಕೊಳ್ಳುವ ಗೋಜಿಗೇ ಹೋಗಿರಲಿಲ್ಲ. ಎಲ್ಲಿಯೋ ತೆಗೆದಿಡೂದು, ಮುಂದಿನ ಮಳೆಗಾಲದ ವಿರಾಮದ ವೇಳೆಯಲ್ಲಿ ತೆಗೆದಿರಿಸಿದ್ದೆಲ್ಲಿ ಎಂದು ನೆನಪಾಗದಿರುವುದು, ಒಂದು ವೇಳೆ ಸಿಕ್ಕರೂ ಇರುವೆಗಳು ದ್ವಂಸ ಮಾಡಿಟ್ಟ ಖಾಲಿ ಕಟ್ಟು, ಹೀಗೆಲ್ಲ ಕಿರಿಕಿರಿಯೇ ಬೇಡವೆಂದು ಹರಿವೇ ಗಿಡವನ್ನು ಅದರ ಪಾಡಿಗಿರಲಿ ಅಂತಿದ್ರೆ.... ಮಳೆಗಾಲ ಆರಂಭ ಆಗ್ಬೇಕಾದ್ರೇ " ಮೊದಲ ಹನಿ ಮಳೆ, ದೊರೆತ ಹೊಸ ಬೆಳೆ " ಅನ್ನೋ ಹಾಗಾಯ್ತು.
" ಆಯ್ತೂ, ಹರಿವೆ ಕೊಯ್ದಿದ್ದೀರಾ... ಏನಡಿಗೆ ಇವತ್ತು ?"
ಹರಿವೆ ದಂಟಿನ ಕೂಟು ಮಾಡೋಣ, ಸೊಪ್ಪು ಪಲ್ಯಕ್ಕಿರಲಿ.
" ಕೂಟು ಹೇಗೇ ಮಾಡೂದು ?"
ದಂಟುಗಳನ್ನು ಕತ್ತರಿಸಿ ಇಟ್ಕೊಳ್ಳಿ.
ಹಲಸಿನ ಬೇಳೆಗಳೂ ಇರಲಿ. ಜಜ್ಜಿಕೊಂಡರೆ ಉತ್ತಮ.
ಉಪ್ಪು ಕೂಡಿಸಿ ಬೇಯಿಸಿ.
ತೆಂಗಿನ ತುರಿ
2-3 ಒಣಮಣಸು, ಹುರಿದುಕೊಳ್ಳಿ, ಕಾಯಿತುರಿಯೊಂದಿಗೆ ಅರೆಯಿರಿ. ಅರೆಯುವಾಗ ಚಿಕ್ಕ ನೆಲ್ಲಿ ಗಾತ್ರದ ಹುಳಿ ಕೂಡಿಸಿಕೊಳ್ಳಿ. ಕೊನೆಯಲ್ಲಿ ಹುರಿದ 2 ಚಮಚ ಕೊತ್ತಂಬ್ರಿ, ಚಿಕ್ಕ ಚಮಚ ಮೆಂತೆ ಕೂಡಿಸಿ ಇನ್ನೆರಡು ಸುತ್ತು ತಿರುಗಿಸಿ ತೆಗೆಯಿರಿ.
ಬೆಂದ ತರಕಾರಿಗೆ ಅರೆದ ಮಸಾಲೆ ಹಾಗೂ ಅವಶ್ಯವಿದ್ದ ಹಾಗೆ ನೀರು ಎರೆದು, ಉಪ್ಪು ಕೂಡಿಸಿ, ಕುದಿಸಿ ಒಗ್ಗರಣೆ ಕೊಟ್ಟು ಬಿಡಿ.
ಈ ಪಾಕ ವಿಧಾನ ಜಯಾ ಶೆಣೈ ಬರೆದಿರುವ ' ಸುಲಭ ಅಡುಗೆ ' ಎಂಬ ಪಾಕ ಪುಸ್ತಕದಲ್ಲಿಯೂ ಇದೆ. ಅವರು ಹರಿವೆ ದಂಟಿನ ಸಗ್ಳೆ ಎಂದು ಹೆಸರಿಸಿದ್ದಾರೆ.
