ಮಳೆ ಆರಂಭವಾದ ಮೇಲೆ ಮುಂಜಾನೆಯ ತಿಂಡಿಯ ನಂತರ, ತುಂಟಿಗೆ ಎರಡು ದೋಸೆಯ ಚೂರುಗಳನ್ನು ಹಾಕಿ, ಮೊಬೈಲ್ ಹಿಡಿದು ಅಂಗಳಕ್ಕಿಳಿದರೆ, ಮುಂದಿನ ಅರ್ಥ ಗಂಟೆ ಸಸ್ಯ ಸಾಮ್ರಾಜ್ಯದೊಂದಿಗೆ ನನ್ನ ಮಾತುಕತೆ. ಕಲ್ಲಿನ ದರೆಯ ಮೇಲೆ ಲಿಲ್ಲಿ ಹೂಗಳು ಅರಳಿವೆ, ಥಂಡರ್ ಲಿಲ್ಲಿ ವಾರವಾದರೂ ಬಾಡದು, ನೆನೆದು ಮುದ್ದೆಯೂ ಆಗದು. ಕೆಳಗೆ ನಾನು ನಿಂತ ನೆಲದಲ್ಲಿ ಸೂಗದೆ ಬಳ್ಳಿ ಹಬ್ಬುತ್ತಲಿದೆ. ಇದೂ ಒಂದು ಔಷಧೀಯ ಸಸ್ಯ, ಪ್ರಕೃತಿಯಲ್ಲಿ ಔಷಧೀಯ ಗುಣವಿಲ್ಲದ ಸಸ್ಯವಿಲ್ಲ. ಲಿಲ್ಲಿ ಕೂಡಾ ಔಷಧೀಯ ಸಸ್ಯವಂತೆ. ಅಲ್ಲೊಂದು ಬಿಳಿ ಹೂ ಕಾಣಿಸುತ್ತಿದೆಯಲ್ಲ. ಹೂವೇ ಚಂದ, ಎಲೆಗಳೂ ಆಕರ್ಷಕ. ಮಳೆಗಾಲದ ವೈಭವ ಎಂದರೆ ಹೀಗೆ ಮನೋಹರ ದೃಶ್ಯಗಳು. ಬಿಳಿ ಹೂ ಮೊಬೈಲಲ್ಲಿ ಇಳಿಯಿತು. ಮನೆಗೆ ತೆರಳೋಣ. ಇದೇನೂ ನಾನು ಇದುವರೆಗೂ ಕಾಣದ ಹೂವಲ್ಲ, ಹಿಂದೆ ಮನೆ ತುಂಬ ಮಹಿಳೆಯರು ಇದ್ದ ಕಾಲ, ತುರುಬು ಕಟ್ಟಿ ಹೂವಿನ ದಂಡೆಯನ್ನು ಸಿಕ್ಕಿಸುವಲ್ಲಿಗೆ ಕೇಶ ಶೃಂಗಾರ ಮುಗಿಯಿತು. ಮಲ್ಲಿಗೆ, ಸೇವಂತಿಗೆ, ಅಬ್ಬಲಿಗೆ ಯಾವುದೂ ಆದೀತು. ಮಳೆಯ ಅವತರಣದೊಂದಿಗೆ ನೆಲದಿಂದೇಳುವ ಕಾಡು ಹೂಗಳೂ ನಡಿದೀತು, ಹಳ್ಳಿಯ ಮನೆಯಲ್ಲಿದ್ದ ನನ್ನ ದೊಡ್ಡಮ್ಮನ ತಲೆಯಲ್ಲಿ ಈ ಹೂವನ್ನು ಕಂಡಿದ್ದೇನೆ. “ ಈ ಹೂ ಯಾವುದು ದೊಡ್ಡಮ್ಮ? “ ಅವರೇನೋ ಉತ್ತರ ಕೊಟ್ಟಿದ್ದರು. ಬಾಲ್ಯಸಹಜವಾಗಿ ಹೆಸರು ಮರೆತು ಹೋಗಿತ್ತು.
ಹಿರಣ್ಯದ ನೆಲದೊಡತಿಯಾದ ನಂತರ, ಇಂಟರ್ನೆಟ್ ಮೊಬೈಲುಗಳ ಒಡನಾಟ, ಸಹಜವಾಗಿಯೇ ಪ್ರಕೃತಿಯತ್ತ ಚಿತ್ತ ಹರಿಸುವಂತಾಗಿದೆ. ನೆಲಕಂಚಿ ಎಂಬ ಹೆಸರಿನ ಈ ಬಿಳಿ ಮಲ್ಲಿಗೆಯಂತಹ ಹೂವು, ಪ್ರತಿ ವರ್ಷವೂ ನನ್ನ ಮೊಬೈಲ್ ನಲ್ಲಿ ದಾಖಲಿಸಲ್ಪಡುತ್ತಲಿದೆ. ಸಸ್ಯವಿಜ್ಞಾನದಲ್ಲಿ naregamia alata, ನೆಲದ ಮೇಲೆಯೇ ಹರಡಿದ ನಕ್ಷತ್ರಗಳಂತೆ ಕಾಣುವ ಇದರ ಹೂವುಗಳು ಪರಿಸರವನ್ನು ಒಂದು ನೈಸರ್ಗಿಕ ಔಷಧೀಯ ವನವನ್ನಾಗಿಸಿದೆ ಎಂದರೂ ತಪ್ಪಾಗಲಾರದು.
ಆಯುರ್ವೇದ ಮತ್ತು ನಾಟಿ ವೈದ್ಯದಲ್ಲಿ ಇದೊಂದು ಅತ್ಯಂತ ಬೆಲೆಬಾಳುವ ಗಿಡಮೂಲಿಕೆ. ನಮ್ಮ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹೆಚ್ಚಾಗಿ ಕಂಡುಬರುವ ಇದನ್ನು ಉಸಿರಾಟದ ತೊಂದರೆ (ಕಫ, ಶೀತ), ಪಿತ್ತ ನಿವಾರಣೆಗೆ ಹಾಗೂ ಗಾಯಗಳನ್ನು ಗುಣಪಡಿಸಲು ಬಹಳ ಹಿಂದಿನಿಂದಲೂ ಬಳಸುತ್ತಿದ್ದಾರೆ.
ಮಳೆಯ ಮೊದಲ ಸಿಂಚನಕ್ಕೆ ತಾನಾಗಿಯೇ ಹುಟ್ಟಿ ಬಂದಂತಹ ಈ ಸಸ್ಯಗಳು ತೋಟದ ಮಣ್ಣಿನ ಜೀವಂತಿಕೆಯನ್ನು ತೋರಿಸುತ್ತಿವೆ ಎಂದರೆ ಅತಿಶಯೋಕ್ತಿಯಾಗಲಾರದು. ಮಳೆಯ ಆಗಮನ ಪ್ರಕೃತಿಗೆ ಒಂಥರಾ ಜಾದೂ ಮಾಡಿದಂತೆ! ತಿಂಗಳುಗಟ್ಟಲೆ ಮಣ್ಣಿನಲ್ಲಿ ಸುಪ್ತವಾಗಿ ಮಲಗಿದ್ದ ಬೀಜಗಳು ಮತ್ತು ಬೇರುಗಳು ಮಳೆಯ ನೀರು ತಾಗಿದ ತಕ್ಷಣವೇ ಜೀವ ಪಡೆದು ಹೀಗೆ ಮೇಲೆದ್ದು ನಳನಳಿಸುತ್ತವೆ.



0 comments:
Post a Comment