ಪಕ್ಕದ ಮನೆಯಿಂದ ಹಲಸಿನ ಹಣ್ಣು ಬಂದಿದೆ. ತಿನ್ನುವ ಆಸಕ್ತಿ ನಮಗಿಬ್ಬರಿಗೂ ಇಲ್ಲ, ತೋಟದಲ್ಲಿ ಹತ್ತುಹಲವು ಮರಗಳಿದ್ದರೂ, ಮರ ತುಂಬ ಹಲಸು ತುಂಬಿದ್ದರೂ ನಾವು ಅದರ ಸುದ್ದಿಗೇ ಹೋಗಿಲ್ಲ, ಇರಲಿ, ಹಲಸು ಕೊಯ್ದು ತರುವ ಕಟ್ಟಾಳುಗಳೂ ನಮ್ಮಲ್ಲಿ ಈಗ ಇಲ್ಲ. ಕೊಯ್ದು ತಂದರೂ ಮುತುವರ್ಜಿಯಿಂದ ಸೊಳೆ ಬಿಡಿಸಿ, ಆಯ್ದು ಕೊಡಲಿಕ್ಕೂ ಇಲ್ಲ, ಇರಲಿ, ಈಗ ಬಂದಿರುವ ಹಲಸಿನ ಹಣ್ಣಿನ ಸೊಳೆಗಳನ್ನು ತಿನ್ನದೇ ಬಿಸಾಡುವುದುಂಟೇ, ಸೊಗಸಾದ ಸೆಟ್ ದೋಸೆ ಮಾಡೋಣ.
ಲೋಟ ತುಂಬ ಆಯ್ದು ಇಟ್ಟ ಹಲಸಿನ ಸೊಳೆಗಳು.
ಒಂದು ಲೋಟ ಬೆಳ್ತಿಗೆ ಅಕ್ಕಿ.
ತಲಾ ಎರಡು ಚಮಚ ಉದ್ದು ಹಾಗೂ ಮೆಂತೆ.
ಎರಡು ಚಮಚ ದಪ್ಪ ಅವಲಕ್ಕಿ.
ಎಲ್ಲವನ್ನೂ ತೊಳೆದು ನೀರೆರೆದು ಇಡುವುದು.
ಸಂಜೆಯಾಗುತ್ತಲೇ ಅರೆಯಿರಿ. ಹಲಸಿನ ಸೊಳೆಗಳನ್ನು ಮೊದಲಾಗಿ ಅರೆಯಿರಿ. ನಂತರ ಎಲ್ಲವನ್ನೂ ಒಟ್ಟಿಗೆ ಅರೆಯುವುದು. ನುಣ್ಣಗಾದ ಹಿಟ್ಟನ್ನು ಉಪ್ಪು ಬೆರೆಸಿ ಮುಚ್ಚಿ ಇಡುವುದು.
ಮುಂಜಾನೆ ದೋಸೆ ಎರೆದು ತಿನ್ನುವುದು, ಸೆಟ್ ದೋಸೆಯಂತೆ ಎರೆಯಿರಿ, ಬೇಡವೇ, ತೆಳ್ಳಗೆ ಪೇಪರ್ ದೋಸೆ ಎರೆಯಿರಿ.
ತೆಂಗಿನಕಾಯಿ ಚಟ್ಣಿ ಉತ್ತಮ.
ಇಂತಹ ದೋಸೆಗಳನ್ನು ಆಗಾಗ ಮಾಡುತ್ತಿರುತ್ತೇನೆ, ಬಾಳೆಹಣ್ಣು, ಸೌತೆ ಸಾಮಾನ್ಯವಾಗಿ ಬಳಕೆಯಲ್ಲಿವೆ. ಮಧುಕರ ಅಂಗಡಿಯಿಂದ ತಂದಂತಹ ಬಪ್ಪಂಗಾಯಿ (ಪಪ್ಪಾಯಿ) ತಿಂದು ಮುಗಿಯದಿದ್ದಾಗ ಇದೇ ಮಾದರಿಯ ದೋಸೆ ನನ್ನ ಅಡುಗೆಮನೆಯಲ್ಲಿ ಎದ್ದು ಬಂದಿದೆ. ಈ ಥರ ಹಿಟ್ಟಿನಲ್ಲಿ ಯಾವ ಹಣ್ಣು ಹಾಕಲಾಗಿದೆ ಎಂದು ಕೂಡಾ ತಿಳಿಯುವಂತಿಲ್ಲ, “ಪಪ್ಪಾಯಿ ದೋಸೆಯಾ, ನಂಗೆ ಬೇಡಾ..” ಎನ್ನುವ ಹಾಗೂ ಇಲ್ಲ.

0 comments:
Post a Comment