ಸೊಪ್ಪಿನ ಪಲ್ಯ :
ಸೊಪ್ಪುಗಳು ಶೀಘ್ರವಾಗಿ ಬೇಯುವಂತಹವು. ಮೈಕ್ರೊವೇವ್ ಅವೆನ್ ಇದ್ದಲ್ಲಿ ಹಚ್ಚಿಟ್ಟುಕೊಂಡ ಸೊಪ್ಪುಗಳಿಗೆ ಒಗ್ಗರಣೆ, ಕಾಯಿತುರಿ, ತುಸು ಉಪ್ಪು, ಚಿಟಿಕೆ ಅರಸಿಣ ಬೆರೆಸಿ ಒಳಗಿಟ್ಟು ತೆಗೆದರಾಯಿತು. ಸೊಪ್ಪು ತಾಜಾತನವನ್ನು ಕಳೆದುಕೊಳ್ಳುವುದಿಲ್ಲ, ನೀರು ಹಾಕೂದೂ ಬೇಡ. ಮೈಕ್ರೊವೇವ್ ಅವೆನ್ ಇಲ್ಲದಿದ್ದವರು ಮಾಮೂಲಿಯಾಗಿ ಮಾಡಿ ಬಿಡಿ. ತೋರನ್ ( തോരാൻ ) ಎಂಬ ಹೆಸರಿನಲ್ಲಿ ಈ ಪಲ್ಯ ಕೇರಳದ ಸಾಂಪ್ರದಾಯಿಕ ಖಾದ್ಯಗಳಲ್ಲೊಂದಾಗಿದೆ. ' ಓಣಂ ಸದ್ಯ ' (ಓಣಂ ಹಬ್ಬದೂಟ ) ದಲ್ಲಿ ಇಂತಹ ಪಲ್ಯ ಬಾಳೆಯ ಮೇಲೆ ಇರಲೇಬೇಕು.
ಮಜ್ಜಿಗೆ ಹುಳಿ:
ಕೋಮಲವಾದ ದಂಟುಗಳನ್ನು, ಎಲೆಗಳನ್ನು ಉಪ್ಪು ಹಾಕಿ ಬೇಯಿಸಿ.
ಒಂದು ಹಿಡಿ ತೊಗರಿಬೇಳೆಯನ್ನೂ ಬೇಯಿಸಿಡಿ.
ಒಂದು ಕಡಿ ತೆಂಗಿನ ತುರಿಯನ್ನು ಹಸಿಮೆಣಸಿನೊಂದಿಗೆ ನುಣ್ಣಗೆ ಅರೆಯಿರಿ.
ಬೆಂದ ಬೇಳೆ ಹಾಗೂ ಹರಿವೆಯನ್ನು ಒಲೆಯ ಮೇಲೆ ಇರಿಸಿ ಒಂದು ದೊಡ್ಡ ಸೌಟು ಸಿಹಿ ಮಜ್ಜಿಗೆ ಎರೆದು ಬಿಡಿ.
ಅರೆದಿಟ್ಟ ತೆಂಗಿನ ಕಾಯಿ ಕೂಡಿಸಿ. ಸಿಹಿ ಬೇಕಿದ್ದರೆ ಚಿಕ್ಕ ತುಂಡು ಬೆಲ್ಲ ಹಾಕಬಹುದು. ಕುದಿಸಿ, ಒಗ್ಗರಣೆ ಕೊಡಿ.
ಪಚ್ಚೆ ಹರಿವೆ, green amaranth, ಸಸ್ಯಶಾಸ್ತ್ರೀಯವಾಗಿ Amaranthus viridis ಎಂದು ಕರೆಯಲ್ಪಡುವ ಈ ಸೊಪ್ಪು ತರಕಾರಿ Amaranthaceae ಕುಟುಂಬವಾಸಿ. ಪ್ರಾಚೀನ ಕಾಲದಿಂದಲೇ ಇದು ದಕ್ಷಿಣ ಭಾರತೀಯರ ಖಾದ್ಯ ತರಕಾರಿಗಳಲ್ಲಿ ಒಂದಾಗಿದೆ. ಆಯುರ್ವೇದವೂ ಈ ಪಚ್ಚೆ ಹರಿವೆಯನ್ನು ಔಷಧೀಯ ಸಸ್ಯವಾಗಿ ಸ್ವೀಕರಿಸಿದೆ, ಸಂಸ್ಕೃತದಲ್ಲಿ ತಣ್ಡುಲೀಯ ಎಂಬ ನಾಮಕರಣವೂ ಇದಕ್ಕೆ ಇದೆ. ಕೇರಳೀಯರು ಕುಪ್ಪಚ್ಚೀರ (കുപ്പച്ചീര) ಅಂದಿದ್ದಾರೆ. ಪಚ್ಚೆ ಹರಿವೆಯು ಉತ್ತಮ ಪೋಷಕಾಂಶಗಳಿಂದ ಕೂಡಿದ ಸೊಪ್ಪು ತರಕಾರಿ ಎಂಬುದಕ್ಕೆ ಅನುಮಾನಕ್ಕೆಡೆಯಿಲ್ಲ. ವಿಟಮಿನ್ ಮಾತ್ರೆಗಳನ್ನು ದೂರ ತಳ್ಳಿ, ಅಡುಗೆಯಲ್ಲಿ ಸೊಪ್ಪು ತರಕಾರಿಗಳನ್ನು ಧಾರಾಳವಾಗಿ ಬಳಸಿರಿ, ವಿಟಮಿನ್ ಸಮೃದ್ಧವಾಗಿರುವ, ಖನಿಜಾಂಶಗಳು ತುಂಬಿರುವ ತಾಜಾ ಸೊಪ್ಪುಗಳ ಬಳಕೆಯಿಂದ ಆರೋಗ್ಯವನ್ನೂ ಉಳಿಸಿಕೊಳ್ಳಿ,
ಬಣ್ಣಬಣ್ಣಗಳಲ್ಲಿ ಕಂಗೊಳಿಸುವ ಹರಿವೆಯಲ್ಲಿ ಜಾತಿಗಳು ಹೇರಳವಾಗಿವೆ. ಗದ್ದೆಯಲ್ಲಿ ತರಕಾರಿ ವ್ಯವಸಾಯ ಮಾಡುವಾಗ ಬಣ್ಣದ ಹರಿವೆಗಳನ್ನೂ ನೆಟ್ಟುಕೊಳ್ಳುವ ವಾಡಿಕೆಯಿದೆ. ಇದಕ್ಕೆ ವಿಶೇಷ ಪೋಷಣೆಯೇನೂ ಬೇಡ. ತರಕಾರಿ ಗಿಡ ಬಳ್ಳಿಗಳಲ್ಲಿ ಫಲ ದೊರೆಯುವ ಮೊದಲೇ ಹರಿವೆ ಸೊಪ್ಪು ಅಡುಗೆಮನೆಗೆ ಬಂದಿರುತ್ತದೆ. ಮನೆಯಂಗಳದ ಕೈದೋಟದೊಳಗೆ ಹರಿವೆ ಗಿಡಗಳು ಸೊಗಸಿನ ನೋಟವನ್ನೂ ಕೊಡುತ್ತವೆ. ಬಿಳಿ ದಂಟು, ಕೆಂಪು ದಂಟು ಇತ್ಯಾದಿಯಲ್ಲದೆ ಎಲೆಗಳೂ ತರಹೇವಾರಿ ವರ್ಣಗಳಲ್ಲಿ ಚೇತೋಹಾರಿಯಾಗಿರುತ್ತವೆ.
ಒಂದು ಹರಿವೆ ಗಿಡದಲ್ಲಿ ಹೂವರಳಿದ ನಂತರ ಅಸಂಖ್ಯ ಬೀಜಗಳು ಲಭ್ಯ. ಒಣಗಿದ ಕಾಂಡಗಳನ್ನು ಕತ್ತರಿಸಿ ಪೇಪರುಗಳ ಮೇಲೆ ಹರಡಿ ಒಣಗಿಸಿ ಬೀಜಗಳನ್ನು ಬೇರ್ಪಡಿಸಿ ಸಂಗ್ರಹ ಮಾಡಿಟ್ಟು ತೇವಾಂಶ ಇರುವಲ್ಲಿ ಹಾಕಿ ಬಿಡಬೇಕು. ಪುನಃ ಸಸಿಗಳು ಮೊಳಕೆಯೊಡುತ್ತವೆ. ಮುಂದಿನ ಮಳೆಗಾಲಕ್ಕೆ ಕಾಪಿಟ್ಟುಕೊಳ್ಳಲೂ ಬಹುದು.
Posted via DraftCraft app
Saturday, 13 September 2014
ನಮ್ಮ ಬಸಳೆ - ನಮ್ಮ ಬೇಳೆ
" ಚಪ್ಪರದ ಬಸಳೆ ಬಂತು ನೋಡು " ಅಂದರು ಗೌರತ್ತೆ.
" ಯಥಾಪ್ರಕಾರ ಬಸಳೆ ಬೆಂದಿ..."
"ಯವಾಗಲೂ ಒಂದೇ ಕ್ರಮದ ಅಡಿಗೆ ಏನೂ ಚೆನ್ನಾಗಿರಲ್ಲ, ಹಲಸಿನ ಬೇಳೆ ಉಂಟಲ್ಲ..."
" ಬೇಳೆ ಹಾಕಿ ಬಸಳೆ ಬೆಂದಿಯಾ... ಚೆನ್ನಾಗಿರ್ತದ ? ಹೀಗೂ ಮಾಡ್ತಾರೇಂತ ನನಗ್ಗೊತ್ತಿಲ್ಲ " ಅಂದೆ.
" ಪುಸ್ತಕದ ಬದ್ನೇಕಾಯಿ ನೋಡಿ ಅಡಿಗೆ ಮಾಡೂದಲ್ಲ... ಈಗ ಒಂದ್ಹತ್ತು ಬೇಳೆ ಸುಲಿದು ..."
ಗೌರತ್ತೆ ಹಲಸಿನ ಬೇಳೆ ಸುಲಿದು ಕಟ್ ಕಟ್ ಮಾಡಿ ತರುವಷ್ಟರಲ್ಲಿ ನನ್ನದು ಕೊತ್ತಂಬ್ರಿ, ಒಣಮೆಣಸು ಇತ್ಯಾದಿಗಳನ್ನು ಹುರಿದ ಮಸಾಲೆ ತೆಂಗಿನತುರಿಯೊಂದಿಗೆ ಅರೆದ ಅರಪ್ಪು ಸಿದ್ಧವಾಗಿತ್ತು.
" ಬೇಳೆ ಬಸಳೆ ಒಟ್ಟಿಗೆ ಬೇಯಿಸಿ ಬಿಡೂದಾ ಹೇಗೆ ?"
" ಒಟ್ಟಿಗೇ ಬೇಯಿಸು "
" ಬಸಳೆ ಬೇಯುವಷ್ಟರಲ್ಲಿ ಈ ಬೇಳೆ ಮುದ್ದೆಯಾದೀತಾ..."
" ಹಾಗೇನೂ ಇಲ್ಲ " ಗೌರತ್ತೆ ಧೈರ್ಯ ನೀಡುತ್ತ " ಹಲಸಿನ ಬೇಳೆ ಬೇಯುವುದು ನಿಧಾನ " ಅಂದರು.
ಗೌರತ್ತೆಯ ಸಲಹೆಯಂತೆ ಬೆಳ್ಳುಳ್ಳಿ ಒಗ್ಗರಣೆಯೂ, ರುಚಿಕರವಾಗಲು ಬೇಕಾದ ಉಪ್ಪು ಹುಳಿಗಳೊಂದಿಗೆ ಹೀಗೊಂದು ಬಸಳೆ ಬೆಂದಿ ಕ್ರಮ ಪ್ರಕಾರವಾಗಿ ಒಲೆಯಲ್ಲಿ ಬೆಂದು ತಯಾರಾಯಿತು. ಸಿಹಿ ಇಷ್ಟಪಡುವವರಿಗೆ ಬೆಲ್ಲ ಹಾಕಿದರಾಯಿತು.
ಈಗ ಬಸಳೆ ಪಲ್ಯ ಮಾಡೋಣ. ಸೊಪ್ಪಿನ ಪಲ್ಯಗಳನ್ನು ಖಾರ ಮಾಡಲಿಕ್ಕಿಲ್ಲ. ವಿಟಮಿನ್ ಎ ಅನ್ನಾಂಗ ಧಾರಾಳವಾಗಿರುವ ಸೊಪ್ಪು ಅನ್ನದೊಂದಿಗೆ ಕಲಸಿ ತಿನ್ನಲು ಚೆನ್ನಾಗಿರುವುದು.
ಒಂದು ಬಟ್ಟಲು ತುಂಬ ಸೊಪ್ಪು ಕತ್ತರಿಸಿಡುವುದು,
ಒಂದು ದೊಡ್ಡ ನೀರುಳ್ಳಿ, ಇದನ್ನೂ ಚಿಕ್ಕದಾಗಿ ತುಂಡು ಮಾಡುವುದು,
ಬಾಣಲೆಯಲ್ಲಿ ಒಗ್ಗರಣೆಗಿಡುವುದು,
ಚಟಪಟ ಸದ್ದು ನಿಂತಾಗ ಚಿಟಿಕೆ ಅರಸಿಣ ಹಾಕುವುದು,
ನೀರುಳ್ಳಿ ಬಾಣಲೆಗೆ ಬೀಳುವುದು,
ತಟಪಟ ಸೌಟಾಡಿಸಿದಾಗ ನೀರುಳ್ಳಿ ಬಾಡುವುದು,
ಬಸಳೆ ಸೊಪ್ಪು ಬಾಣಲೆಗೆ ಇಳಿಯುವುದು,
ಉಂಟೇ, ಉಪ್ಪು ಹಾಕಲು ಮರೆಯುವುದು,
ಇನ್ನೊಮ್ಮೆ ತಟಪಟ ಸೌಟಾಡಿಸಿ ಮುಚ್ಚಿ ಮಂದಾಗ್ನಿಯಲ್ಲಿ ಬೇಯಿಸುವುದು,
ಕೊನೆಯಲ್ಲಿ ಕಾಯಿತುರಿ ಹಾಕಲು ಸೊಗಸಿನ ನೋಟ ಬರುವುದು.
Basella alba ಎಂಬ ಸಸ್ಯಶಾಸ್ತ್ರೀಯ ಹೆಸರನ್ನು ಹೊಂದಿದೆ ನಮ್ಮ ಬಸಳೆ, malabar spinach, Ceylon spinach ಅಂತಾನೂ ಹೇಳ್ತಾರೆ. ಆಂಗ್ಲ ಭಾಷೆಯಲ್ಲಿ vine spinach ಎಂದು ಹೇಳಲ್ಪಡುವ ಬಸಳೆ, Basellaceae ಕುಟಂಬವಾಸಿ. ಇದರಲ್ಲಿ ಹಸಿರು ಹಾಗೂ ನಸುಕೆಂಪು ಬಣ್ಣದ ದಂಟು ಹೊಂದಿರುವ ಜಾತಿಗಳಿವೆ. ಕೆಂಪು ದಂಟಿನ ಬಸಳೆ ಅಷ್ಟೇನೂ ಸ್ವಾದಿಷ್ಟವಲ್ಲ. ಇದು ಕೂಡಾ ಭಾರತ ಮೂಲದ ಬಳ್ಳಿ ತರಕಾರಿ, ಸಾಮಾನ್ಯವಾಗಿ ಮನೆ ಹಿತ್ತಿಲಲ್ಲಿ ನೀರು ಸರಾಗವಾಗಿ ಹರಿದು ಬೀಳುವಂತಹ ಸ್ಥಳದಲ್ಲಿ ಚಪ್ಪರ ಹೊಂದಿಸಿ ನೆಟ್ಟುಕೊಳ್ಳುತ್ತಾರೆ.
ಮಡಿವಂತರು ತಿನ್ನಲಾಗದ ಬಸಳೆ, ಹಿಂದಿನ ತಲೆಮಾರಿನ ಸಂಪ್ರದಾಯಸ್ಥರಲ್ಲಿ ಬಸಳೆ ನಿಷಿದ್ಧ ಸೊಪ್ಪು ಆಗಿರಲು ಕಾರಣವೇನೋ ತಿಳಿಯದು. ಬಹುಶಃ ನೀರುಳ್ಳಿ, ಬೆಳ್ಳುಳ್ಳಿಗಳು ಬಸಳೆಯ ಅಡುಗೆಯಲ್ಲಿ ಬೆರೆತು ಹೋಗಿರುವುದೂ ಕಾರಣವಾಗಿರಬಹುದು. ಅದೇನೇ ಇರಲಿ ಪೌಷ್ಟಿಕಾಂಶಗಳ ಆಗರವಾಗಿದೆ ಬಸಳೆ.
ದಂಟಿನಲ್ಲಿ ನಾರು ಅಧಿಕವಿದೆ, ಮಲಬದ್ಧತೆ ನಿವಾರಕ ಆಹಾರವಾಗಿದೆ.
ಖನಿಜಾಂಶಗಳು ಅಧಿಕವಾಗಿವೆ, ನಿಯಮಿತ ಸೇವನೆಯಿಂದ ಧೃಡಕಾಯರಾಗಲು ಸಾಧ್ಯ.
ವಿಟಮಿನ್ ಬಿ ಕಾಂಪ್ಲಕ್ಸ್ ನಿಂದ ಸಮೃದ್ಧವಾಗಿದೆ, ಬಸುರಿ ಸ್ತ್ರೀಯರ ಆಹಾರದಲ್ಲಿ ಇರಲೇಬೇಕಾದ ತರಕಾರಿ.
ಕೆಂಪು ರಕ್ತಕಣಗಳ ಪೂರೈಕೆ, ಕಬ್ಬಿಣದ ಧಾತು ಬಸಳೆಯಲ್ಲಿದೆ.
ಅತ್ಯುತ್ತಮ ಆಂಟಿ ಓಕ್ಸಿಡೆಂಟ್, ರೋಗ ಪ್ರತಿಬಂಧಕವಾಗಿ ವಿಟಮಿನ್ ಸಿ ಇಲ್ಲಿದೆ.
ಇಲ್ಲಿರುವ ವಿಟಮಿನ್ ಎ, ಕಣ್ಣುಗಳ ಆರೋಗ್ಯ ಹಾಗೂ ಚರ್ಮದ ಕಾಂತಿರಕ್ಷಕ.
ಎಳೆಯ ಶಿಶುವಿನಿಂದ ವೃದ್ಧರವರೆಗೆ ಬಸಳೆ ಆಹಾರದಲ್ಲಿರಲಿ.
Posted via DraftCraft app
Saturday, 6 September 2014
ಹಕ್ಕೀ ಪಾಡು
ಬೆಳಗಾಗಿತ್ತು, ಪಾತ್ರೆಗಳನ್ನು ಬೆಳಗಿ ಒಳಗೆ ತರ್ತಾ ಇದ್ದೆ, ಪುರ್ರೆಂದು ಪುಟಾಣಿ ಹಕ್ಕಿಯೊಂದು ಹಾರಿ ನನಗಿಂತ ಮುಂಚಿತವಾಗಿ ಒಳಗೆ ನುಗ್ಗಿತು. ಕೂಡಲೇ ನನ್ನ ಪ್ರಜ್ಞೆ ಎಚ್ಚರವಾಗಿ ಮಗಳಿಗೆ ಕೂಗಿ ಹೇಳಿದ್ದು " ಬೇಗ ಬಾರೇ, ಹಕ್ಕೀದು ಫೊಟೋ ತೆಗೀ ...."
ಹಕ್ಕಿ ಒಳಗೆ ಹಾರಿ ಬಂದಿದ್ದೇನೋ ಆಯಿತು, ಚಾವಡಿಯ ಬಾಗಿಲು ತೆರೆದಿರಲಿಲ್ಲ, ಕಿಟಿಕಿ ಬಾಗಿಲು ಕೂಡಾ ಮುಚ್ಚಿಯೇ ಇದ್ದಿತು. ಹಕ್ಕಿ ಹೊರ ಹೋಗಲಾರದೆ ಕಿಟಿಕಿಯ ಸಂದುಗಳಲ್ಲಿ ರೆಕ್ಕೆ ತೂರಿಸಿ ಒದ್ದಾಡಿ ಹೊರ ಹೋಗಲು ಪ್ರಯತ್ನ ಪಡುವ ಸಾಹಸ ನೋಡಿದಾಗ ಅಪ್ರಯತ್ನವಾಗಿ ಕವನವೊಂದು ಹುಟ್ಟಿತು.
ಮಗಳೇನೋ ಹಲವಾರು ಚಿತ್ರಗಳನ್ನು ತೆಗೆದಿಟ್ಟಿದ್ದಳು. ಮನೆಯ ಒಳಗಲ್ವೇ, ಮಸುಕು ಮಸುಕಾದ ಚಿತ್ರಗಳು. " ಇದೇನೇ ಹೀಗೆ ಬಂತೂ ...?"
" ಹಕ್ಕಿ ಹಿಂದೆ ಓಡಿ ಫೊಟೋ ತೆಗೆಯುವುದು ಎಂಥದು, ಬಾಳೆಹಣ್ಣಿನ ಫೊಟೋ ತೆಗೆದ ಹಾಗಾ ..." ದಬಾಯಿಸಿದಳು ಮಗಳು.
ಇರಲಿ ಅಂದ್ಬಿಟ್ಟು ಆ ಕ್ಷಣದಲ್ಲಿ ಮೂಡಿದ ಭಾವಗಳನ್ನು ಅಕ್ಷರದಲ್ಲಿ ಸೆರೆ ಹಿಡಿದು ಸುಮ್ಮನಾಗಿರಬೇಕಾಯಿತು.
ಎಂದಿನಂತೆ ಮಳೆಗಾಲ ಬಂದಿತು. ಅಂಗಳದ ತುಂಬಾ ಏನೇನೂ ಹುಲ್ಲು ಕಳೆ. ಅಲ್ಲೊಂದು ಕಮಾನು ಬಳ್ಳಿ ಮೇಲೇಳುತ್ತಾ ಇದೆ, " ಇದನ್ನು ಕಿಟಿಕಿ ಬಾಗಿಲಿಗೆ ಹಬ್ಬಿಸೋಣ " ಅಂದ್ಕೊಂಡು ಬಳ್ಳಿಗೊಂದು ಆಸರೆ ನೀಡಿ.... ಕೆಲವೇ ದಿನಗಳಲ್ಲಿ ಕಮಾನು ಬಳ್ಳಿ ಹರಡಿ ಹಬ್ಬಿ ಚೆಲುವಿನ ಚಿತ್ತಾರ ಮೂಡಿಸಿತು.
ಈಗ ನೆನಪಾಯಿತು, ಎಂದೋ ಬರೆದಿದ್ದ ಹಕ್ಕಿ ಹಾಡು. " ಒಂದೆರಡು ಹೂವರಳಲಿ " ಇನ್ನೊಂದು ಫೊಟೋ ತೆಗೆದು ಹಕ್ಕಿಯನ್ನು ಎಲ್ಲಿಂದಾದರೂ ತಂದು ಕೂರಿಸುವ ಪ್ರಯತ್ನ ಮಾಡೋಣ ಅಂತ ನಾನಿದ್ದೆ. ಅದೇನಾಯ್ತೋ, ಅಂಗಳದ ಕಳೆಸಸ್ಯಗಳಿಗೆ ಕತ್ತೀ ಪ್ರಹಾರ ಆಗಾಗ್ಗೆ ನಡೆಸುತ್ತಿರುತ್ತಾರೆ ನಮ್ಮೆಜಮಾನ್ರು, ಕತ್ತಿ ಅಲಗು ತಟ್ಟಿತೋ, ಹಬ್ಬಿದ ಲತೆ ಬಾಡಲು ತೊಡಗಿತು.
" ಛೇ, ಇದೇನಾಯಿತು..." ಚಿಂತಿಲ್ಲ, ಹೂ ಬೇರೆಡೆಯಿಂದ ತಂದು ಜೋಡಿಸೋಣ. ಅಂತೂ ಅರಳಿದ ಕಮಾನು ಬಳ್ಳಿಯ ಹೂಗಳು ದೊರೆತು ಹೊಸತೊಂದು ಫೊಟೋ ಇಮೇಜ್ ಸೃಷ್ಟಿಯಾಯಿತು. ಜೊತೆಗೊಂದು ಹಕ್ಕಿಯೂ ಬಂದು ಕುಳಿತಿತು. ಇನ್ನು ಓದಿರಲ್ಲ ನನ್ನ ಕವನ....
Cypress Vine ಎಂಬ ಹೆಸರಿನ ಈ ಅಲಂಕಾರಿಕ ಲತೆ ಅಮೇರಿಕಾದಿಂದ ಬಂದಿರುವಂತಾದ್ದು. Morning glory, Star Glory, hummingbird vine ಇತ್ಯಾದಿಯಾಗಿ ಕರೆಯಲ್ಪಡುವ ಈ ಕಮಾನುಬಳ್ಳಿ ಸಸ್ಯಶಾಸ್ತ್ರೀಯವಾಗಿ Ipomoea quamoclit ಹೆಸರನ್ನು ಹೊಂದಿದೆ. ಕೇರಳೀಯರು ಇದನ್ನು ಆಕಾಶ ಮುಲ್ಲ (ആകാശ മുല്ല, ಆಕಾಶಮಲ್ಲಿಗೆ ) ಅಂದಿದ್ದಾರೆ. ನಕ್ಷತ್ರ ಮಲ್ಲಿಗೆ ಅಂತಾನೂ ಹೇಳ್ತಾರೆ. ಆದ್ರೂನೂ ನಮ್ಮ ನೆರೆಯ ರವೀಂದ್ರನ್ " ಇದು ಕಾಕ್ಕ ಪೂ ಅಕ್ಕ " ಅಂದ್ಬಿಟ್ಟ. ಒಟ್ಟಿನಲ್ಲಿ ಕಾಗೆಯೂ ಹಕ್ಕಿಯಲ್ವೇ, ಇರಲಿ ನೂರಾರು ಹೆಸರುಗಳು.
ಹೇರಳವಾಗಿ ಹೂವರಳುವ ಈ ಲತೆಯ ಪುನರುತ್ಪಾದನೆ ಬೀಜಗಳಿಂದ. ಹೊಯಿಗೆ ಮಿಶ್ರಿತ ಹಾಗೂ ತೇವಾಂಶ ಉಳಿಯುವಂತಹ ಮಣ್ಣು ಅವಶ್ಯಕ. ಚೆನ್ನಾಗಿ ಬಿಸಿಲೂ ಇರುವಲ್ಲಿ ಮಾತ್ರ ಬೆಳವಣಿಗೆ ಕಾಣಲು ಸಾಧ್ಯ. ಹಕ್ಕಿಯ ಗರಿಗಳಂತಹ ಎಲೆಗಳೂ ಆಕರ್ಷಕ. ಬಿಳಿ, ಕೆಂಪು ಹಾಗೂ ನಸುಗೆಂಪು ಬಣ್ಣದಲ್ಲಿ ಹೂವುಗಳ ವೈವಿಧ್ಯತೆಯೂ ಇದೆ. ಬಳ್ಳಿಗಳು ಹಬ್ಬಲು ಆಸರೆಯೂ ಇದ್ದರೆ ಮಾತ್ರ ಸೊಗಸು. ಹಕ್ಕಿಗಳೂ, ಚಿಟ್ಟೆಗಳೂ ಸ್ವಾಭಾವಿಕವಾಗಿ ಇದರ ಬಳಿ ಸುಳಿದಾಡುತ್ತಿರುತ್ತವೆ, ಹಾಗೆಂದೇ ಇದಕ್ಕೆ ಹಮ್ಮಿಂಗ್ ಬರ್ಡ್ ವೈನ್ ಎಂದು ಹೆಸರು ಬಂದಿದೆ. ಮೋಹಕವಾದ ಈ ಲತೆಯ ಹೂ, ಎಲೆ, ಬೀಜಗಳು ನಂಜಿನಿದ ಕೂಡಿದೆ, ವಿಷಯುಕ್ತ.
Posted via DraftCraft app